»   » 'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!

'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.!

Posted By:
Subscribe to Filmibeat Kannada
'ಗಂಧದ ಗುಡಿ'ಯಲ್ಲಿ ಡಾ.ರಾಜ್ ಗೆ ಗುಂಡು ಹಾರಿಸಿದ್ಯಾರು.? ದಶಕಗಳ ನಂತ್ರ ಸತ್ಯ ಬಟಾಬಯಲು.! | Filmibeat Kannada

ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದೇ ಒಂದು ಚಿತ್ರ ಹಾಗೂ ಒಂದೇ ಒಂದು ದೃಶ್ಯದಿಂದ ಖ್ಯಾತಿ-ಕುಖ್ಯಾತಿಗೆ ಒಳಗಾದ ಏಕೈಕ ನಾಯಕ ನಟನೆಂದರೆ ಅದು ಡಾ.ವಿಷ್ಣುವರ್ಧನ್ ಮಾತ್ರ.

1972 ರಲ್ಲಿ ಬಿಡುಗಡೆ ಆದ 'ನಾಗರಹಾವು' ಚಿತ್ರದಿಂದ ಕನ್ನಡದ ಆಂಗ್ರಿ ಯಂಗ್ ಮ್ಯಾನ್ ಯಶಸ್ಸಿನ ಉತ್ತುಂಗ ಶಿಖರಕ್ಕೆ ತಲುಪಿದ್ದರೆ, ಮರು ವರ್ಷವೇ ಬಿಡುಗಡೆ ಆದ 'ಗಂಧದ ಗುಡಿ' ಚಿತ್ರದಿಂದ ವಿವಾದಕ್ಕೆ ಒಳಗಾಗಿದ್ದು ಇತಿಹಾಸ.

'ನಾಗರಹಾವು' ಚಿತ್ರದಲ್ಲಿನ ಅತ್ಯದ್ಭುತ ಅಭಿನಯದ ಪ್ರತಿಫಲವಾಗಿ ಡಾ.ರಾಜ್ ಕುಮಾರ್ ಅವರ 150ನೇ ಚಿತ್ರ 'ಗಂಧದ ಗುಡಿ'ಯಲ್ಲಿ ಅಭಿನಯಿಸುವ ಸೌಭಾಗ್ಯ ಡಾ.ವಿಷ್ಣುವರ್ಧನ್ ಗೆ ಸಿಕ್ತು. ಎಂ.ಪಿ.ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಆಯ್ಕೆ ಆದಾಗ ವಿಷ್ಣುವರ್ಧನ್ ಪಟ್ಟ ಸಂತಸ ಅಷ್ಟಿಷ್ಟಲ್ಲ. ಆದ್ರೆ, ವಿಘ್ನ ಸಂತೋಷಿಗಳ ಕುತಂತ್ರದಿಂದಾಗಿ ವಿಷ್ಣುವರ್ಧನ್ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆ ಬರುವಂತಾಯ್ತು. ಇದರಿಂದ ಜೀವನ ಪರ್ಯಂತ ವಿಷ್ಣು ನೋವು ಅನುಭವಿಸಿದ್ದು ಸುಳ್ಳಲ್ಲ. ['ಗಂಧದಗುಡಿ'ಯಲ್ಲಿ ರಾಜ್-ವಿಷ್ಣು ಮಧ್ಯೆ ಆಗಿದ್ದೇನು? 'ವೀಕೆಂಡ್'ನಲ್ಲಿ ನಟಿ ಭಾರತಿ ಹೇಳಿದ ಕಥೆ!]

ಅಷ್ಟಕ್ಕೂ, ಅವತ್ತು ಕಾಕನಕೋಟೆಯ ಮಸಾಲೆ ಬೆಟ್ಟದಲ್ಲಿ ಏನಾಯ್ತು ಎಂದು ಡಾ.ರಾಜ್ ಆಗಲಿ ಡಾ.ವಿಷ್ಣು ಆಗಲಿ ಬಹಿರಂಗವಾಗಿ ಬಾಯಿ ಬಿಡಲಿಲ್ಲ. ದಶಕಗಳ ಹಿಂದಿನ ವಿವಾದದ ರಹಸ್ಯ ಮೊನ್ನೆ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಟಾಬಯಲಾಯ್ತು.

'ಗಂಧದ ಗುಡಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಏನಾಯ್ತು ಎಂಬುದನ್ನ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಎಂ.ಪಿ.ಶಂಕರ್ ಆತ್ಮಚರಿತ್ರೆ ಬರೆದಿರುವ ಹಿರಿಯ ಪತ್ರಕರ್ತ ಬಿ.ಗಣಪತಿ ವಿವರಿಸಿದರು. ಮುಂದೆ ಓದಿರಿ.....

ಸ್ಪಾಟ್ ನಲ್ಲಿ ವಿಷ್ಣುವರ್ಧನ್ ಇರಲೇ ಇಲ್ಲ.!

''ನನಗೆ ತಿಳಿದ ಮಟ್ಟಿಗೆ ಆ ಜಾಗದಲ್ಲಿ ಅವರು (ವಿಷ್ಣುವರ್ಧನ್) ಇರಲಿಲ್ಲ. ಆ ಸೀನ್ ನಲ್ಲಿಯೇ ಅವರು ಇಲ್ಲ. ಯಾಕೆ ಆ ರೀತಿ ಪ್ರಚಾರ ಆಯ್ತು ಅನ್ನೋದು ಮಾತ್ರ ಗೊತ್ತಿಲ್ಲ'' - ಭಾರತಿ ವಿಷ್ಣುವರ್ಧನ್

ವೈಯುಕ್ತಿಕ ದ್ವೇಷ ಇರಲಿಲ್ಲ

''ಡಾ.ರಾಜ್ ಕುಮಾರ್ ರವರಿಗಾಗಲಿ... ಡಾ.ವಿಷ್ಣುವರ್ಧನ್ ರವರಿಗಾಗಲಿ ಯಾವುದೇ ರೀತಿಯ ವೈಯುಕ್ತಿಕ ದ್ವೇಷ ಇರಲಿಲ್ಲ'' - ಬಿ.ಗಣಪತಿ, ಪತ್ರಕರ್ತ

ಇಬ್ಬರ ಮಧ್ಯೆ ತಂದಿಟ್ಟಿದ್ದು ಯಾರು.?

''ಡಾ.ರಾಜ್ ಮತ್ತು ಡಾ.ವಿಷ್ಣು ಮಧ್ಯೆ ತಂದಿಟ್ಟಿದ್ದಿದ್ರೆ, ಅದು ಅವರ ಸುತ್ತಮುತ್ತ ಇದ್ದ ಕೆಲವು ಅನಾರೋಗ್ಯಕರ ಮನಸ್ಸುಗಳಷ್ಟೇ ಹೊರತು ಸ್ವತಃ ಅವರಿಬ್ಬರು ಬಹಳ ಆತ್ಮೀಯವಾಗಿದ್ರು'' - ಬಿ.ಗಣಪತಿ, ಪತ್ರಕರ್ತ

ಮಸಾಲೆ ಬೆಟ್ಟದಲ್ಲಿ ಏನಾಯ್ತು.?

''ಗಂಧದ ಗುಡಿ' ಘಟನೆ ನಡೆದದ್ದು ಮಸಾಲೆ ಬೆಟ್ಟದಲ್ಲಿ. ಎಂ.ಪಿ.ಶಂಕರ್ ಹೇಳಿದ ಪ್ರಕಾರ, ''ಆ ಕ್ಲೈಮ್ಯಾಕ್ಸ್ ನ ವಾತಾವರಣದಲ್ಲಿ ಡಾ.ವಿಷ್ಣುವರ್ಧನ್ ಇರಲಿಲ್ಲ. ಕೆಳಗಡೆ ಊಟ ಮಾಡುತ್ತಿದ್ದರು'' - ಬಿ.ಗಣಪತಿ, ಪತ್ರಕರ್ತ

ಚಿತ್ರೀಕರಣ ನಡೆಯುವಾಗ....

''ಒಂದು ಕಡೆ ಡ್ರಮ್, ಅದರ ಮೇಲೆ ಆದಿವಾನಿ ಲಕ್ಷ್ಮಿದೇವಿ.. ಅವರ ಕುತ್ತಿಗೆಗೆ ಹಗ್ಗ... ಅವರ ಪಕ್ಕದಲ್ಲಿ ಡಾ.ರಾಜ್ ಕುಮಾರ್... ಎದುರುಗಡೆ ಬಾಲಣ್ಣ... ಬಾಲಣ್ಣ ರವರಿಗೆ ಒಂದು ಡೈಲಾಗ್ ಇದೆ. ''ಶೂಟ್ ಮಾಡಿ ನಿನ್ನನ್ನ ಸುಟ್ಟು ಹಾಕಿಬಿಡುತ್ತೇನೆ'' ಎಂದು ಗನ್ ಹಿಡಿದುಕೊಂಡು ಬಾಲಣ್ಣ ಹೇಳಬೇಕು. ಆ ಗನ್ ಭಾರ ಇದ್ದಿದ್ರಿಂದ ಮೂರ್ನಾಲ್ಕು ಟೇಕ್ ಆಗುತ್ತದೆ. ಆಗ ಎಂ.ಪಿ.ಶಂಕರ್ ರವರು ತಮ್ಮ ಬಳಿ ಇದ್ದ ಗನ್ ಕೊಡುತ್ತಾರೆ'' - ಬಿ.ಗಣಪತಿ, ಪತ್ರಕರ್ತ

ಗನ್ ಬದಲಾವಣೆ

''ಎಂ.ಪಿ.ಶಂಕರ್ ರವರು ತಮ್ಮ ಗನ್ ಕೊಟ್ಟಾಗ, ಇದರಲ್ಲಿ ಏನೂ ಇಲ್ಲ ತಾನೇ ಅಂತ ಬಾಲಣ್ಣ ಕೇಳುತ್ತಾರೆ. ಪ್ರತಿದಿನವೂ, ಆ ಗನ್ ನಲ್ಲಿ ಇರುವ ಬುಲೆಟ್ ಗಳನ್ನ ತೆಗೆದು, ತಮ್ಮ ಜೇಬಿನಲ್ಲಿ ಹಾಕೊಂಡು ಬರುವುದು ಎಂ.ಪಿ.ಶಂಕರ್ ರವರ ಪದ್ಧತಿ. ಹೀಗಾಗಿ, ಬಾಲಣ್ಣ 'ಏನೂ ಇಲ್ಲ ತಾನೇ' ಎಂದು ಕೇಳಿದಾಗ, ತಮ್ಮ ಜೇಬಿನಲ್ಲಿ ಇದ್ದ ಬುಲೆಟ್ ಗಳನ್ನ ನೋಡಿಕೊಳ್ಳುತ್ತಾರೆ. ಜೇಬಿನಲ್ಲಿ ಬುಲೆಟ್ ಗಳು ಇದ್ದಿದ್ರಿಂದ, ''ಏನೂ ಇಲ್ಲ. ಎಲ್ಲ ಸರಿಯಾಗಿದೆ'' ಎನ್ನುತ್ತಾರೆ'' - ಬಿ.ಗಣಪತಿ, ಪತ್ರಕರ್ತ

ಶಾಟ್ ಓಕೆ ಆದ್ಮೇಲೆ...

''ಆಮೇಲೆ ಚಿತ್ರೀಕರಣ ಆಗುತ್ತದೆ. ಶಾಟ್ ಕೂಡ ಓಕೆ ಆಗುತ್ತದೆ. ಶಾಟ್ ಓಕೆ ಆದ್ಮೇಲೆ ಆದಿವಾನಿ ಲಕ್ಷ್ಮಿದೇವಿ ಹಾಗೂ ಡಾ.ರಾಜ್ ಕೆಳಗೆ ಹೋಗುತ್ತಾರೆ. ಬಾಲಣ್ಣ ಅವರು ಎಂ.ಪಿ.ಶಂಕರ್ ಗೆ ಗನ್ ವಾಪಸ್ ಕೊಡಲು ಹೋಗುತ್ತಾರೆ'' - ಬಿ.ಗಣಪತಿ, ಪತ್ರಕರ್ತ

ಬುಲೆಟ್ ಫೈಯರ್ ಆಗುತ್ತೆ

''ಗನ್ ಅರ್ಧ ಟ್ರಿಗರ್ ಆಗಿರುತ್ತದೆ. ಎಂ.ಪಿ.ಶಂಕರ್ ಕೈಯಲ್ಲಿ ಗನ್ ಇರುವಾಗ, ಸಡನ್ ಆಗಿ ಬುಲೆಟ್ ಫೈಯರ್ ಆಗುತ್ತೆ. ಸುಮಾರು ಆರು ಅಡಿಯಷ್ಟು ಮಣ್ಣು ತೂತ್ತಾಗುತ್ತದೆ. ಅದು ಡಬಲ್ ಬ್ಯಾರೆಲ್ ಗನ್'' - ಬಿ.ಗಣಪತಿ, ಪತ್ರಕರ್ತ

ಒಂದು ವೇಳೆ....

''ಒಂದು ವೇಳೆ ಎರಡು ನಿಮಿಷದ ಹಿಂದೆ ಆ ಘಟನೆ ನಡೆದಿದ್ರೆ, ಡಾ.ರಾಜ್ ಕುಮಾರ್ ರವರ ಎದೆ ಸೀಳಿ ಹೊರಗೆ ಬರುತ್ತಿತ್ತು'' - ಬಿ.ಗಣಪತಿ, ಪತ್ರಕರ್ತ

ಎಲ್ಲರಿಗೂ ಆಘಾತ

''ಆಗ ಎಲ್ಲರಿಗೂ ಗಾಬರಿ ಆಗಿದೆ. ಕೆಳಗಡೆಯಿಂದ ಎಲ್ಲರೂ ಓಡಿ ಬಂದಿದ್ದಾರೆ. ಡಾ.ರಾಜ್ ಕುಮಾರ್ ಕೂಡ ಏಳರಿಂದ ಎಂಟು ನಿಮಿಷ ಸುಮ್ಮನೆ ನಿಂತಿದ್ದಾರೆ. ಆಘಾತದಿಂದ ಎಂ.ಪಿ.ಶಂಕರ್ ಕೆಳಗೆ ಬಿದ್ದಿದ್ದಾರೆ. ಆಗ, ರಾಜ್ ಕುಮಾರ್ ಅವರೇ ಬಂದು ಸತ್ಯ ನಿಮ್ಮನ್ನ ಕಾಪಾಡಿದೆ. ನೀವು ಸತ್ಯವಂತರಾಗಿದ್ರಿಂದ ಇಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಏನೂ ಯೋಚನೆ ಮಾಡಬೇಡಿ. ಆಗಿದ್ದು ಆಗಿ ಹೋಯ್ತು ಅಂತ ಅವರು ಅದನ್ನ ಅವತ್ತು ಅಲ್ಲಿಗೇ ನಿಲ್ಲಿಸಿದ್ದಾರೆ'' - ಬಿ.ಗಣಪತಿ, ಪತ್ರಕರ್ತ

ಎಂ.ಪಿ.ಶಂಕರ್ ಕೈಯಿಂದ ಆಗಿದ್ದು.!

''ಬಾಲಣ್ಣ ಕೈಯಲ್ಲಿ ಇದು ಆಗಿಲ್ಲ. ವಿಷ್ಣುವರ್ಧನ್ ಇದನ್ನ ಮಾಡಲು ಸಾಧ್ಯವೇ ಇಲ್ಲ. ಯಾಕಂದ್ರೆ, ಅವರು ಅವತ್ತು ಕ್ಲೈಮ್ಯಾಕ್ಸ್ ಸೀನ್ ನಲ್ಲಿ ಇರಲಿಲ್ಲ. ಇದು ಆಗಿದ್ದು ಸ್ವತಃ ಎಂ.ಪಿ.ಶಂಕರ್ ಕೈಯಿಂದ'' - ಬಿ.ಗಣಪತಿ, ಪತ್ರಕರ್ತ

ಡಾ.ವಿಷ್ಣುವರ್ಧನ್ ಹಾಗೂ ಈ ಘಟನೆಗೂ ಸಂಬಂಧವೇ ಇಲ್ಲ.!

''ಈ ಘಟನೆ ಕುರಿತು ನಾವು ಎಷ್ಟೇ ಸರಿ ಸ್ಪಷ್ಟನೆ ನೀಡಿದರೂ, ಇತಿಹಾಸದ ಉದ್ದಕ್ಕೂ.. ಡಾ.ವಿಷ್ಣುವರ್ಧನ್ ರವರನ್ನ ಈ ವಿವಾದ ಬೆಂಬಿಡದ ಭೂತದಂತೆ ಕಾಡಿದೆ. ಈ ಘಟನೆಯಲ್ಲಿ ಡಾ.ವಿಷ್ಣುವರ್ಧನ್ ಭಾಗಿ ಆಗಿಲ್ಲ. ಆದ್ರೆ, ಭಾಗಿಯಾಗಿದ್ದರು ಎನ್ನುವಂತೆ ಬಿಂಬಿಸಲಾಗಿದೆ. ಇದು ತಪ್ಪು'' - ಬಿ.ಗಣಪತಿ, ಪತ್ರಕರ್ತ

ಚರಿತ್ರೆ ಬೇರೆ ಅಗುತ್ತಿತ್ತು

''ಡಾ.ರಾಜ್ ಹಾಗೂ ಡಾ.ವಿಷ್ಣು ಪ್ರತ್ಯೇಕವಾಗಿ ಉಳಿದರು. ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಒಂದಾಗಿದಿದ್ರೆ, ಇಡೀ ಚರಿತ್ರೆ ಬೇರೆ ದಿಕ್ಕಿನಲ್ಲಿ ಸಾಗುತ್ತಿತ್ತು'' - ಬಿ.ಗಣಪತಿ, ಪತ್ರಕರ್ತ

ಅಂದು ಯಾರೂ ಮುಂದೆ ಬರಲಿಲ್ಲ.!

''ಕಾಲಕ್ರಮೇಣ ಎಲ್ಲರೂ ಒಂದಾದರು. ಆದ್ರೆ ಆ ಘಟನೆ ನಡೆದಾಗ ಏನು ಮಾಡಬಹುದಾಗಿತ್ತು ಎಂದರೆ, ಪತ್ರಿಕಾ ಮಿತ್ರರನ್ನ ಕರೆಯಿಸಿ, ಒಂದೇ ವೇದಿಕೆ ಮೇಲೆ ಇಬ್ಬರೂ ಹೇಳಿಕೆ ಕೊಡಬಹುದಿತ್ತು. ಹಾಗೆ ಮಾಡಿದಿದ್ರೆ, ಇಷ್ಟು ಬೆಳೆಯುತ್ತಿರಲಿಲ್ಲ. ಆದ್ರೆ, ಹಾಗೆ ಮಾಡಲಿಲ್ಲ. ಅದನ್ನ ಅಲ್ಲಿಗೆ ಬಿಟ್ಟುಬಿಟ್ಟರು. ಮಧ್ಯೆ ಇದ್ದವರು ಪೆಟ್ರೋಲ್ ಹಾಕಿದರು, ಕಡ್ಡಿ ಗೀರಿದರು, ಬಾಂಬ್ ಹಾಕಿದರು. ಇದರಿಂದ ತೊಂದರೆ ಆಗಿದ್ದು ವಿಷ್ಣುವರ್ಧನ್ ಗೆ ಮಾತ್ರ'' - ಭಾರ್ಗವ, ನಿರ್ದೇಶಕ

ಹತ್ತು ಸಿನಿಮಾ ಬರ್ತಿತ್ತು

''ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ರವರ ಅಭಿಮಾನಿಗಳ ಮಧ್ಯೆ ವೈಷಮ್ಯ ಇಲ್ಲದೇ ಹೋಗಿದ್ರೆ, 'ಗಂಧದ ಗುಡಿ' ಅಂತಹ ಇನ್ನೂ ಹತ್ತು ಸಿನಿಮಾ ಬರ್ತಿತ್ತು'' - ಬಿ.ಗಣಪತಿ, ಪತ್ರಕರ್ತ

ದೇವರಿಗೆ ಮಾತ್ರ ಗೊತ್ತು.!

''ಏನೇ ಆದರೂ ಜೀವನದಲ್ಲಿ ಒಳ್ಳೆಯದ್ದೇ ಆಗುತ್ತೆ. ಇವರು ಇಷ್ಟು ಬೆಳೆಯಲು ಇದೇ ಕಾರಣ ಆಗಿರಬಹುದಲ್ವಾ.? ಕೆಲವೊಂದು ಬಾರಿ ಟೈಮ್ ಎಲ್ಲವನ್ನೂ ಮಾಡಿಸುತ್ತೆ. ಯಾಕೆ ಹಾಗೆ ಆಯ್ತು.? ಎಂಬುದು ದೇವರಿಗೆ ಮಾತ್ರ ಗೊತ್ತು.! ನಾನು ನಂಬುವುದು ದೇವರನ್ನ ಮಾತ್ರ'' - ಭಾರತಿ ವಿಷ್ಣುವರ್ಧನ್

English summary
'Gandhadagudi' incident was revealed in 'Weekend With Ramesh 3' by Journalist B.Ganapathi in Zee Kannada Channel's Popular show Weekend With Ramesh-3

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada