ಅಮೀರ್ ಖಾನ್ 'ಸತ್ಯಮೇವ ಜಯತೆ' ಹೊಸ ಸೀಸನ್
ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ. ಈ ಬಾರಿಯೂ ಅವರು ಸತ್ಯ ಎಂಬ ಅಸ್ತ್ರವನ್ನು ಹಿಡಿದು ಬರುತ್ತಿರುವುದು ವಿಶೇಷ. ಸ್ಟಾರ್ ಪ್ಲಸ್ ನಲ್ಲಿ ಸತ್ಯಮೇವ ಜಯತೇ ಸೀಸನ್ 2ಗೆ ಮುಹೂರ್ತ ಫಿಕ್ಸ್ ಆಗಿದೆ.
ಸತ್ಯಮೇವ ಜಯತೇ ಸೀಸನ್ 2 ಚಿತ್ರ 2014ರ ಜನವರಿಯಲ್ಲಿ ಆರಂಭವಾಗಲಿದೆ. ಸತ್ಯಮೇವ ಜಯತೇ ಮೊದಲ ಸೀಸನ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವರ್ಷದ ಮಧ್ಯಭಾಗದಲ್ಲೇ 'ಸೀಸನ್ 2' ಆರಂಭವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು.

ವರದಕ್ಷಿಣೆ ಕಿರುಕುಳ, ಹೆಣ್ಣು ಭ್ರೂಣ ಹತ್ಯೆ, ಭ್ರಷ್ಟಾಚಾರ, ಅನೈತಿಕತೆ, ದೌರ್ಜನ್ಯ, ಮರ್ಯಾದಾ ಹತ್ಯೆ, ಮದ್ಯಪಾನ, ಅಸ್ಪೃಶ್ಯತೆ...ಹೀಗೆ ಪ್ರಚಲಿತ ಸಮಸ್ಯೆಗಳ ಮೇಲೆ ಈ ಟಾಕ್ ಶೋ ಅಟ್ಯಾಕ್ ಮಾಡಿತ್ತು. ಸಾಕಷ್ಟು ಚರ್ಚೆ, ವಾದ ವಿವಾದಕ್ಕೆ ವೇದಿಕೆ ಒದಗಿಸಿತ್ತು.
ಸೀಸನ್ ಒಂದಕ್ಕೆ ಅಮೀರ್ ಗೆ ಅಸಂಖ್ಯಾತ ಈ-ಮೇಲ್ ಗಳು, ದೂರವಾಣಿ ಕರೆಗಳು, ಎಸ್ಎಂಎಸ್ ಗಳು, ಪತ್ರಗಳು ರಾಶಿ ರಾಶಿ ಬಂದಿದ್ದವು. ಎಲ್ಲರದೂ ಒಂದೇ ಅಭಿಪ್ರಾಯ 'ಸೂಪರ್ ಶೋ' ಎಂದು. ಅಮೀರ್ ಖಾನ್ ಅವರ ಸಾಮಾಜಿಕ ಕಳಕಳಿಗೆ ಅನೇಕ ಸರ್ಕಾರೇತರ ಸಂಸ್ಥೆಗಳು ಅವರೊಂದಿಗೆ ಕೈಜೋಡಿಸಲು ಮುಂದಾದವು.
ಸತ್ಯಮೇವ ಜಯತೆ ಸೀಸನ್ 1 ಕಾರ್ಯಕ್ರಮದಿಂದ ರು.8 ಕೋಟಿ ನಿಧಿ ಸಂಗ್ರಹವಾಯಿತು. ಅಮೀರ್ ಖಾನ್ ಸಾಮಾಜಿಕ ಕಾಳಜಿಗೆ ಆನೆಬಲ ಬಂತು. ಮೊದಲ ಸೀಸನ್ ಮೂಲಕ ದೇಶಾದ್ಯಂತ ಸಾಕಷ್ಟು ಪ್ರೇಕ್ಷಕರನ್ನು ಈ ಶೋ ತಲುಪಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಬಹಳಷ್ಟು ಭಾಷೆಗಳಲ್ಲಿ ಪ್ರಸಾರವಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಚರ್ಚೆಗೆ ವೇದಿಕೆಯಾಯಿತು. ಈಗ ಸೀಸನ್ 2ರಲ್ಲಿ ಏನೆಲ್ಲಾ ವಿಶೇಷತೆಗಳಿರಬಹುದು ಎಂಬ ಕುತೂಹಲ ಇದ್ದೇ ಇದೆ. (ಏಜೆನ್ಸೀಸ್)


Click it and Unblock the Notifications











