»   »  ಡಾನ್ಸ್ ಇಂಡಿಯಾ ಡಾನ್ಸ್ ಆಯ್ಕೆಗೆ ಜೀ ಟಿವಿ ಕರೆ

ಡಾನ್ಸ್ ಇಂಡಿಯಾ ಡಾನ್ಸ್ ಆಯ್ಕೆಗೆ ಜೀ ಟಿವಿ ಕರೆ

Posted By:
Subscribe to Filmibeat Kannada

ಹಿಂದಿಯ ಜನಪ್ರಿಯ ವಾಹಿನಿ ಜೀ ಟಿ.ವಿ.ಯಲ್ಲಿ ಪ್ರಸಾರ ಕಾಣುತ್ತಿರುವ 'ಡಾನ್ಸ್ ಇಂಡಿಯಾ ಡಾನ್ಸ್' ತನ್ನ ಮೊದಲ ಸುತ್ತಿನ ಅಭೂತ ಪೂರ್ವ ಯಶಸ್ಸಿನ ನಂತರ ಎರಡನೇ ಸುತ್ತಿಗೆ ಅಣಿಯಾಗುತ್ತಿದೆ. ವೀಕ್ಷಕರ ಬಹುನಿರೀಕ್ಷಿತ ನೃತ್ಯಾಧಾರಿತ ಕಾರ್ಯಕ್ರಮ "ಡಾನ್ಸ್ ಇಂಡಿಯಾ ಡಾನ್ಸ್" ಮತ್ತೊಮ್ಮೆ ಕಿರುತೆರೆ ಮೇಲೆ ವಿಜೃಂಭಿಸಲು ಎಲ್ಲಾ ಸಿದ್ದತೆಗಳು ನಡೆದಿದ್ದು ಇದಕ್ಕೆ ಪೂರ್ವಭಾವಿಯಾಗಿ ದೇಶದಾದ್ಯಂತ ನೃತ್ಯಪಟುಗಳಿಗಾಗಿ ಆಡಿಷನ್ ನಡೆಸಲಾಗುತ್ತಿದ್ದು ಬೆಂಗಳೂರಿನಲ್ಲಿಯೂ ಪ್ರತಿಭಾನ್ವೇಷಣೆ ನಡೆಯಲಿದೆ.

ಈ ಸಂಬಂಧ ಅಕ್ಟೋಬರ್ 26ರ ಸೋಮವಾರ ಬೆಂಗಳೂರಿನಲ್ಲಿ ಆಡಿಷನ್ ಹಮ್ಮಿಕೊಳ್ಳಲಾಗಿದ್ದು, ಕುಂದನಹಳ್ಳಿಯ ಎಂ.ಹೆಚ್. ಕಾಲೋನಿಯಲ್ಲಿರುವ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಡಿಷನ್ ಪ್ರಕ್ರೆಯೆ ಈಗಾಗಲೇ ನಡೆಯುತ್ತಿದೆ. 15 ರಿಂದ 30 ವರ್ಷ ವಯೋಮಾನದೊಳಗಿನವರು ಈ ಆಡಿಷನ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಆಡಿಷನ್‌ಗೆ ವಯಸ್ಸು ನಮೂದಿಸಿರುವ ಯಾವುದಾದರೂ ಧೃಢೀಕರಣ ಪತ್ರ ತರಬೇಕು.

ಡಾನ್ಸ್ ಇಂಡಿಯಾ ಡಾನ್ಸ್ ತನ್ನ ವೈಶಿಷ್ಟ್ಯದಿಂದಾಗಿ ದೇಶದ ನೃತ್ಯ ಪಟುಗಳಿಗೆ ಉನ್ನತವಾದ ವೇದಿಕೆ ಸೃಷ್ಟಿಸುತ್ತಿದ್ದು, ನೃತ್ಯದಲ್ಲಿ ಮಹತ್ವಾಕಾಂಕ್ಷೆ ಇರಿಸಿಕೊಂಡವರಿಗೆ ಉತ್ತಮವಾದ ಅವಕಾಶ ಒದಗಿಸುತ್ತಿದೆ. ದೇಶದಲ್ಲಿ ಸುಮಾರು 80 ಮಿಲಿಯನ್ ಜನ ವೀಕ್ಷಿಸುವ ಈ ಕಾರ್ಯಕ್ರಮ ವಿಶ್ವದ 165 ದೇಶಗಳಲ್ಲಿ ಪ್ರಸಾರ ಕಾಣುತ್ತಿದೆ.

ಬೆಂಗಳೂರಿನಲ್ಲಿ ಎಲೆಮರೆ ಕಾಯಿಯಂತಿರುವ ನೃತ್ಯ ಪ್ರತಿಭೆಗಳನ್ನು ಹುಡುಕಿ ಹೊರಹಾಕಲು "ಡಾನ್ಸ್ ಇಂಡಿಯಾ ಡಾನ್ಸ್" ಆಡಿಷನ್ ಸುವರ್ಣ ಅವಕಾಶ ಒದಗಿಸಿದ್ದು, ಈಗಾಗಲೇ ಆಡಿಷನ್‌ಗಾಗಿ ಸರಿಸುಮಾರು ನಾಲ್ಕು ಸಾವಿರ ಜನ ನೊಂದಾಯಿಸಿಕೊಂಡಿದ್ದಾರೆ. ಸೋಮವಾರ ನಡೆಯಲಿರುವ ಆಡಿಷನ್‌ನಲ್ಲಿ ಬೆಸ್ಟ್ ಆಫ್‌ದಿ ಬೆಸ್ಟ್ ಆಫ್ ಬೆಂಗಳೂರು ಡಾನ್ಸರ್‍ಸ್‌ನನ್ನು ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ಅಂತಿಮ ಸ್ಪರ್ಧೆಗಳು ಮುಂಬಾಯಿಯಲ್ಲಿ ನಡೆಯಲಿವೆ. ಆ ಸ್ಪರ್ಧೆಯಲ್ಲಿ ಜಯಗಳಿಸುವವರು ಭಾರತದ ಅತ್ಯುತ್ತಮ ನೃತ್ಯಪಟುವಾಗಿ ಹೊರ ಹೊಮ್ಮಲಿದ್ದಾರೆ.

ಡಾನ್ಸ್ ಇಂಡಿಯಾ ಡಾನ್ಸ್ ಕಾರ್ಯಾಕ್ರಮದ ವಿಜೇತರಿಗೆ ಅಂತಿಮವಾಗಿ ವಿವಿಧ ಬಹುಮಾನಗಳು ದೊರೆಯುತ್ತವೆ ಆದರೂ ಆ ಕಾರ್ಯಕ್ರಮ ನೃತ್ಯ ಪಟುಗಳಿಗೆ ಸುವರ್ಣಾವಕಾಶದ ಹೆಬ್ಬಾಗಿಲನ್ನೆ ತೆರೆಯುತ್ತದೆ ಎಂದು ಡಾನ್ಸ್ ಇಂಡಿಯಾ ಡಾನ್ಸ್‌ನ ಮೊದಲ ಸರಣಿಯ ವಿಜೇತ ಬೆಂಗಳೂರಿನವರೇ ಆದ ಸಲ್ಮಾನ್ ಖಾನ್ ಹೇಳಿದ್ದು ಕಾರ್ಯಕ್ರಮ ಒದಗಿಸಿಕೊಡುತ್ತಿರುವ ಅವಕಾಶಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಡಾನ್ಸ್ ಇಂಡಿಯಾ ಡಾನ್ಸ್ನ ಮೊದಲ ಸರಣಿಯ ವಿಜೇತರಾದ ಸಲ್ಮಾನ್ ಈಗ ಹಿಂದಿಯ ಖ್ಯಾತ ನಟ ಸಲ್ಮಾನ್ ಖಾನ್‌ರವರ ಬ್ಲಾಕ್ ಬಸ್ಟರ್ ಮೂವಿ ವಾಂಟೆಡ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ನೂತನ ಸರಣಿ ಮತ್ತಷ್ಟು ಹೊಸತನ ಹಾಗೂ ಹೊಸ ನೃತ್ಯ ಪ್ರಕಾರಗಳನ್ನು ಮೈಗೂಡಿಸಿಕೊಂಡು ವೀಕ್ಷಕರ ಮುಂದೆ ಬರುತ್ತಿದೆ.ಬೆಂಗಳೂರಿನ ಆಡಿಷನ್ ವೇಳೆ ನೃತ್ಯಪಟುಗಳಿಗೆ ಹುಮ್ಮಸ್ಸು ತುಂಬುವ ಸಲುವಾಗಿ ಸಲ್ಮಾನ್ ಆಗಮಿಸಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada