»   » ಮೊದಲ ದಿನವೇ ಮನೆಯಲ್ಲಿ ನೀತೂ ಕಣ್ಣೀರ ಕೋಡಿ

ಮೊದಲ ದಿನವೇ ಮನೆಯಲ್ಲಿ ನೀತೂ ಕಣ್ಣೀರ ಕೋಡಿ

Posted By:
Subscribe to Filmibeat Kannada

ಸುವರ್ಣ ವಾಹಿನಿಯ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 2' ಮೊದಲ ದಿನ ಹಲವು ರೋಚಕ ಪ್ರಸಂಗಗಳಿಗೆ ಕಾರಣವಾಯಿತು. ಮೊದಲನೇ ದಿನ "ಮಂದಿನೂ ಬ್ಯಾರೆ, ಮನೇನೂ ಬ್ಯಾರೆ, ನೋಡೋವ್ರು ಮಾತ್ರ ನೀವೆ..." ಎಂಬ ಹಾಡಿನೊಂದಿಗೆ ದಿನದ ಆಟ ಆರಂಭವಾಯಿತು.

ಈಜುಕೊಳದ ಮುಂದೆ ಮೌನವಾಗಿ ಕುಳಿತಿದ್ದ ಶಕೀಲಾ ಏನೋ ಆಲೋಚಿಸುತ್ತಿದ್ದರು. ಬಹುಶಃ ಅವರ ಹಳೆಯ ಈಜುಡುಗೆ ದಿನಗಳು ನೆನಪಾಗಿರಬೇಕು ಅನ್ನಿಸುತ್ತದೆ. ತದೇಕಚಿತ್ತದಿಂದ ಈಜುಕೊಳವನ್ನೇ ದಿಟ್ಟಿಸುತ್ತಿದ್ದರು ಶಕೀಲಾ ಆಂಟಿ. ['ಬಿಗ್ ಬಾಸ್' ಮನೆಯ ಖತರ್ನಾಕ್ ಕಿಲಾಡಿಗಳು]

ರೋಹಿತ್ ತನ್ನ ಆತಂಕಗಳ ಬಗ್ಗೆ ಶಕೀಲಾ ಜೊತೆ ಚರ್ಚಿಸುತ್ತಿದ್ದ, ಆದರೆ ಶಕೀಲಾ ಮಾತ್ರ ರೋಹಿತ್ ಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ಸದ್ಯಕ್ಕೆ ನಾವು ನಾಮಿನೇಟ್ ಆಗುತ್ತಿದ್ದೇವೆ ಅಷ್ಟೇ ಎಲಿಮಿನೇಟ್ ಆಗುತ್ತಿಲ್ಲ ಎಂದು ಶಕೀಲಾ ಆಶಾಭಾವ ವ್ಯಕ್ತಪಡಿಸಿದರು.

ಶಕೀಲಾ ಇಂಗ್ಲಿಷ್ ನಲ್ಲೇ ಮಾತುಕತೆ

ಶಕೀಲಾ ಒಂದೇ ಒಂದು ಪದವನ್ನೂ ಕನ್ನಡದಲ್ಲಿ ಮಾತನಾಡದೇ ಇದ್ದದ್ದು ದುರಂತ. ಅವರ ಸಂಭಾಷಣೆ ಆಂಗ್ಲ ಭಾಷೆಯಲ್ಲೇ ನಡೆಯುತ್ತಿತ್ತು. ಅವರೊಂದಿಗೆ ಸಂಭಾಷಿಸುವವರೂ ಇಂಗ್ಲಿಷ್ ಗೆ ಮೊರೆ ಹೋಗುತ್ತಿದ್ದರು. ಅವರಿಗೆ ಕನ್ನಡ ಬರಲ್ಲ ಎಂಬುದು ಮೊದಲ ದಿನವೇ ವೀಕ್ಷಕರಿಗೂ ಗೊತ್ತಾಗಿದೆ. ಅವರ ಇಂಗ್ಲಿಷ್ ಭಾಷೆಯನ್ನು ಬಿಗ್ ಬಾಸ್ ಕನ್ನಡಕ್ಕೆ ತರ್ಜುಮೆ ಮಾಡಿ ಹೇಳಬೇಕಾದ ಪರಿಸ್ಥಿತಿ ಬಂದಿದೆ.

ಮೊದಲ ದಿನ ನೀತಿ ನಿಯಮಗಳ ಬಗ್ಗೆ

ಮೊದಲ ದಿನವೇ ನಿಯಮಗಳ ಬಗ್ಗೆ ಬಿಗ್ ಬಾಸ್ ವಿವರ ನೀಡಿದರು. ಅವನ್ನು ಪಾಲಿಸಲೇಬೇಕು ಎಂಬ ಎಚ್ಚರಿಕೆಯನ್ನೂ ಕೊಟ್ಟರು. ಕನ್ನಡದಲ್ಲಿಯೇ ಮಾತನಾಡಲೇಬೇಕು ಎಂಬ ಎಚ್ಚರಿಕೆ ಮಾತುಗಳನ್ನು ಹೇಳಿದರು. ಇದಾದ ಬಳಿಕವೂ ಶಕೀಲಾ ಇಂಗ್ಲಿಷ್ ಬಿಟ್ಟು ಬೇರೆ ಮಾತನಾಡಲಿಲ್ಲ.

ಮನೆಯಲ್ಲಿ ಬಲಪ್ರಯೋಗ ಮಾಡುವಂತಿಲ್ಲ

ದೈಹಿಕ ಹಿಂಸೆಗೆ ಬಿಗ್ ಬಾಸ್ ಮನೆಯಲ್ಲಿ ಯಾವುದೇ ಕಾರಣಕ್ಕೆ ಅವಕಾಶವಿಲ್ಲ. ಯಾವುದೇ ರೀತಿಯಲ್ಲಿ ಒಬ್ಬರ ಮೇಲೆ ಒಬ್ಬರು ಬಲಪ್ರಯೋಗ ಮಾಡುವಂತಿಲ್ಲ ಎಂದೂ ಬಿಗ್ ಬಾಸ್ ಹೇಳಿದರು.

ಮೊದಲ ದಿನವೇ ರೋಚಕ ಟಾಸ್ಕ್

ಮೊದಲ ದಿನವೇ ರೋಚಕ ಟಾಸ್ಕ್. ಒಬ್ಬರಿಗೊಬ್ಬರು ಕೈಕೋಳ ತೊಡಸಿಕೊಳ್ಳಲು ಬಿಗ್ ಬಾಸ್ ಆಜ್ಞೆ. ಸೃಜನ್ ಲೋಕೇಶ್ ಎಲ್ಲರಿಗೂ ಕೈಕೋಳ ತೊಡಿಸಿದರು. ಬಾತ್ ರೂಂಗೆ ಹೋಗಬೇಕಾದರೆ ಮಾತ್ರ ಕೋಳ ತೆಗೆಯಬೇಕು ಎಂಬ ವಿನಾಯಿತಿಯನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ಕೊಟ್ಟರು. ಬಿಗ್ ಬಾಸ್ ಕೊಟ್ಟ ವಿನಾಯಿತಿಗೆ ಎಲ್ಲರೂ ನಿಟ್ಟುಸಿರುಬಿಟ್ಟರು.

ಒಬ್ಬರಿಗೊಬ್ಬರು ಕೈಕೋಳ ತೊಟ್ಟದ್ದು

ಒಬ್ಬರಿಗೊಬ್ಬರು ಗೆಳೆಯರಾಗಬೇಕು ಎಂಬ ಬಿಗ್ ಬಾಸ್ ಸೂಚನೆಗೆ ತಕ್ಕಂತೆ ಹರ್ಷಿಕಾ-ಅಕುಲ್, ನೀತೂ-ಶಕೀಲಾ, ಲಯ ಕೋಕಿಲ-ಅನಿತಾ ಭಟ್, ಆದಿಲೋಕೇಶ್-ಮಯೂರ್, ದೀಪಿಕಾ-ರೋಹಿತ್, ಶ್ವೇತಾ ಚೆಂಗಪ್ಪ-ಸಂತೋಷ್, ಸೃಜನ್-ಅನುಪಮಾ ಭಟ್ ಕೋಳ ತೊಟ್ಟುಕೊಂಡರು.

ಮೊದಲ ದಿನವೇ ಸಂತೋಷ್ ಅಪಶ್ರುತಿ

ಮನೆಯಲ್ಲಿ ಒಬ್ಬರಿಗೊಬ್ಬರು ಕೈಕೋಳ ತೊಟ್ಟಿಕೊಂಡೇ ಬೆಳಗಿನ ತಿಂಡಿ ಮುಗಿಸಿದರು. ಸಂತೋಷ್ ಮಾತ್ರ ಸಿಕ್ಕ ಸ್ವಲ್ಪ ಸಮಯದಲ್ಲೇ ಶ್ವೇತಾ ಚೆಂಗಪ್ಪ ಜೊತೆಗೆ ಮನೆಯಲ್ಲಿ ಕೆಲವರು ಸರಿಯಿಲ್ಲ ಎಂದು ಕೊಸರಾಡಿದರು.

ಸ್ನಾನ ಮಾಡದೇನೆ ತಿಂಡಿ ಮುಗಿಸಿದರು

ಎಲ್ಲರೂ ಬೆಳಗಿನ ಸ್ನಾನ ಮಾಡದೇನೇ ತಿಂಡಿ ಮುಗಿಸಿದರು. ಮೊದಲ ದಿನ ಎಲ್ಲರೂ ತಮ್ಮತಮ್ಮ ಕೆಲಸಗಳನ್ನು ಹಂಚಿಕೊಂಡರು. ಯಾರು ಏನು ಕೆಲಸ ಮಾಡಬೇಕು, ಯಾರು ಟೀ ಮಾಡಬೇಕು, ತರಕಾರಿ ಯಾರು ಹೆಚ್ಚಬೇಕು, ಮನೆ ಸ್ವಚ್ಛತೆ ಯಾರು ಎಂಬ ಕೆಲಸಗಳನ್ನು ಹಂಚಿಕೊಂಡರು.

ಎಲ್ಲರೂ ಶಕೀಲಾರನ್ನೇ ನಾಮಿನೇಟ್ ಮಾಡಿದರು

ಈ ಸಂದರ್ಭದಲ್ಲಿ ನಾಮಿನೇಷನ್ ಪ್ರಕ್ರಿಯೆಗೆ ಬಿಗ್ ಬಾಸ್ ಚಾಲನೆ ಕೊಟ್ಟರು. ರೋಹಿತ್ ನನಗೆ ಸ್ವಲ್ಪ ಅನ್ ಕಂಫರ್ಟಬಲ್ ಆದ ಕಾರಣ ಅವರನ್ನು ನಾಮಿನೇಟ್ ಗೆ ಸೂಚಿಸುತ್ತಿದ್ದೇನೆ ಎಂದರು ಅನುಪಮಾ. ಎರಡನೇ ಹೆಸರನ್ನು ಭಾಷೆಯ ತೊಂದರೆ ಇರುವ ಶಕೀಲಾರನ್ನು ನಾಮಿನೇಟ್ ಮಾಡಬೇಕೆಂದು ಹೇಳಿದರು.

ಸಂತೋಷ್ ಡಬಲ್ ಮೀನಿಂಗ್ ಬಗ್ಗೆ ಬೇಸರ

ಅಕುಲ್-ಹರ್ಷಿಕಾ ಅವರು ಸೂಚಿಸಿದ ಸದಸ್ಯರು. ಶಕೀಲಾ ಅವರಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ ಹಾಗಾಗಿ ಅವರು ಹಾಗೂ ಅನಿತಾ ಭಟ್ ಬಗ್ಗೆ ನಮಗೆ ಹೆಚ್ಚಿಗೆ ಗೊತ್ತಿಲ್ಲದಿದ್ದರೂ ಅವರನ್ನು ನಾಮಿನೇಟ್ ಮಾಡುತ್ತಿದ್ದೇವೆ ಎಂದರು. ಸಂತೋಷ್ ಡಬಲ್ ಮೀನಿಂಗ್ ಮಾತನಾಡುತ್ತಾನೆ ಅದಕ್ಕಾಗಿ ಅವರನ್ನು ನಾಮಿನೇಟ್ ಮಾಡುತ್ತಿರುವುದಾಗಿ ಲಯ ಕೋಕಿಲ ಹೇಳಿದರು.

ಮಯೂರ್ ನನ್ನೊಂದಿಗೆ ಬೆರೆಯುತ್ತಿಲ್ಲ

ಆದರೆ ಇಂಟರೆಸ್ಟಿಂಗ್ ವಿಚಾರ ಅಂದ್ರೆ ಶಕೀಲಾ ಅವರು ಮಯೂರ್ ಅವರನ್ನು ನಾಮಿನೇಟ್ ಮಾಡಿದರು. ಇದಕ್ಕೆ ಅವರು ಕೊಟ್ಟ ಕಾರಣ ನನ್ನ ಜೊತೆಗೆ ಹೆಚ್ಚಾಗಿ ಬೆರೆಯುತ್ತಿಲ್ಲ ಎಂಬುದು. ಇನ್ನೂ ವಿಶೇಷ ಎಂದರೆ ಮಯೂರ್ ಪಟೇಲ್ ಅವರು ನಾಮಿನೇಟ್ ಮಾಡಿದ್ದು ಶಕೀಲಾ ಅವರನ್ನು.

ಮನೆಯಲ್ಲಿ ಸೃಜನ್ ಡಾಮಿನೇಟ್ ಆಗುತ್ತಿದ್ದಾರೆ

ಸೃಜನ್ ಡಾಮಿನೇಟ್ ಆಗುತ್ತಿದ್ದಾರೆ ಎಂದು ಶಕೀಲಾ ತನ್ನ ಕೈಕೋಳದ ಪಾರ್ಟನರ್ ನೀತೂ ಜೊತೆ ಚರ್ಚಿಸಿದರು. ಈ ವಾರ ನಾಲ್ಕು ಮಂದಿ ನಾಮಿನೇಟ್ ಗಿದ್ದಾರೆ. ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವ ಸದಸ್ಯರು ಶಕೀಲಾ, ಸಂತೋಷ್, ರೋಹಿತ್ ಮತ್ತು ಅನಿತಾ ಭಟ್.

ತಲೆಕೆಡಿಸಿಕೊಳ್ಳದ ಶಕೀಲಾ ಆಂಟಿ

ನಾನು ನಾಮಿನೇಟ್ ಆಗುತ್ತೇನೆ ಎಂದು ಮೊದಲೇ ಗೊತ್ತಿತ್ತು ಎಂದು ಶಕೀಲಾ ಹೇಳಿದರು. ಯಾಕೆಂದರೆ ತಾನು ಯಾರೊಂದಿಗೂ ಬೆರೆಯುತ್ತಿಲ್ಲ, ಭಾಷಾ ಸಮಸ್ಯೆಯಿರುವ ಕಾರಣ ಖಂಡಿತ ತಮ್ಮನ್ನು ನಾಮಿನೇಟ್ ಮಾಡುತ್ತಾರೆ ಎಂದು ಊಹಿಸಿರುವುದಾಗಿ ಹೇಳಿದರು. ನಾಮಿನೇಟ್ ಆದ ಬಳಿಕವೂ ಅವರು ಸ್ಥಿತಪ್ರಜ್ಞರಾಗಿಯೇ ಕಂಡರು.

ನೀತೂ, ಸಂತೋಷ್ ನಡುವೆ ಸಣ್ಣ ಜಗಳ

ಈ ನಡುವೆ ನೀತೂ ಶೆಟ್ಟಿ ಹಾಗೂ ಸಂತೋಷ್ ನಡುವೆ ಒಂದು ಸಣ್ಣ ಜಗಳವೂ ಆಯಿತು. ಅವರ ದಪ್ಪಗೆ ಇರುವ ಬಗ್ಗೆ ಕಾಮೆಂಟ್ ಮಾಡಿದ ಎಂಬ ಬಗ್ಗೆ ಬೇಸರವಾಗಿದ್ದರು ನೀತೂ. ನಾನು ಯಾರ ಮನೆಯ ಊಟನೂ ತಿಂತಿಲ್ಲ ಎಂದು ಹೇಳಬೇಕು ಎಂದಿದ್ದೇನೆ ಎಂದರು. ಇಟ್ ಈಸ್ ಔಟ್ ಆಫ್ ಬ್ಲೂ, ಅವನು ಈ ರೀತಿ ಹೇಳ್ತಾನೆ ಎಂದು ಊಹಿಸಿರಲಿಲ್ಲ ಎಂದು ಕಣ್ಣೀರಿಟ್ಟರು.

ಮನೆಯಲ್ಲಿ ನೀತೂ ಸೈಜ್ ಬಗ್ಗೆಯೇ ಚರ್ಚೆ

ನಾನು ಯಾವುದೇ ಮದುವೆ, ಸಭೆ ಸಮಾರಂಭಕ್ಕೆ ಹೋದರೂ ಊಟ ಮಾಡುವುದಿಲ್ಲ. ಯಾಕೆಂದರೆ ಎಷ್ಟೋ ಸಲ ಒಂಚೂರು ದಪ್ಪ ಆಗಿದ್ದೀರಾ ಎಂದು ಕೇಳಿಬಿಡ್ತಾರೆ. ಅಂತಹ ಸಂದರ್ಭದಲ್ಲಿ ನಾನು ಊಟ ಮಾಡಬೇಕೋ ಬೇಡವೋ ಎಂಬ ಸಿಟ್ಟೂ ಬಂದುಬಿಡುತ್ತದೆ. ತಾನು ತಿಂದು ದಪ್ಪ ಆಗಿಲ್ಲ ತಮಗೆ ಹಾರ್ಮೋನ್ ಸಮಸ್ಯೆ ಇದೆ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

ಮೊದಲ ದಿನವೇ ಮನೆಯಲ್ಲಿ ಕಣ್ಣೀರಿಟ್ಟ ನೀತೂ

ಪದೇ ಪದೇ ನೀತೂ ಕಣ್ಣೀರು ಹಾಕುತ್ತಿದ್ದ ದೃಶ್ಯವನ್ನು ವೀಕ್ಷಕರು ನೋಡಬೇಕಾಯಿತು. ತಮ್ಮ ದೇಹದ ತೂಕವೇ ಅವರಿಗೆ ದೊಡ್ಡ ಸಮಸ್ಯೆಯಾಗಿದೆ. ಅದಕ್ಕೆ ಉತ್ತರ ಹುಡುಕಲು, ಉತ್ತರ ಕೊಡಲು ಅವರು ಇಲ್ಲಿಗೆ ಬಂದಿದ್ದಾಗಿ ಹೇಳಿದ್ದರು. ಇಲ್ಲೂ ಅವರಿಗೆ 'ತೂಕ'ದ ಪ್ರಶ್ನೆಗಳೇ ಎದುರಾದವು. ಇನ್ನು ಸುವರ್ಣ ವಾಹಿನಿ ವೀಕ್ಷಕರು ಈ ವಾರ ಯಾರನ್ನು ಕೈಹಿಡಿಯುತ್ತಾರೋ, ಇನ್ಯಾರನ್ನು ಕೈಬಿಡುತ್ತಾರೋ ನೋಡಬೇಕು.

English summary
The first day on Kannada Bigg Boss house generated a lot of curiosity among audience. Bigg Boss Kannada 2 day one highlights. Participant Neethu shed tears because comment passed by Santhosh on her weight.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada