»   » ಆದರ್ಶ ವಧುವಿಗೆ ಜೀ ಕನ್ನಡದ ಹುಡುಕಾಟ

ಆದರ್ಶ ವಧುವಿಗೆ ಜೀ ಕನ್ನಡದ ಹುಡುಕಾಟ

Posted By:
Subscribe to Filmibeat Kannada

ಕನ್ನಡದ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ವಿಭಿನ್ನತೆ ಹಾಗೂ ಹೊಸತನ ಮೂಡಿಸಿದ ಜೀ ಕನ್ನಡ ಈಗ ಮತ್ತೊಂದು ನೂತನ ರಿಯಾಲಿಟಿ ಶೋ ಒಂದನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತಿದೆ. ಪ್ರತಿಯೊಬ್ಬ ಹುಡುಗರ ಮನಸ್ಸಿನಲ್ಲಿಯೂ ಅವನದ್ದೇ ಆದ ಒಬ್ಬೊಬ್ಬಳು ಕನಸಿನ ಕನ್ಯೆ ಇದ್ದು, ಅಂತಹ ಕಣ್ಮಣಿಯನ್ನು ಹುಡುಕಿ ಕೊಡುವ ಕಾಯಕಕ್ಕೆ ಜೀ ಕನ್ನಡ ಕೈ ಹಾಕಿದೆ. ಒಟ್ಟಾರೆ ಆದರ್ಶ ಎನ್ನಬಹುದಾದ ಓರ್ವ ವಧುವನ್ನು ನಿರ್ಧರಿಸುವ ಕಾರ್ಯಕ್ರಮ ಇದಾಗಿದ್ದು 18 ರಿಂದ 27 ವರ್ಷದ ಸುಂದರ ತರುಣಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಕನ್ನಡ ನಾಡಿನ ತರುಣಿಯರಿಗೆ ಜೀ ಕನ್ನಡ ಈ ಮೂಲಕ ಅಪೂರ್ವ ಅವಕಾಶವೊಂದನ್ನು ನೀಡುತ್ತಿದ್ದು ಈ ಸಲುವಾಗಿ ಆಡಿಷನ್ ಕರೆಯಲಾಗಿದೆ. ಆಡಿಷನ್‌ನಲ್ಲಿ ಆಯ್ಕೆಯಾದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತದೆ. ಇಲ್ಲಿ ವಿವಿಧ ಹಂತಗಳಿದ್ದು ಪ್ರತಿಯೊಂದು ಹಂತದಲ್ಲಿಯೂ ಯುವತಿಯೋರ್ವಳು ಪರಿಪೂರ್ಣ ವಧುವಾಗುವಂತಹ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾಳೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತದೆ.

ಆಕೆಯ ಸೌಂದರ್ಯ, ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ಸಹಜತೆ, ಸಹಬಾಳ್ವೆ ಹಾಗೂ ಸಹನಶೀಲತೆ ಹೀಗೆ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಕುರಿತಂತೆ ಪರೀಕ್ಷೆ ನಡೆಸಿ ಅಂತಿಮವಾಗಿ ಓರ್ವಳನ್ನು ಪರಿಪೂರ್ಣ ವಧುವೆಂದು ಘೋಷಿಸಲಾಗುತ್ತದೆ. ಆಕೆಯ ಗುಣಾವಗುಣಗಳ ವಿಶ್ಲೇಷಣೆ ನಡೆಸಿ ಅಂತಿಮವಾಗಿ ಅತ್ಯುತ್ತಮ ವಧುವಿನ ಆಯ್ಕೆ ಮಾಡಲಾಗುತ್ತದೆ.

ಕಾರ್ಯಕ್ರಮಕ್ಕೆ ಈ ಮೂಲಕ ಆಡಿಷನ್ ಕರೆಯಲಾಗಿದ್ದು ಸ್ಫುರದ್ರೂಪಿ ಯುವತಿಯರು ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ತಮ್ಮ ಸ್ವ ವಿವರಗಳನ್ನು ಜೀ ಕನ್ನಡ, ಕರ್ನಾಟಕದ ಕನಸಿನ ಕಣ್ಮಣಿ ವಿಭಾಗ, ಅಂಚೆ ಪೆಟ್ಟಿಗೆ ಸಂಖ್ಯೆ 5199, ಬೆಂಗಳೂರು 560 001 ಈ ವಿಳಾಸಕ್ಕೆ ಪತ್ರವನ್ನು ಅಥವಾ bestbride@zeenetwork.com ಗೆ ಮೇಲ್ ಮಾಡಬಹುದು. ವಿವರ ಹಾಗೂ ಛಾಯಾಚಿತ್ರಗಳು ಮಾರ್ಚ್ 7 ನೇ ತಾರೀಕಿನ ಒಳಗೆ ನಮ್ಮನ್ನು ತಲುಪಬೇಕು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ 93439 06538 ಸಂಖ್ಯೆಯನ್ನು ಸಂಪರ್ಕಿಸಬಹುದು.

ಕನ್ನಡ ಕಿರುತೆರೆ ಇತಿಹಾಸದಲ್ಲಿ ಮಹತ್ವ ಪಡೆದುಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಸರಾಂತ ಚಿತ್ರನಟಿ ಪ್ರಿಯಾಂಕ ಉಪೇಂದ್ರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada