»   »  ಸರಿಗಮಪ ಚಾಂಪಿಯನ್ ಆಫ್ ಚಾಂಪಿಯನ್ಸ್

ಸರಿಗಮಪ ಚಾಂಪಿಯನ್ ಆಫ್ ಚಾಂಪಿಯನ್ಸ್

Subscribe to Filmibeat Kannada
Zee Kannada Sarigamapa champion of champions
ಕರ್ನಾಟಕದ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಜೀ ಕನ್ನಡದ ಸರಿಗಮಪ ಚಾಂಪಿಯನ್ ಆಪ್ ಚಾಂಪಿಯನ್ಸ್ ಅಂತಿಮ ಸ್ಪರ್ಧೆಯನ್ನು ನಾಲ್ಕು ಸಂಚಿಕೆಗಳಲ್ಲಿ ಪ್ರಸಾರ ಮಾಡಲಿದೆ. ಮೊದಲ ಹಾಗೂ ಎರಡನೇ ಸಂಚಿಕೆಗಳು ಮಾರ್ಚ್ 16, 17ರಂದು ಸೋಮವಾರ ಮತ್ತು ಮಂಗಳವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಅಂತಿಮ ಸುತ್ತಿಗೆ ಅಜಯ್ ಭಾರಧ್ವಜ್, ಮನೋಜವಂ, ಅಶ್ವಿನ್ ಶರ್ಮಾ, ಧನುಷ್ , ಚೇತನಾ ಕೆ, ಇಂಚರ ಆಯ್ಕೆಯಾಗಿದ್ದಾರೆ.

ಸ್ಪರ್ಧೆಯ ವಿಜೇತರಿಗೆ ಜೀ ಕನ್ನಡ ವತಿಯಿಂದ 7.4 ಲಕ್ಷ ಮೌಲ್ಯದ ಶಿಕ್ಷಣ ವಿಮೆ, ರನ್ನರ್ ಅಪ್ ಪ್ರತಿಭೆಗೆ ಡಿ.ಎಸ್.ಮ್ಯಾಕ್ಸ್ ಪ್ರಾಪರ್‍ಟೀಸ್ ವತಿಯಿಂದ 2.5 ಲಕ್ಷ ಮೌಲ್ಯದ ಶಿಕ್ಷಣ ವಿಮೆ, ಪ್ರೇಕ್ಷಕರ ಆಯ್ಕೆಯ ಪ್ರತಿಭೆಗೆ ಜೀ ಕನ್ನಡ ವತಿಯಿಂದ 2.5 ಲಕ್ಷ ಮೌಲ್ಯದ ಶಿಕ್ಷಣ ವಿಮೆ ಹಾಗೂ ಉಳಿದ 3 ಜನರಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಗುವುದು.

ಫೈನಲ್ ಸ್ಪರ್ಧೆಯು ಮೂರು ರೌಂಡ್‌ಗಳಲ್ಲಿ ನಡೆಯಲಿದ್ದು ಮೊದಲ ಸುತ್ತಿನಲ್ಲಿ ಶಾಸ್ತ್ರೀಯ ಸಂಗೀತದ ಟಚ್ ಇರುವ ಗೀತೆಗಳು, ಎರಡನೇ ಸುತ್ತಿನಲ್ಲಿ ಜನಪ್ರಿಯ ಗೀತೆಗಳು ಮತ್ತು ಮೂರನೇ ಸುತ್ತಿನಲ್ಲಿ ರಾಕ್ ಗೀತೆಗಳನ್ನು ಸ್ಪರ್ಧಿಗಳು ಹಾಡಲಿದ್ದಾರೆ. ಈಗ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಪ್ರತಿಭೆಗಳೆಲ್ಲರೂ ಉತ್ತಮ ಗಾಯಕ ಪ್ರತಿಭೆಗಳಾಗಿದ್ದು ಅವರ ನಡುವೆ ಕಠಿಣ ಸ್ಪರ್ಧೆ ನಿರೀಕ್ಷಿಸಲಾಗಿದೆ.

ಫೈನಲ್ ಸ್ಪರ್ಧೆಯ ಈ ಸಂಚಿಕೆಯಲ್ಲಿ ಈ ಹಿಂದೆ ಸ್ಪರ್ಧೆಯಿಂದ ಹೊರ ನಡೆದಿದ್ದ ಸ್ಪರ್ಧಿಗಳಿಗೂ ಕೂಡ ಒಂದೊಂದು ಗೀತೆಯನ್ನು ಹಾಡುವ ಅವಕಾಶವನ್ನು ನೀಡಲಾಗಿದೆ. ಅಲ್ಲದೆ ಗಾಯಕ/ನಿರ್ಣಾಯಕ ರಾಜೇಶ್ ಕೃಷ್ಣನ್ ಕೂಡಾ ತಮ್ಮ ಗಾಯನದಿಂದ ವೀಕ್ಷಕರನ್ನು ರಂಜಿಸಲಿದ್ದಾರೆ.

ಅಂತಿಮ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ಅತ್ಯುತ್ತಮವಾಗಿ ಪ್ರದರ್ಶನವನ್ನು ನೀಡಿದ್ದು. ಎಲಿಮಿನೇಷನ್ ರೌಂಡ್‌ನಲ್ಲಿ ಯಾರನ್ನು ಎಲಿಮಿನೇಟ್ ಮಾಡುವುದು ಎಂಬುದು ತುಂಬಾ ಕಷ್ಟದಾಯವಾಗಿತ್ತು ಎಂದು ಗಾಯಕ, ನಿರ್ಣಾಯಕ ರಾಜೇಶ್ ಕೃಷ್ಣನ್ ತಿಳಿಸಿದ್ದಾರೆ.

ಫೈನಲ್ ಸಂಚಿಕೆಯ ನಿರ್ಣಾಯಕರಾಗಿ ರಾಜೇಶ್ ಕೃಷ್ಣನ್, ಎಸ್.ಜಾನಕಿ ಹಾಗೂ ಸ್ಟೀಫನ್ (ಖ್ಯಾತ ಮ್ಯೂಸಿಕ್ ಕಂಪೋಸರ್) ಭಾಗವಹಿಸುವರು. ಕಾರ್ಯಕ್ರಮಕ್ಕೆ ಕಸ್ತೂರಿ ಶಂಕರ್, ಕೆ.ಕುಸುಮಾ, ಕವಿರಾಜ್, ಕೆ.ಎಸ್.ಎಲ್ ಸ್ವಾಮಿ, ವಿನೋದರಾಜ್, ಎಸ್.ಎನ್.ಸೇತುರಾಂ, ಶೃತಿ ನಾಯ್ಡು, ಸುರೇಶ್ ರೈ, ಶಾಂತಲಾ ಕಾಮತ್, ನೆ.ಲ.ನರೇಂದ್ರ ಬಾಬು, ಎಂ ಕೃಷ್ಣಪ್ಪ ಮುಂತಾದವರು ಅತಿಥಿಗಳಾಗಿ ಆಗಮಿಸುವರು. ಕಾರ್ಯಕ್ರಮ ನಿರೂಪಣೆಯನ್ನು ಖ್ಯಾತ ಗಾಯಕಿ ಅರ್ಚನಾ ಉಡುಪ ನಡೆಸಿಕೊಡಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada