»   »  ಅಶೋಕ್ ಖೇಣಿಯಾಗಿ ಕನ್ನಡಕ್ಕೆ ಸೋನು ನಿಗಂ

ಅಶೋಕ್ ಖೇಣಿಯಾಗಿ ಕನ್ನಡಕ್ಕೆ ಸೋನು ನಿಗಂ

By: *ರಾಜೇಂದ್ರ ಚಿಂತಾಮಣಿ
Subscribe to Filmibeat Kannada
Ashok Kheny
ನೈಸ್ ಕಂಪನಿಯ ಮಾಲೀಕಅಶೋಕ್ ಖೇಣಿ ಅವರ ಜೀವನ ಮತ್ತು ಸಾಧನೆಗಳ ವಿಡಿಯೋ ಆಲ್ಬಂ ಒಂದು ಸಿದ್ಧವಾಗಿದೆ. ಸರಿ ಸುಮಾರು 1ಕೋಟಿ ರು.ಗಳನ್ನು ಖರ್ಚು ಮಾಡಿ ಖೇಣಿ ಈ ಆಲ್ಬಂ ಅನ್ನು ನಿರ್ಮಿಸಿದ್ದಾರೆ. ಶೀಘ್ರದಲ್ಲೇ ಖೇಣಿ ಅವರ ಜೀವ ಮಾನ ಸಾಧನೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಖೇಣಿ ಅವರ ಪಾತ್ರವನ್ನು ಬಾಲಿವುಡ್ ನ ಖ್ಯಾತ ಗಾಯಕ ಸೋನು ನಿಗಂ ಪೊಷಿಸಿದ್ದಾರೆ. ಈ ಕಿರುಚಿತ್ರಕ್ಕೆ 'ನೀನೇ ಬರಿ ನೀನೆ' ಎಂದು ಹೆಸರಿಡಲಾಗಿದೆ. ಖ್ಯಾತ ರೂಪದರ್ಶಿ ಮಾಧುರಿ ಭಟ್ಟಾಚಾರ್ಯ ಸಹ ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟು ದಿನ ಕನ್ನಡದಲ್ಲಿ ಬರಿ ಹಿನ್ನೆಲೆ ಗಾಯನಕ್ಕಷ್ಟೇ ಸೀಮಿತವಾಗಿದ್ದ ಸೋನು ನಿಗಂ ಇದೇ ಮೊದಲ ಬಾರಿಗೆ ಬಣ್ಣಹಚ್ಚಿದ್ದಾರೆ. ಈ ಕಿರುಚಿತ್ರಕ್ಕೆ ಮನೋಮೂರ್ತಿ ಅವರ ರಾಗ ಸಂಯೋಜನೆ ಜತೆಗೆ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಜುಗಲ್ ಬಂದಿಯಾಗಿದೆ.

'ನೀನೇ ಬರಿ ನೀನೆ' ಆಲ್ಬಂಗೆ ವಿಕ್ರಂ ರಾಜ್ ದಾನ್ ಅವರ ನಿರ್ದೇಶನವಿದೆ. ಅಶೋಕ್ ಖೇಣಿ ಮಾತನಾಡುತ್ತಾ, ನನ್ನ ಜೀವನ ಕತೆಯನ್ನು ಆಧರಿಸಿ ಈ ವಿಡಿಯೋ ಆಲ್ಬಂನ್ನು ನಿರ್ಮಿಸಲಾಗಿದೆ. ಒಂಬತ್ತು ಹಾಡುಗಳು ಇವೆ. ಒಂದು ಹಾಡಿನಲ್ಲಿ ತಾವೂ ಇರುವುದಾಗಿ ಅವರು ತಿಳಿಸಿದರು. ನನ್ನ ಜನಗಳಿಗೆ ಈ ಚಿತ್ರದ ಮೂಲಕ ಸಂದೇಶ ನೀಡುವುದು ನನ್ನ ಉದ್ದೇಶ ಎಂದರು.

ಸಮಯ ಅಮೂಲ್ಯವಾದದ್ದು. ನನ್ನ ಮಕ್ಕಳು ಚಿಕ್ಕವರಾಗಿದ್ದಾಗ ಅವರೊಂದಿಗೆ ಕಾಲ ಕಳೆಯಲು ನನಗೆ ಸಮಯವಿರಲಿಲ್ಲ. ಈಗ ಸಮಯವಿದೆ. ಆದರೆ ಮಕ್ಕಳು ದೊಡ್ಡವರಾಗಿದ್ದಾರೆ. ಅವರವರ ಜೀವನದಲ್ಲಿ ಅವರು ಬ್ಯುಸಿ. ಎಲ್ಲರ ಜೀವನದಲ್ಲೂ ಹೀಗೇ ಆಗುತ್ತದೆ. ಹಾಗೆ ಆಗದಂತೆ ಎಚ್ಚರ ವಹಿಸಿ ಎಂಬ ಸಂದೇಶ ಈ ಚಿತ್ರದಲ್ಲಿದೆ. ಮಕ್ಕಳೊಂದಿಗೆ ಪೋಷಕರು ಸಾಧ್ಯವಾದಷ್ಟು ಹೆಚ್ಚು ಸಮಯ ಕಳೆಯಬೇಕು ಎನ್ನುತ್ತಾರೆ ಖೇಣಿ.

ತಂದೆ ಮಕ್ಕಳ ಸಂಬಂಧ, ಸಮಾಜದ ಹಿತ, ಸಾಂಸ್ಕೃತಿಕ ಮಹತ್ವದಂತಹ ಅಂಶಗಳನ್ನು ಚಿತ್ರ ಒಳಗೊಂಡಿದೆ. ನೀನೇ ಬರಿ ನೀನೆ...ಬಾ ನೋಡು ಗೆಳತಿ ನವಿಲು ಗರಿ ಮರಿ ಹಾಕಿದೆ...ಇದು ಆಲ್ಬಂನಲ್ಲಿ ಬರುವ ಹಾಡು. ಚಿತ್ರದಲ್ಲಿ ಬಸವಣ್ಣ ಅವರ ಹಾಡೂ ಇದೆಯಂತೆ. ಮೈಸೂರು, ಮಡಿಕೇರಿ, ಕಾವೇರಿ ನಿಸರ್ಗಧಾಮ, ಬೆಂಗಳೂರು, ನಂದಿ ಗಿರಿಧಾಮದಲ್ಲಿ ಚಿತ್ರೀಕರಿಸಲಾಗಿದೆ. ಖೇಣಿ ಅವರ ಬಾಲ್ಯ ಜೀವನದಿಂದ ಹಿಡಿದು ಪ್ರಸ್ತುತ ಜೀವನದವರೆಗೂ ಕತೆ ಸಾಗಲಿದೆ.

''ಖೇಣಿ, ಸೋನು ನಿಗಂ ಮತ್ತು ನನ್ನ ಜೀವನದಲ್ಲಿ ಕೆಲವು ಸಾಮ್ಯತೆಗಳಿವೆ. ನಮ್ಮ ನಮ್ಮ ನಡುವಿನ ಭಾವೋದ್ವೇಗಗಳು, ಆಲೋಚನೆಗಳು ಭಿನ್ನ ಅಷ್ಟೇ'' ಎನ್ನುತ್ತಾರೆ ಸಂಗೀತ ಸಂಯೋಜನ ಮನೋಮೂರ್ತಿ. ಚಿತ್ರವನ್ನು ನಿರ್ಮಿಸಲು ಈ ರೀತಿಯ ಮಾದರಿ ತಂಡದಿಂದ ಮಾತ್ರ ಸಾಧ್ಯ. ಇದೊಂದು ವಿಭಿನ್ನ ಪ್ರಯತ್ನ ಎಂಬುದು ಮನೋಮೂರ್ತಿ ಅವರ ಅಭಿಪ್ರಾಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada