For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಿಂದ ನರೇಂದ್ರ ಬಾಬು ಶರ್ಮ ಮಾಯ

  By Rajendra
  |

  ಟಿವಿ ವಾಹಿನಿಗಳಲ್ಲಿ ಪ್ರತಿನಿತ್ಯ ಓತಪ್ರೋತವಾಗಿ ಪ್ರಸಾರವಾಗುವ ನಮನಮೂನೆಯ ಜ್ಯೋತಿಷ್ಯ ಅಲಿಯಾಸ್ ಭವಿಷ್ಯ ಕಾರ್ಯಕ್ರಮಗಳನ್ನು ನೀವು ನೋಡಿರುತ್ತೀರೋ ಇಲ್ಲವೋ ನಮಗೆ ಗೊತ್ತಿಲ್ಲ. ಆದರೆ ಈ ಕಾರ್ಯಕ್ರಮಗಳನ್ನು ಕಣ್ಣು ಬಾಯಿ ಬಿಟ್ಟುಕೊಂಡು ವೀಕ್ಷಿಸುವ ಅಪಾರವಾದ ಒಂದು ವರ್ಗ ಕನ್ನಡ ನಾಡಿನಲ್ಲಿದೆ. ಭವಿಷ್ಯವನ್ನು ನಂಬುವವರ ಪಂಗಡ ಒಂದಾದರೆ, ಅದನ್ನು ವಿರೋಧಿಸುವ ಪಂಗಡವೂ ನಾಡಿನಲ್ಲಿದೆ.

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬೃಹತ್ ಬ್ರಹ್ಮಾಂಡ ಬೂಟಾಟಿಕೆಯ ಜ್ಯೋತಿಷ್ಯ ಅಂಕಣಗಳಲ್ಲಿ ಎತ್ತಿದ ಕೈ ಎಂದು ವಾದಿಸುವವರ ಗುಂಪು ಆ ಕಾರ್ಯಕ್ರಮವನ್ನು ವಾಹಿನಿಯಿಂದ ತೆಗೆದುಹಾಕಬೇಕೆಂದು ಒಂದು ಚಳವಳಿಯನ್ನೆ ಹಮ್ಮಿಕೊಂಡಿತ್ತು. ಈ ಚಳವಳಿಗೆ ಈಗ ಜಯ ಸಿಕ್ಕಿದೆ. ಈಗ ತಾನೆ ಬಂದ ವರ್ತಮಾನಗಳ ಪ್ರಕಾರ, ಜ್ಯೋತಿಷಿ ನರೇಂದ್ರ ಬಾಬು ಶರ್ಮ ಅವರನ್ನು ವಾಹಿನಿಯಿಂದ ತೆಗೆದುಹಾಕಲಾಗಿದೆ.

  ಈ ವರ್ತಮಾನ ನಿಜವೋ ಸುಳ್ಳೋ ಎಂದು ಖಾತರಿಪಡಿಸಿಕೊಳ್ಳಲು ನಾವು ನರೇಂದ್ರ ಶರ್ಮ ಅವರನ್ನು ಸಂಪರ್ಕಿಸಲಿಲ್ಲ. ಏಕೆಂದರೆ ಬ್ರಹ್ಮಾಂಡವನ್ನೇ ಅರಿತರಿಗೆ ಎಲ್ಲಾದರೂ ಫೋನು ಮಾಡುವುದುಂಟೆ ? ಹೇಗೂ ಇರಲಿ, ಈ ಕುರಿತು ಸಂಪಾದಕೀಯ ಬ್ಲಾಗಿನಲ್ಲಿ ಪ್ರಕಟವಾಗಿರುವ ಸಂಪಾದಕೀಯವನ್ನು ಇಲ್ಲಿ ಕೊಡಲಾಗಿದೆ, ಓದಿ - ಸಂಪಾದಕ.

  ಜೀ ಕನ್ನಡ ಟಿವಿಯ 'ಬೃಹತ್ ಬ್ರಹ್ಮಾಂಡ' ಕಾರ್ಯಕ್ರಮದಿಂದ ನರೇಂದ್ರ ಶರ್ಮ ಅವರನ್ನು ತೊಲಗಿಸಲಾಗಿದೆ. ಇದು ನಮಗೆ ಗೊತ್ತಾಗಿರುವ ಮಾಹಿತಿ. ಜೀ ಟಿವಿಗೆ ಒಂದು ಥ್ಯಾಂಕ್ಸ್ ಹಾಗು ಜಗನ್ಮಾತೆಗೆ ಕೋಟಿ ವಂದನೆ. ನರೇಂದ್ರ ಶರ್ಮನನ್ನು ತೊಲಗಿಸಿ ಎಂದು ನಾವೆಲ್ಲರೂ ಆರಂಭಿಸಿದ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಕಡೆಗೂ ಯಶಸ್ವಿಯಾಗಿದೆ. ಜೀ ಟಿವಿ ಮುಖ್ಯಸ್ಥರಿಗೆ ಸಾವಿರಾರು ಪತ್ರಗಳನ್ನು ಬರೆದು ಈ ಕೊಳಕು ಕಾರ್ಯಕ್ರಮವನ್ನು ನಿಲ್ಲಿಸುವಂತೆ ಕೋರಿದ ಎಲ್ಲರ ಶ್ರಮವೂ ಸಾರ್ಥಕಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು.

  ನರೇಂದ್ರ ಶರ್ಮ ಅನಾಮತ್ತಾಗಿ ಮೂರು ಚಾನಲ್‌ಗಳನ್ನು ಸುತ್ತಾಡಿ ಮುಗಿಸಿಯಾಗಿದೆ. ಕಸ್ತೂರಿ, ಸುವರ್ಣ ಹಾಗು ಜೀ ಟಿವಿಗಳ ಪ್ರಯಾಣ ಮುಗಿದಾಗಿದೆ. ಮುಂದೆ ಆತ ಇನ್ಯಾವ ಚಾನಲ್ ಹಿಡಿಯುತ್ತಾರೋ ಕಾದು ನೋಡಬೇಕು. ಆದರೆ ಈತನ ವಿರುದ್ಧ ಎದ್ದಿರುವ ಆಕ್ರೋಶವನ್ನು ಗಮನಿಸಿರುವ ಇತರ ಚಾನಲ್‌ಗಳು ಈ ಸೆರಗಿನ ಕೆಂಡವನ್ನು ಕಟ್ಟಿಕೊಂಡರೆ ಎದುರಿಸುವ ಅಪಾಯಗಳನ್ನು ಈಗಾಗಲೇ ಊಹಿಸಿರಬಹುದು. ಇನ್ನುಳಿದದ್ದು ಅವರಿಗೆ ಸೇರಿದ್ದು.

  ನರೇಂದ್ರ ಶರ್ಮ ಕಸ್ತೂರಿ ಮತ್ತು ಸುವರ್ಣಗಳಲ್ಲಿ ಕಾರ್ಯಕ್ರಮ ನಡೆಸುವಾಗಲೇ ತಮ್ಮ ಬಾಯಿಬಡುಕತನವನ್ನು ತೋರಿಸಿ ಅಪಹಾಸ್ಯಕ್ಕೆ ಈಡಾಗಿದ್ದರು. ಜನರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳನ್ನು ಹೆದರಿಸುತ್ತಲೇ ಬಂದ ಶರ್ಮ, ಇಡೀ ಜಗತ್ತೇ ತನ್ನ ಆಣತಿಯ ಮೇರೆಗೆ ನಡೆಯುತ್ತದೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದರು. ನಾನು ಹೇಳುವ ಡೇಟಿಗೆ ಸರಿಯಾಗಿ ಪ್ರಳಯ ಆಗುತ್ತದೆ.

  ಒಂದೊಮ್ಮೆ ಆಗುವ ಸಂದರ್ಭ ಇಲ್ಲದಿದ್ದರೂ ನಾನು ಹೇಳಿದ್ದೇನೆಂಬ ಕಾರಣಕ್ಕೆ, ನನ್ನ ಮಾತು ಉಳಿಸುವ ಸಲುವಾಗಿ ಜಗನ್ಮಾತೆ ಪ್ರಳಯ ನಡೆಸುತ್ತಾಳೆ ಎಂದು ಶರ್ಮ ಹೇಳಿಕೊಂಡಿದ್ದರು. ಪ್ರಳಯ ಜೀ ಟಿವಿಯ ಕಚೇರಿಯಲ್ಲೇ ಆಗಿದೆ. ನರೇಂದ್ರ ಶರ್ಮ ಕೈಯಲ್ಲಿ ಹಿಡಿದ ತ್ರಿಶೂಲದ ತರಹದ ಐಟಮ್ ಸಮೇತ ಹೊಟ್ಟೆ ನೀವಿಕೊಂಡು ಹೊರಗೆ ಬಿದ್ದಿದ್ದಾರೆ.

  ಹಲವಾರು ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಈತನ ವಿರುದ್ಧ ಆಕ್ರೋಶ ವ್ಯಕ್ತವಾಯಿತು. ಚೂಡಿದಾರ್, ಜೀನ್ಸ್ ಪ್ಯಾಂಟು ಹಾಕುವ ಹೆಣ್ಣುಮಕ್ಕಳಿಗೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿ ನರೇಂದ್ರ ಶರ್ಮ ತನ್ನ ತಿಕ್ಕಲುತನದ ಪರಮಾವಧಿ ತಲುಪಿದ್ದ. ಜಗನ್ಮಾತೆ ಬರುತ್ತಾಳೆ, ಇಳಿಯುತ್ತಾಳೆ ಎಂದು ನರೇಂದ್ರ ಶರ್ಮ ಕೊಟ್ಟ ಡೇಟುಗಳೆಲ್ಲ ಪೂರೈಸಿದವು. ಕಡೆಗೆ ಪ್ರಳಯ ಶುರುವಾಗುತ್ತ ನೋಡಿ ಎಂದು ಹೇಳಿದ್ದ ಮೇ 21 ಸಹ ಕಳೆದುಹೋಯಿತು. ಅಲ್ಲಿಗೆ ನರೇಂದ್ರ ಶರ್ಮ ಅವರ ಆಟಗಳೆಲ್ಲವೂ ಮುಗಿದಿದ್ದವು.

  ನರೇಂದ್ರ ಶರ್ಮ ಅವರನ್ನು ಬೃಹತ್ ಬ್ರಹ್ಮಾಂಡದ ಕುರ್ಚಿಯಿಂದ ಎದ್ದು ಹೋಗಲು ಸೂಚಿಸಲಾಗಿದೆ. ಆ ಜಾಗಕ್ಕೆ ಆನಂದ್ ಗುರೂಜಿ ಎಂಬುವವರು ಬಂದಿದ್ದಾರಂತೆ. ಹಾಗಂತ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಅಭಿಯಾನ ಇಲ್ಲಿಗೆ ಮುಗಿಯುವುದಿಲ್ಲ. ನರೇಂದ್ರ ಶರ್ಮ ಅಂಥವರ ವಿರುದ್ಧ ನಮ್ಮ ಹೋರಾಟ ಮುಂದುವರೆಸೋಣ.

  English summary
  It is reliably learnt ( Via : sampadakeeya blog ) that Zee Kannada has sacked renowned astrologer Narendra Babu Sharma from its popular 'Bruhat Bramhanda' programme. Narendra Babu gained lot of fame and name through this show. His discourses on religion and philosophy not only attracted the religious viewers but also has attracted the hate by a section of society disliking dissemination of superstition via mass media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X