ದಿಗಂತ್ ಅವರಿಗೆ ಸಿನಿಮಾ ರಂಗ ಸೇರಿದಾಗಿನಿಂದ ಒಂದು ಆಸೆ ಇದೆಯಂತೆ , ಏನದು ? | Filmibeat Kannada
'ಚೌಕ' ಹಾಗೂ 'ಹ್ಯಾಪಿ ನ್ಯೂ ಇಯರ್' ಸಿನಿಮಾಗಳ ಬಳಿಕ ನಟ ದಿಗಂತ್ ಗಾಂಧಿನಗರದಲ್ಲಿ ಕಾಣಿಸಿಕೊಂಡಿದ್ದೇ ಕಮ್ಮಿ. ಆದರೂ, ದಿಗಂತ್ ಗಾಗಿ ರಕ್ಷಿತ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಥೆಯೊಂದು ಶುರುವಾಗಿದೆ' ಚಿತ್ರಕ್ಕೆ ದಿಗಂತ್ ಹೀರೋ.
ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ದಿಗಂತ್ ಗೆ ಒಂದು ಆಸೆ ಇದೆ. ಅದು ಏನಪ್ಪಾ ಅಂದ್ರೆ, ನಟ ದಿಗಂತ್ ಲೂಸ್ ಮಾದ ಯೋಗಿ ಜೊತೆಗೆ ತೆರೆಹಂಚಿಕೊಳ್ಳಬೇಕಂತೆ.! ಲೂಸ್ ಮಾದ ಯೋಗಿ ಜೊತೆಗೆ ದಿಗಂತ್ ಆಕ್ಟ್ ಮಾಡಬೇಕಂತೆ.!
ಹೌದು, ದೂದ್ ಪೇಡ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಕುಚ್ಚಿಕ್ಕು ಗೆಳೆಯರು. ಏಳೆಂಟು ವರ್ಷಗಳಿಂದ ಇವರಿಬ್ಬರಿಗೂ ಒಂದೇ ಸಿನಿಮಾದಲ್ಲಿ ನಟಿಸಬೇಕೆಂಬ ಹಂಬಲ ಇದೆ. ಇದನ್ನ ಇಬ್ಬರೂ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಬಾಯ್ಬಿಟ್ಟರು.
ನಟ ರಕ್ಷಿತ್ ಶೆಟ್ಟಿ ಮತ್ತು ದಿಗಂತ್ ಕಥೆ ಇಂದಿನಿಂದ ಶುರುವಾಗಿದೆ.!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ಗೆಳೆಯರಾದ ದಿಗಂತ್ ಹಾಗೂ ಯೋಗಿ ಭಾಗವಹಿಸಿದ್ದರು. ''ಪ್ಯಾಲೇಸ್ ಗ್ರೌಂಡ್ಸ್ ನಲ್ಲಿ ಸ್ಟೇಜ್ ಶೋ ನಲ್ಲಿ ನಾನು-ಯೋಗಿ ಮೊದಲ ಬಾರಿ ಭೇಟಿ ಆಗಿದ್ದು. ನಾನು 'ದುನಿಯಾ' ಚಿತ್ರ ನೋಡಿದ್ದೆ. ಹೀಗಾಗಿ, ನನಗೆ ಯೋಗಿ ಅಂದ್ರೆ ರಗಡ್ ಕ್ಯಾರೆಕ್ಟರ್.... ಅದೇ ತರಹ ಇರ್ತಾನೆ ಅಂದುಕೊಂಡಿದ್ದೆ. ಆದ್ರೆ, ಅಲ್ಲಿ ನೋಡಿದಾಗ ತುಂಬಾ ಸ್ಟೈಲಿಶ್ ಆಗಿ ಹಿಪ್ ಹಾಪ್ ತರಹ ಬಟ್ಟೆ ಹಾಕಿಕೊಂಡಿದ್ದ. ನಾನು ಪರ್ವಾಗಿಲ್ಲವೇ ಅಂದುಕೊಂಡೆ. ಅವತ್ತು ಪರಿಚಯ ಆಗಿದ್ದು. ಅಲ್ಲಿಂದ ನಮ್ಮ ಸ್ನೇಹ ಶುರು ಆಯ್ತು. ನಾವಿಬ್ಬರು ಒಂದು ಸಿನಿಮಾ ಮಾಡಬೇಕು ಅಂತ ಆಸೆ ಇದೆ. ಆದಷ್ಟು ಬೇಗ ಆ ಸಿನಿಮಾ ಬರಲಿ ಅಂತ ಹಾರೈಸುತ್ತೇವೆ'' ಎಂದರು ನಟ ದಿಗಂತ್.
ದಿಗಂತ್ ಹಾಗೂ ಯೋಗಿ ಮೇಲೆ ಬಂಡವಾಳ ಹಾಕಲು ಯಾರಾದರೂ ನಿರ್ಮಾಪಕರು ಮನಸ್ಸು ಮಾಡಿದ್ದರೆ, ಸ್ವಲ್ಪ ಈ ಮಾತನ್ನ ಕೇಳಿಸಿಕೊಳ್ಳಿ... ನಿರ್ಮಾಪಕರು ಮನಸ್ಸು ಮಾಡಿದ್ರೆ, ದಿಗಂತ್-ಯೋಗಿ ಆಸೆ ನೆರವೇರಿದ ಹಾಗೆ ಲೆಕ್ಕ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.