ಕನ್ನಡ ಮನರಂಜನೆ ವಾಹಿನಿಗಳ ಮಧ್ಯೆ ಬಿರುಸಿನ ಸ್ಪರ್ಧೆ

ಹಿಂದಿಯಲ್ಲಿ 'ಕಲರ್ಸ್' ವಾಹಿನಿಯನ್ನು ನಡೆಸುತ್ತಿರುವ 'ವಯಾಕಾಮ್' ಸಂಸ್ಥೆಯವರು ಈ ಟೀವಿ ಕನ್ನಡವನ್ನು ಕೊಂಡುಕೊಳ್ಳುವುದರೊಂದಿಗೇ ಈ ಸ್ಪರ್ಧೆ ಆರಂಭವಾಯಿತು ಎನಿಸುತ್ತದೆ. ಇದರಿಂದಾಗಿ ಈ ಟೀವಿ ಕನ್ನಡಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಒಂದು ಚಾನೆಲ್ ಬೆಂಬಲ ಸಿಕ್ಕಂತಾಯಿತು. ಇದಾಗಿ, ಸಂಸ್ಥೆಯ ಹಸ್ತಾಂತರದ ಕೆಲಸಕ್ಕೆ ತಿಂಗಳುಗಟ್ಟಲೇ ಸಮಯ ಹಿಡಿದು ಕೊನೆಗೂ ಈ ಟೀವಿ ಕನ್ನಡಕ್ಕೆ ಹೊಸ ಪ್ರೋಗ್ರಾಮಿಂಗ್ ಹೆಡ್ ಆಗಿ ಪರಮೇಶ್ವರ ಗುಂಡ್ಕಲ್ ಅವರು ನೇಮಕವಾಗಿದ್ದು ಈಗ ಹಳೆಯ ಸುದ್ದಿ.
ಕತೆಗಾರ, ಪತ್ರಕರ್ತ ಪರಮೇಶ್ವರ ಗುಂಡ್ಕಲ್ ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರೋಗ್ರಾಮಿಂಗ್ ಹೆಡ್ ಆಗಿದ್ದವರು. ಧಾರಾವಾಹಿಗಳಿಂದ ವೀಕ್ಷಕರನ್ನು ಸೆಳೆದುಕೊಳ್ಳಲು ಸಾಧ್ಯವಾಗದೇ ಜೀ ಕನ್ನಡ ಪರದಾಡುತ್ತಿದ್ದ ಸಂದರ್ಭದಲ್ಲಿ ಒಂದಾದ ಮೇಲೆ ಒಂದರಂತೆ ಗುಣಮಟ್ಟದ ಧಾರಾವಾಹಿಗಳನ್ನು ನೀಡಿದ (ಜೋಗುಳ, ಚಿ.ಸೌ. ಸಾವಿತ್ರಿ, ಪಾರ್ವತಿ ಪರಮೇಶ್ವರ, ದೇವಿ ಮತ್ತು ರಾಧಾ ಕಲ್ಯಾಣ) ಅವರು ಚಾನೆಲ್ಲಿನ ಕಾರ್ಯಕ್ರಮಗಳ ಗುಣಮಟ್ಟ ಮತ್ತು ಟಿಆರ್ ಪಿ ಯನ್ನು ಮೇಲಕ್ಕೆ ತೆಗೆದುಕೊಂಡು ಹೋದವರು. ಪ್ರತಿಭಾವಂತ ಪರಮೇಶ್ವರ್ ಗುಂಡ್ಕಲ್ ಮೇಲೆ ಕಣ್ಣಿಟ್ಟಿದ್ದ ವಯಾಕಾಮ್ ಸಂಸ್ಥೆಯವರು ಅವರನ್ನು ಈಗ ಈ ಟೀವಿ ಕನ್ನಡದ ಒಟ್ಟಾರೆ ಕಾರ್ಯಕ್ರಮ ವಿಭಾಗವನ್ನು ನೋಡಿಕೊಳ್ಳಲು ನೇಮಿಸಿದ್ದಾರೆ.
ಇದರ ಬೆನ್ನಲ್ಲೇ ಈಗ ಹೊಸದೊಂದು ಸುದ್ದಿ ಬಂದಿದೆ. ಅದೆಂದರೆ ಕನ್ನಡದ ಕೋಟ್ಯಾಧಿಪತಿ, ಪ್ಯಾಟೆ ಮಂದಿ ಕಾಡಿಗೆ ಬಂದ್ರು, ಹಳ್ಳಿ ಹೈದ ಪ್ಯಾಟೆಗೆ ಬಂದ ಇತ್ಯಾದಿ ಸೂಪರ್ ಹಿಟ್ ಕಾರ್ಯಕ್ರಮಗಳ ರೂವಾರಿ ರಾಘವೇಂದ್ರ ಹುಣಸೂರ್, ಈ ಟೀವಿ ಕನ್ನಡಕ್ಕೆ 'ನಾನ್ ಫಿಕ್ಶನ್' ಹೆಡ್' ಆಗಿ ಸೇರಿಕೊಂಡಿದ್ದಾರೆ. ಇದರಿಂದಾಗಿ ಈಟೀವಿ ಕನ್ನಡದ ಕಾರ್ಯಕ್ರಮ ವಿಭಾಗಕ್ಕೆ 'ಆನೆಬಲ' ಬಂದಂತಾಗಿದೆ. ಈ ಹಿಂದೆ ಸುವರ್ಣ ಚಾನೆಲ್ಲಿನ ಯಶಸ್ಸಿನ ಕತೆಗೆ ಮುಖ್ಯ ಕಾರಣರಾಗಿದ್ದವರು ಈ ರಾಘವೇಂದ್ರ ಹುಣಸೂರ್.
ಟಿಆರ್ ಪಿ ಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಸುವರ್ಣ ವಾಹಿನಿಯನ್ನು ಎರಡನೇ ಸ್ಥಾನಕ್ಕೆ ತಂದಿದ್ದರ ಯಶಸ್ಸು ಖಂಡಿತವಾಗಿಯೂ ರಾಘವೇಂದ್ರ ಹುಣಸೂರ್ ಅವರಿಗೆ ಸಲ್ಲಬೇಕು. ಕನ್ನಡದಲ್ಲಿ ಬಂದ ರಿಯಾಲಿಟಿ ಶೋಗಳಿಗೆ ಹೊಸ ವ್ಯಾಖ್ಯಾನ ಬರೆದವರು ಈ ರಾಘವೇಂದ್ರ ಹುಣಸೂರು. 'ಪ್ಯಾಟೆ ಮಂದಿ...' ಸರಣಿಯ ಜನಪ್ರಿಯತೆ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದು ಇಡೀ ಕನ್ನಡದ ರಿಯಾಲಿಟಿ ಶೋಗಳಿಗೆ ಮರುವ್ಯಾಖ್ಯಾನ ನೀಡಿತು ಎಂದರೆ ಯಾವುದೇ ತಪ್ಪಿಲ್ಲ. ಸುವರ್ಣ ಚಾನೆಲ್ ಈಗ ಧಾರಾವಾಹಿಗಳಿಂದ ಜನಪ್ರಿಯ ಆಗಿರಬಹುದಾದರೂ ಅದಕ್ಕೆ ಸರಿಯಾದ ವೇದಿಕೆ ಕಲ್ಪಿಸಿಕೊಟ್ಟಿದ್ದು ರಾಘವೇಂದ್ರ ಅವರ ರಿಯಾಲಿಟಿ ಶೋಗಳು ಎನ್ನುವುದು ಎಲ್ಲರೂ ಗಮನಿಸಬೇಕಾದ ಅಂಶ.
ಈ ಬೆಳವಣಿಗೆಗಳ ಜೊತೆಯಲ್ಲಿ ಇನ್ನೊಂದಿಷ್ಟು ಜನ ಪ್ರತಿಭಾವಂತರು ಈ ಟೀವಿ ಸೇರಿಕೊಳ್ಳಲಿದ್ದಾರೆ ಎನ್ನುತ್ತಿವೆ ನಮ್ಮ ಸುದ್ದಿ ಮೂಲಗಳು. ಪರಮೇಶ್ವರ ಗುಂಡ್ಕಲ್ ಅವರ ನಿರ್ಗಮನದ ನಂತರ ಜೀ ಕನ್ನಡ ವಾಹಿನಿ ಅವರ ಜಾಗಕ್ಕೆ ಯಾರನ್ನೂ ನೇಮಿಸಿಲ್ಲ. ಬದಲಾಗಿ ಧಾರಾವಾಹಿಗಳ ವಿಭಾಗ ನೋಡಿಕೊಳ್ಳುವುದಕ್ಕೆ ಧಾರಾವಾಹಿಗಳಲ್ಲಿ ನಟಿಸಿ ಅನುಭವ ಇರುವ ಕಿಶೋರ್ ಆಚಾರ್ಯ ಅವರನ್ನು ಅದು ನೇಮಕ ಮಾಡಿದೆ. ಪ್ರೋಗ್ರಾಮಿಂಗ್ ಹೆಡ್ ನಿರ್ಗಮನದ ನಂತರ ಕೊಂಚ ಗೊಂದಲಗೊಂಡಂತೆ ಕಾಣಿಸುತ್ತಿರುವ ಜೀ ಕನ್ನಡದ ಧಾರಾವಾಹಿಗಳನ್ನು ಸರಿ ಮಾಡುವ ಜವಾಬ್ದಾರಿ ಈಗ ಬಂದಿರುವ ಕಿಶೋರ್ ಆಚಾರ್ಯ ಮೇಲಿದೆ. ಮುಂದಿನ ಪುಟ ನೋಡಿ...


Click it and Unblock the Notifications











