»   »  ಹೊಸ ವಿವಾದದಲ್ಲಿ ಜೀ ಕನ್ನಡ 'ಪುರಂದರ ವಿಠಲ'

ಹೊಸ ವಿವಾದದಲ್ಲಿ ಜೀ ಕನ್ನಡ 'ಪುರಂದರ ವಿಠಲ'

Subscribe to Filmibeat Kannada

ಜೀ ಕನ್ನಡ ವಾಹಿನಿಯ ಹೊಸ ಹಾಸ್ಯ ಧಾರಾವಾಹಿ ''ಪುರಂದರ ವಿಠಲ'' ಹೊಸ ವಿವಾದದಲ್ಲಿ ಸಿಕ್ಕಿಕೊಂಡಿದೆ. ಪುರಂದರದಾಸರ ಅಂಕಿತನಾಮವನ್ನು ಹಾಸ್ಯ ಧಾರಾವಾಹಿಯ ಶೀರ್ಷಿಕೆಯಾಗಿ ಬಳಸಿಕೊಂಡಿರುವುದರ ಬಗ್ಗೆ ''ಶ್ರೀ ಸುಮಧ್ವ ಸೇವಾ ಸಮಿತಿ ಟ್ರಸ್ಟ್' ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪುರಂದರ ವಿಠಲ ಹಾಸ್ಯ ಧಾರಾವಾಹಿ ನವೆಂಬರ್ 2ರಿಂದ ಪ್ರಸಾರವಾಗಲಿದೆ.

''ನಾರದ ಮಹರ್ಷಿಗಳ ಅಪರಾವತಾರ ಪುರಂದರದಾಸರು. ದಾಸ ಶ್ರೇಷ್ಠರ ಹೆಸರನ್ನು ಹಾಸ್ಯ ಧಾರಾವಾಹಿಗೆ ಬಳಸಿಕೊಂಡಿರುವುದು ಸರಿಯಲ್ಲ. ದಯವಿಟ್ಟು ಧಾರಾವಾಹಿಯ ಶೀರ್ಷಿಕೆಯನ್ನು ಬದಲಾಯಿಸಿ ಎಂದು ಜೀ ಕನ್ನಡ ವಾಹಿನಿಗೆ ಸುಮಧ್ವ ಸೇವಾ ಸಮಿತಿ ವಿನಂತಿಸಿಕೊಂಡಿದೆ.

ಧಾರಾವಾಹಿಯ ಶೀರ್ಷಿಕೆ ಗೀತೆಯಲ್ಲಿ 'ತಿಕ್ಕಲ ತಿಕ್ಕಲ ಪುರಂದರ ವಿಠಲ' ಎಂಬ ಸಾಲುಗಳು ಬರುತ್ತವೆ. ಈ ಸಾಲುಗಳನ್ನು ಹಾಗೂ ಶೀರ್ಷಿಕೆಯನ್ನು ಕೈಬಿಡಬೇಕೆಂದು ಜೀ ಟಿವಿ ವಾಹಿನಿಗೆ ಸುಮಧ್ವ ಸೇವಾ ಸಮಿತಿ ಈ ಹಿಂದೆ ವಿನಂತಿಸಿಕೊಂಡಿತ್ತು. ಇದೀಗ ಜೀ ಕನ್ನಡ ವಾಹಿನಿ ಆ ಸಾಲುಗಳನ್ನು ಕೈಬಿಟ್ಟಿದ್ದು ಶೀರ್ಷಿಕೆಯನ್ನು ಮಾತ್ರ ಹಾಗೇ ಉಳಿಸಿಕೊಂಡಿದೆ.

''ಪುರಂದರದಾಸರು ಸಾಮಾನ್ಯ ವ್ಯಕ್ತಿಯಲ್ಲ. ಅವರು ದೇವತಾ ಸ್ವರೂಪಿ. ಅವರ ಹೆಸರಿನಲ್ಲಿ ಹಾಸ್ಯ ಮಾಡುವುದು ಸರಿಯಲ್ಲ.ಶೀರ್ಷಿಕೆಯನ್ನು ಬದಲಾಯಿಸುವಂತೆ ಈಗಾಗಲೇ ಹಲವರು ಬಾರಿ ಮನವಿ ಮಾಡಲಾಗಿದೆ. ಶೀರ್ಷಿಕೆಯನ್ನು ಬದಲಾಯಿಸದಿದ್ದರೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ'' ಎಂದು ಜೀ ಕನ್ನಡ ವಾಹಿನಿಗೆ ಸುಮಧ್ವ ಸಮಿತಿ ಎಚ್ಚರಿಕೆ ನೀಡಿದೆ.

''ಧಾರಾವಾಹಿಯೊಂದನ್ನು ಮಾರುಕಟ್ಟೆ ಮಾಡಲು ಪುರಂದರದಾಸರ ಹೆಸರನ್ನು ಬಳಸಿಕೊಂಡಿದ್ದೀರಿ. ಮುಂದೊಂದು ದಿನ ಮಹಾತ್ಮಗಾಂಧಿ, ಅಂಬೇಡ್ಕರ್, ನೆಹರು, ಶ್ರೀಕೃಷ್ಣ ಪರಮಾತ್ಮ ಹೀಗೆ ಎಲ್ಲರನ್ನೂ ಹಾಸ್ಯ ಪಾತ್ರಗಳಲ್ಲಿ ಬಳಸಿಕೊಳ್ಳುತ್ತೀರಿ. ಹೀಗಾಗುವಂತೆ ನಾವು ಬಿಡುವುದಿಲ್ಲ. ಹಾಸ್ಯ ಮಾಡಬೇಕೆಂದಿದ್ದರೆ ಅದಕ್ಕೆ ಅಂತ ಒಂದು ಸಾಮಾನ್ಯ ಹೆಸರನ್ನು ಇಟ್ಟುಕೊಳ್ಳಿ 'ಪುರಂದರ ವಿಠಲ' ಹೆಸರನ್ನು ಕೈಬಿಡಿ'' ಎಂದು ಸುಮಧ್ವ ಟ್ರಸ್ಟ್ ಹೇಳಿದೆ.

''ಒಂದು ವೇಳೆ ಪುರಂದರ ವಿಠಲ ಶೀರ್ಷಿಕೆಯನ್ನು ಕೈಬಿಡದ ಪಕ್ಷದಲ್ಲಿ ಕರ್ನಾಟಕದಾದ್ಯಂತ ತೀವ್ರ ಚಳುವಳಿ ಮಾಡಬೇಕಾಗುತ್ತದೆ. ಕರ್ನಾಟಕ ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್, ಆರ್ ಎಸ್ ಎಸ್, ಭಜರಂಗದಳ ಮುಂತಾದ ಹಿಂದುಪರ ಸಂಘಟನೆಗಳ ಮೊರೆ ಹೋಗಬೇಕಾಗುತ್ತದೆ'' ಎಂಬ ಎಚ್ಚರಿಕೆಯನ್ನು ಸುಮಧ್ವ ಸಮಿತಿಯು ಜೀ ಕನ್ನಡಕ್ಕೆ ನೀಡಿದೆ.

ಕನ್ನಡಿಗರ ಭಾವನೆಗಳನ್ನು ಕೆಣಕಬೇಡಿ. 'ಪುರಂದರ ವಿಠಲ' ಶೀರ್ಷಿಕೆಯನ್ನು ಕೈಬಿಡುವ ಮೂಲಕ ಕನ್ನಡಿಗರಿಗೆ ರಾಜ್ಯೋತ್ಸವ ಕೊಡುಗೆಯನ್ನು ನೀಡಿ ಎಂದು ಸುಮಧ್ವ ಸಮಿತಿ ವಿನಂತಿಸಿಕೊಂಡಿದೆ. ಆದರೆ ಜೀ ಕನ್ನಡ ಮಾತ್ರ ಶೀರ್ಷಿಕೆ ಬದಲಾವಣೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

'ಪಾಂಡುರಂಗ ವಿಠಲ' ಧಾರಾವಾಹಿಯಲ್ಲಿ ಸಿಹಿಕಹಿ ಗೀತಾ, ಜಯಮ್ಮ, ಶ್ರೀನಾಥ್ ವಶಿಷ್ಠ, ಸತೀಶ್ ಚಂದ್ರ, ಮಂಜುನಾಥ್ ಜಂಬೆ, ಜ್ಯೋತಿ ಆರ್ಯ, ಮೇಗಶ್ರೀ ಭಾಗವತರ್ ಅಭಿನಯಿಸಿದ್ದಾರೆ. ವಿ.ಮನೋಹರ್ ಅವರ ಸಾಹಿತ್ಯ ಮತ್ತು ಸಂಗೀತವಿರುವ ಶೀರ್ಷಿಕೆ ಗೀತೆಗೆಯನ್ನು ಶಂಕರ್ ಶಾನುಭಾಗ್ ಹಾಡಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada