»   » ದ್ವಿಶತಕ ಪೂರೈಸಿ ಮುನ್ನುಗ್ಗುತ್ತಿದೆ ಸೀರಿಯಲ್ ಸೂರ್ಯಕಾಂತಿ

ದ್ವಿಶತಕ ಪೂರೈಸಿ ಮುನ್ನುಗ್ಗುತ್ತಿದೆ ಸೀರಿಯಲ್ ಸೂರ್ಯಕಾಂತಿ

Posted By:
Subscribe to Filmibeat Kannada
Zee Kannda fiction Suryakanthi
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಸೂರ್ಯಕಾಂತಿ' ಇನ್ನೂರ ಇಪ್ಪತ್ತೆರೆಡು ಕಂತುಗಳನ್ನು ಪೂರೈಸಿದ ಸಂಧರ್ಭದಲ್ಲಿ ವೀಕ್ಷಕರೊಡನೆ ಸಂಭ್ರಮವನ್ನು ಹಂಚಿಕೊಳ್ಳುವ ಸಲುವಾಗಿ ಹಾಸನದಲ್ಲಿ ಧಾರಾವಾಹಿ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಮಾತುಕತೆಯನ್ನು ಆಯೋಜಿಸಿತ್ತು.

ನಗರದ ಕಲಾಭವನದಲ್ಲಿ ನಡೆದ ಸೂರ್ಯಕಾಂತಿ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದ ಜೀ ವಾಹಿನಿಯ ಫಿಕ್ಷನ್ ಹೆಡ್ ಪರಮೇಶ್ ಗುಂಡ್ಕಲ್ ಧಾರಾವಾಹಿ 222 ಕಂತುಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಸೂರ್ಯಕಾಂತಿಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಧಾರಾವಾಹಿಯ ಕಥಾಹಂದರವನ್ನು ಹೆಣೆಯುವುದಕ್ಕೂ ಮುನ್ನ ಮಹಾಭಾರತದ ಕಥೆಯನ್ನು ಅವಲೋಕಿಸಿ ಅದರಲ್ಲಿ ಬರುವ ಕರ್ಣನ ಪಾತ್ರ,ಆತನ ಜೀವನ ರಹಸ್ಯ ತಿಳಿಯದೇ ಅನುಭವಿಸುವ ಸಂಕಷ್ಟ ನೋವುಗಳನ್ನು ಅರಿತು ಅದೇ ಹಿನ್ನೆಲೆಯಲ್ಲಿ ಕಥೆಯನ್ನು ಹೆಣೆಯಲು ನಿರ್ಧರಿಸಲಾಯಿತು.

ಸೂರ್ಯಪುತ್ರ ಕರ್ಣನಾಗಿದ್ದ ನಮ್ಮ ಧಾರಾವಾಹಿಯಲ್ಲಿ ಅದೇ ಪಾತ್ರದ ನೆರಳು ಇರುವುದರಿಂದ ಸೂರ್ಯಕಾಂತಿಯಲ್ಲಿ ಕಾಂತಿ ಪಾತ್ರವನ್ನು ಸೃಷ್ಟಿಸಲಾಗಿದೆ. ಕಾಂತಿ ಸಾಮಾಜಿಕ ಮತ್ತು ಕೌಟುಂಬಿಕ ಪರಿಸರದಲ್ಲಿ ಎದುರಿಸುವ ನೋವು ಸಂಕಟಗಳನ್ನು ಧಾರಾವಾಹಿಯ ಮೂಲಕ ಅನಾವರಣ ಮಾಡಲಾಗಿದೆ. ಮಹಿಳಾ ಪ್ರೇಕ್ಷಕರನ್ನು ಆದ್ಯತೆಯ ಮೇಲೆ ತೆಗೆದುಕೊಂಡು ಖ್ಯಾತ ಕತೆಗಾರ ಜೋಗಿ ಕಥೆ ಹೆಣೆದಿದ್ದಾರೆ, ಅದು ಜನರನ್ನು ತಲುಪಿದೆ ಎಂಬ ಭರವಸೆಯಿದೆ.

ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಧಾರಾವಾಹಿ ಮೂಡಿ ಬರಲಿದೆ ಎಂದರು. ಧಾರಾವಾಹಿಯ ಪ್ರಧಾನ ನಿರ್ದೇಶಕ ಗುರುದಾಸ್ ಶೆಣೈ ಪ್ರೇಕ್ಷಕರು ಹಾಗೂ ವೀಕ್ಷಕರೊಂದಿಗೆ ಸಂವಾದ ನಡೆಸಿ ಕಥಾಹಂದರದಲ್ಲಿ ಕಾಣಬರುವ ಪಾತ್ರಗಳು ಮತ್ತು ಕಥೆ ಸಾಗುವ ಹಾದಿಯ ಕುರಿತು ವಿವರಿಸಿದರು. ಕೌಟುಂಬಿಕ ಪರಿಸರದಲ್ಲಿ ಮಹಿಳೆಯರಿಗೆ ಎದುರಾಗುವ ಸವಾಲುಗಳು ಮತ್ತು ಅದನ್ನು ಎದುರಿಸುವ ದಿಟ್ಟ ಹೆಣ್ಣುಮಗಳಾಗಿ ಕಥಾನಾಯಕಿ ಕಾಂತಿಯ ಪಾತ್ರ ಪರಿಣಾಮಕಾರಿಯಾಗಿ ಬರಲಿದೆ.

ಸಂಬಂಧಗಳ ಪ್ರಾಮುಖ್ಯತೆಯನ್ನು ಅರಿತು ಬದುಕು ಸಾಗಿಸಲು ಪ್ರಯತ್ನಿಸುವ ಕಾಂತಿ, ಮತ್ತು ಆಕೆಯ ಪತಿಗೆ ಎರಡನೇ ಆಕರ್ಷಣೆಯಾಗಿ ಬರುವ ಐಶ್ವರ್ಯ ಕೌಟುಂಬಿಕ ಸಾಮರಸ್ಯದ ಎಲ್ಲೆಯನ್ನು ಮೀರಿ ಸಾಗುವ ಪ್ರಯತ್ನ, ಹಾಗಾದಾಗ ಉಂಟಾಗುವ ಸಂಘರ್ಷಗಳ ತಿರುಳು ಧಾರಾವಾಹಿಯಲ್ಲಿದೆ ಎಂದರು. ಸೂರ್ಯಕಾಂತಿಯ ಕಥಾನಾಯಕಿ ಕಾಂತಿ ಹಾಸನದ ರಚಿತಾಗೌಡ ಧಾರಾವಾಹಿಯ ಪ್ರಧಾನ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು.

ಹಿರಿಯ ನಟ ರಮೇಶ್ ಪಂಡಿತ್ ಮಾತನಾಡಿ ತಮಗೆ ಸಿನಿಮಾ ಕಿರುತೆರೆಗಳಲ್ಲಿ ಮತ್ತು ನಾಟಕಗಳಲ್ಲಿ ಖಳನ ಪಾತ್ರಗಳನ್ನೆ ನೀಡಲಾಗುತ್ತಿತ್ತು ಆದರೆ ಸೂರ್ಯಕಾಂತಿಯಲ್ಲಿ ಬದಲಾದ ಜವಾಬ್ದಾರಿಯುತ ಪಾತ್ರ ನನಗೆ ತೃಪ್ತಿ ನೀಡಿದೆ ಎಂದರು. ಮಾತುಕತೆಯಲ್ಲಿ ಸೂರ್ಯಕಾಂತಿಯ ಕಥಾನಾಯಕ ಪೂರ್ಣಚಂದ್ರ,ಕಲಾವಿದರಾದ ನೀತು, ಕಮಲ, ನೇತ್ರಾ, ಉಮೇಶ್ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.

ಕಲಾವಿದರು ಮತ್ತು ತಂತ್ರಜ್ಞರನ್ನು ಝೀ ವಾಹಿನಿಯ ಪ್ರೊಡಕ್ಷನ್ ಹೆಡ್ ಲಕ್ಷ್ಮೀನಾರಾಯಣ ಹೆಗಡೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು. ಕಾರ್ಯಕ್ರಮವನ್ನು ಲೋಕೇಶ್ ಬನಹಟ್ಟಿ ನಿರೂಪಿಸಿದರು. ಚಿತ್ರಶ್ರೀ ಕಾರ್ಯಕ್ರಮ ಸಂಯೋಜಿಸಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Zee Kannada's fiction Suryakanthi completes 222 episodes. Recently the serial team celebrates the success in grand style in Hassan district. The cast and crew shares their joy with the audience. Here is the special report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada