»   » 'ಕನ್ನಡದ ಕೋಟ್ಯಾಧಿಪತಿ 2', ಏನಂತಾರೆ ಪುನೀತ್?

'ಕನ್ನಡದ ಕೋಟ್ಯಾಧಿಪತಿ 2', ಏನಂತಾರೆ ಪುನೀತ್?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತೆ ಹಾಟ್ ಸೀಟ್‌ಗೆ ಮರಳಿದ್ದಾರೆ. ಈ ಸಲವಾದರೂ ಯಾರಾದರು ಒಂದು ಕೋಟಿ ರುಪಾಯಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸ ಅವರಿಗಿದೆ. ಇದೇ ಮಾರ್ಚ್ 11, 2013ರಿಂದ ಕನ್ನಡಿಗರ ಮೆಚ್ಚಿನ ಸುವರ್ಣ ವಾಹಿನಿಯಲ್ಲಿ 'ಸನ್ ಫಿಸ್ಟ್ ಕನ್ನಡದ ಕೋಟ್ಯಾಧಿಪತಿ 2' ಆರಂಭವಾಗುತ್ತಿದೆ. ಸೋಮವಾರದಿಂದ ಗುರುವಾರದವರೆಗೆ ರಾತ್ರಿ 8 ಗಂಟೆಗೆ ಬದುಕು ಬದಲಾಯಿಸುವ ಪ್ರಶ್ನೆಗಳೊಂದಿಗೆ ಪುನೀತ್ ವೀಕ್ಷಕರ ಮುಂದೆ ಬರುತ್ತಿದ್ದಾರೆ.

ಹೋಟೆಲ್ ಅಶೋಕ್‌ದಲ್ಲಿ ಮಾರ್ಚ್ 4ರಂದು ನಡೆದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಪುನೀತ್ ಮಾತನಾಡುತ್ತಾ, ಸೀನನ್ ಒಂದರ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆ. ನನ್ನ ಕೈಯೊಬ್ಬರು ನನ್ನ ಬಾಯೊಬ್ಬರು ಎಂದು. ಅದೇ ಮಾತನ್ನು ಈಗಲೂ ಹೇಳುತ್ತಿದ್ದೇನೆ. ಈ ಶೋನ ಸ್ಕ್ರೀನ್ ಮೇಲೆ ಬರೋದು ಮಾತ್ರ ನಾನು. ಇದರ ಹಿಂದೆ 140 ಜನರ ಶ್ರಮವಿದೆ ಎಂದರು.

ನನ್ನ ಕಿವಿ ಓಪನ್ ಆಗಿದೆ. ಯಾರು ಏನು ಬೇಕಾದರು ಅಡ್ವೈಸ್ ಕೊಡಬಹುದು. ಕಾರ್ಯಕ್ರಮ ಚೆನ್ನಾಗಿ ಬರಬೇಕು. ಮೊದಲ ಕಾರ್ಯಕ್ರಮ ಬಂತು. ಒಂದು ರೀತಿಯಾಗಿ ಎಲ್ಲರೂ ಒಪ್ಪಿಕೊಂಡರು. ನಾವು ನಂಬಿಕೊಂಡಿರುವಂತಹ ಅಭಿಮಾನಿ ದೇವರುಗಳು ಒಪ್ಪಿಕೊಂಡರು. ಅದಕ್ಕಿಂತ ಹೆಚ್ಚಾಗಿ ಮಾಧ್ಯಮಳಲ್ಲಿ ಇದರ ಬಗ್ಗೆ ಒಳ್ಳೆಯ ರಿಪೋರ್ಟ್ ಬಂತು. ಪ್ರತಿಯೊಬ್ಬರು ಮೆಚ್ಚಿಕೊಂಡರು. ಈ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ತುಂಬ ಸಂತೋಷವಾಯಿತು...

ಎಲ್ಲೋ ಒಂದು ಕಡೆ ನಮ್ಮ ತಂದೆಯವರು ಆಶೀರ್ವಾದ ಮಾಡಿದರು. ಜೊತೆಗೆ ಅಭಿಮಾನಿಗಳು ಆಶೀರ್ವದಿಸಿದರು. ಈ ಬಾರಿಯ ಕಾರ್ಯಕ್ರಮದಲ್ಲಿ ತುಂಬ ಬದಲಾವಣೆಗಳಿರುವುದಿಲ್ಲ. ಅದೇ ಕಾರ್ಯಕ್ರಮ, ಹೊಸ ಪ್ರಶ್ನೆಗಳು. ಯಾರ ಜೀವನವನ್ನು ನಾವು ಚೇಂಜ್ ಮಾಡಲ್ಲ. ಅವರ ಜೀವನವನ್ನು ಅವರು ಚೇಂಜ್ ಮಾಡಿಕೊಳ್ತಾರೆ. ಸ್ಪರ್ಧಿಗಳಿಗೆ ಸ್ಫೂರ್ತಿ ತುಂಬುವುದಕ್ಕಿಂತಲೂ ಹೆಚ್ಚಾಗಿ ಅವರ ಜೊತೆ ಸ್ನೇಹಿತನಾಗಿ ಇದ್ದುಬಿಡುವುದು ಹೆಚ್ಚು ಸಂತೋಷ ಕೊಡುತ್ತದೆ. ಅವರು ಹೆಚ್ಚು ಹೆಚ್ಚು ದುಡ್ಡು ಗೆದ್ದದ್ದಷ್ಟು ನನಗೆ ಹೆಚ್ಚು ಹೆಚ್ಚು ಖುಷಿಯಾಗುತ್ತದೆ. ಆಫ್ ಕೋರ್ಸ್ ನನ್ನ ದುಡ್ಡಲ್ಲ ಅದು. ಚಾನಲ್ ನವರು ಕೊಡ್ತಾರೆ ಎಂದು ಮುಗುಳ್ನಕ್ಕರು.

ಪ್ರಚಾರಕ್ಕಾಗಿಯೇ 5ರಿಂದ 6 ಕೋಟಿ ಖರ್ಚು!

ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರ್ ಮಾತನಾಡುತ್ತಾ, ಕರ್ನಾಟಕದ ಬೃಹತ್ ರಿಯಾಲಿಟಿ ಶೋ ಪುನಃ ಪ್ರಾರಂಭಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಈ ಬಾರಿಯ ಅವೃತ್ತಿಯು ಕರ್ನಾಟಕದ ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಬಿಂಬಿಸುವಂತಿದ್ದು ನಾಡಿನ ಹೆಮ್ಮೆಯನ್ನು ಮೆರೆಯುವಂತಿದೆ. ಕುಟುಂಬ ಸಮೇತ ಕಾರ್ಯಕ್ರಮವನ್ನು ನೋಡುವ ಜ್ಞಾನ ಹಾಗೂ ಮನರಂಜನೆ ನೀಡುವ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮದ ಪ್ರಚಾರಕ್ಕಾಗಿಯೇ ರು.5ರಿಂದ 6 ಕೋಟಿ ಖರ್ಚು ಮಾಡುತ್ತಿದ್ದೇವೆ. ಪೋಸ್ಟರ್‌ಗಳ ಮೂಲಕ, ಮಾಲ್‌ಗಳಲ್ಲಿ, ರೇಡಿಯೋಗಳಲ್ಲಿ ಹಾಗೂ ಪ್ರಿಂಟ್ ಮಾಧ್ಯಮಗಳಲ್ಲಿ ಪ್ರಚಾರ ನೀಡಲಿದ್ದೇವೆ ಎಂದರು.

ಪ್ರತಿ ವಾರವೂ ಒಂದೊಂದು ಜಿಲ್ಲೆಗೆ ಅರ್ಪಣೆ

"ಬದುಕು ಬದಲಾಯಿಸುವ ಪ್ರಶ್ನೆಗಳು" ಎಂಬುದು ಈ ಬಾರಿಯ ಟ್ಯಾಗ್ ಲೈನ್. ಪ್ರತಿ ವಾರದ ಎಪಿಸೋಡನ್ನು ಒಂದೊಂದು ಜಿಲ್ಲೆಗೆ ಅರ್ಪಿಸಲಿದ್ದೇವೆ. ಹಾಗೆಯೇ ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಯುಗಾದಿ ಸ್ಪೆಷಲ್ ಎಫಿಸೋಡ್ ಸೇರಿದಂತೆ ಹಲವು ಆಕರ್ಷಣೆಗಳಿರುತ್ತವೆ.

ಮೊದಲ ಸಂಚಿಕೆ ಬೀದರ್ ಜಿಲ್ಲೆಗೆ ಅರ್ಪಣೆ

ಮೊದಲ ವಾರದ ಕಂತು ಬೀದರ್ ಜಿಲ್ಲೆಗೆ ಅರ್ಪಣೆ. ಕಾರ್ಯಕ್ರಮದಲ್ಲಿ ಆಯಾ ಜಿಲ್ಲೆಗಳ ಬಗ್ಗೆ ಆಸಕ್ತಿದಾಯವಾದ ವಿಚಾರಗಳನ್ನು ತಿಳಿಸಲಿದ್ದೇವೆ. ಉದಾಹರಣೆಗೆ ಹೇಳಬೇಕು ಎಂದರೆ, ರಾಯಚೂರಿನಲ್ಲಿ ಗುರು ರಾಘವೇಂದ್ರರು ತಪಸ್ಸು ಮಾಡಿದ್ದರು ಎಂಬ ಸಂಗತಿ ಬಹಳಷ್ಟು ಮಂದಿಗೆ ತಿಳಿದಿರಲ್ಲ. ಈ ರೀತಿಯ ಎಷ್ಟೋ ವಿಚಾರಗಳನ್ನು ಈ ಬಾರಿ ಶೋನಲ್ಲಿ ನೋಡಬಹುದು ಎಂದರು ಸುವರ್ಣ ವಾಹಿನಿಯ ನಾನ್ ಫಿಕ್ಷನ್ ಹೆಡ್ ತ್ಯಾಗರಾಜ್.

ಪ್ರಶ್ನೆಗಳ ಹಂಚಿಕೆ ಈ ರೀತಿ ಇರುತ್ತದೆ

ಈ ಬಾರಿಯ ಶೋಗೆ ಒಟ್ಟು 1,200 ಜನ ಆಯ್ಕೆಯಾಗಿದ್ದಾರೆ. ಶೇ.50ರಷ್ಟು ಪ್ರಶ್ನೆಗಳು ಕರ್ನಾಟಕಕ್ಕೆ ಸಂಬಂಧಿಸಿದಂತೆ, ಶೇ.10 ಸಾಮಾನ್ಯ ಜ್ಞಾನ, ಶೇ.20 ಭಾರತಕ್ಕೆ ಸಂಬಂಧಿಸಿದಂತೆ, ಶೇ.10 ಪ್ರಚಲಿತ ಘಟನೆಗಳು ಹಾಗೂ ಉಳಿದ ಶೇ.10 ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಪ್ರಶ್ನೆಗಳಿರುತ್ತವೆ. ಈ ಕಾರ್ಯಕ್ರಮಕ್ಕೆ ಸ್ಕ್ರಿಪ್ಟ್ ಬರೆದವರು ರಘು ಸಂಪತ್ ಎಂದು ವಿವರ ನೀಡಿದರು.

ಕರುನಾಡಿನ ಕಲೆ, ಸಂಸ್ಕೃತಿಗೆ ಪ್ರಾಧಾನ್ಯತೆ

ಈ ಬಾರಿಯ 'ಕನ್ನಡದ ಕೋಟ್ಯಾಧಿಪತಿ ಸೀಸನ್ 2'ರ ರೂಪರೇಷೆ ಹಾಗೂ ಶೈಲಿಗಳೆಲ್ಲವೂ ಕಳೆದ ಆವೃತ್ತಿಯಂತೆಯೇ ಇರುತ್ತವೆ. ವಿಶೇಷವಾಗಿ ಈ ದ್ವಿತೀಯ ಆವೃತ್ತಿಯಲ್ಲಿ ಕರುನಾಡಿನ ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ.

ಕಾರ್ಯಕ್ರಮದ ಸ್ಪಾರ್ನರ್ಸ್ ಯಾರು?

ಈ ಕಾರ್ಯಕ್ರಮಕ್ಕೆ ಟೈಟಲ್ ಸ್ಪಾನ್ಸರ್ ಸನ್‌ಫಿಸ್ಟ್, ಟೆಕ್ನಾಲಜಿ ಪಾರ್ಟ್ನರ್ ನ್ಯೂಜನ್ , ಬ್ಯಾಂಕಿಂಗ್ ಪಾರ್ಟ್ನರ್ ವಿಜಯಾ ಬ್ಯಾಂಕ್ ಹಾಗೂ ರೇಡಿಯೋ ಪಾರ್ಟ್ನರ್ 92.7 ಬಿಗ್ ಎಫ್‌ಎಂ. ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಅಧ್ಯಾಯ ಬರೆದ ಸ್ಟಾರ್ ನೆಟ್‌ವರ್ಕ್ಸ್‌ನ ಮನರಂಜನಾ ಚಾನಲ್ ಸುವರ್ಣ ವಾಹಿನಿಯ ಬೃಹತ್ ರಿಯಾಲಿಟಿ ಶೋ ಕನ್ನಡದ ಕೋಟ್ಯಾಧಿಪತಿ.

ಪುನೀತ್ ಅದೇ ಹುಮ್ಮಸ್ಸು ವಿಶ್ವಾಸ

ಪುನೀತ್ ಅವರು ನಡೆಸಿಕೊಟ್ಟ ಮೊದಲ ಆವೃತ್ತಿ ಅದ್ಭುತ ಯಶಸ್ಸು ದಾಖಲಿಸಿದ್ದು, ಈಗ ಅದೇ ಹುಮ್ಮಸ್ಸು, ವಿಶ್ವಾಸದಲ್ಲಿ ದ್ವಿತೀಯ ಆವೃತ್ತಿ ಆರಂಭವಾಗುತ್ತಿದೆ. ಜಗತ್ಪ್ರಸಿದ್ಧ "Who Wants to be a Millionaire" ಕಾರ್ಯಕ್ರಮವನ್ನಾಧರಿಸಿ ರೂಪಿಸಿರುವ ಹಾಗೂ ನಮ್ಮ ದೇಶದಲ್ಲಿ ಹಿಂದಿ ಭಾಷೆಯ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮವಾಗಿ ಪ್ರಚಲಿತವಾದ ಕಾರ್ಯಕ್ರಮ.

ಬದುಕು ಬದಲಾಯಿಸುವ ಪ್ರಶ್ನೆಗಳು

ಕನ್ನಡದ ಕೋಟ್ಯಾಧಿಪತಿ ಸೀಸನ್ 2ರ ಟ್ಯಾಗ್ ಲೈನ್ "ಬದುಕು ಬದಲಾಯಿಸುವ ಪ್ರಶ್ನೆಗಳು". ಈ ರಿಯಾಲಿಟಿ ಶೋಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ ಹೋಟೆಲ್ ಅಶೋಕದಲ್ಲಿಸೋಮವಾರ (ಮಾ.4) ನಡೆಯಿತು. ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು ಪುನೀತ್ ರಾಜ್ ಕುಮಾರ್. ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನೂಪ್ ಚಂದ್ರಶೇಖರ್, ಬಿಗ್ ಸಿನರ್ಜಿಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ್ ಬಸು ಹಾಗೂ ರಾಘವೇಂದ್ರ ರಾಜ್ ಕುಮಾರ್ ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಕೇಳಿಬಂದ ಕೆಲವು ಪ್ರಶ್ನೆಗಳು

ಪ್ರಶ್ನೆ: ಮಾರ್ಚ್ 11ಕ್ಕೆ ಕಾರ್ಯಕ್ರಮ ಶುರುವಾಗುತ್ತಿದೆ ಆದರೆ ಏಪ್ರಿಲ್ 1ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಾಗೂ ಮಾರ್ಚ್ 13ಕ್ಕೆ ಪಿಯುಸಿ ಪರೀಕ್ಷೆಗಳು ಶುರುವಾಗುತ್ತಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲವೆ?

ಉತ್ತರ: ಕಳೆದ ವರ್ಷವೂ ಇದೇ ಸಮಯಕ್ಕೆ ಸೀಸನ್ 1 ಆರಂಭವಾಗಿತ್ತು. ಆದರೆ ಕಾರ್ಯಕ್ರಮ ಅಂದೇ ನೋಡಬೇಕು ಎಂದೇನು ಇಲ್ಲ. ವೀಕೆಂಟ್ ನಲ್ಲಿ ಪುನಃ ಪ್ರಸಾರವಾಗುತ್ತದೆ. ಸಂಜೆ 6ರಿಂದ8ರವರೆಗೆ ವಿದ್ಯಾರ್ಥಿಗಳು ಓದಿಕೊಳ್ಳಲಿ. ಬಳಿಕ 8ಕ್ಕೆ ಕಾರ್ಯಕ್ರಮ ವೀಕ್ಷಿಸಬಹುದು. ಈ ಶೋವನ್ನು ಇದೇ ಸಮಯದಲ್ಲಿ ಪ್ರಸಾರ ಮಾಡಬೇಕು ಎಂಬ ನಿಬಂಧನೆ ನಮಗಿದೆ. ಹಾಗಾಗಿ ಪ್ರಸಾರದ ವೇಳೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದರು ಅನೂಪ್ ಚಂದ್ರಶೇಖರ್. ಹಾಗೆಯೇ ನವೆಂಬರ್, ಡಿಸೆಂಬರ್ ನಲ್ಲೂ ಪ್ರಸಾರ ಮಾಡುವಂತೆಯೂ ಇಲ್ಲ. ಆಗ ಇದೇ ಕಾರ್ಯಕ್ರಮದ ರಾಷ್ಟ್ರ ಮಟ್ಟದಲ್ಲಿ ಪ್ರಸಾರವಾಗುತ್ತಿರುತ್ತದೆ ಎಂದರು ಅನೂಪ್.

ಈ ಕಾರ್ಯಕ್ರಮದ ರೇಟಿಂಗ್ ಹೇಗಿದೆ?

ದಕ್ಷಿಣ ಭಾರತದಲ್ಲಿ ಟಾಪ್ ರ್‍ಯಾಂ ಕಿಂಗ್ ನಲ್ಲಿದೆ. ತಮಿಳು, ಮಲಯಾಳಂ ಭಾಷೆಯ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಹೋಲಿಸಿದರೆ ಕನ್ನಡದ ಕೋಟ್ಯಾಧಿಪತಿ ನಂಬರ್ ಒನ್ ಸ್ಥಾನದಲ್ಲಿದೆ. ಶೇ.81ರಷ್ಟು ಕನ್ನಡ ಕಿರುತೆರೆ ವೀಕ್ಷಕರು ಈ ಕಾರ್ಯಕ್ರಮವನ್ನು ನೋಡಿದ್ದಾರೆ. ಕನಿಷ್ಠ ಒಮ್ಮೆಯಾದರೂ ಈ ಕಾರ್ಯಕ್ರಮವನ್ನು11.3 ದಶಲಕ್ಷ ಮಂದಿ ವೀಕ್ಷಿಸಿದ್ದಾರೆ. ಕರ್ನಾಟಕದಲ್ಲೇ ನಂಬರ್ ಒನ್ ಶೋ ಎಂದು ಅನೂಪ್ ವಿವರ ನೀಡಿದರು.

ಸೀಸನ್ ಒಂದಕ್ಕೂ ಎರಡರಲ್ಲಿನ ನಿಮ್ಮ ಅನುಭವಗೇಳು?

ಮೊದಲನೆ ಸೀಸನ್ ನಲ್ಲಿ ತುಂಬಾ ಅಲ್ಲಾಡಿ ಹೋಗಿದ್ದೆ. ಎರಡನೇ ಸೀಸನ್ ನಲ್ಲಿ ಸುಧಾರಿಸಿಕೊಂಡಿದ್ದೇನೆ. ಒಂದು ವಾರ ಟೆನ್ಷನ್ ಇತ್ತು. ಬರುಬರುತ್ತಾ ಎಲ್ಲರೂ ಸ್ನೇಹಿತರಂತಾದರು. ಈಗ ಇನ್ನೂ ಕಂಫರ್ಟಬಲ್ ಆಗಿದ್ದೇನೆ. ಮೊದಲ ಶೋನಲ್ಲಿ ನನಗಿದ್ದ ಸಾಮಾನ್ಯ ಜ್ಞಾನಕ್ಕೂ ಈಗಿನದ್ದೂ ಹೋಲಿಸಲಿಕ್ಕೆ ಆಗಲ್ಲ. ನನಗೆ ಪುಸ್ತಕ ಓದುವ ಅಭ್ಯಾಸ ಇರಲಿಲ್ಲ. ಈ ಕಾರ್ಯಕ್ರಮ ಮೂಲಕ ಪುಸ್ತಕಗಳನ್ನು ಓದಲು ಶುರು ಮಾಡಿದೆ. ಸಾಮಾನ್ಯಜ್ಞಾನವನ್ನು ಬೆಳೆಸಿಕೊಳ್ಳಲು ಆರಂಭಿಸಿದೆ.

ನನಗೆ ಟೆಕ್ನಾಲಜಿಗೆ ಸಂಬಂಧಿಸಿದಂತೆ ಪ್ರಶ್ನೆಗಳು ಇಷ್ಟ. ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಗೊತ್ತಿರುತ್ತದೆ. ನನಗೆ ಗೊತ್ತಿರುತ್ತದೆ ಎದು ಸ್ಪರ್ಧಿಗಳಿಗೆ ಗೊತ್ತಿರಲ್ಲ. ಹಾಗೆಯೇ ಈ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಗುರೂಜಿ ಯಾರು ಎಂಬುದು ನನಗೂ ಇದುವರೆಗೂ ಗೊತ್ತಿಲ್ಲ.

ರಾಘಣ್ಣ ಅವರೇ ಈ ಕಾರ್ಯಕ್ರಮಕ್ಕೆ ನಿಮ್ಮ ಸಹಕಾರ ಎಷ್ಟಿದೆ?

ಏನೂ ಇಲ್ಲ. ಇಲ್ಲಿ ಬರೋದಿಕ್ಕೆ ನನಗೊಂದು ಅವಕಾಶ ಕೊಟ್ಟಿದ್ದಾರೆ. ಅದು ಅವರ ದೊಡ್ಡತನ. ಇನ್ನೊಂದು ವಿಶೇಷ ಎಂದರೆ ಈ ಶೋ ಯಾವ ಯಾವ ಚಾನಲ್‌ಗೆ ಹುಡುಕಿಕೊಂಡು ಹೋಗಿದೆ, ಆ ಚಾನಲ್ ನೆಕ್ಟ್ಸ್ ಲೆವೆಲ್ ಗೆ ಹೋಗಿದೆ. ಈ ಶೋ ನೋಡುತ್ತಿದ್ದರೆ ಅದರದೇ ಒಂದು ಡ್ರಾಮಾ ಇದೆ. ಟ್ರ್‍ಯಾಜಿಡಿ, ಎಮೋಷನ್ ಇದೆ. ಶೋ ನೋಡುತ್ತಿರುವಷ್ಟೂ ಹೊತ್ತೂ ತುಂಬಾ ಸಂತೋಷವಾಗಿರುತ್ತದೆ ಎಂದರು ರಾಘವೇಂದ್ರ ರಾಜ್ ಕುಮಾರ್.

ಪ್ರೆಸ್ ಮೀಟ್ ನಲ್ಲಿ ನೆಲ ನಡುಗಿದ ಅನುಭವ!

ರಾಘಣ್ಣ ಮಾತು ಮುಗಿಸುವ ಸಮಯಕ್ಕೆ ಅದ್ಯಾಕೋ ನೆಲ ನಡುಗುವ ಅನುಭವವಾಯಿತು. ಇದನ್ನು ಮೊದಲು ಗಮನಕ್ಕೆ ತಂದವರೇ ಪುನೀತ್. ಅಶೋಕ ಹೋಟೆಲ್ ನಲ್ಲಿ ಅದೇನಾಯಿತೋ ಏನೋ, ಜನರೇಟರ್ ಚಾಲನೆ ಮಾಡಿದ್ದಕ್ಕೋ ಏನೋ ನೆಲ ನಡುಗಿದ ಅನುಭವಾಗಿ ಎಲ್ಲರೂ ಕ್ಷಣಕಾಲ ತಬ್ಬಿಬ್ಬಾದರು. ಅಲ್ಲಿಗೆ ಕಾರ್ಯಕ್ರವೂ ಬರಖಾಸ್ತ್ ಆಗಿತ್ತು.

English summary
After the phenomenal success of the first season of Sunfeast Kannadada Kotyadhipathi (KK) Star Network's Kannada General Entertainment channel Suvarna announced the launch date of its second season. The show goes on air from 11th March - 8 PM onwards. This will be aired from Monday - Thursday on Suvarna Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada