»   » ಆದಿ ಮತ್ತು ನೀತೂ ನಡುವೆ ಅಂಥಹದ್ದೇನು ನಡೀತಿದೆ?

ಆದಿ ಮತ್ತು ನೀತೂ ನಡುವೆ ಅಂಥಹದ್ದೇನು ನಡೀತಿದೆ?

Posted By:
Subscribe to Filmibeat Kannada

ಹರ್ಷಿಕಾ ಎಲಿಮಿನೇಟ್ ಆದ ಬಗ್ಗೆ ಸೃಜನ್ ಬೇಸರದಿಂದ ಬಿಗ್ ಬಾಸ್ ಮನೆಯ ಹೊರಗೆ ಕೂತಿದ್ದರು. ಊಟವನ್ನೂ ಮಾಡದೆ ಸುಮ್ಮನೆ ಒಬ್ಬರೆ ಕೂತು ಯೋ‌ಚಿಸುತ್ತಿದ್ದರು. ಅದಿ ಲೋಕೇಶ್ ಹಾಗು ಶ್ವೇತಾ ಚೆಂಗಪ್ಪ ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ನನ್ನಿಂದ ಒಬ್ಬರ ಕಣ್ಣಲ್ಲಿ ನೀರು ಬಂತಲ್ಲಾ ಅದನ್ನು ನನಗೆ ಸಹಿಸಲು ಸಾಧ್ಯವಾಗುತ್ತ್ತಿಲ್ಲ ಎಂದು ಆದಿ ಬಳಿ ಸೃಜನ್ ಹೇಳಿದರು. ಆ ನಿರ್ಧಾರವನ್ನು ಬಹಳ ಆಲೋಚಿಸಿ ತೆಗೆದುಕೊಂಡಿರಲಿಲ್ಲ. ಆ ಕ್ಷಣಕ್ಕೆ ತೆಗೆದುಕೊಂಡ ನಿರ್ಧಾರ ಅದಾಗಿತ್ತು. ಉದ್ದೇಶಪೂರ್ವಕವಾಗಿ ತೆಗೆದುಕೊಂಡ ನಿರ್ಧಾರ ಅದಲ್ಲ ಎಂದು ಅವರು ಹೇಳಿದರು. ಆದರೆ ಅವರಲ್ಲಿ ತಾನು ತಪ್ಪು ಮಾಡಿದೆ ಎಂಬ ಅಳುಕು ಕಾಣುತ್ತಿತ್ತು. [ಹರ್ಷಿಕಾ ಪಾಲಿಗೆ ವಿಲನ್ ಆದ ಸೃಜನ್ ಲೋಕೇಶ್]

ಇನ್ನೊಂದು ಕಡೆ ಶ್ವೇತಾ ಹಾಗೂ ಸಂತೋಷ್ ಬೆಡ್ ಮೇಲೆ ಆರಾಮವಾಗಿ ಕೂತು ಮಾತನಾಡುತ್ತಿದ್ದರು. ಕ್ಯಾಪ್ಟನ್ ಆದ ಮೆಲೆ ಇವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ನನ್ನ ಪ್ರಕಾರ ಅದು ಕ್ಯಾಪ್ಟನ್ ಷಿಪ್ ಅಲ್ಲ, ಅದೊಂದು ಲಗ್ಜುರಿ ಕ್ಯಾಪ್ಟನ್ ಶಿಪ್ ಅಷ್ಟೇ ಎಂದರು ಸಂತೋಷ್.

ಮನೆಗೆ ಕ್ಯಾಪ್ಟನ್ ಬೇಕಾಗಿಲ್ಲ ಎಂದ ಸಂತೋಷ್

ಅವರ ಕೆಲಸ ಅವರು ಮಾಡಿಕೊಳ್ಳಕ್ಕೆ ಅವರ ಕೈಯಲ್ಲೇ ಆಗಲ್ಲ ಎಂದ ಮೇಲೆ ನನಗೆ ಆ ನಾಯಕತ್ವದಲ್ಲಿ ನಂಬಿಕೆ ಇಲ್ಲ ಎಂದರು. ಇಲ್ಲಿ ಅವರವರ ಕೆಲಸಗಳನ್ನು ಮಾಡಿಕೊಳ್ಳಲು ಕ್ಯಾಪ್ಟನ್ ಬೇಕಾಗಿಲ್ಲ ಎಂಬುದು ಸಂತೋಷ್ ಮಾತಿನ ಇಂಗಿತ. ಬನ್ನಿ ನೋಡೋಣ ಹದಿನಾಲ್ಕು ಹಾಗೂ ಹದಿನೈದನೇ ದಿನ ಏನಾಯಿತು ಎಂದು.

ಎಲ್ಲರ ಬಗ್ಗೆಯೂ ಕಾಮಿಡಿ ಮಾಡಿದ ಸೃಜನ್

ಸೃಜನ್ ಅವರು ಮಾತನಾಡುತ್ತಾ ಡೆಲಿವರಿಯಾದಾಗ ಎಲ್ಲರೂ ಹೇಗಿದ್ದರು ಎಂದು ಹೇಳುತ್ತಾ ಸಿಕ್ಕಾಪಟ್ಟೆ ಕಾಮಿಡಿ ಮಾಡಿದರು, ದೀಪಿಕಾ ಹುಟ್ಟಿದಾಗ ಹೇಗಿದ್ದರು, ಯಾರೆಲ್ಲಾ ಹೇಗಿದ್ದರು ಎಂದು ಹೇಳಿದರು. ಅನುಪಮಾ ಭಟ್ ಹುಟ್ಟಿದಾಗ ಅವಳನ್ನು ತೊಟ್ಟಿಲಿಗೆ ಹಾಕಿಲ್ಲ ಬಟ್ಟಲಿಗೆ ಹಾಕಿದ್ದರು ಎಂದು ಕಾಮಿಡಿ ಮಾಡಿದರು.

ಸಾಕಾಗಿದೆ ಎಂದ ಆದಿ ಲೋಕೇಶ್

ಇನ್ನೊಂದು ಕಡೆ ಆದಿ ಮಾತನಾಡುತ್ತಾ, ಹರ್ಷಿಕಾ ಹೋಗಿದ್ದು ಒಳ್ಳೆದಾಯಿತು, ಅದರ ಬದಲು ನಾನಾದರೂ ಹೋಗಬೇಕಿತ್ತು. ಯಾರಿಗೆ ಬೇಕ್ರಿ ಈ ಗೇಮ್ ಗಳು, ಒಬ್ಬರಿಗೊಬ್ಬರು ಹರ್ಟ್ ಮಾಡಿಕೊಂಡು ಇರೋದು. ಈ ವಾರ ಮುಗಿದರೆ ಸಾಕಾಗಿದೆ. ಕ್ಯಾಪ್ಟನ್ ಆಗಿದ್ದಾಗ ಸುಮ್ಮನೆ ಕೂತಿರಬೇಕು, ಕೆಲಸನಾದರೂ ಇದ್ದರೆ ಹೇಗೋ ಕಾಲ ಕಳೀಬಹುದು ಎಂದು ಅವರು ನೀತೂ ಬಳಿ ಅಲವತ್ತುಕೊಂಡರು.

ಡಾನ್ಸ್ ರಾಜ ಡಾನ್ಸ್ ಮೂಲಕ 15ನೇ ದಿನ

ಹದಿನೈದನೇ ದಿನ "ಡಾನ್ಸ್ ಡಾನ್ಸ್ ರಾಜಾ ಡಾನ್ಸ್...ನೀವೇ ನನ್ನ ತಾಯ ತಂದೆ ಎಂದು ಬಂದೆ ಇಲ್ಲಿಗೆ..." ಹಾಡಿನ ಮೂಲಕ ಆರಂಭವಾಯಿತು. ಕೆಲವರು ಹಾಸಿಗೆಯಲ್ಲಿ ಹೊರಳಾಡುತ್ತಾ, ಇನ್ನೂ ಕೆಲವರು ಡಾನ್ಸ್ ಮಾಡುತ್ತಾ ಎದ್ದರು.

ಆದಿ ಮತ್ತು ನೀತೂ ಬಗ್ಗೆ ಗುಮಾನಿ

ಸಂತೋಷ್ ಮತ್ತು ಶಕೀಲಾ ಇಬ್ಬರೂ ಆದಿ ಮತ್ತು ನೀತೂ ಅವರ ಬಗ್ಗೆ ಮಾತನಾಡಿಕೊಂಡರು. ಆರಂಭದಲ್ಲಿ ಬಾಯ್ ಫ್ರೆಂಡ್ ನೆನಪಾಗುತ್ತಿದ್ದಾನೆ ಎನ್ನುತ್ತಿದ್ದ ನೀತೂ ಈಗ ಆ ಬಗ್ಗೆ ಮಾತೇ ಆಡುತ್ತಿಲ್ಲ. ಆದಿ ಎಲ್ಲಿ ಹೋದರೂ ಅವರನ್ನೇ ಅವರ ಕಣ್ಣುಗಳು ಹಿಂಬಾಲಿಸುತ್ತಿವೆ. ಕ್ಯಾಪ್ಟನ್ ರೂಮಿನಲ್ಲಿ ಕರ್ಟನ್ ಇಲ್ಲದೆ ಇರುವುದು ಇಬ್ಬರಿಗೂ ಬಹಳ ಸಮಸ್ಯೆಯಾಗಿದೆ ಎಂದು ಮಾತನಾಡಿಕೊಂಡರು.

ಇಬ್ಬರಿಗೂ ಒಳ್ಳೆಯ ತಾಣ ಇದು

ಆದಿ ಕ್ಯಾಪ್ಟನ್ ಆದ ಮೇಲೆ ಇಬ್ಬರೂ ಬಹಳ ಬದಲಾಗಿದ್ದಾರೆ. ಆದಿಗೆ ಎಲ್ಲವನ್ನೂ ಸಪ್ಲೇ ಮಾಡುತ್ತಿದ್ದಾಳೆ. ಕೈ ಕೈ ಹಿಡಿದುಕೊಂಡು ಓಡಾಡುವುದೇನು, ಚಾನ್ಸ್ ಸಿಕ್ಕಿದಾಗ ಅಪ್ಪಿಕೊಳ್ಳುವುದೇನು, ಆದಿಗೆ ಕಾಫಿ ಕೊಡುವುದು, ಊಟ ತಿಂಡಿ ತಂದುಕೊಂಡುವುದು ಇದೆಲ್ಲಾ ಏನು. ಇಷ್ಟು ದಿನ ಅವರಿಗೆ ಒಳ್ಳೆಯ ತಾಣ ಸಿಕ್ಕಿರಲಿಲ್ಲ. ಈಗ ಇಲ್ಲಿ ಸಿಕ್ಕಿದೆ ಎಂದು ಶಕೀಲಾ ಹೇಳಿದರು.

ಅಪರಿಚಿತನಂತೆಯೇ ಇರುವ ರೋಹಿತ್

ಡ್ರಾಮಾ ಆಡಲು ನನಗೆ ಬರಲ್ಲ, ಓಪನ್ ಅಪ್ ಆಗಲ್ಲ ಎಂದು ಹೇಳುತ್ತಿದ್ದ ರೋಹಿತ್ ಹದಿನೈದನೇ ದಿನ ಫುಲ್ ಓಪನ್ ಆಪ್ ಆದರು. ಈ ಬಗ್ಗೆ ಸಂತೋಷ್ ಸಹ ರೋಹಿತ್ ಅವರನ್ನು ಕುರಿತು ಬಹಳ ಬದಲಾಗಿದ್ದಾನೆ ಎಂದು ಹೇಳಿದರು. ಆದರೆ ರೋಹಿತ್ ರಲ್ಲಿ ಮಾತ್ರ ಅಂತಹ ಬದಲಾವಣೆ ಏನು ಕಂಡುಬರಲಿಲ್ಲ. ಮನೆಯಲ್ಲಿ ಇನ್ನೂ ಅವರು ಅಪರಿಚಿತರಂತೆಯೇ ಓಡಾಡುತ್ತಿದ್ದಾರೆ.

ಮನೆಯಲಿ ತಟ್ಟಿದ ನಾಮಿನೇಷನ್ ಬಿಸಿ

ಮಯೂರ್ ಮತ್ತು ಆದಿಗೆ ಸ್ವಲ್ಪ ಮನಸ್ತಾಪ ಬಂತು. ಈ ಬಗ್ಗೆ ಮಯೂರ್ ಅವರನ್ನು ಸ್ವಲ್ಪ ಸಮಾಧಾನ ಮಾಡಲು ನೀತೂ ಮುಂದಾದರು. ಮನೆಯಲ್ಲಿ ತಂಪಿದ್ದರೂ ನಾಮಿನೇಷನ್ ಬಿಸಿ ಈ ವಾರ ತಟ್ಟಿದೆ.

ನಾಮಿನೇಷನ್ ಪ್ರಕ್ರಿಯೆಯಿಂದ ಆದಿ ಹೊರಗೆ

ಮನೆಯ ಕ್ಯಾಪ್ಟನ್ ಆಗಿರುವ ಆದಿ ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ಸುರಕ್ಷಿತವಾಗಿರುತ್ತಾರೆ. ಶಕೀಲಾ ಅವರು ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ. ಆದರೆ ಅವರನ್ನು ನಾಮಿನೇಟ್ ಮಾಡಬಹುದು ಎಂದು ಬಿಗ್ ಬಾಸ್ ತಿಳಿಸಿದರು.

ಈ ವಾರ ನಾಮಿನೇಟ್ ಆದವರು

ಈ ಬಾರಿ ಬಹುತೇಕ ಸದಸ್ಯರು ಲಯೇಂದ್ರ ಅವರ ಹೆಸರನ್ನು ಸೂಚಿಸಿದರು. ಈ ವಾರ ನಾಮಿನೇಟ್ ಆಗಿರುವವರು ಸಂತೋಷ್, ಲಯ ಕೋಕಿಲ, ಶಕೀಲಾ ಹಾಗೂ ನೀತೂ ಈ ಬಾರಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

ನೇರವಾಗಿ ನಾಮಿನೇಟ್ ಆದ ರೋಹಿತ್

ಆದಿ ಅವರಿಗೆ ಕೊಟ್ಟ ವಿಶೇಷ ಅಧಿಕಾರ ನೇರ ನಾಮಿನೇಷನ್. ಅವರು ಸೂಚಿಸಿದ ಹೆಸರು ರೋಹಿತ್. ಇದಕ್ಕೆ ಕೊಟ್ಟ ಕಾರಣ ಮನೆಯ ಸದಸ್ಯರೆಲ್ಲಾ ಒಂದಾಗಿದ್ದರೆ ಅವರು ಪ್ರಯತ್ನ ಪಡುತ್ತಿದ್ದಾರೆ, ಆದರೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಬೇಡದ ವಿಚಾರಗಳಲ್ಲಿ ಅವರು ತೊಡಗಿಕೊಳ್ಳುತ್ತಿದ್ದಾರೆ ಎಂದರು.

ಈ ವಾರ ಐದು ಮಂದಿ ನಾಮಿನೇಟ್

ಈ ವಾರ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಯಾರು ಹೊರಗೆ ಹೋಗುತ್ತಾರೆ ಎಂಬುದು ಬಿಗ್ ಬಾಸ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಆದರೆ ತನ್ನನ್ನು ನೇರವಾಗಿ ನಾಮಿನೇಟ್ ಮಾಡಿದ್ದ ಬಗ್ಗೆ ರೋಹಿತ್ ಅವರು ಆದಿ ಬಳಿ ವಿವರಣೆ ಕೇಳಿದರು.

ರೋಹಿತ್, ಆದಿ ನಡುವೆ ಬಿಸಿಬಿಸಿ ಚರ್ಚೆ

ತಾನು ಬೇರೆ ಕಡೆ ಇನ್ವಾಲ್ ಆಗುತ್ತಿದ್ದೇನೆ ಎಂದು ಹೇಳುತ್ತಿದ್ದೆಯಲ್ಲಾ ಅದು ಹೇಗೆ ಎಂದು ಕೇಳಿದರು. ಈ ವಿಚಾರವಾಗಿ ಇಬ್ಬರ ನಡುವೆ ಸ್ವಲ್ಪ ಬಿಸಿಬಿಸಿ ಚರ್ಚೆ ನಡೆಯಿತು. ಆದರೆ ಆದಿ ಲೋಕೇಶ್ ಅವರು ಸೂಕ್ತ ಕಾರಣ ಕೊಡದೆ ಹೊರಟು ಹೋದರು.

ತುಂಬಾ ಪರ್ಸನಲ್ ಆದ ರೋಹಿತ್

ರೋಹಿತ್ ಅವರು ನೇರವಾಗಿ ನಾಮಿನೇಟ್ ಆಗಿದ್ದಕ್ಕೆ ಪರ್ಸನಲ್ ಆಗಿ ತೆಗೆದುಕೊಂಡಿದ್ದಾರೆ ಎಂದು ಮನೆಯ ಎಲ್ಲ ಸದಸ್ಯರು ಮಾತನಾಡಿಕೊಂಡರು. ತನ್ನನ್ನು ನಾಮಿನೇಟ್ ಮಾಡಲು ಕೊಟ್ಟಿರುವ ಕಾರಣ ಸೂಕ್ತವಾಗಿಲ್ಲ ಎಂಬ ವಿಚಾರವಾಗಿ ರೋಹಿತ್ ತುಂಬಾ ತಲೆ ಬಿಸಿ ಮಾಡಿಕೊಂಡಿದ್ದರು. ಯಾರು ಏನು ಸಮಾಧಾನ ಮಾಡಿದರೂ ಅದನ್ನು ಅವರು ಒಪ್ಪುವಂತಿರಲಿಲ್ಲ.

ಓಪನ್ ಅಪ್ ಆದ ರೋಹಿತ್ ಪಟೇಲ್

ಬಳಿಕ ಆದಿ ಹಾಗೂ ರೋಹಿತ್ ಒಟ್ಟಿಗೆ ಕುಳಿತು ಈ ವಿಚಾರವಾಗಿ ಮಾತನಾಡಿಕೊಂಡರು. ನೀವು ತುಂಬಾ ಸೇಫ್ ಆಗಿರುತ್ತೀರಾ ಅದಕ್ಕಾಗಿ ನಿಮ್ಮನ್ನು ನಾಮಿನೇಟ್ ಮಾಡಿದ್ದೇನೆ ಎಂದರು. ಇಷ್ಟು ದಿನ ಸೈಲೆಂಟ್ ಆಗಿದ್ದ ರೋಹಿತ್ ಅವರು ಇಂದು ತುಂಬಾ ಓಪನ್ ಅಪ್ ಆದರು.

ಆದಿಗೆ ಬೆವರಿಳಿಸಿದ ರೋಹಿತ್

ಆದಿ ಲೋಕೇಶ್ ಅವರನ್ನು ಪರಿಪರಿಯಾಗಿ ಕೇಳಿ ಬೆವರಿಳಿಸಿದರು. ಆದರೆ ಆದಿ ಯಾವುದಕ್ಕೂ ಸೂಕ್ತ ಉತ್ತರ ಕೊಡದೆ ಆದಷ್ಟು ತಪ್ಪಿಸಿಕೊಳ್ಳಲು ನೋಡಿದರು. ಇವರಿಬ್ಬರ ಮಾತಿನ ಚಕಮಕಿಯಲ್ಲಿ ಆದಿ ಲೋಕೇಶ್ ಸೋತಿದ್ದು ಗೊತ್ತಾಯಿತು.

ತಾನು ಸಾಮಾನ್ಯ ಅಲ್ಲ ಎಂದು ಮನದಟ್ಟು

ರೋಹಿತ್ ಮಾತಿಗೆ ಇಳಿದರೆ ಸಾಮಾನ್ಯ ಅಲ್ಲ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಬಳಿಕ ಇಬ್ಬರೂ ಅಪ್ಪಿಕೊಂಡು ಒಂದಾದಂತೆ ತೋರಿಸಿಕೊಂಡರು. ಆದರೆ ಅವರ ಮುಖದಲ್ಲಿ ಆ ಭಾವನೆ ಕಾಣುತ್ತಿರಲಿಲ್ಲ. ಇದು ಕ್ಯಾಮೆರಾಗಾಗಿ ಮಾಡಿದ ಕ್ರಿಯೆಯಂತೆ ಇತ್ತು.

ಆದಿ ಮನಸ್ಸಿನಲ್ಲಿರುವ ಸೇಫ್ ಕ್ಯಾಂಡಿಡೇಟ್ ಯಾರು?

ಒಂದು ವೇಳೆ ಬಿಗ್ ಬಾಸ್ ಯಾರನ್ನಾದರೂ ಸೇವ್ ಮಾಡಿ ಎಂದಿದ್ದರೆ ಒಬ್ಬರನ್ನಂತೂ ಖಂಡಿತ ಕಾಪಾಡುತ್ತಿದ್ದೆ ಎಂದರು. ಇದಕ್ಕೆ ಸಂತೋಷ್ ನನಗೆ ಗೊತ್ತು ಎಂದರು. ಸಾಧ್ಯವಿಲ್ಲ ಎಂದರು ಲೋಕಿ. ನೀನು ಹೇಳಿಬಿಟ್ಟರೆ ನೀನು ಹೇಳಿದ್ದನ್ನು ಮಾಡುತ್ತೇನೆ ಎಂದರು. ಆದರೆ ಯಾರು ಎಂಬುದನ್ನು ಅವರು ಹೇಳಲಿಲ್ಲ.

ಆದಿ ಲೋಕೇಶ್ ಇನ್ನೊಂದು ಕೆನ್ನೆ ಯಾರಿಗೆ?

ಕನ್ಫೆಷನ್ ರೂಮಿನಿಂದ ಹೊರಬಂದ ಸಂತೋಷ್ ಖುಷಿ ಖುಷಿಯಾಗಿ ಬರುತ್ತಾ ಆದಿ ಲೋಕೇಶ್ ಅವರ ಕೆನ್ನೆಗೆ ಕಿಸ್ ಕೊಟ್ಟರು. ಆಗ ಅವರು ಒಂದೇ ಕಡೇನಾ ಕೊಡೋದು ಎಂದಿದ್ದಕ್ಕೆ ಇನ್ನೊಂದು ಕಡೆ ಕೊಡಲು ಇನ್ನೊಬ್ಬರಿದ್ದಾರೆ ಎಂದು ನೀತೂ ಕಡೆ ನೋಡಿದರು.

ಮನೆಯಲ್ಲಿ ಬಿಗಡಾಯಿಸಿದ ಪರಿಸ್ಥಿತಿ

ಆದರೆ ಈ ಮಾತಿನಿಂದ ನೀತೂಗೆ ಸ್ವಲ್ಪ ಬೇಸರವಾದಂತಿತ್ತು. ಅವರು ಊಟ ಮಾಡದೆ ಎದ್ದು ಹೋರಟು ಹೋದರು. ನೋಡಿಕೊಂಡು ಯೋಚನೆ ಮಾಡಿ ಮಾತಾಡಿ ಎಂದು ಸಂತೋಷ್ ಅವರಿಗೆ ನೀತೂ ಹೇಳಿದರು. ನನ್ನ ಬಗ್ಗೆ ಮಾತನಾಡಲು ನಿನಗೆ ಏನೂ ರೈಟ್ಸ್ ಇಲ್ಲ ಎಂದು ದಬಾಯಿಸಿ ಮಾತನಾಡಿದರು. ಈ ಘಟನೆಯಿಂದ ಮನೆಯಲ್ಲಿ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬಿಗಡಾಯಿಸಿತು.

ನೀತೂ, ಸಂತೋಷ್ ನಡುವೆ ಮನಸ್ಥಾಪ

ಅವನು ನನ್ನ ಬಗ್ಗೆ ಅಷ್ಟೊಂದು ತುಚ್ಛವಾಗಿ ಮಾತನಾಡಿದ್ದು ಸರಿ ಇಲ್ಲ ಎಂದರು. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡಿ, ಇದೆಲ್ಲಾ ಸರಿ ಹೋಗುತ್ತಿಲ್ಲ ಎಂದರು. ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ಆದಿ ಬಗ್ಗೆ ನಿನಗೆ ಗೊತ್ತಿಲ್ಲ. ಈ ರೀತಿ ಮಾತನಾಡುವುದು ಸರಿಯಿಲ್ಲ ಎಂದು ಎಚ್ಚರಿಸಿದರು.

ನೀತೂ ಕಣ್ಣೀರು ಆದಿ ಸಮಾಧಾನ

ಇದೇ ವಿಚಾರವಾಗಿ ಆದಿ ಹಾಗೂ ನೀತೂ ಇಬ್ಬರೂ ರಾತ್ರಿ ಚರ್ಚಿಸುತ್ತಿದ್ದರು. ನೀತೂ ಕಣ್ಣೀರು ಹಾಕುತ್ತಿದ್ದರೆ ಆದಿ ಸಮಾಧಾನ ಮಾಡುತ್ತಿದರು. ನನ್ನ ಹಿಂದೆ ಅವನು ಆ ರೀತಿ ಮಾತನಾಡಿದ್ದರೆ ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಅವನು ನನ್ನ ಮುಂದೆ ಹೇಳಿದ್ದಕ್ಕೆ ನನಗೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿಕೊಂಡರು. ರಾತ್ರಿ ಸುಮಾರು ಹೊತ್ತು ಇಬ್ಬರೂ ಮಾತನಾಡುತ್ತಲೇ ಕುಳಿತಿದ್ದರು.

ಹದಿನೈದೇ ದಿನಕ್ಕೆ ಎಲ್ಲವೂ ತಾರುಮಾರು

ಇಷ್ಟು ದಿನ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಈಗ ಮನೆಯಲ್ಲಿ ನೇರಾನೇರ ಹಣಿ ಶುರುವಾಗಿದೆ. ರೋಹಿತ್ ಮತ್ತು ಆದಿ, ನೀತೂ ಮತ್ತು ಸಂತೋಷ್, ರೋಹಿತ್ ಮತ್ತು ಸಂತೋಷ್ ಹೀಗೆ ಒಬ್ಬರನ್ನು ಕಂಡಂತೆ ಒಬ್ಬರಿಗೆ ಆಗಲ್ಲ ಎಂಬಂತಹ ಪರಿಸ್ಥಿತಿ ಇದೆ. ಹದಿನೈದೇ ದಿನಕ್ಕೆ ಎಲ್ಲರೂ ತಾರುಮಾರು ಆಗುತ್ತಿವೆ.

English summary
What is happening in between Aadhi Lokesh and Neethu? Why they bond each other very closely? Here is Bigg Boss Kannada 2, Day 14 and 15 highlights.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada