»   » ವೇಶ್ಯೆಯ ಮಗಳೆಂದು ಪತಿಯಿಂದ ಅವಮಾನ: ಉಮಾಶ್ರೀ

ವೇಶ್ಯೆಯ ಮಗಳೆಂದು ಪತಿಯಿಂದ ಅವಮಾನ: ಉಮಾಶ್ರೀ

Posted By:
Subscribe to Filmibeat Kannada

ಒಂದು ಹೆಣ್ಣಿಗೆ ಸಾಧನೆ ಮಾಡಬೇಕೆನ್ನುವ ಛಲ ಇದ್ದರೆ ಏನೆಲ್ಲಾ ಸಾಧಿಸಬಹುದು ಎನ್ನುವುದಕ್ಕೆ ಕೊಡಬಹುದಾದ ಒಂದು ಉತ್ತಮ ಉದಾಹರಣೆಯೆಂದರೆ ನಟಿ ಕಮ್ ಕನ್ನಡ, ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಉಮಾಶ್ರೀ.

ರಂಗಭೂಮಿಯಿಂದ ಹಿಡಿದು, ನಟಿಯಾಗಿ ಮತ್ತು ಸದ್ಯ ಸಚಿವೆಯಾಗಿರುವ ಉಮಾಶ್ರೀ ಇದುವರೆಗೆ ಆರು ರಾಜ್ಯ ಪ್ರಶಸ್ತಿ ಮತ್ತು ಗುಲಾಬಿ ಟಾಕೀಸ್ ಚಿತ್ರಕ್ಕೆ 'ರಜತ ಕಮಲ' ಪ್ರಶಸ್ತಿ ಪಡೆದ ಕನ್ನಡ ನಾಡಿನ ಹೆಮ್ಮೆಯ ಕಲಾವಿದೆ. ಜನಪ್ರಿಯ ವಾರಾಂತ್ಯದ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' (ಅ 11) ಕಾರ್ಯಕ್ರಮದಲ್ಲಿ ಉಮಾಶ್ರೀ ಅತಿಥಿಯಾಗಿ ಭಾಗವಹಿಸಿದ್ದರು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಇದುವರೆಗೆನ ಅತ್ಯಂತ ಹೃದಯಸ್ಪರ್ಶಿ ಎಪಿಸೋಡಿನಲ್ಲಿ ಉಮಾಶ್ರೀ ತನ್ನ ಬಾಲ್ಯದ ಜೀವನದಿಂದ ಹಿಡಿದು, ಇದುವರೆಗಿನ ಜೀವನದಲ್ಲಿ ಪಟ್ಟ ಬವಣೆ, ನೋವು, ಅವಮಾನದ ಪುಟವನ್ನು ತೆರೆದಿಟ್ಟರು. ಕಾರ್ಯಕ್ರಮದಲ್ಲಿ ಅವರೂ ಕಣ್ಣೀರಿಟ್ಟರು, ಇವರ ನೋವಿನ ಕಥೆಯನ್ನು ಕೇಳಿ ಇತರರ ಕಣ್ಣಾಲೆಯೂ ಒದ್ದೆಯಾಗಿತ್ತು. (ಬಂಗಾರಪೇಟೆ ಬಂಗಾರದ ಮನುಷ್ಯ ಅಫ್ಸರ್ ಪಾಷಾ)

ನಾನು ಪ್ರೀತಿಸಿ ಮದುವೆಯಾದ ಗಂಡನೇ ನನ್ನನ್ನು ಅತ್ತೆಯ ಮುಂದೆ ನೀನು 'ವೇಶ್ಯೆಯ ಮಗಳು' ಎಂದು ಹೇಳಿದ ದಿನವನ್ನು ನಾನು ನನ್ನ ಜೀವನದ ಕೊನೆಯ ಕ್ಷಣದವರೆಗೂ ಮರೆಯಲಾಗದು. ನನ್ನ ಮಕ್ಕಳನ್ನು ಪಂಜರದ ಗಿಳಿಯ ತರ ಬೆಳೆಸಿದೆ. ಅವರಿಗೆ ಕಾಲಕಾಲಕ್ಕೆ ಏನು ಬೇಕು ಅದನ್ನು ಕೊಡಲಿಲ್ಲ ಎನ್ನುವ ಪಾಪಪ್ರಜ್ಞೆ ನನ್ನನ್ನು ಕಾಡುತ್ತಿದೆ ಎಂದು ಉಮಾಶ್ರೀ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟರು. [ವೇಶ್ಯಾವೃತ್ತಿ ಕಾನೂನು ಬದ್ಧಗೊಳಿಸಿ : ಮಾತೆ ಮಹಾದೇವಿ]

ನನ್ನ ತಾಯಿ ಗರ್ಭಿಣಿಯಾಗಿದ್ದಾಗ ಇದು ನನ್ನ ಮಗುವೇ ಅಲ್ಲ ಎಂದು ಅಪ್ಪ ನಮ್ಮಿಂದ ದೂರಾದ. ಇದೇ ನೋವಿನಿಂದ ತಾಯಿ ಕೊರಗಿ ಕೊರಗಿ ಸಾವನ್ನಪ್ಪಿದ್ದರು. ನಾನು 18 ತಿಂಗಳ ಮಗುವಾಗಿದ್ದಾಗ ತಾಯಿಯ ಮಡಿಲಲ್ಲಿ ಎದೆಹಾಲಿಗಾಗಿ ಅಳುತ್ತಿದ್ದೆ. ಅನಾಥೆಯಾಗಿ ಬಿದ್ದಿದ್ದ ನನ್ನನ್ನು ನನ್ನ ದೊಡ್ಡಮ್ಮ ಸಾಕಿದರು. ಮುಂದೆ ಓದಿ..

ತಂದೆಯ ಪ್ರೀತಿ, ಆಸರೆ ಸಿಗಲಿಲ್ಲ

ಅಪ್ಪ ಎನ್ನಿಸಿಕೊಳ್ಳುವವನ ಪ್ರೀತಿಯಾಗಲೀ, ಆಸರೆಯಾಗಲಿ ನನಗೆ ಸಿಗಲಿಲ್ಲ. ಅಮ್ಮ ಸತ್ತಾಗ ಕೂಡಾ ಅಪ್ಪ ಬಂದಿರಲಿಲ್ಲ. ಊರಿನವರ ಮತ್ತು ನನ್ನ ದೊಡ್ಡಮ್ಮನ ಸಹಾಯದಿಂದ ತಾಯಿಯ ಅಂತಿಮ ಸಂಸ್ಕಾರ ಮಾಡಲಾಯಿತು. ದೊಡ್ಡಮ್ಮನ ಜೊತೆ ಊರಿನಿಂದ ಬೆಂಗಳೂರಿಗೆ ಬಂದೆ.

ನಾನೂ ಪ್ರೀತಿಸಿ ಮದುವೆಯಾದವಳು

ಹುಡುಗನ ಔಟ್ ಲುಕ್ ನೋಡಿ ನಾನು ಅವನನ್ನು ಪ್ರೀತಿಸಿದೆ, ಮದುವೆಯಾದೆ. ಮನೆಯಲ್ಲಿನ ವಿರೋಧದ ನಡುವೆಯೂ ಅವನನ್ನು ವರಿಸಿದೆ. ನಂತರದ ದಿನಗಳಲ್ಲಿ ನನಗೆ ಆತ ಕುಡುಕ, ಆತನಿಗೆ ದುಡಿಮೆ ಏನೇನೂ ಇಲ್ಲ, ಸಂಶಯ ಪಿಶಾಚಿ ಎನ್ನುವುದು ಗೊತ್ತಾಯಿತು.

ಗಂಡನ ಮನೆಯವರು ಹೊರಹಾಕಿದರು

ಪ್ರತೀದಿನ ನನಗೆ ಮತ್ತು ಗಂಡನಿಗೆ ಜಗಳವಾಗುತ್ತಿತ್ತು. ನನ್ನ ಅಮ್ಮ (ದೊಡ್ಡಮ್ಮ) ಹುಷಾರಿಲ್ಲದಿದ್ದಾಗ ಆಕೆಯನ್ನು ನೋಡಲು ಹೋಗಿದ್ದೆ, ಇದಕ್ಕೆ ನನ್ನ ಗಂಡನ ವಿರೋಧವಿತ್ತು. ಇದೇ ಘಟನೆಯನ್ನು ಮುಂದಿಟ್ಟುಕೊಂಡು ನನ್ನನ್ನು ಮನೆಯಿಂದ ಹೊರಗೆ ಹಾಕಿದ. ಅದಕ್ಕಿಂತ ಹೆಚ್ಚಾಗಿ ನೀನು ಅಪ್ಪನಿಗೆ ಹುಟ್ಟಿದವಳಲ್ಲ, ನೀನು ವೇಶ್ಯೆಯ ಮಗಳು ಎಂದು ಆರೋಪಿಸಿದ. ಇದು ನನ್ನ ಜೀವನದ ಅತ್ಯಂತ ನೋವಿನ ಘಟನೆ.

ಅವಮಾನದಿಂದ ಮನೆ ಬಿಟ್ಟೆ

ನಾನು ಗಂಡನ ಮನೆಯಿಂದ ಹೊರ ಬಂದ ಮೇಲೆ ಅಮ್ಮನ ಮನೆಯಲ್ಲಿದ್ದೆ, ಅಲ್ಲೂ ನೆಮ್ಮದಿಯಿರಲಿಲ್ಲ. ಅಕ್ಕಪಕ್ಕದ ಮನೆಯವರು ಗಂಡನನ್ನು ಬಿಟ್ಟು ಬಂದವಳು ಎಂದು ನನ್ನನ್ನು ಅವಮಾನಿಸಲಾರಂಭಿಸಿದರು. ಇದರಿಂದ ರೋಸಿ ಹೋಗಿ, ಇದ್ದ ಚಿಲ್ಲರೆ ಕಾಸು, ಎರಡು ಸೀರೆ ಇಟ್ಟುಕೊಂಡು ಬೆಂಗಳೂರಿನಿಂದ ತುಮಕೂರಿಗೆ ಬಂದೆ.

ಗುರುತು ಪರಿಚಯ ಇಲ್ಲದವರು ನೆಲೆ ನೀಡಿದರು

ತುಮಕೂರಿಗೆ ಬಂದಾಗ ಗುರುತು ಪರಿಚಯ ಇಲ್ಲದವರು ನನಗೆ ನೆಲೆ ನೀಡಿದರು. ನೆಲೆಕೊಟ್ಟ ಪುಣ್ಯಾತ್ಮ ಹೇಗೋ ಬೆಂಗಳೂರಿನಲ್ಲಿ ನನ್ನ ವಿಳಾಸ ಕಂಡು ಹಿಡಿದು ತಾಯಿಯನ್ನು ತುಮಕೂರಿಗೆ ಕರೆಸಿ ಕೊಂಡರು, ಮತ್ತೆ ಬೆಂಗಳೂರಿಗೆ ಬಂದೆ. ಜೀವನದ ಸಂಘರ್ಷದ ಕಾಲದಲ್ಲಿ ಹೆಣ್ಣನ್ನು ಬೀದಿಪಾಲು ಮಾಡಲಾಯಿತು. ಅಂದು ಬೀದಿಪಾಲಾಗಿ, ನೆಲೆ ಇಲ್ಲದೇ ಇದ್ದುದರಿಂದ ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಬೆಳೆಯುತ್ತಿದ್ದಾಗ ಮಾನವೀಯತೆ ತೋರಿದವರು ತುಂಬಾ ಜನ ಇದ್ದರು.

ರಂಗಭೂಮಿ ಪ್ರವೇಶ

'ಸಂಗ್ಯಾಬಾಳ್ಯ' ನಾಟಕ ನನ್ನನ್ನು ರಂಗಭೂಮಿಗೆ ಪರಿಚಯಿಸಿತು. ಎರಡು ಮಕ್ಕಳನ್ನು ಹೊತ್ತುಕೊಂಡು ಪಾತ್ರಕ್ಕಾಗಿ ಕಾಯುತ್ತಿದ್ದೆ. ನಾಟಕದ ಹೆಣ್ಣು ಪಾತ್ರಧಾರಿ ಬರದೇ ಇದ್ದಾಗ ಮೈಕೋ ಚಂದ್ರು ಅವರಿಂದ ನನಗೆ ಆ ಪಾತ್ರ ವಲಿಯಿತು. ಟೀ ಮತ್ತು ಒಂದು ಬನ್ ತಿಂದು ಕಲಾಕ್ಷೇತ್ರದ ಮೆಟ್ಟಲಲ್ಲಿ ಜೀವನ ಸಾಗಿಸಿದ ದಿನವೂ ಇದೆ. ಅನಾಥೆ ಎನ್ನುವ ಯಾವ ನೋವನ್ನು ರಂಗಭೂಮಿಯವರು ನನಗೆ ನೀಡಿಲ್ಲ. ನಾನು ಸತ್ತರೂ, ಸರಕಾರದಿಂದ ಯಾವುದೇ ಗೌರವ ಸಿಕ್ಕಿದರೂ ನನ್ನ ಕೊನೆ ದಿನದಲ್ಲಿ ನನ್ನ ಜೊತೆಗಿರುವವರು ರಂಗಭೂಮಿಯವರು ಎನ್ನುವ ನಂಬಿಕೆಯಲ್ಲಿದ್ದೇನೆ.

ಚಿತ್ರರಂಗಕ್ಕೆ ಬಂದ ಬಗ್ಗೆ

ಡಾ. ವಿಜಯಮ್ಮ ಎನ್ನುವ ನನ್ನ ಹಿತೈಷಿಯ ಮೂಲಕ ಪುಟ್ಟಣ್ಣ ಕಣಗಾಲ್ ಅವರನ್ನು ಭೇಟಿ ಮಾಡಿದೆ, ರಂಗಭೂಮಿಯವರಿಗೆ ಚಾನ್ಸ್ ಕೊಡುವುದಿಲ್ಲ ಎಂದು ಮೊದಲು ಹೇಳಿದ್ದ ಪುಟ್ಟಣ್ಣಾಜಿ ಆಮೇಲೆ ನನಗೆ ಚಾನ್ಸ್ ಕೊಟ್ಟರು. ಕಾಶೀನಾಥ್ ಅವರ ಅನುಭವ ಚಿತ್ರದ ಮೂಲಕ ರಾತ್ರೋರಾತ್ರಿ ಕನ್ನಡಿಗರ ಮನೆಮಾತಾದೆ.

ನಮ್ಮ ಸೀನುಗಳನ್ನು ಎಡಿಟ್ ಮಾಡಿಸಿದ್ದರು

ನನ್ನ ಮತ್ತು ಎನ್ ಎಸ್ ರಾವ್ ಅವರ ಜೋಡಿ ಬಹಳ ಜನಪ್ರಿಯವಾಗಿದ್ದ ಕಾಲವದು. ನಮ್ಮಿಬ್ಬರ ಜೋಡಿಯ ಜನಪ್ರಿಯತೆ ಸಹಿಸದ ಕನ್ನಡದ ಪ್ರಮುಖ ನಟರು (ಹೆಸರು ಹೇಳಲಿಲ್ಲ) ನನ್ನ ಮತ್ತು ಎನ್ ಎಸ್ ರಾವ್ ದೃಶ್ಯಗಳನ್ನೇ ಎಡಿಟ್ ಮಾಡಿಸಿದ್ದರು. ಎನ್ ಎಸ್ ರಾವ್ ನಿಧನರಾದಾಗ ಚಿತ್ರರಂಗದಿಂದ ನನಗೆ ಒಂದು ವರ್ಷ ಚಾನ್ಸ್ ಸಿಗಲಿಲ್ಲ.

ರಾಜಕೀಯಕ್ಕೆ ಬಂದಿದ್ದು

ಚಿತ್ರರಂಗದಲ್ಲಿ ಹೆಸರು ಮಾಡಿದ ನಂತರ ಒಂದು ದಿನ ಕುಮಾರ್ ಬಂಗಾರಪ್ಪ ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದೆ. ಅವರು ತನ್ನ ತಂದೆಯ ಬಳಿ ಹೇಳಿದ್ದರು. ಬಂಗಾರಪ್ಪನವರು ನನ್ನನ್ನು ಕರೆಸಿ ಪಕ್ಷಕ್ಕೆ ಸೇರಿಸಿಕೊಂಡರು. ಅವರು ಕೊಟ್ಟ ಪಾತ್ರವನ್ನು ನಿಷ್ಠೆಯಿಂದ ಕೆಲಸ ಮಾಡಿದೆ, ಪಕ್ಷಕ್ಕಾಗಿ ದುಡಿದೆ, ಸೋನಿಯಾಜಿ ಕೂಡಾ ನನ್ನನ್ನು ಪ್ರೋತ್ಸಾಹಿಸಿದರು.

ಚುನಾವಣೆಗೆ ನಿಂತೆ

ತೇರದಾಳದಲ್ಲಿ ಮೊದಲು ಚುನಾವಣೆಗೆ ನಿಂತಾಗ ಸೋತೆ. ಹಠ ಬಿಡದೇ ಅಲ್ಲೇ ಮನೆ ಮಾಡಿದೆ, ಐದು ವರ್ಷ ಅಲ್ಲೇ ನೆಲೆಸಿದೆ. ಕಳೆದ ಚುನಾವಣೆಯಲ್ಲಿ ನನ್ನನ್ನು ಮತದಾರರು ಆಶೀರ್ವದಿಸಿದರು. ಇವತ್ತು ನಾನು ಮಂತ್ರಿಯಾಗಿದ್ದರೆ ಅದು ತೇರದಾಳ ಜನತೆಯ ಭಿಕ್ಷೆ. ದುಡಿಮೆಯ ವೇಗದಲ್ಲಿ ಬದುಕು ಕಟ್ಟಿಕೊಳ್ಳುವ ಕಾಯಕದಲ್ಲಿ ರೆಕ್ಕೆ ಮುರಿದ ಹಕ್ಕಿಯಾದೆ ಎನ್ನುವ ನೋವಿನ ಮಾತಿನೊಂದಿಗೆ ಉಮಾಶ್ರೀ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

English summary
Actor cum Minister Umahsree in Weekend With Ramesh programme telecasted on Saturday, Oct 11. The reality show aired on Zee Kannada channel on every Saturday and Sunday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada