ಅನು ಪ್ರಭಾಕರ್ ವಿಚ್ಛೇದನದ ಬಗ್ಗೆ ಜಯಂತಿ ಮೌನ
ಅಭಿನಯ ಶಾರದೆ ಜಯಂತಿ ಕಿರುತೆರೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಅವರು ಜೀ ಕನ್ನಡದ 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪೂರ್ಣ ಪ್ರಮಾಣದಲ್ಲಿ ಕಿರುತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.
ಬಾತ್ ರೂಮಿನಲ್ಲಿ ಕಾಲುಜಾರಿ ಬಿದ್ದಿದ್ದ ಜಯಂತಿ ಅವರಿಗೆ ಗಂಭೀರವಾಗಿ ಪೆಟ್ಟಾಗಿತ್ತು. ಚಿಕಿತ್ಸೆ ಪಡೆಯುತ್ತಾ ಎರಡು ತಿಂಗಳಿಂದ ಅವರು ವಿಶ್ರಾಂತಿಯಲ್ಲಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಬಣ್ಣ ಹಚ್ಚಿದ್ದಾರೆ. [ನಟಿ ಅನು ಪ್ರಭಾಕರ್ ವಿಚ್ಛೇದನ ಕೋರಿ ಅರ್ಜಿ]

ಇದೇ ಸಂದರ್ಭದಲ್ಲಿ ತನ್ನ ಮಗ ಮತ್ತು ಸೊಸೆ ವಿವಾಹ ವಿಚ್ಛೇದನ ಪಡೆಯುತ್ತಿರುವ ಬಗ್ಗೆ ಮಾತನಾಡಿದ ಅವರು, "ಈ ಬಗ್ಗೆ ನಾನೇನೂ ಹೇಳುವುದಿಲ್ಲ. ನನ್ನ ಪಾಲಿಗೆ ಅದೊಂದು ಮುಗಿದ ಅಧ್ಯಾಯ. ಒಂದು ವೇಳೆ ಆ ಬಗ್ಗೆ ಮಾತನಾಡಿದರೆ ಅಳುವೇ ನನ್ನ ಉತ್ತರ, ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡಿ" ಎಂದಿದ್ದಾರೆ.
ತಾವು ಬಿದ್ದು ಗಾಯಗೊಂಡಾಗ ಚಿತ್ರರಂಗದ ಹಲವಾರು ಗಣ್ಯರು ಬಂದು ಮಾತನಾಡಿಸಿಕೊಂಡು ಹೋದರು. ಪಾರ್ವತಮ್ಮ ರಾಜ್ ಕುಮಾರ್, ರಮೇಶ್ ಭಟ್, ಶ್ರೀನಿವಾಸಮೂರ್ತಿ, ಹೇಮಾ ಚೌಧರಿ, ಶ್ರುತಿ, ಚಂದ್ರಶೇಖರ್ ಮುಂತಾದವರು ಬಂದು ತಮ್ಮ ಕ್ಷೇಮ ಸಮಾಚಾರ ವಿಚಾರಿಸಿದ್ದಕ್ಕೆ ಕೃತಜ್ಞತೆಗಳನ್ನು ತಿಳಿಸಿದರು.
ಇದೇ ಏಪ್ರಿಲ್ 14ರಿಂದ ಒಂದೇ ಗೂಡಿನ ಹಕ್ಕಿಗಳು ಧಾರಾವಾಹಿ ಪ್ರಸಾರವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಅಭಿನಯ ಶಾರದೆ ಜಯಂತಿ ಅವರು ತಮ್ಮ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ.


Click it and Unblock the Notifications











