»   » ಕಿರುತೆರೆಯ ಸಾಹಿತ್ಯ ಸಂಜೀವಿನಿ ಬ ಲ ಸುರೇಶ್

ಕಿರುತೆರೆಯ ಸಾಹಿತ್ಯ ಸಂಜೀವಿನಿ ಬ ಲ ಸುರೇಶ್

Posted By:
Subscribe to Filmibeat Kannada
Sahitya Sanjeevini award to B L Suresh
ಕಿರುತೆರೆಯ ಖ್ಯಾತ ಸಂಭಾಷಣಾಕಾರ ಬ.ಲ.ಸುರೇಶ್ ಅವರಿಗೆ ಅಧ್ವೈತ ಕಮ್ಯೂನಿಕೇಷನ್ಸ್, ಸಂಭ್ರಮ ಯುವ ವೇದಿಕೆ ಮತ್ತು ಅಂಕ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮೇ 9ರಂದು ಸಾಹಿತ್ಯ ಸಂಜೀವಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಹತ್ತು ಸಾವಿರ ನಗದು ಮತ್ತು ಫಲಕವನ್ನೊಳಗೊಂಡಿದೆ.

ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಬಲಸು ಅವರು " ಬರವಣಿಗೆ ತಕ್ಕುದಾದ ಜ್ಞಾನವನ್ನು ನಾನು ಪಡೆದುಕೊಂಡಿದ್ದು ನಮ್ಮ ಮಲೆನಾಡಿನ ಯಕ್ಷಗಾನದ ಹಿನ್ನೆಲೆಯಿಂದ. ಯಕ್ಷಗಾನದಲ್ಲಿಯ ಕತೆ ಹೇಳುವ ಶೈಲಿ ಮತ್ತು ಅಲ್ಲಿಯ ಪೌರಾಣಿಕ ಕಥೆಗಳಲ್ಲಿಯ ಹಿನ್ನೆಲೆಯು ನನ್ನ ಬರವಣಿಗೆಯ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಇಷ್ಟು ವರ್ಷದ ಕಿರುತೆರೆಯ ನನ್ನ ಬರವಣಿಗೆಯಿಂದಲೇ ನಾನು ಇಲ್ಲಿ ಜೀವನ ಕಟ್ಟಿಕೊಳ್ಳುವುದು ಸಾಧ್ಯವಾಯ್ತು. ಬದುಕಿಗಾಗಿ ಪ್ರಾರಂಭಿಸಿದ ಈ ಬರವಣಿಗೆ ನನಗೆ ತೃಪ್ತಿ ನೀಡಿದೆ" ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಭಿನಂದನಾ ಗ್ರಂಥ 'ಸಮಕ್ಷಮ' ಮತ್ತು ಅವರ ಈವರೆಗಿನ ನಾಟಕಗಳನ್ನೊಳಗೊಂಡ ಕೃತಿ 'ಯುದ್ಧಛದ್ಮ' ಮತ್ತು ಕವನ ಸಂಗ್ರಹ 'ಅಸಂಗತ ಪ್ರಶ್ನೆ' ಕೃತಿಗಳು ಅಂಕ ಸಾಂಸ್ಕೃತಿಕ ಅಭಿವೃದ್ದಿ ಸಂಸ್ಥೆಯಿಂದ ಬಿಡುಗಡೆಯಾದವು. ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಕೃತಿಯ ಸಂಪಾದಕ, ಕಿರುತೆರೆ ನಿರ್ದೇಶಕ ಬುಕ್ಕಾಪಟ್ನ ವಾಸು "ಸುಮಾರು 25 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಕಿರುತೆರೆಗೆ ಸೇವೆ ಸಲ್ಲಿಸುತ್ತಿರುವ ನಮ್ಮ ನೆಚ್ಚಿನ ಬಲ ಸುರೇಶ್ ಅವರಿಗೆ 'ಸಮಕ್ಷಮ' ಒಂದು ಚಿಕ್ಕ ಕಾಣಿಕೆ" ಎಂದರು.

ಕವನ ಸಂಗ್ರಹದ ಕುರಿತಾಗಿ ಮಾತನಾಡಿದ ಕವಿ ಎಂ.ಎನ್.ವ್ಯಾಸರಾವ್ ಅವರು "ಬಲಸು ಅವರ ಕಾವ್ಯದಲ್ಲಿ ತುಂಬಾ ಮೌಲ್ಯಯುತವಾದ ಸಾಮಾಜಿಕ ಕಳಕಳಿ ಮತ್ತು ಒಳಹೊಳಹನ್ನು ಹೊಂದಿವೆ ಎಂದು ಹೇಳಿದರು. ಎಂ.ಎಸ್.ನರಸಿಂಹಮೂರ್ತಿ ಅವರು ಬಲಸು ಕಿರುತೆರೆಯ ನಂಟಿನ ಕುರಿತು ಮಾತನಾಡಿದರು.

ಸಮಾರಂಭದಲ್ಲಿ ಎಂ.ಎಸ್.ರಾಮಯ್ಯ ಗ್ರೂಪ್‌ನ ಎಂ.ಆರ್.ಪಟ್ಟಾಭಿರಾಮ್, ಕೆಟಿವಿ ಅಸೋಸಿಯೇಷನ್‌ನ ಅಧ್ಯಕ್ಷ ರವಿಕಿರಣ್, ಶಾಸಕ ನೆ.ಲ ನರೇಂದ್ರಬಾಬು, ಬಿ.ಆರ್.ಲಕ್ಷ್ಮಣ್ ರಾವ್, ಎಂ.ಎನ್.ವ್ಯಾಸರಾವ್, ಬುಕ್ಕಾಪಟ್ನವಾಸು, ಅಂಕ ಸಂಸ್ಥೆಯ ಕಿಬ್ಬನಳ್ಳಿ ರಾಜು, ಡಾ.ಪಿ.ಚಂದ್ರಿಕಾ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ನಟಿ ವತ್ಸಲಾ ಮೋಹನ್ ನಡೆಸಿಕೊಟ್ಟರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada