»   » ಬಿಗ್ ಬಾಸ್ ನಲ್ಲಿ ಅನ್ನ, ನೀರು, ಸೂರಿಗಾಗಿ ಪರದಾಟ

ಬಿಗ್ ಬಾಸ್ ನಲ್ಲಿ ಅನ್ನ, ನೀರು, ಸೂರಿಗಾಗಿ ಪರದಾಟ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯ ಸದಸ್ಯರು ಅನೇಕ ಏರುಪೇರುಗಳನ್ನು ದಾಟಿ ಈಗ ಕೊನೆಯ ಹಂತದ ಹೊಸ್ತಿಲಲ್ಲಿ ನಿಂತಿದ್ದಾರೆ. ಎಲ್ಲರ ಸಾಮರ್ಥ್ಯ ಪರೀಕ್ಷೆಯ ತೀವ್ರತೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದು ಬಿಗ್ ಬಾಸ್ ಎಚ್ಚರಿಸಿದರು.

ಮೊದಲೇ ಮನೆಯಲ್ಲಿ ಸೌಲಭ್ಯಗಳಿಂದ ವಂಚಿತರಾಗಿರುವ ಸದಸ್ಯರು ಇನ್ನಷ್ಟು ಕಂಗಾಲಾದರು. ಈ ಶಾಕ್ ನಿಂದ ಅವರು ಸುಧಾರಿಸಿಕೊಳ್ಳುತ್ತಿರಬೇಕಾದರೆ ಬಿಗ್ ಬಾಸ್ ಇನ್ನೊಂದು ಶಾಕಿಂಗ್ ನ್ಯೂಸ್ ಕೊಟ್ಟರು. ಒಂದು ನಿಮಿಷದ ಕಾಲಾವಕಾಶದಲ್ಲಿ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬೆಡ್ ರೂಮಿನಿಂದ ಹೊರಗೆ ಹೋಗಬೇಕು ಎಂದು ಆದೇಶಿಸಿದರು.

ಒಂದು ನಿಮಿಷದ ನಂತರ ಬಜರ್ ಜೊತೆಗೆ ಬೆಡ್ ರೂಮಿನ ಬಾಗಿಲನ್ನು ಮುಚ್ಚಲಾಗುತ್ತದೆ. ಬಳಿಕ ಬೆಡ್ ರೂಮಿನಿಂದ ಒಳಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. ಒಂದು ವೇಳೆ ಒಂದು ನಿಮಿಷ ಮೀರಿದ ಬಳಿಕ ಯಾವುದಾದರೂ ಸದಸ್ಯರು ಅಲ್ಲೇ ಇದ್ದರೆ ಅವರು ಎಲ್ಲಾ ವಸ್ತುಗಳನ್ನು ಬೆಡ್ ರೂಮಿನಲ್ಲೇ ಬಿಟ್ಟು ಹೋಗಬೇಕು ಎಂದರು. ಎಂಬತ್ತೆಂಟನೇ ದಿನದ ರೋಚಕ ಬೆಳವಣಿಗೆಗಳನ್ನು ನೋಡೋಣ ಬನ್ನಿ.

ಬೆಡ್ ರೂಮಿನಿಂದ ಹೊರಹಾಕಿದ ಬಿಗ್ ಬಾಸ್

ಒಂದೇ ನಿಮಿಷದಲ್ಲಿ ಮನೆಯ ಸದಸ್ಯರು ಎದ್ದೆನೋ ಬಿದ್ದೆನೋ ಎಂದು ಬೆಡ್ ರೂಮಿನಿಂದ ಬಟ್ಟೆ, ತಲೆದಿಂಬುಗಳನುನ್ನು ಎತ್ತಿಕೊಂಡು ಓಡಿದರು. ಆದರೂ ಕೆಲವು ವಸ್ತುಗಳನ್ನು ತರಲು ಸಾಧ್ಯವಾಗಲಿಲ್ಲವಲ್ಲಾ ಎಂದು ಪರಿತಪಿಸಿದರು. ಅಯ್ಯೋ ನನ್ನ ಮೆಡಿಸಿನ್ಸ್ ಅಲ್ಲೇ ಉಳಿದುಬಿಟ್ಟವಲ್ಲಾ ಎಂದು ದೀಪಿಕಾ ಹಲುಬಿದರು.

ಒಂದೇ ಒಂದು ಕಪ್ ಕಾಫಿ ಕುಡಿದು ರಿಲ್ಯಾಕ್ಸ್ ಆದರು

ಈ ಟಾಸ್ಕ್ ನಿಂದ ಕಂಗಾಲಾದ ಮನೆಯ ಸದಸ್ಯರಿಗೆ ಒಂದು ಫ್ಲಾಸ್ಕ್ ತುಂಬ ಕಾಫಿ ಕಳುಹಿಸಿ ಸ್ವಲ್ಪ ರಿಲ್ಯಾಕ್ಸ್ ಮಾಡಿದರು ಬಿಗ್ ಬಾಸ್. ಅನುಪಮಾ ಭಟ್ ನಾನು ಇಲ್ಲಿ ತನಕ ಟೀ, ಕಾಫಿ ಟೇಸ್ಟ್ ನೋಡಿಲ್ಲ ಎಂದು ಹೇಳಿದರು.

ಸಂತೋಷ್ ಗೆ ಚಪ್ಪಲಿಯಲ್ಲಿ ಹೊಡೀತೀನಿ ಎಂದ ಅಕುಲ್

ಇನ್ನೊಂದು ಕಡೆ ಶ್ವೇತಾ ಚೆಂಗಪ್ಪ ಜೊತೆಗೆ ಅಕುಲ್ ಮಾತನಾಡುತ್ತಾ, ಸಂತೋಷ್ ತನ್ನ ಬಗ್ಗೆ ದೀಪಿಕಾ ಬಳಿ ಏನೇನೋ ಹೇಳುತ್ತಿದ್ದ. ಅವನು ಬರಲಿ ಚಪ್ಪಲಿ ತಗೊಂಡು ಹೊಡೀತಿನಿ ಎಂದು ಹೇಳಿದ. ಅವನು ನನ್ನ ಬಗ್ಗೆ ದೀಪಿಕಾ ಬಳಿ ಏನೇನೋ ಹೇಳಿದ್ದಾನೆ ಎಂಬುದು ಅವರ ಅಸಹನೆಗೆ ಕಾರಣವಾಗಿತ್ತು.

ತಮ್ಮ ಪಾಡಿಗೆ ತಾವು ಗುನುಗಿಕೊಂಡ ದೀಪಿಕಾ ಕಾಮಯ್ಯ

ಮನೆಯ ಲಿವಿಂಗ್ ಏರಿಯಾದಲ್ಲಿ ದೀಪಿಕಾ ಒಬ್ಬರೇ ಕೂತು ತನ್ನ ಪಾಡಿಗೆ ತಾನು ಹೇಳಿಕೊಳ್ಳುತ್ತಿದ್ದರು, "ಐಸ್ ಕ್ಯೂಬ್ ಕರಗಿಸುವ ಟಾಸ್ಕ್ ಮಾಡಿದೆ, ನನಗೆ ಕೋಲ್ಡ್ ಆಗಲ್ಲ ಆದರೂ ಸಗಣಿ ನೀರು ಎಲ್ಲವೂ ನನ್ನ ಮೇಲೆ ಹಾಕಿಸಿಕೊಂಡೆ. ನಾನು ಮಾಡಿದ ಟಾಸ್ಕ್ ಗಳಲ್ಲಿ ಧಂ ಇಲ್ಲ ಎಂದು ಅಕುಲ್ ಹೇಳಿದ್ದು ಸರಿಯಿಲ್ಲ" ಎಂದು ಒಬ್ಬರೇ ಗುನುಗಿಕೊಂಡರು.

ಮತ್ತೆ ಒಂದಾದ ದೀಪಿಕಾ ಮತ್ತು ಅಕುಲ್

ಬಳಿಕ ಅಕುಲ್ ಹಾಗೂ ದೀಪಿಕಾ ಇಬ್ಬರೂ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡರು. ಒಬ್ಬರಿಗೊಬ್ಬರು ಬಹಳ ಹೊತ್ತು ಮಾತನಾಡಿಕೊಂಡು ಇಬ್ಬರೂ ಒಂದಾದರು.

ಲಗ್ಜುರಿ ಬಜೆಟ್ ಕಾಲಾವಕಾಶ ಹತ್ತು ಸೆಕೆಂಡ್

ಲಗ್ಜುರಿ ಬಜೆಟ್ ಟಾಸ್ಕ್ ಬಗ್ಗೆ ಬಿಗ್ ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದರು. ಕೇವಲ ಹತ್ತು ಸೆಕೆಂಡ್ ಗಳ ಕಾಲಾವಕಾಶದಲ್ಲಿ ಲಗ್ಜುರಿ ಬಜೆಟ್ ಟಾಸ್ಕ್ ನ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಯಿತು. ಸಾವಿರ ಪಾಯಿಂಟ್ ಗಳಿಗೆ ದಿನಸಿ ಆಯ್ಕೆ ಮಾಡಿದರು ಸೃಜನ್.

ನನ್ನ ಕಥೆ Wechat ಜೊತೆ

"Express more with stickers" ಎಂಬ ಟಾಸ್ಕನ್ನು ಸೃಜನ್, ಅಕುಲ್, ಶ್ವೇತಾ, ಅನುಪಮಾ, ದೀಪಿಕಾ ಮಾಡಿದರು. ನನ್ನ ಕಥೆ Wechat ಜೊತೆ ಎಂದು ಅವರು ತಾವು ಬಿಗ್ ಬಾಸ್ ಗೆ ಬಂದ ಕಥೆಯನ್ನು ತಮ್ಮದೇ ಶೈಲಿಯಲ್ಲಿ ಹೇಳಿದರು.

ಅನ್ನ, ನೀರು, ಸೂರಿಗಾಗಿ ಪರದಾಟ

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯ ಪಯಣ ಕೊನೆಯ ಹಂತಕ್ಕೆ ಬರುತ್ತಿದ್ದರೆ, ಅನ್ನ, ನೀರು ಮತ್ತು ಸೂರಿಗಾಗಿ ಪರದಾಡುವಂತಾಗಿದೆ. ಉಳಿದ ದಾರಿ ಇನ್ನಷ್ಟು ದುರ್ಗಮವಾಗಲಿದೆ ಎಂಬುದು ಮನೆಯ ಸದಸ್ಯರಿಗೆ ಈಗ ಗೊತ್ತಾಗುತ್ತಿದೆ.

English summary
Bigg Boss Kannada 2 day 88 highlights. As soon as they woke up, the house members were given one minute to vacate the bedroom. The members were allowed to take the luggage from the bedroom. Once they vacated, the bedroom was closed for the rest of the day.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada