»   » ಬೆಪ್ಪುತಕ್ಕಡಿ ಜೊತೆ ಕ್ಯಾಮೆರಾಮೆನ್ ಐತಲಕಡಿ

ಬೆಪ್ಪುತಕ್ಕಡಿ ಜೊತೆ ಕ್ಯಾಮೆರಾಮೆನ್ ಐತಲಕಡಿ

Posted By: * ಎಚ್.ಆನಂದರಾಮ ಶಾಸ್ತ್ರೀ
Subscribe to Filmibeat Kannada

ಕನ್ನಡದ ಕಿರುತೆರೆಯ ವಾರ್ತಾಪ್ರಸಾರದ ಬಗ್ಗೆ ಎರಡು ಮಾತು. ಸರ್ಕಾರಿ ಕಾರ್ಯಕ್ರಮದಂತಿರುವ 'ಚಂದನ' ವಾರ್ತೆಯನ್ನು ಅನ್ಯ ಆಯ್ಕೆಯಿಲ್ಲದವರು ಮಾತ್ರ ನೋಡುತ್ತಾರೆ. ಖಾಸಗಿ ಚಾನೆಲ್‌ಗಳ ಕನ್ನಡ ವಾರ್ತಾ ಪ್ರಸಾರದಲ್ಲಿ ವೈವಿಧ್ಯ ಇರುತ್ತದಾದರೂ ಅದರೊಡನೆ ಅಪರಿಮಿತ ಹಿಂಸೆಯೂ ತಳಕುಹಾಕಿಕೊಂಡಿರುತ್ತದೆ!

ತಲೆಚಿಟ್ಟುಹಿಡಿಯುವಷ್ಟು ಜಾಹೀರಾತುಗಳ ಮಧ್ಯೆ ವಾರ್ತೆಗಾಗಿ ವೀಕ್ಷಕರು ತಾಳ್ಮೆಯಿಂದ ಕಾಯಬೇಕಾಗುತ್ತದೆ. ವಾರ್ತೆಯ ಮಧ್ಯೆ ಪದೇಪದೇ ವಿವಿಧ ಉಪಶೀರ್ಷಿಕೆಗಳ ಯಮಕಗಳು (ಜಿಂಗಲ್‌ಗಳು) ಯಮಸದೃಶವಾಗಿ ಅಬ್ಬರಿಸುತ್ತವಲ್ಲದೆ ವೃಥಾ ಒಂದಷ್ಟು ಕಾಲಹರಣ ಮಾಡುತ್ತವೆ.

ಸುದ್ದಿ/ವರದಿ ತೋರಿಸುವಾಗ ಅದರ ನಿರೂಪಕರು ಹೇಳಲಿರುವುದನ್ನೇ ಅದಕ್ಕಿಂತ ಮುಂಚೆ ವಾರ್ತಾ ವಾಚಕರೊಮ್ಮೆ ಅನಗತ್ಯವಾಗಿ ಇಷ್ಟುದ್ದ ಹೇಳುತ್ತಾರೆ. ('ಈ ಟಿವಿ'ಯಂತೂ ಪ್ರಧಾನ ವಾರ್ತೆಯನ್ನು ಐದು ಸಲ ಒದರುವ ಮೂಲಕ ವೀಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ!).

ಇಷ್ಟೆಲ್ಲ ಹಿಂಸೆಗಳು ಸಾಲದೆಂಬಂತೆ, ವಿಷಯಜ್ಞಾನ ಮತ್ತು ಭಾಷಾಜ್ಞಾನ ಎರಡರ ಕೊರತೆಯನ್ನೂ ಹೊಂದಿರುವ ವಾರ್ತಾ ವಾಚಕರು ಬೆಪ್ಪುಬೆಪ್ಪಾಗಿ ಕ್ಯಾಮೆರಾ ನೋಡುತ್ತ ತಪ್ಪುತಪ್ಪಾಗಿ ವಾರ್ತೆ ಊದುವುದನ್ನು ವೀಕ್ಷಕರು ಸಹಿಸಿಕೊಳ್ಳಬೇಕು. ಜೊತೆಗೆ, ಪ್ರತಿ ವಾರ್ತಾ ಸಂಚಿಕೆಯಲ್ಲೂ ಅಪಘಾತ/ಕೊಲೆ/ಎನ್‌ಕೌಂಟರ್ ಶವಗಳ ಕ್ಲೋಸಪ್ ಶಾಟ್‌ಗಳ ಭಯಾನಕ ಚಿತ್ರಗಳು ನೋಡುಗರನ್ನು ಬೆಚ್ಚಿಬೀಳಿಸದಿದ್ದರೆ ಕೇಳಿ. ಖಾಸಗಿ ಟಿವಿ ಚಾನೆಲ್‌ಗಳು ಪ್ರಸಾರಮಾಡುವ ಕನ್ನಡ ವಾರ್ತೆಯು 'ಭಯಾನಕ ಚಿತ್ರ'ಹಿಂಸೆಯಲ್ಲದೆ ಮತ್ತೇನು?

English summary
kannada news channels

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada