»   »  ಜುಲೈ 19ರಿಂದ ಜೀ ಕನ್ನಡದಲ್ಲಿ ಶಿವಚರಿತಾಮೃತ

ಜುಲೈ 19ರಿಂದ ಜೀ ಕನ್ನಡದಲ್ಲಿ ಶಿವಚರಿತಾಮೃತ

Subscribe to Filmibeat Kannada

ಅನೇಕ ಉತ್ತಮ ಧಾರಾವಾಹಿಗಳನ್ನು ನಿರ್ಮಿಸಿದ ಜೀ ವಾಹಿನಿಯು ಶಿವನ ಲೀಲೆಗಳನ್ನು ಆಧರಿಸಿ "ಶಿವಚರಿತಾಮೃತ" ಎಂಬ ನೂತನ ಪೌರಾಣಿಕ ಧಾರಾವಾಹಿಯನ್ನು ಪ್ರಾರಂಭಿಸುತ್ತಿದೆ. ಜುಲೈ 19ರಿಂದ ಪ್ರತಿ ಭಾನುವಾರ ಬೆಳಿಗ್ಗೆ 10 ಕ್ಕೆ ಪ್ರಸಾರವಾಗುವ ಈ ಧಾರಾವಾಹಿಯ ನಿರ್ದೇಶಕರು ಖ್ಯಾತ ನಟ/ ನಿರ್ದೇಶಕ ಸುನೀಲ್ ಪುರಾಣಿಕ್.

ರಾಮಾಯಣ ಮತ್ತು ಮಹಾಭಾರತದ ಹಲವು ಪ್ರಸಂಗಗಳಲ್ಲಿ ಪ್ರಸ್ತಾಪವಾಗುವ ಶಿವನ ಮಹಿಮೆಗಳ ಬಗ್ಗೆ ಹಾಗೂ ಆನಂತರದ ಕಾಲದಲ್ಲಿ ಮೂಡಿಬಂದತಹ ಅನೇಕ ಶಿವಪುರಾಣ ಕಥೆಗಳಲ್ಲಿ ಇರುವ ಶಿವನ ಮಹಿಮೆಯನ್ನು "ಶಿವಚರಿತಾಮೃತ"ದಲ್ಲಿ ಪ್ರಸ್ತುತಪಡಿಸಲಾಗುವುದು.

"ಅಧುನಿಕ ತಂತ್ರಜ್ಞಾನ ಮತ್ತು ಗ್ರಾಫಿಕ್ಸ್ ಈ ಧಾರವಾಹಿಯ ವಿಶೇಷ. ಸಿನಿಮಾ ಚಿತ್ರೀಕರಣಕ್ಕೆ ಹಾಕುವಂತಹ ಅದ್ದೂರಿ ಸೆಟ್‌ಗಳನ್ನು ಈ ಧಾರಾವಾಹಿಗಾಗಿ ನಿರ್ಮಿಸಲಾಗಿದೆ. ಕನ್ನಡದ ಪೌರಾಣಿಕ ಧಾರಾವಾಹಿಗಳ ಮಟ್ಟಿಗೆ ಈ ಮಟ್ಟದ ಅದ್ಧೂರಿ ತಾಂತ್ರಿಕತೆ ಇದೇ ಮೊದಲು" ಎಂದು ಸುನೀಲ್ ಪುರಾಣಿಕ್ ತಿಳಿಸುತ್ತಾರೆ.

ಶಿವ ಪಾರ್ವತಿಯ ಪಾತ್ರಗಳಲ್ಲಿ ಈಗಾಗಲೇ ಜನಮನವನ್ನು ಸೆಳದಿರುವ ಸಂಜಯ್ ಮತ್ತು ಶಮಾ ಸಂಜಯ್ ಮತ್ತೆ ಅದೇ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷವೆಂದರೆ ಈಗಾಗಲೆ ಕನ್ನಡ ಸಿನಿಮಾ ಲೋಕದಲ್ಲಿ ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರಿಂದ ಪರಿಚಯಿಸಲ್ಪಟ್ಟ ನಾಯಕ ನಟ ಮತ್ತು ನೃತ್ಯಪಟು ಶ್ರೀಧರ್ "ಶಿವಚರಿತಾಮೃತ"ದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಿವನ ಪಾತ್ರದಲ್ಲಿ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸಿ ದಾಖಲೆ ನಿರ್ಮಿಸಿರುವ, ಶ್ರೀಧರ್ ಇದೇ ಮೊದಲ ಬಾರಿಗೆ ರಾವಣನ ಪಾತ್ರದಲ್ಲಿ ಅಭಿನಯಿಸಿ ಶಿವಚರಿತಾಮೃತದಲ್ಲಿ ವಿಜೃಂಭಿಸಲಿದ್ದಾರೆ.ಪುರಾಣದ ಕಥೆಗಳಲ್ಲಿ ನಾವೆಲ್ಲರೂ ಗಮನಿಸಬಹುದಾದ ನೀತಿ ಮತ್ತು ಸಂದೇಶಗಳಿವೆ. ಆ ಸಂದೇಶವನ್ನು ವಾರವಾರವೂ ನೆನಪು ಮಾಡಿಕೊಡುವ ಪ್ರಯತ್ನ "ಶಿವಚರಿತಾಮೃತ"ದಿಂದಾಗುತ್ತದೆ ಎನ್ನುತ್ತಾರೆ ಜೀ ವಾಹಿನಿಯ ಫಿಕ್ಷನ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್.

ಈಗಾಗಲೆ ಹಲವಾರು ದೈನಂದಿನ ಮತ್ತು ಪೌರಾಣಿಕ ಧಾರಾವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿ ಕನ್ನಡ ಪ್ರೇಕ್ಷಕರ ಮನಸೂರೆಗೊಂಡಿರುವ ನಟ, ನಿರ್ದೇಶಕ, ನಿರ್ಮಾಪಕ ಸುನೀಲ್ ಪುರಾಣಿಕ್ ಈ ಶಿವಚರಿತಾಮೃತ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿ ಕಿರುತೆರೆಯಲ್ಲಿ ತಮ್ಮ ಛಾಪನ್ನು ಮೂಡಿಸುವ ತವಕದಲ್ಲಿದ್ದಾರೆ. "ಶಿವಚರಿತಾಮೃತ"ದ ಶೀರ್ಷಿಕೆ ಗೀತೆ ಖ್ಯಾತ ಗಾಯಕರಾದ ಎಸ್. ಪಿ. ಬಾಲಸುಬ್ರಮಣ್ಯ ಅವರ ಧ್ವನಿಯಲ್ಲಿ ಮೂಡಿಬಂದಿದ್ದು, ನಾಸ್ತಿಕರನ್ನೂ ಆಸ್ತಿಕರನ್ನಾಗಿಸೊ ಮೋಡಿ ಹೊಂದಿದೆ" ಎಂದು ನಿರ್ದೇಶಕ ಸುನೀಲ್ ಪುರಾಣಿಕ್ ಹೇಳುತ್ತಾರೆ.

"ಹಲವಾರು ವರ್ಷಗಳಿಂದ ವೀಕ್ಷಕರಿಗೆ ಇಷ್ಟವಾಗುವಂತಹ ವಿವಿಧ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಜೀ ಕನ್ನಡ, ಭಕ್ತಿ ಪ್ರಧಾನ ಧಾರಾವಾಹಿಯ ಅವಶ್ಯಕತೆ ಹಾಗೂ ಪೌರಾಣಿಕ ಕಥೆಗಳಲ್ಲಿನ ಮೌಲ್ಯಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ "ಶಿವ ಚರಿತಾಮೃತ" ಪ್ರಾರಂಭಿಸುತ್ತಿದೆ ಇದನ್ನು ಸಹ ಪ್ರೇಕ್ಷಕರು ಕಾತರದಿಂದ ವೀಕ್ಷಿಸಲಿ ಎಂದು ಜೀ ಕನ್ನಡದ ಮುಖ್ಯಸ್ಥ ಜೆ.ಶೇಖರ್ ತಮ್ಮ ಆಶಯ ವ್ಯಕ್ತಪಡಿಸುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada