»   » ಹೊರನಡೆದ ಬೆಳ್ಳಕ್ಕಿ, ಗುಟ್ಟಾಗಿ ಒಂದಾದ ಸ್ವಾಮೀಜಿಗಳು

ಹೊರನಡೆದ ಬೆಳ್ಳಕ್ಕಿ, ಗುಟ್ಟಾಗಿ ಒಂದಾದ ಸ್ವಾಮೀಜಿಗಳು

Posted By:
Subscribe to Filmibeat Kannada

ಕನ್ನಡ ಬಿಗ್ ಬಾಸ್ 19ನೇ ದಿನ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿ 'ಬೆಳ್ಳಕ್ಕಿ' ಎಂದು ಸುದೀಪ್ ರಿಂದ ಬಣ್ಣನೆ ಮಾಡಿಸಿಕೊಂಡಿದ್ದ ಚಿನಕುರಳಿ ಶ್ವೇತಾ ಪಂಡಿತ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಡೇಂಜರ್ ಜೋನ್‌ನಲ್ಲಿ ಇದ್ದ 'ಜಗಳಗಂಟಿ' ಚಂದ್ರಿಕಾ ಮತ್ತು 'ಸೈಲೆಂಟ್ ಕಿಲ್ಲರ್' ವಿನಾಯಕ ಜೋಶಿ ಸೇಫ್ ಆಗಿ ಉಳಿದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೆಂಗಳೆಯರು ಒಬ್ಬೊಬ್ಬರಾಗಿ ಕಳಚಿಕೊಳ್ಳುತ್ತಿದ್ದಾರೆ. ಮೊದಲು ವಿವಾದಾತ್ಮಕ ನರ್ಸ್ ಜಯಲಕ್ಷ್ಮೀ ಅವರು ಹೊರಬಿದ್ದು ಬಿಎಸ್ಆರ್ ಕಾಂಗ್ರೆಸ್ ಸೇರಿಕೊಂಡಿದ್ದರೆ, ಅವರನ್ನು ಹಿಂಬಾಲಿಸಿದ್ದು 'ಗಂಡ ಹೆಂಡತಿ' ಖ್ಯಾತಿಯ ಸಂಜನಾ. ಜಗಳಾಡುವುದರಲ್ಲೇ ಹೆಚ್ಚಿನ ಕಾಲ ಕಳೆದ ಸಂಜನಾ ಹೋಗುವ ಮುನ್ನ ಚಂದ್ರಿಕಾ ಅವರನ್ನು ಯಕ್ಕಾಮಕ್ಕಾ ಬೈದು ಹೋಗಿದ್ದರು. ಈಗ ಮೂರನೆಯವರಾಗಿ ಶ್ವೇತಾ ಔಟ್ ಆಗಿದ್ದಾರೆ. [ಶ್ವೇತಾ ಪಂಡಿತ್ ಸಂದರ್ಶನ]

ರಿಯಾಲಿಟಿ ಶೋಗೆ ಮತ್ತೊಬ್ಬ ವಿವಾದಾತ್ಮಕ ಸ್ವಾಮೀಜಿ ಋಷಿಕುಮಾರ ಎಂಟ್ರಿ ಕೊಟ್ಟ ಮೇಲೆ ಅಲ್ಲಿಯ ವಾತಾವರಣವೇ ಬದಲಾಗಿ ಹೋಗಿದೆ. ಎರಡು ಬಣಗಳು ಸೃಷ್ಟಿಯಾಗಿವೆ. ಋಷಿಕುಮಾರ ಮತ್ತು ನರೇಂದ್ರ ಬಾಬು ಶರ್ಮಾ ನೇತೃತ್ವದಲ್ಲಿ ಕದನಗಳೇ ನಡೆಯುತ್ತಿವೆ. ಇಬ್ಬರೂ ಒಬ್ಬರಿಗೊಬ್ಬರು ಬೈದಾಡಿಕೊಳ್ಳುತ್ತ ಮರ್ಯಾದೆ ಕೆಡಿಸಿಕೊಳ್ಳುತ್ತಿದ್ದಾರೆ. ಆದರೆ 19ನೇ ದಿನ ಬೆಳ್ಳಂಬೆಳಿಗ್ಗೆ ನಡೆದದ್ದೇನು ಗೊತ್ತಾ? ನೀವು ನಂಬಲಿಕ್ಕಿಲ್ಲ.

ಗುಟ್ಟಾಗಿ ಕಾಂಪ್ರೊಮೈಸ್ ಮಾಡಿಕೊಂಡ ಸ್ವಾಮೀಜಿ

ನಾವಿಬ್ರೇ ಎಲ್ಲರೆದಿರು, ಆ ಸ್ವಾಮಿ ಸರಿಯಿಲ್ಲ, ಈ ಸ್ವಾಮಿ ಸರಿಯಿಲ್ಲ, ಎಂದು ಕಾದಾಡುತ್ತಿದ್ದರೆ ಬೇರೆಯವರಿಂದ ಕವಡೆ ಕಾಸಿನ ಕಿಮ್ಮತ್ತು ಸಿಗುವುದಿಲ್ಲ. ಹೊರಜಗತ್ತಿನಲ್ಲಿರಲಿ, ಬಿಗ್ ಬಾಸ್ ಮನೆಯಲ್ಲೇ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತದೆ ಎಂದು ಇಬ್ಬರಲ್ಲಿ ಋಷಿಕುಮಾರನಿಗೆ ಮೊದಲು ಜ್ಞಾನೋದಯವಾಗಿದೆ. ಹೀಗಾಗಿ ಇಬ್ಬರೂ ಕಾಂಪ್ರೊಮೈಸ್ ಮಾಡಿಕೊಂಡರಾ? ಋಷಿಕುಮಾರನ ಮಾತು ಕೇಳಿ.

ನಾವಿಬ್ರೇ ಕಿತ್ತಾಡ್ಕೊಂಡ್ರೆ ಕ್ಯಾಕರಿಸಿ ಉಗೀತಾರೆ

"ಆಮೇಲೆ, ರಿಷಿ ಬಾ, ರಿಷಿ ಹೋಗು ಅನ್ನಬೇಡಿ. ನಾನು ಗುರುವೇ ಅಂತ ಕರಿತೀನಿ. ನೀವೂ ಹಾಗೇ ಕರೆಯಿರಿ. ನಾವಿಬ್ರೇ ಮರ್ಯಾದೆ ಕೊಟ್ಕೊಳ್ದೆ ಹೋದ್ರೆ ಅವರಾರೂ ಕೊಡಲ್ಲ. ಅದಕ್ಕೇ ಅಲ್ವೆ ನಾನು, ಗುರುಗಳೇ ಎಲ್ಲಿದ್ದೀರಿ ಎಂದು ಎಲ್ಲರೆದಿರು ಮರ್ಯಾದೆ ಕೊಟ್ಟು ಕರೀತೀನಿ. ನಾವಿಬ್ರೇ ಕಿತ್ತಾಡ್ಕೊಂಡ್ಕು ನಿಂತ್ಕೊಂಡ್ರೆ ಅವರೆಲ್ಲ ಕ್ಯಾಕರಿಸಿ ಉಗೀತಾರೆ."

ರಿಷಿ ಮಾತಿಗೆ ತಲೆಯಾಡಿಸಿ ಮುಗುಳ್ನಕ್ಕ ಶರ್ಮಾ

"ಅದಕ್ಕೇ ಹೇಳ್ತೀನಿ. ನನಗೀಗ ಐವತ್ತು ವರ್ಷ ಕಳೆದ್ಹೋಯ್ತು. ಇನ್ಮೇಲಾದ್ರೂ ಮರ್ಯಾದೆಯಿಂದ ಇರೋಣ. ನಾವ್ನಾವೇ ಮರ್ಯಾದೆ ಕೊಡೋದು ಬಿಟ್ಕೊಂಡ್ರೆ ಎಲ್ಲರೂ ನಮ್ಮನ್ನು ಉಗಿಯುವ ಹಾಗೆ ಆಗತ್ತೆ." ಋಷಿಕುಮಾರ ಬಡಬಡ ಮಾತುಗಳನ್ನು ಆಡುತ್ತಿದ್ದರೆ, ಸೈಲೆಂಟಾಗಿ ಕೇಳಿಸಿಕೊಳ್ಳುತ್ತಿದ್ದ ನರೇಂದ್ರ ಬಾಬು ಶರ್ಮಾ ತಲೆಯಾಡಿಸುತ್ತ, 'ಕ್ಯಾಕರಿಸಿ ಉಗೀತಾರೆ' ಅಂದಾಗ ಮುಗುಳ್ನಕ್ಕಿದ್ದು, ಸ್ಥಿತಿ ಅವರಿಗೂ ಅರಿವಾದಂತೆ ಇತ್ತು.

ಎಲ್ಲರಿಂದ ಭರ್ಜರಿ ಯುಗಾದಿ ಹಬ್ಬದ ಆಚರಣೆ

ಮನೆಯಲ್ಲಿ ನಡೆದಿರುವ ಸಾಕಷ್ಟು ಕಹಿ ಘಟನೆಗಳನ್ನು ಮರೆತು ಸ್ಪರ್ಧಾಳುಗಳೆಲ್ಲ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿದರು. ಬಿಗ್ ಬಾಸ್ ಕೊಟ್ಟ ಸಿಹಿಯನ್ನು ಹಂಚಿ ತಿಂದರು. ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಎಲ್ಲರೂ ನೆಲದ ಮೇಲೆ ಪಟ್ಟಾಗಿ ಕುಳಿತು ಬಾಳೆ ಎಲೆ ಮೇಲೆ ಮೃಷ್ಟಾನ್ನ ಭೋಜನ ಸವಿದರು. ಬೇವು ಬೆಲ್ಲ ಹಂಚಿ ಸಂಭ್ರಮಿಸಿದರು.

ವಿಜಯ ಸಂವತ್ಸರದಂದು ವಿಜಯ್‌ಗೆ ಸರ್ಪ್ರೈಸ್!

ಸಮಯ ಸಿಕ್ಕಾಗಲೆಲ್ಲ ಹೆಂಡತಿ, ಮಗ, ತಾಯಿಯನ್ನು ನೆನೆಸಿಕೊಂಡು ಭಾವುಕರಾಗಿ ಕಣ್ಣೀರುಗರೆಯುತ್ತಿದ್ದ ವಿಜಯ ರಾಘವೇಂದ್ರ ಅವರಿಗೆ ಅನಿರೀಕ್ಷಿತ ಸಂತೋಷ ಕಾದಿತ್ತು. ವೇದಿಕೆ ಮೇಲೆ ಅವರ ಹೆಂಡತಿ ಅಶ್ವಿನಿ ಮತ್ತು ಮಗನಿದ್ದ ಭಾವಚಿತ್ರವನ್ನು ತೋರಿದಾಗ ಮತ್ತು ಹೆಂಡತಿಯ ನಲ್ಮೆಯ ಮಾತುಗಳನ್ನು ಕೇಳಿಸಿಕೊಂಡಾಗ ಕಟ್ಟೆಯೊಡೆದ ಕಣ್ಣೀರನ್ನು ಅವರಿಂದ ತಡೆಯಲು ಸಾಧ್ಯವಾಗಲೇ ಇಲ್ಲ. ಹೆಂಡತಿ ಮಾತನಾಡುವಾಗ ಗಂಡ ಮಾತನಾಡುವಂತಿರಲಿಲ್ಲ. ಹಾಗಾಗಿ ಕೈಸನ್ನೆಯಿಂದಲೇ ತಮ್ಮೆಲ್ಲ ಪ್ರೀತಿಯನ್ನು ವಿಜಯ್ ಧಾರೆಯೆರೆದರು.

ಹೆಂಗ್ಸಿನ ಮೇಲೆ ಕೈ ಎತ್ತೋಕೆ ನಾಚ್ಕೆ ಆಗಲ್ವಾ?

ಸುರಅಸುರರ ಕಾದಾಟದಲ್ಲಿ ಋಷಿಕುಮಾರ ಹೆಂಗಸಿನ ಮೇಲೆ ಕೈಎತ್ತಿದ ಘಟನೆಯನ್ನು ಸುದೀಪ್ ತೀವ್ರ ಆಕ್ಷೇಪಿಸಿದರು. ಆಶೀರ್ವಾದ ಮಾಡಬೇಕಾದಂಥ ಕೈಯಿಂದ ಹೆಂಗಸಿನ ಮೇಲೆ ಕೈ ಎತ್ತಿದ್ದಕ್ಕೆ ನಾಚ್ಕೆ ಆಗಲ್ವಾ ಅಂತ ಸುದೀಪ್ ಕೇಳಿದ್ದಕ್ಕೆ, ನಾಚ್ಕೆ ಆಗಲ್ಲ ಎಂದು ಋಷಿಕುಮಾರ ಉತ್ತರಿಸಿದರು. ಇಂಥ ಘಟನೆ ಮತ್ತೆ ನಡೆದರೆ ಆ ಕ್ಷಣವೇ ಅವರನ್ನು ಮನೆಯಿಂದ ಹೊರದಬ್ಬುವ ಅಧಿಕಾರ ಬಿಗ್ ಬಾಸ್‌ಗೆ ಇದೆ ಎಂದು ಸುದೀಪ್ ಮುನ್ನೆಚ್ಚರಿಕೆ ನೀಡಿದರು. ಹಾಗೆಯೆ, ಬಿಗ್ ಬಾಸನ್ನು ಹೋಗೋ ಬಾರೋ ಎಂದು ಸಂಬೋಧಿಸುವ ಶರ್ಮಾಗೂ ಸುದೀಪ್ ಎಚ್ಚರಿಸಿದರು.

ಕೊನೆಗೆ ಎಲಿಮಿನೇಷನ್ ಸಮಯ ಬಂದಾಗ...

ಮೊದಲಿಗೆ ಸೇಫ್ ಆದವರು ವಿನಾಯಕ ಜೋಶಿ. ಕೆಲವೊಬ್ಬರು ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಅವರಿಗೆ ನಾನು ಪಾಠ ಕಲಿಸಿಯೇ ಇಲ್ಲಿಂದ ಹೋಗೋದು ಎಂದು ಜೋಶಿ ಪ್ರತಿಜ್ಞೆ ಮಾಡಿದರು. ನಂತರ ಉಳಿದಿದ್ದು ಚಂದ್ರಿಕಾ ಮತ್ತು ಶ್ವೇತಾ. ಒಬ್ಬರಿಗೊಬ್ಬರು ಯಾರು ತ್ಯಾಗಕ್ಕೆ ಸಿದ್ಧ ಎಂದಾಗ ಚಂದ್ರಿಕಾ ಅವರು ತಾವೇ ಶ್ವೇತಾಗಾಗಿ ತ್ಯಾಗ ಮಾಡುವುದಾಗಿ ಹೇಳಿ ಸುದೀಪ್ ಮನಗೆದ್ದರು. ಆದರೆ, ಕೊನೆಗೆ ಹೊರಹೋದದ್ದು ಬೆಳ್ಳಕ್ಕಿ ಶ್ವೇತಾ ಪಂಡಿತ್.

English summary
Kannada Bigg Boss day 19th highlights. Shwetha Padit has been eliminated from the Bigg Boss reality show. Swamijis Rishi Kumar and Narendra Babu Sharma were seen united in the kitchen. Vijaya Raghavendra was surprised by call from his wife.
Please Wait while comments are loading...