»   » ಡಬ್ಬಿಂಗ್: ಸೀತಾರಾಂ ಅವರಿಗೆ ದಿನೇಶ್ ಕಡೆಯಿಂದ ಪತ್ರ

ಡಬ್ಬಿಂಗ್: ಸೀತಾರಾಂ ಅವರಿಗೆ ದಿನೇಶ್ ಕಡೆಯಿಂದ ಪತ್ರ

By: ದಿನೇಶ್ ಕುಮಾರ್, ಕರವೇ ನಲ್ನುಡಿ, ಮುಖ್ಯ ಸಂಪಾದಕರು
Subscribe to Filmibeat Kannada
Dubbing : Letter to Director TN Seetharam from Karave Nalnudi Editor
ಓದುಗರೇ, ಡಬ್ಬಿಂಗ್ ಬಗ್ಗೆ ನಿರ್ದೇಶಕ ಟಿಎನ್ ಸೀತಾರಾಮ್ ಅವರು ಅವಧಿ ತಾಣದಲ್ಲಿ ಬರೆದ ಲೇಖನಕ್ಕೆ ದಿನೇಶ್ ಅವರು ನೀಡಿರುವ ಪ್ರತಿಕ್ರಿಯೆಯ ರೀ ಕ್ಯಾಪ್ ಇಲ್ಲಿ ನೀಡಲಾಗಿದೆ. ಇಲ್ಲಿರುವ ಪ್ರತಿ ಸಾಲುಗಳು ಲೇಖಕರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಇದಕ್ಕೂ ಒನ್ ಇಂಡಿಯಾ, ಕರವೇ ಗೂ ಯಾವುದೇ ಸಂಬಂಧವಿರುವುದಿಲ್ಲ-ಒನ್ ಇಂಡಿಯಾ ಸಂಪಾದಕ ವರ್ಗ

ಟಿ.ಎನ್.ಸೀತಾರಾಮ್ ಅವರೇ,

ಅಪಾರ ಗೌರವಗಳೊಂದಿಗೆ ನಿಮ್ಮ ಅಭಿಪ್ರಾಯ ಕುರಿತಂತೆ ನನ್ನದೂ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಕನ್ನಡಕ್ಕೆ ಡಬ್ ಆಗುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿರುತ್ತವೆ ಎಂದು ಡಬ್ಬಿಂಗ್ ಪರವಾಗಿ ಮಾತನಾಡುವವರು ಭಾವಿಸಿದ್ದಾರೆ ಎಂದು ನೀವು ನಿಮ್ಮ ಲೇಖನ ಶುರು ಮಾಡುತ್ತೀರಿ. ನಿಮ್ಮ ಗ್ರಹಿಕೆ ಸರಿಯಲ್ಲ. ಡಬ್ಬಿಂಗ್ ಕಾರ್ಯಕ್ರಮಗಳೆಲ್ಲವೂ ಉತ್ತಮವಾಗಿರುತ್ತವೆ ಎಂದು ನಾವ್ಯಾರೂ ಹೇಳುತ್ತಲೇ ಇಲ್ಲ, ಮುಂದೆಯೂ ಹೇಳೋದೂ ಇಲ್ಲ. ನಮ್ಮನ್ನು ನಂಬಿ ಪ್ಲೀಸ್! ಇನ್ನೊಮ್ಮೆ ಡಬ್ಬಿಂಗ್ ವಿಷಯ ಮಾತಾಡುವಾಗ ಈ ತಪ್ಪು ಗ್ರಹಿಕೆಯನ್ನು ಬಿಟ್ಟುಕೊಟ್ಟೇ ಮಾತಾಡಿ.

ಡಬ್ಬಿಂಗ್ ಶುರುವಾದರೆ ಒಳ್ಳೆಯ ಗುಣಮಟ್ಟದ ಶೇ.10ರಷ್ಟು ಕಾರ್ಯಕ್ರಮಗಳು ಡಬ್ ಆಗೋದಿಲ್ಲ ಎನ್ನುತ್ತಿದ್ದೀರಿ. ಹೇಗೆ ಈ ತೀರ್ಮಾನಕ್ಕೆ ಬಂದಿರಿ? ಅದಕ್ಕೆ ಏನು ಆಧಾರ? ಏನಾದರೂ ಸಮೀಕ್ಷೆ ಮಾಡಿದ್ದೀರಾ? ಕನ್ನಡದಲ್ಲಿ ಡಬ್ಬಿಂಗ್ ನಿಂತು ದಶಕಗಳೇ ಕಳೆದಿವೆ. ಡಬ್ಬಿಂಗ್ ಶುರುವಾದರೆ ಒಳ್ಳೆಯದು ಬರೋದೇ ಇಲ್ಲ ಎಂದು ಕಣ್ಣುಮುಚ್ಚಿಕೊಂಡು ಹೇಗೆ ಹೇಳುತ್ತೀರಿ? ನಾವಂತೂ ತ್ರಿಕಾಲ ಜ್ಞಾನಿಗಳಲ್ಲ. ಡಬ್ಬಿಂಗ್ ಆಗುವುದರಿಂದ ತಡೆಯಲಾದ ರಾಮಾಯಣ-ಮಹಾಭಾರತ-ಸ್ವೋರ್ಡ್ಆಫ್ ಟಿಪ್ಪು ಸುಲ್ತಾನ್-ಮಾಲ್ಗುಡಿ ಡೇಸ್- ಸತ್ಯಮೇವ ಜಯತೆ ಇತ್ಯಾದಿಗಳು ಕಳಪೆ ಎಂದು ನಮಗೆ ಅನಿಸಿಲ್ಲ.

ನೀವು ಬರೆಯುತ್ತೀರಿ: ಅವರು ಡಬ್ ಮಾದಲು ಸಾಧ್ಯ ಇರುವುದು ತಮಿಳು ಮತ್ತು ಹಿಂದಿ ಧಾರಾವಾಹಿಗಳನ್ನು ಮಾತ್ರ. ಕನ್ನಡ ಧಾರಾವಾಹಿಗಳ ಜಾಗದಲ್ಲಿ ಅವು ಬರುತ್ತವೆ. ಅದೇ ವ್ಯಾಂಪ್‌ಗಳು, ಅದೇ ವಿವಾಹದ ಹೊರಗಿನ ಸ೦ಬಂಧಗಳು, ಅದೇ ಅತಿ ಅಲಂಕಾರದ ಕೃತಕ ಹೆಣ್ಣುಗಳು, ಅದೇ ದೆವ್ವಗಳು, ಮಾಟ ಮಂತ್ರಗಳು, ಮೂಢನಂಬಿಕೆಗಳು, ಕನ್ನಡ ಕಳಪೆ ಎಂದು ನೀವು ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳಿಗೆ ಮತ್ತು ತಾಯಂದಿರಿಗೆ ತೋರಿಸಲು ಸಾಧ್ಯವಾಗುವುದು ಇಂತಹ ಧಾರಾವಾಹಿಗಳನ್ನು ಮಾತ್ರ ತಾನೆ?...

ಹೌದು ಸರ್, ನೀವ್ ಹೇಳೋದು ನಿಜ. ಆದರೆ ಕನ್ನಡದ ಟಾಪ್ ಟೆನ್ ಧಾರಾವಾಹಿಗಳು ಇಂಥದ್ದೇ ಕಾರ್ಯಕ್ರಮಗಳ ರೀಮೇಕು ಅನ್ನೋದನ್ನು ಬರೆಯಲು ಯಾಕೆ ಪ್ರಜ್ಞಾಪೂರ್ವಕವಾಗಿ ಮರೆಯುತ್ತೀರಿ? ಅದೇ ಅನೈತಿಕ ಸಂಬಂಧಗಳು, ಅದೇ ಕೃತಕ ಅಲಂಕಾರದ ಹೆಣ್ಣುಗಳು, ಅದೇ ಮಾಟಮಂತ್ರ-ಮೌಢ್ಯ ರೀಮೇಕ್, ಸ್ವಮೇಕ್ ಗಳಲ್ಲಿ ಕಾಣಿಸಿಕೊಂಡಿಲ್ಲವೇ? ಇದೆಲ್ಲ ಗೊತ್ತಿದ್ದೂ ಕನ್ನಡದ ಧಾರಾವಾಹಿಗಳನ್ನು ಡಬ್ಬಿಂಗ್ ಹೆಸರಿನಲ್ಲಿ ನಾಶ ಮಾಡುವುದು ಸರಿಯೆ ಎಂದೇಕೆ ಪ್ರಶ್ನಿಸುತ್ತೀರಿ? ಅಷ್ಟಕ್ಕೂ ಕನ್ನಡ ಧಾರಾವಾಹಿಗಳು ನಾಶವಾಗುತ್ತವೆ ಎಂಬ ಭೀತಿ, ಅಂಜುಬುರುಕುತನ ನಿಮಗೇಕೆ? ಏನೇ ಡಬ್ಬಿಂಗ್ ಧಾರಾವಾಹಿಗಳು ಬಂದರೂ ನಿಮ್ಮಂಥವರು ಮುಕ್ತ ಮುಕ್ತದಂಥ ಧಾರಾವಾಹಿಗಳು ಮಾಡಿದರೆ ಜನ ನೋಡಲ್ಲ ಅಂತೀರಾ? ಜನರ ಅಭಿರುಚಿಯ ಮೇಲೆ ಅಷ್ಟೊಂದು ಗುಮಾನಿನಾ ನಿಮಗೆ?

ಒಂದು ವಿಷಯ ನಿಮಗೆ ಹೇಳಬೇಕು, ಹಿಂದೆ ಕರ್ನಾಟಕದ ಹೆಣ್ಣುಮಕ್ಕಳು ಕಾದಂಬರಿಗಳನ್ನು ಓದುತ್ತಾ ಇದ್ದರು. ನಾನೂ ಸಹ ಲೈಬ್ರರಿಗೆ ಹೋಗಿ ತ್ರಿವೇಣಿ, ಸಾಯಿಸುತೆಯವರ ಕಾದಂಬರಿಗಳನ್ನು ತಂದು ನನ್ನ ಮನೆಗೆ ತಗೊಂಡು ಹೋಗುತ್ತಿದೆ. ನಿಮ್ಮ ಧಾರಾವಾಹಿಗಳು ಬಂದ ನಂತರ ಹೆಣ್ಣುಮಕ್ಕಳು ಕಾದಂಬರಿ ಓದೋದನ್ನೇ ಬಿಟ್ಟರು. ಹಾಗಂತ ಕಾದಂಬರಿಕಾರರು ಸೀರಿಯಲ್ ಗಳನ್ನು ನಿಷೇಧಿಸಿ ಅಂತ ಚಳವಳಿ ಮಾಡಿದರಾ? ಸೀರಿಯಲ್ ಗಳನ್ನು ನೋಡಕೂಡದು ಅಂತ ಫತ್ವಾ ಹೊರಡಿಸಿದ್ದರಾ? ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಯಥಾವತ್ತು ಇಂಗ್ಲಿಷ್ ಆವೃತ್ತಿಯನ್ನು ಕನ್ನಡಕ್ಕೆ ಅನುವಾದ ಮಾಡಿ (ಡಬ್ಬಿಂಗ್) ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕೆ ನಿಲ್ಲಿಸಿ ಎಂದು ಇತರ ಪತ್ರಿಕೆಗಳ ಪತ್ರಕರ್ತರು ಟೈಮ್ಸ್ ಕಚೇರಿ ಮುಂದೆ ಧರಣಿ ಕೂತಿದ್ದರಾ?

ಡಬ್ಬಿಂಗ್ ತಾತ್ವಿಕ ಒಪ್ಪಿಗೆ ಕೊಟ್ಟ ತಕ್ಷಣ.... ಅಂತೇನೋ ಬರೀತೀರಿ? ಯಾರು ಈ ತಾತ್ವಿಕ ಒಪ್ಪಿಗೆ ಕೊಡುವವರು? ಒಪ್ಪಿಗೆ ಕೊಡುವ ತಿರಸ್ಕರಿಸುವ ಅಧಿಕಾರವನ್ನು ಕನ್ನಡ ವೀಕ್ಷಕನೇನಾದರೂ ಇವರಿಗೆ ಕೊಟ್ಟಿದ್ದಾನೆಯೇ? ಅಷ್ಟಕ್ಕೂ ಡಬ್ಬಿಂಗ್ ಕಾರ್ಯಕ್ರಮ ಅನ್ನೋದು ಸಮಾಜಬಾಹಿರ, ಸಂವಿಧಾನಬಾಹಿರ, ಅನೈತಿಕ ಉತ್ಪನ್ನವೇ?

ಕಳಪೆ ಯಾವುದು, ಗುಣಮಟ್ಟದ್ದು ಯಾವುದು ಅನ್ನೋದನ್ನು ನಿರ್ಧರಿಸುವವನು ಪ್ರೇಕ್ಷಕ, ಅದು ನಿಮಗೂ ಗೊತ್ತಿದೆ. ಕನ್ನಡದಲ್ಲಿ ವರ್ಷಕ್ಕೆ ಬಿಡುಗಡೆಯಾಗುವ 130ರ ಆಜುಬಾಜಿನ ಸಿನಿಮಾಗಳಲ್ಲಿ ಎಷ್ಟನ್ನು ಗೆಲ್ಲಿಸಿದ್ದಾನೆ ಕನ್ನಡ ಪ್ರೇಕ್ಷಕ? ಇಷ್ಟವಾಗದ್ದನ್ನು ತಿಪ್ಪೆಗೆಸೆದಿದ್ದಾನಲ್ಲವೇ? ಹಾಗೆಯೇ ಡಬ್ಬಿಂಗ್ ನಿಂದ ಬರುವ ಕಾರ್ಯಕ್ರಮ, ಸಿನಿಮಗಳು ಕಳಪೆಯಾಗಿದ್ದರೆ ಅವುಗಳನ್ನೂ ತಿರಸ್ಕರಿಸುತ್ತಾನೆ. ನಿಮಗೇಕೆ ಧಾವಂತ?

ನೀವು ಏನು ನೋಡಬೇಕು ಎಂದು ಹೇಳುವ ಸ್ವಾತಂತ್ರ್ಯ ಇರುವುದು ಚಾನಲ್ ಗಳನ್ನು ನಡೆಸುತ್ತಿರುವ ಬೇರೆ ಭಾಷೆಯ ಚಾನಲ್‌ನವರಿಗೆ ಎನ್ನುತ್ತೀರಿ. ಹಾಗೆಲ್ಲ ನಾವು ಏನನ್ನು ನೋಡಬೇಕು ಎನ್ನುವುದನ್ನು ಚಾನಲ್‌ಗಳೂ ಹೇಳುವಂತಿಲ್ಲ, ಸಿನಿಮಾಮಂದಿಯೂ ಹೇಳುವಂತಿಲ್ಲ, ಸಿನಿಮಾ-ಟಿವಿ ಕ್ಷೇತ್ರದ ಪಂಡಿತರೂ ಹೇಳುವಂತಿಲ್ಲ. ಅವರವರ ಆಯ್ಕೆ ಅವರವರಿಗೆ ಇರುತ್ತದೆ. ಜೀವನಪರ್ಯಂತ ಒಂದೂ ಸಿನಿಮಾ ನೋಡದೇ ಇರೋರು ಕೂಡ ಈ ಜಗತ್ತಿನಲ್ಲಿ ಜೀವಿಸಿದ್ದಾರೆ ಅನ್ನೋದನ್ನು ಮರೆಯಬೇಡಿ.

ಅಷ್ಟಕ್ಕೂ ಡಬ್ಬಿಂಗ್ ಬೇಡ ಎನ್ನುತ್ತಿರುವ ಸಿನಿಮಾ-ಟಿವಿ ಮಂದಿ ಯಾಕಿಷ್ಟು ರಕ್ಷಣೆಯನ್ನು ಬಯಸುತ್ತಾರೆ? ಹಾಗೆ ರಕ್ಷಣೆ ಬಯಸಲು ಅವರಿಗೆ ಇರುವ/ಇರಬಹುದಾದ ವಿಶೇಷ ಅರ್ಹತೆಗಳಾದರೂ ಏನು?

ನಾನು ಏನನ್ನು ನೋಡಬೇಕು ಎಂಬುದನ್ನು ನಿರ್ಧರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಶಿವರಾಜಕುಮಾರ್ ಅವರಿಗಾಗಲಿ, ಟಿ.ಎನ್.ಸೀತಾರಾಂ ಅವರಿಗಾಗಲೀ, ಬಿ.ಸುರೇಶ ಅವರಿಗಾಗಲಿ, ಮತ್ಯಾರಿಗಾಗಲೀ ನಾನು ನೀಡಿಲ್ಲ. ಅಂಥ ಸಾಂಸ್ಕೃತಿಕ-ಸಾಮಾಜಿಕ ಹೊಣೆಗಾರಿಕೆಯನ್ನು ಸುಖಾಸುಮ್ಮನೆ ನಿಮ್ಮಗಳ ಹೆಗಲ ಮೇಲೆ ಯಾಕೆ ಹೊತ್ತುಕೊಂಡು ಓಡಾಡುತ್ತೀರಿ? ನಿಮ್ಮ ಲಾಭ-ನಷ್ಟದ ವಿಷಯಗಳನ್ನು ಮಾತನಾಡಿ, ನಮ್ಮ ಅಭಿರುಚಿಗಳ ಬಗ್ಗೆ ನಿಮ್ಮ ಪ್ರೌಢಪ್ರಬಂಧಗಳನ್ನೇಕೆ ಹೇರುವಿರಿ? ಕನ್ನಡ ಪ್ರೇಕ್ಷಕನನ್ನು ನೀವು ಅಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡಿರುವಿರಾ?

ನಾವು ತಿರುಗಿ ಬಿದ್ದರೆ ಡಬ್ಬಿಂಗ್ ಬೇಕು ಅನ್ನೋರೆಲ್ಲ ಇಲ್ಲದಂತಾಗುತ್ತಾರೆ ಎಂದು ಶಿವರಾಜ ಕುಮಾರ್ ಅಂಥವರು ಬಹಿರಂಗವಾಗೇ ಬೆದರಿಕೆ ಒಡ್ಡುತ್ತಾರೆ. ನನ್ನ ಇಷ್ಟದನ್ನು ನಾನು ಬೇಕು ಅಂದರೆ ನಮ್ಮನ್ನು ಮುಗಿಸಿಯಾದರೂ ಅದನ್ನು ತಡೆಯುತ್ತೇವೆ ಎನ್ನುವವರಿಗೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಂದು ಕರೆಯಬಹುದು? ಚಿತ್ರರಂಗದ ಪರವಾಗಿ ಬಡಿದಾಡಲು ಗೂಂಡಾಗಿರಿಯ ಭಾಷೆ-ಕ್ರಿಯೆ ಅನಿವಾರ್ಯವಾಗಿದೆಯೇ? ಅಥವಾ ಸೀತಾರಾಂ ಅಂಥವರ ಜಾಣ ತರ್ಕ- ವೀಕ್ಷಕನನ್ನು ತನಗಿಂತ ಕೆಳಗೆ ಇಟ್ಟು ನೋಡುವ ಅಹಂಕಾರದ ಭಾಷೆ ಅನಿವಾರ್ಯವೇ?

ಇನ್ನೂ ಹತ್ತಾರು ವಿಷಯಗಳಿವೆ. ಆಗಲೇ ಉದ್ದವಾಗಿದೆ, ನಿಮ್ಮ ಧಾರಾವಾಹಿಗಳಂತೆ!  [ಟಿಎನ್ ಸೀತಾರಾಂ ಮಹಾಪರ್ವಕ್ಕೆ ಸಿಕ್ಕ ಪ್ರತಿಕ್ರಿಯೆ ಓದಿ]

English summary
Here is Karnataka Rakshana Vedike Magazine Karave Nalnudi Chief Editor Dinesh Kumar's response to Director TN Seetharam on his opposition to Dubbing Serials and movies. Dinesh Kumar in his response strongly defended and explained why dubbing is needed in Kannada
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada