ತಮ್ಮನ ಬಗ್ಗೆ ರಕ್ಷಿತಾ ಏನು ಹೇಳಿದ್ರು ? | Rakshitha is awaiting for this moment| Filmibeat Kannada
ಸಹೋದರ ಅಭಿಶೇಕ್ ಹೀರೋ ಆಗಿ ಬೆಳ್ಳಿತೆರೆ ಮೇಲೆ ಮಿಂಚುವ ಕ್ಷಣಕ್ಕೋಸ್ಕರ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್ ಕಾಯ್ತಿದ್ದಾರೆ. ಹಾಗಂತ ಸ್ವತಃ ರಕ್ಷಿತಾ ಪ್ರೇಮ್ ಹೇಳಿಕೊಂಡಿದ್ದಾರೆ. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರಕ್ಷಿತಾ ಹಾಗೂ ರಾಗಿಣಿ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ''ನೀವು ಕಾತರದಿಂದ ಕಾಯುತ್ತಿರುವ ಕ್ಷಣ ಯಾವುದು?'' ಎಂದು ಶಿವಣ್ಣ ಕೇಳಿದಾಗ, ''ನನ್ನ ಸಹೋದರ ಹೀರೋ ಆಗಿ ಮಿಂಚಬೇಕು. ಆ ಕ್ಷಣಕ್ಕಾಗಿ ನಾನು ತುದಿಗಾಲಲ್ಲಿ ನಿಂತು ಕಾಯುತ್ತಿದ್ದೇನೆ'' ಎಂದರು ರಕ್ಷಿತಾ ಪ್ರೇಮ್.
ಅಂದ್ಹಾಗೆ, ರಕ್ಷಿತಾ ಪ್ರೇಮ್ ಸಹೋದರ ಅಭಿಶೇಕ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಾಗಿದೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರದಲ್ಲಿ ಅಭಿಶೇಕ್ ಕೆಲಸ ಮಾಡುತ್ತಿದ್ದಾರೆ. ಡೈರೆಕ್ಟರ್ ಪ್ರೇಮ್ ಬಳಿ ಸಹಾಯಕ ನಿರ್ದೇಶಕನಾಗಿ ಅಭಿಶೇಕ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಕ್ಷಿತಾ ಪ್ರೇಮ್ ಸಹೋದರ ಚಿತ್ರರಂಗಕ್ಕೆ ಎಂಟ್ರಿ!
ನ್ಯೂಯಾರ್ಕ್ ನ 'ಲೀ ಸ್ಟ್ರಾಸ್ಬರ್ಗ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ತರಬೇತಿ ಪಡೆದಿರುವ ಅಭಿಶೇಕ್, ಸಿನಿಮಾ ಮೇಕಿಂಗ್ ಕುರಿತ ಎಲ್ಲ ವಿಚಾರಗಳನ್ನು ಪ್ರೇಮ್ ಬಳಿ 'ದಿ ವಿಲನ್' ಸೆಟ್ ನಲ್ಲಿ ಕಲಿತಿದ್ದಾರೆ.
ನಟನೆಗೆ ಸಂಬಂಧ ಪಟ್ಟಂತೆ ಸುದೀಪ್ ಹಾಗೂ ಶಿವಣ್ಣ ರವರಿಂದ ಸಲಹೆಗಳನ್ನೂ ಪಡೆದುಕೊಂಡಿದ್ದಾರಂತೆ ಅಭಿಶೇಕ್. ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅಭಿಶೇಕ್, ಹೀರೋ ಆಗಲು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸಹೋದರ ಅಭಿಶೇಕ್ ಹೀರೋ ಆಗಿ ಮಿಂಚುವುದನ್ನು ನೋಡಲು ರಕ್ಷಿತಾ ಕೂಡ ಕಾಯುತ್ತಿದ್ದಾರೆ. 'ದಿ ವಿಲನ್' ಶೂಟಿಂಗ್ ಮುಗಿದ ಬಳಿಕ ರಕ್ಷಿತಾ ಪ್ರೇಮ್ ಬ್ಯಾನರ್ ಅಡಿಯಲ್ಲೇ ಅಭಿಶೇಕ್ ಹೀರೋ ಆಗಿ ಲಾಂಚ್ ಆಗಲಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.