»   » ಸೃಜನ್ ಬಗ್ಗೆ ಪುಕಾರು ಹಬ್ಬಿಸುತ್ತಿರೋ ವಿಘ್ನ ಸಂತೋಷಿಗಳಿಗೆ ನವೀನ್ ಪಡೀಲ್ ಚಾಟಿ ಏಟು

ಸೃಜನ್ ಬಗ್ಗೆ ಪುಕಾರು ಹಬ್ಬಿಸುತ್ತಿರೋ ವಿಘ್ನ ಸಂತೋಷಿಗಳಿಗೆ ನವೀನ್ ಪಡೀಲ್ ಚಾಟಿ ಏಟು

Posted By:
Subscribe to Filmibeat Kannada

ಯಾವುದೋ ಪ್ರಶ್ನೆಗೆ ಏನೋ ಉತ್ತರ ಕೊಡಲು ಹೋಗಿ ಸದ್ಯ ಕಾಂಟ್ರವರ್ಸಿಯಲ್ಲಿ ಸಿಕ್ಕಿ ಹಾಕಿಕೊಂಡಿರುವವರು 'ಮಜಾ ಸ್ಟಾರ್' ಸೃಜನ್ ಲೋಕೇಶ್. ''ಕಾಲ್ ಸೆಂಟರ್ ಕೆಲಸ 'ಭೂತಾರಾಧನೆ' ಇದ್ದ ಹಾಗೆ.. ಒನ್ಲಿ ನೈಟ್ ಶಿಫ್ಟ್'' ಅಂತ ಹೇಳಿ ತುಳುನಾಡಿನ ಜನತೆಯ ಕೋಪಕ್ಕೆ ಗುರಿಯಾಗಿದ್ದಾರೆ ನಟ ಸೃಜನ್ ಲೋಕೇಶ್.

ಬಾಯಿ ತಪ್ಪಿ ಆಡಿದ ಮಾತಿಗೆ ಫೇಸ್ ಬುಕ್ ನಲ್ಲಿ ಸೃಜನ್ ಲೋಕೇಶ್ ಕ್ಷಮೆ ಕೇಳಿದ್ದಾರೆ. ಆದರೂ ಕರಾವಳಿಗರಿಗೆ ಸಮಾಧಾನ ಆಗಿಲ್ಲ. ಸೃಜನ್ ಲೋಕೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಮರ ನಿಂತಿಲ್ಲ. ಹೀಗಾಗಿ, ಸೃಜನ್ ಲೋಕೇಶ್ ಪರ 'ಮಜಾ ಟಾಕೀಸ್' ತಂಡದಲ್ಲಿಯೇ ಇರುವ ಕರಾವಳಿ ಕಂದ ನವೀನ್ ಪಡೀಲ್ ಬ್ಯಾಟಿಂಗ್ ಆರಂಭಿಸಿದ್ದಾರೆ.['ಮಜಾ ಟಾಕೀಸ್'ನಲ್ಲಿ ಸೃಜನ್ ಲೋಕೇಶ್ ಮಾಡಿದ ಮಹಾ ಎಡವಟ್ಟಿದು.!]

ಸೃಜನ್ ಬಗ್ಗೆ ಇಲ್ಲ ಸಲ್ಲದ ಪುಕಾರು ಹಬ್ಬಿಸುತ್ತಿರುವ ವಿಘ್ನ ಸಂತೋಷಿಗಳಿಗೆ ನವೀನ್ ಪಡೀಲ್ ಚಾಟಿ ಏಟು ಬೀಸಿದ್ದಾರೆ. 'ಭೂತಾರಾಧನೆ' ವಿವಾದದ ಕುರಿತು ತಮ್ಮ ಫೇಸ್ ಬುಕ್ ಪುಟದಲ್ಲಿ ನವೀನ್ ಪಡೀಲ್ ಬರೆದುಕೊಂಡಿರುವುದು ಹೀಗೆ....

ಸೃಜನ್ ರವರನ್ನ ಹತ್ತಿರದಿಂದ ಬಲ್ಲೆ

''ನಮಸ್ಕಾರ... ನಾನು ಕಳೆದ ಇಪ್ಪತ್ತೊಂಬತ್ತು ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಾ ಇದ್ದೇನೆ. ಮಜಾ ಟಾಕೀಸಿನ ಖಾಯಂ ಸದಸ್ಯನಾಗಿ ಸೃಜನ್ ಲೋಕೇಶ್ ಮತ್ತು ಅವರ ಮನೆಯವರನ್ನು ಹತ್ತಿರದಿಂದ ಬಲ್ಲೆ'' - ನವೀನ್ ಪಡೀಲ್ [ಕಡೆಗೂ ಕರಾವಳಿಗರ ಕೂಗಿಗೆ ಬೆಲೆಕೊಟ್ಟು ತಲೆ ಬಾಗಿದ ಸೃಜನ್ ಲೋಕೇಶ್]

ಕರಾವಳಿ ಸಂಸ್ಕೃತಿ ಬಗ್ಗೆ ಗೌರವ ಇದೆ

''ಕರಾವಳಿ ಸಂಸ್ಕೃತಿಯ ಬಗ್ಗೆ, ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಇತ್ಯಾದಿಗಳ ಬಗ್ಗೆ ಸೃಜನ್ ರಿಗೆ ಅತ್ಯಂತ ಗೌರವ, ಅಭಿಮಾನವಿದೆ. ನಾನು ಕರಾವಳಿಯ ನಟ ಎಂದು ಅವರಿಗೆ ವಿಶೇಷ ಪ್ರೀತಿಯಿದೆ. ತುಳು ಕಲಾವಿದರ, ಅವರ ಪ್ರತಿಭೆಯ ಬಗ್ಗೆ ಅವರಿಗೆ ಖುಷಿಯಿದೆ'' - ನವೀನ್ ಪಡೀಲ್ [ಕರಾವಳಿ ಆಚರಣೆ ಬಗ್ಗೆ ಕೊಂಕು ಮಾತನಾಡಿದ ಸೃಜನ್ ವಿರುದ್ಧ ರೊಚ್ಚಿಗೆದ್ದ ವೀಕ್ಷಕರು.!]

ಭೂತಾರಾಧನೆಯನ್ನು ತೆಗಳಿಲ್ಲ

''ಕಾಲ್ ಸೆಂಟರ್ ಗೆ ಹೋಲಿಕೆಯ ಹೇಳಿಕೆಯನ್ನು ನಾನು ಕೇಳಿದೆ. ಅದರಲ್ಲಿ ಭೂತಾರಾಧನೆಯನ್ನು ತೆಗಳುವ ಯಾವುದೇ ವಿಷಯವಿಲ್ಲ. ಅದೊಂದು ಬಾಯಿತಪ್ಪಿನಿಂದ ಬಂದ ಹೋಲಿಕೆ ಅಷ್ಟೆ. ಖಂಡಿತ ಉದ್ದೇಶಪೂರ್ವಕವಾಗಿ ಅಲ್ಲವೇ ಅಲ್ಲ'' - ನವೀನ್ ಪಡೀಲ್

ದುರುದ್ದೇಶ ಇರಲಿಲ್ಲ

''ತುಳುನಾಡಿನ ಬಗ್ಗೆ, ತುಳುವರ ಬಗ್ಗೆ ಅಭಿಮಾನ, ಗೌರವ, ಕಾಳಜಿ ಇರುವ ಗೆಳೆಯ ಸೃಜನ್, ದುರುದ್ದೇಶದಿಂದ ಹಾಗೆಲ್ಲ ಹೇಳಿಕೆ ನೀಡಲಾರರು. ಅದಾಗ್ಯೂ ಅವರು ಆ ರೀತಿ ಹೋಲಿಕೆ ಮಾಡಿದ್ದಕ್ಕೆ ಕ್ಷಮೆ ಕೇಳಿಯಾಗಿದೆ'' - ನವೀನ್ ಪಡೀಲ್

ವಿಘ್ನ ಸಂತೋಷಿಗಳ ಕೆಲಸ

''ಮೊಸರಲ್ಲಿ ಕಲ್ಲು ಹುಡುಕುವ ಕೆಲ ವಿಘ್ನ ಸಂತೋಷಿಗಳು, ಇದರ ಬಗ್ಗೆ ಇಲ್ಲಸಲ್ಲದ ಪುಕಾರು ಹಬ್ಬಿಸುತ್ತಿದ್ದಾರೆ. ಕೀಳು ಮಟ್ಟದ ಭಾಷೆ ಬಳಸಿ ತಮ್ಮ ಯೋಗ್ಯತೆ ಹೇಳುತ್ತಿದ್ದಾರೆ. ಹಾಗಾಗಿ, ತುಳುನಾಡಿನ ಸಮಸ್ತ ಸರ್ವಧರ್ಮದ ಕಲಾರಾಧಕರಲ್ಲಿ ನಿಮ್ಮ ಪ್ರೀತಿಯ ನವೀನ್ ಡಿ.ಪಡೀಲ್ ಮಾಡುವ ಕಳಕಳಿಯ ವಿನಂತಿ ಏನೆಂದರೆ, ವಿಷಯದ ಸತ್ಯಾಸತ್ಯತೆ ಅರಿಯದೆ ಯಾವುದೇ ಸಂದೇಶಗಳನ್ನು ಫಾರ್ವರ್ಡ್‌ ಮಾಡಬೇಡಿ ಮತ್ತು ತುಳುನಾಡಿನ ಬಗ್ಗೆ ಅಭಿಮಾನವಿರುವ ಸೃಜನ್ ಗೆ ನಿಮ್ಮ ಪ್ರೋತ್ಸಾಹ ಮುಂದುವರಿಸಿ. ನಿಮ್ಮ ಪ್ರೀತಿಯ ನವೀನ್ ಪಡೀಲ್'' - ನವೀನ್ ಪಡೀಲ್

English summary
Naveen Padil has taken his Facebook Account to support 'Majaa Star' Srujan Lokesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada