»   » 'ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!

'ಇವರು'ಗಳ ಮೇಲೆ ಮಾತ್ರ ಕನ್ನಡ ನಿರ್ಮಾಪಕರ ಸಿಡುಕು-ಮುನಿಸು.!

Posted By: ಭರತ್ ಕುಮಾರ್
Subscribe to Filmibeat Kannada

'ರಿಯಾಲಿಟಿ ಶೋ'ಗಳಂದ್ರೆ ಸಾಕು, ನಿರ್ಮಾಪಕರ ಕಣ್ಣು ಕೆಂಪಗಾಗುತ್ತೆ, ತಲೆ ಬಿಸಿ ಜಾಸ್ತಿ ಆಗುತ್ತೆ. ಹಾಗೆ, 'ರಿಯಾಲಿಟಿ ಶೋ'ಗಳ ವಿರುದ್ಧ ಏಕ್ದಂ ಪಿತ್ತ ನೆತ್ತಿಗೇರಿಸಿಕೊಂಡ ಪ್ರೊಡ್ಯೂಸರ್ ಗಳು ಕಳೆದ ವರ್ಷ ಬೀದಿಗಳಿದು ಪ್ರತಿಭಟನೆ ನಡೆಸಿದ್ರು, ಸರಣಿ ಉಪವಾಸ ಕೈಗೊಂಡಿದ್ದರು. ಕರ್ನಾಟಕ ಸರ್ಕಾರ ಮಧ್ಯ ಪ್ರವೇಶಿಸಿದ ಕಾರಣ 'ವಿವಾದ' ತಣ್ಣಗಾಗಿತ್ತು. ಆದ್ರೀಗ ಮತ್ತೊಮ್ಮೆ ನಿರ್ಮಾಪಕರು ಸಿಡಿದೆದ್ದಿದ್ದಾರೆ.

'ಬಿಗ್‌ ಬಾಸ್ ಕನ್ನಡ 4' ಶುರು ಆಗಲು ದಿನಗಣನೆ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕೆಲ 'ಸ್ಟಾರ್' ನಟರ ವಿರುದ್ಧ ತೊಡೆ ತಟ್ಟಿ ನಿಲ್ಲಲು ನಿರ್ಮಾಪಕರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. [ಈ ರೀಲ್ 'ಹೀರೋ'ಗಳೇ ನಿರ್ಮಾಪಕರಿಗೆ 'ವಿಲನ್'ಗಳು.!]

ನಿರ್ಮಾಪಕರ ಕೆಂಗಣ್ಣಿಗೆ ಗುರಿಯಾಗಿರುವ 'ರಿಯಾಲಿಟಿ ಶೋ' ಮತ್ತು ಅದರಲ್ಲಿ ಭಾಗವಹಿಸುತ್ತಿರುವ ಕನ್ನಡ ತಾರೆಯರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿರಿ....

ಸುದೀಪ್ ಮತ್ತು 'ಬಿಗ್ ಬಾಸ್'

ಕನ್ನಡ ಕಿರುತೆರೆಯಲ್ಲಿ 'ಬಿಗ್ ಬಾಸ್' ಈಗಾಗಲೇ ಜನಪ್ರಿಯತೆ ಗಳಿಸಿದೆ. ಈ ರಿಯಾಲಿಟಿ ಶೋನ, ಕಳೆದ ಮೂರು ವರ್ಷಗಳಿಂದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹೋಸ್ಟ್ ಮಾಡುತ್ತಾ ಬಂದಿದ್ದಾರೆ. ಇದೇ ತಿಂಗಳ 9 ರಂದು 'ಬಿಗ್ ಬಾಸ್ ಕನ್ನಡ 4' ಗೆ ಅದ್ಧೂರಿ ಚಾಲನೆ ಸಿಗಲಿದೆ. ಟಿ.ಆರ್.ಪಿ ರೇಟಿಂಗ್ ನಲ್ಲಿ ಸದಾ ಮುಂಚೂಣಿ ಕಾಯ್ದುಕೊಂಡಿರುವ 'ಬಿಗ್ ಬಾಸ್' ಮೇಲೆ ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರು ಮುನಿಸಿಕೊಂಡಿದ್ದಾರೆ. [ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

'ಬಿಗ್ ಬಾಸ್' ಶುರು ಆದ್ರೆ, ಸೆಕೆಂಡ್ ಶೋ ಖಾಲಿ

ಪ್ರತಿದಿನ 9 ಗಂಟೆಗೆ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರವಾಗಲಿದೆ. ಮೂರು ತಿಂಗಳು ಈ ಶೋ ಸತತವಾಗಿ ನಡೆಯುವುದರಿಂದ, ಚಿತ್ರಮಂದಿರಗಳಲ್ಲಿ ಪ್ರತಿದಿನ ಸೆಕೆಂಡ್ ಶೋ ಮತ್ತು ನೈಟ್ ಶೋ ಖಾಲಿ ಹೊಡೆಯಲಿವೆ ಎಂಬುದು ನಿರ್ಮಾಪಕರ ಆತಂಕ.

'ಕಿಕ್' ಮತ್ತು ಶಿವಣ್ಣ

'ನಿರ್ಮಾಪಕರ ಡಾರ್ಲಿಂಗ್' ಅಂತ ಕರೆಯಿಸಿಕೊಳ್ಳುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಉದಯ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್‌ ರಿಯಾಲಿಟಿ ಶೋ 'ಕಿಕ್‌' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾದರೂ ಯಾಕೆ ಎಂಬುದು ನಿರ್ಮಾಪಕರ ಪ್ರಶ್ನೆ. ಸಾಲದಕ್ಕೆ ಇದೇ ಶೋನಲ್ಲಿ ನಟಿ ರಚಿತಾ ರಾಮ್‌ ಹಾಗೂ ನೃತ್ಯ ಸಂಯೋಜಕ ಹರ್ಷ ಕೂಡ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೂ ಪ್ರೊಡ್ಯೂಸರ್ ಗಳಿಗೆ ಕೋಪ ಇದೆ.

'ಡ್ಯಾನ್ಸಿಂಗ್ ಸ್ಟಾರ್‌' ಮತ್ತು ರವಿಚಂದ್ರನ್

ಕಾರ್ಮಿಕರ ವೇತನ ಸಮಸ್ಯೆ ಸೇರಿದಂತೆ ಕನ್ನಡ ಚಿತ್ರರಂಗದ ಕೆಲ ಸಮಸ್ಯೆಗಳಿಗೆ ಪರಿಹಾರ ಸೂತ್ರ ಕಂಡು ಹಿಡಿಯುವ ರವಿಚಂದ್ರನ್, ಕಲರ್ಸ್ ಕನ್ನಡ ವಾಹಿನಿಯ 'ಡ್ಯಾನ್ಸಿಂಗ್ ಸ್ಟಾರ್' ಕಾರ್ಯಕ್ರಮದಲ್ಲಿ ಸತತವಾಗಿ ತೀರ್ಪುಗಾರರ ಖುರ್ಚಿ ಮೇಲೆ ಕೂತಿರುವುದು ನಿರ್ಮಾಪಕರಿಗೆ ಬೇಸರವಾಗಿದೆ. ಇನ್ನೂ ಇದೇ ಶೋನಲ್ಲಿ ನಟಿ ಪ್ರಿಯಾಮಣಿ ಕೂಡ ಜಡ್ಜ್ ಅಂತ ನಿಮಗೆ ಗೊತ್ತಲ್ವಾ?

ವೀಕೆಂಡ್ ವಿತ್ 'ರಮೇಶ್‌'

ಜೀ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗಿರುವ ನಟ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್‌' ಕಾರ್ಯಕ್ರಮದ ಎರಡು ಸೀಸನ್ ಗಳೂ ಹಿಟ್ ಆಗಿವೆ. ಮೂರನೇ ಆವೃತ್ತಿ ಸದ್ಯದಲ್ಲೇ ಶುರುವಾಗಲಿದೆ. ಈ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಬೇಕು, ಇಲ್ಲ ಅಂದ್ರೆ, ಜೀ ಕನ್ನಡ ವಾಹಿನಿ ವರ್ಷಕ್ಕೆ 25 ಕನ್ನಡ ಚಿತ್ರಗಳನ್ನ ಕೊಂಡುಕೊಳ್ಳಬೇಕು ಎಂಬುದು ನಿರ್ಮಾಪಕರ ಆಗ್ರಹ. [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]

'ಸೂಪರ್‌ ಮಿನಿಟ್' ಮತ್ತು ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ನಿರೂಪಣೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಸೂಪರ್ ಮಿನಿಟ್' ಎರಡು ಸೀಸನ್ ಗಳು ಪ್ರಸಾರವಾಗಿದೆ. 'ಬಿಗ್ ಬಾಸ್ ಕನ್ನಡ-4' ಮುಗಿದ ಬಳಿಕ 'ಸೂಪರ್ ಮಿನಿಟ್ - 3'ಗೆ ಚಾಲನೆ ನೀಡುವ ಸಾಧ್ಯತೆ ಹೆಚ್ಚು. ಹೀಗಾಗಿ, ನಿರ್ಮಾಪಕರು ಸಿಡಿದೆದ್ದಿದ್ದಾರೆ.

'ಡ್ರಾಮಾ ಜ್ಯೂನಿಯರ್ಸ್'

ಪುಟಾಣಿ ಮಕ್ಕಳೇ 'ಸೂಪರ್ ಸ್ಟಾರ್ಸ್' ಆಗಿರುವ 'ಡ್ರಾಮಾ ಜ್ಯೂನಿಯರ್ಸ್' ಕಾರ್ಯಕ್ರಮದ ಮೇಲೂ ನಿರ್ಮಾಪಕರಿಗೆ ಬೇಜಾರಾಗಿದೆ. ನಟ ವಿಜಯ್ ರಾಘವೇಂದ್ರ, ಜ್ಯೂಲಿ ಲಕ್ಷ್ಮಿ ತೀರ್ಪುಗಾರರ ಸ್ಥಾನದಲ್ಲಿದ್ದು, ಅನೇಕ ತಾರೆಯರು ಕೂಡ ಗೆಸ್ಟ್ ಆಗಿ ಭಾಗವಹಿಸುವುದರಿಂದ ನಿರ್ಮಾಪಕರಿಗೆ ಸಹಜವಾಗಿ ಕೋಪ ತರಿಸಿದೆ.

'ಮಜಾ' ಟಾಕೀಸ್‌ ಮತ್ತು ಸೃಜನ್

ಕಲರ್ಸ್ ಕನ್ನಡದಲ್ಲಿ ನಟ ಸೃಜನ್ ಲೋಕೇಶ್‌ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ಮಜಾ ಟಾಕೀಸ್‌' ಕಾರ್ಯಕ್ರಮದಲ್ಲೂ ಪ್ರತಿ ವಾರ ತಾರೆಯರು ಭಾಗವಹಿಸುತ್ತಾರೆ, ಇದರಿಂದ ಚಾನೆಲ್ ನವರಿಗೆ ಟಿ.ಆರ್.ಪಿ. ಆದ್ರೆ, ನಿರ್ಮಾಪಕರಿಗೆ ಸಿಗುವುದಾದರೂ ಏನು? ಎಂಬ ಪ್ರಶ್ನೆ ಉದ್ಭವವಾಗಿದೆ.

ಅರುಣ್ ಸಾಗರ್ ಮತ್ತು 'ಕನೆಕ್ಷನ್‌'

ನಟ ಅರುಣ್‌ ಸಾಗರ್‌ ಕೂಡ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ `ಕನೆಕ್ಷನ್‌' ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿದ್ದಾರೆ. ಇದರಲ್ಲೂ 'ಸ್ಟಾರ್'ಗಳಿಗೆ ಆಹ್ವಾನ ಇದೆ. 'ಸ್ಟಾರ್'ಗಳು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಮಯ ಮೀಸಲಿಡುತ್ತಿದ್ದು, ನಿರ್ಮಾಪಕರಿಗೆ ಕಾಲ್ ಶೀಟ್ ನೀಡುತ್ತಿಲ್ಲ ಎಂಬುದು ಮತ್ತೊಂದು ವಾದ.

English summary
Kannada Producers are annoyed with Kiccha Sudeep, Shiva Rajkumar, Ramesh Aravind, Ravichandran for taking part in in Reality Shows. Here is the complete report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada