ಅನಂತ ಮಾತು : ಡಾ. ಯುಆರ್ ಎ ಸಂದರ್ಶನ
ಜ್ಞಾನಪೀಠ ಪ್ರಶಸ್ತಿ ವಿಜೇತ, ಪ್ರಗತಿಪರ ಚಿಂತಕ ಡಾ ಯು ಆರ್ ಅನಂತಮೂರ್ತಿ ಅವರ ಟಿವಿ ಸಂದರ್ಶನ ಇಂದು (ಬುಧವಾರ) ಸಂಜೆ ಪ್ರಸಾರವಾಗಲಿದೆ.
ಪಬ್ಲಿಕ್ ಟಿವಿ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ 8 ಗಂಟೆಯ ತನಕ ಪ್ರಸಾರವಾಗಲಿರುವ ಸಂದರ್ಶನವನ್ನು ಚಾನಲ್ ಸಂಪಾದಕ ಎಚ್ ಆರ್ ರಂಗನಾಥ್ ಮತ್ತು ಲೇಖಕ ಗಿರೀಶ್ ರಾವ್ (ಜೋಗಿ) ಜತೆಗೂಡಿ ನಡೆಸಿಕೊಡುತ್ತಾರೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಭಾರದ ಮುಂದಿನ ಪ್ರಧಾನಿಯೆಂದೇ ಬಿಂಬಿಸಲಾಗುತ್ತಿರುವ ನರೇಂದ್ರ ಮೋದಿಯ ಅವರ ಬಗ್ಗೆ ಅನಂತಮೂರ್ತಿ ಅವರ ಆಡಿದ ಮಾತುಗಳ ಹಿನ್ನೆಲೆಯಲ್ಲಿ ಈ ಸಂದರ್ಶನ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮೋದಿ ಪ್ರಧಾನಿಯಾದರೆ ತಾವು ಈ ದೇಶ ತೊರೆಯುವುದಾಗಿ ಅನಂತ ಮೂರ್ತಿಗಳು ಬೆಂಗಳೂರಿನಲ್ಲಿ ಕಳೆದ ಭಾನುವಾರ ಹೇಳಿಕೆ ಕೊಟ್ಟಿದ್ದರು. ಆನಂತರ ಅದಕ್ಕೆ ಪುಷ್ಠಿ ನೀಡುವಂತೆಯೋ ಏನೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಮಾತನಾಡುತ್ತಾ. ಮೋದಿ ಒಬ್ಬ ನರಹಂತಕ ಎಂದು ಬಣ್ಣಿಸಿದ್ದರು.
ಅನಂತಮೂರ್ತಿ ಅವರ ಹೇಳಿಕೆಯನ್ನು ಬಿಜೆಪಿ ಧುರೀಣ ಆಯನೂರು ಮಂಜುನಾಥ್ ಖಂಡಿಸಿದ್ದಾರೆ. ಬುಧವಾರ ಶಿವಮೊಗ್ಗದಲ್ಲಿ ಅವರು ಮಾತನಾಡುತ್ತಾ ಅನಂತಮೂರ್ತಿ ಒಬ್ಬ ಅವಕಾಶವಾದಿ ಮನುಷ್ಯ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಈ ದಿನಮಾನಗಳಲ್ಲಿ ಸೈದ್ಧಾತಿಂಕ ಮತ್ತು ಸೈದ್ಧಾಂತಿಕವಲ್ಲದ ಆರೋಪ, ಪ್ರತ್ಯಾರೋಪಗಳು ಕೇಳಿಬರುವುದು ತೀರಾ, ತೀರಾ ಸಾಮಾನ್ಯ. ಏನೇ ಆಗಲಿ, ಓದುಗರೆ, ಸಂದರ್ಶನವನ್ನು ನೋಡಿ. ಕಾರ್ಯಕ್ರಮದ ಶೀರ್ಷಿಕೆ - 'ಅನಂತ ಮಾತು'.


Click it and Unblock the Notifications











