»   » ಲಿಮ್ಕಾ ದಾಖಲೆಯತ್ತ 'ಥಟ್ ಅಂತ ಹೇಳಿ' ಕಾರ್ಯಕ್ರಮ

ಲಿಮ್ಕಾ ದಾಖಲೆಯತ್ತ 'ಥಟ್ ಅಂತ ಹೇಳಿ' ಕಾರ್ಯಕ್ರಮ

Posted By:
Subscribe to Filmibeat Kannada
Quiz master Dr.Na.Someshwar
ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮ ಕನ್ನಡ ದೂರದರ್ಶನ ಇತಿಹಾಸದಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಡಾ.ಸೋಮೇಶ್ವರ್ ನಡೆಸಿಕೊಡುವ ಈ ರಸಪ್ರಶ್ನೆ ಕಾರ್ಯಕ್ರಮ 1500 ಕಂತುಗಳನ್ನು ಪೂರೈಸಿದೆ. ಕನ್ನಡ ರಸಪ್ರಶ್ನೆ ಕಾರ್ಯಕ್ರಮವೊಂದು ದೂರದರ್ಶನದಲ್ಲಿ ಐನೂರರ ಗಡಿಮುಟ್ಟಿರುವುದು ಇದೇ ಮೊದಲು.

ಸೋಮವಾರದಿಂದ ಶುಕ್ರವಾರದವರೆಗೆ 'ಥಟ್ ಅಂತ ಹೇಳಿ' ಕಾರ್ಯಕ್ರಮ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ರಾತ್ರಿ 10.30ರಿಂದ 11ರವರೆಗೆ ಪ್ರಸಾರವಾಗುವ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಈ ವಿಭಿನ್ನ ರಸಪ್ರಶ್ನೆ ಕಾರ್ಯಕ್ರಮ ಮೆಗಾ ಧಾರಾವಾಹಿಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.

ರಾತ್ರಿ ಕಾರ್ಯಕ್ರಮ ಮಿಸ್ ಆದರೆ ಮಾರೆನೆ ದಿನ ಬೆಳಗ್ಗೆ 11ಕ್ಕೆ ಇದೇ ಕಾರ್ಯಕ್ರಮ ಮರುಪ್ರಸಾರವಾಗುತ್ತದೆ. ಮರುಪ್ರಸಾರದಲ್ಲಿ ಈ ಕಾರ್ಯಕ್ರಮವನ್ನು ನೋಡಿ ಆನಂದಿಸುವವರಿಗೂ ಕೊರತೆ ಇಲ್ಲ. ಒಟ್ಟಿನಲ್ಲಿ ಅಬಾಲವೃದ್ಧರಾಗಿ ಈ ಕಾರ್ಯಕ್ರಮ ಆಕರ್ಷಿಸುತ್ತಿದೆ.

ಅಂದಹಾಗೆ ಥಟ್ ಅಂತ ಹೇಳಿ ಕಾರ್ಯಕ್ರಮ ಆರಂಭವಾಗಿದ್ದು ಜನವರಿ 4, 2002ರಂದು. ಕಾರ್ಯಕ್ರಮ ಇಷ್ಟೊಂದು ಅಚ್ಚುಕಟ್ಟಾಗಿ ಮೂಡಿಬರಲು ನಿಲಯದ ನಿರ್ದೇಶಕ ಮಹೇಶ್ ಜೋಶಿ ಅವರ ಪಾತ್ರ ದೊಡ್ಡದು. ಹಾಗೆಯೇ ವೃತ್ತಿಯಲ್ಲಿ ವೈದ್ಯರೂ ಪ್ರವೃತ್ತಿಯಲ್ಲಿ ಬರಹಗಾರರೂ ಆದ ಡಾ.ನಾ.ಸೋಮೇಶ್ವರ್ ಅವರ ಕಳಕಳಿ ಸಹ ಕಾರ್ಯಕ್ರಮ ಸೊಗಸಾಗಿ ಮೂಡಿಬರಲು ಕಾರಣವಾಗಿದೆ.

ಇಷ್ಟೆಲ್ಲಾ ಹೆಗ್ಗಳಿಕೆಗಳಿಗೆ ಕಾರಣವಾಗಿರುವ ಈ ಕಾರ್ಯಕ್ರಮ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗುವ ಸಿದ್ಧತೆಯಲ್ಲಿದೆ. ಈ ಕಾರ್ಯಕ್ರಮ ಸಾವಿರದ ಐನೂರು ಕಂತುಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಜೂನ್.13ರಂದು ಬೆಂಗಳೂರು ಜಯನಗರ ಮಂಗಳ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ, ಸಾಹಿತಿ ಹಂಪನಾ, ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಸೋಮೇಶ್ವರ ಅವರು ಕನ್ನಡ ಸಾರಸ್ವತ ಲೋಕವನ್ನು ನಾಡಿನ ಲಕ್ಷಾಂತರ ಜನರಿಗೆ ಪರಿಚಯಿಸಿದ್ದಾರೆ.

ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿದ್ದ ಕೌನ್ ಬನೇಗ ಕರೋಡ್ ಪತಿ ಕಾರ್ಯಕ್ರಮದಂತೆ ಆರ್ಥಿಕ ಬಲವಿಲ್ಲದಿದ್ದರೂ ಥಟ್ ಅಂತ ಹೇಳಿ ಕಾರ್ಯಕ್ರಮ ಜನಪ್ರಿಯವಾಗಿರುವುದು ಹಲವರ ಹುಬ್ಬೇರಿಸಿದೆ. ಕಾರ್ಯಕ್ರಮದಲ್ಲಿ ನೀಡುವ ಉಪಯುಕ್ತ ಮಾಹಿತಿಗಳು, ಕನ್ನಡ ಪುಸ್ತಕಗಳು ಆಸಕ್ತರ ಜ್ಞಾನದಾಹದನ್ನು ತಣಿಸುತ್ತಿವೆ. ಮನೆಮಂದಿಯಲ್ಲಾ ಕುಳಿತು ನೋಡಬಹುದಾದ ಕಾರ್ಯಕ್ರಮವಿದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada