For Quick Alerts
  ALLOW NOTIFICATIONS  
  For Daily Alerts

  ಕನ್ನಡ ರಿಯಾಲಿಟಿ ಶೋನಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆ! ಹಾಡಿದರು ಕನ್ನಡ ಹಾಡು

  |

  ಭಾರತ ಕ್ರಿಕೆಟ್ ತಂಡದ ದಿಗ್ಗಜ ಕರ್ನಾಟಕದ ಅನಿಲ್ ಕುಂಬ್ಳೆ ಕ್ರಿಕೆಟ್‌ನಲ್ಲಿ ಮೇರು ಸಾಧನೆಗಳನ್ನು ಮಾಡಿದ್ದಾರೆ. ಕುಂಬ್ಳೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ 11 ವರ್ಷಗಳಾಗಿವೆ, ಆದರೆ ಮಾಧ್ಯಮಗಳಿಂದ, ಸಾರ್ವಜನಿಕ ಜೀವನದಿಂದ ತುಸು ದೂರವೇ ಉಳಿದಿರುವ ಈ ಜಂಟಲ್‌ಮ್ಯಾನ್ ಇದೀಗ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದಾರೆ.

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾಗವಹಿಸಿದ್ದಾರೆ. ಅನಿಲ್ ಕುಂಬ್ಳೆಯನ್ನು ಸರಿಗಮಪ ವೇದಿಕೆ ಅದ್ಧೂರಿಯಾಗಿ ಸ್ವಾಗತ ಮಾಡಿದೆ. ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಅನಿಲ್ ಕುಂಬ್ಳೆ ಭಾಗವಹಿಸುತ್ತಿರುವುದು ಇದು ಎರಡನೇ ಬಾರಿ. ಈ ಮೊದಲು ಅವರು ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  ಶೋನ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪದ್ಮಶ್ರೀ ಅನಿಲ್ ಕುಂಬ್ಳೆ ಅವರನ್ನು 'ಸರಿಗಮಪ' ವೇದಿಕೆ ಮೇಲೆ ಜಡ್ಜ್‌ಗಳು ಮನಸಾರೆ ಹೊಗಳಿದ್ದಾರೆ. ಅನಿಲ್ ಕುಂಬ್ಳೆ ಸಹ ತಮ್ಮ ಕ್ರಿಕೆಟಿಂಗ್ ಅನುಭವ ಹಾಗೂ ಸಂಗೀತ, ಸಾಹಿತ್ಯ ಪ್ರೇಮದ ಬಗ್ಗೆ ಶೋನಲ್ಲಿ ಮಾತನಾಡಿದ್ದಾರೆ.

  ಹಂಸಲೇಖ ಅವರ 'ಪ್ರೇಮಲೋಕ' ಪ್ರಾರಂಭವಾದಾಗಲೇ ನನ್ನ ಕ್ರಿಕೆಟ್ ಲೋಕ ಪ್ರಾರಂಭವಾಯಿತೆಂದು ಹಳೆಯ ನೆನಪುಗಳಿಗೆ ಜಾರಿದ್ದಾರೆ ಅನಿಲ್ ಕುಂಬ್ಳೆ. ಜಡ್ಜ್ ಅರ್ಜುನ್ ಜನ್ಯ ಅಂತೂ 'ಹಿಂದುಸ್ಥಾನ ಎಂದೂ ಮರೆಯದ ಭಾರತ ರತ್ನ ಅನಿಲ್ ಕುಂಬ್ಳೆ' ಎಂದು ಹೊಗಳಿದ್ದಾರೆ.

  ಅನಿಲ್ ಕುಂಬ್ಳೆ ಎಪಿಸೋಡ್‌ಗೆ ವಿಶೇಷ ವಿಡಿಯೋ ಒಂದನ್ನು ಕಳಿಸಿರುವ ನಟ ಕಿಚ್ಚ ಸುದೀಪ್, ''ಅನಿಲ್ ಕುಂಬ್ಳೆ ಬೌಲಿಂಗ್ ಮಾಡಬೇಕು, ನಾನು ಕೀಪಿಂಗ್ ಮಾಡಬೇಕು ಎಂಬ ದೊಡ್ಡ ಆಸೆ ಇತ್ತು'' ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಕುಂಬ್ಳೆ ಜೊತೆಗಿನ ಗೆಳೆತನವನ್ನು ಮೆಲಕು ಹಾಕಿದ್ದಾರೆ.

  ಕಾರ್ಯಕ್ರಮದಲ್ಲಿ 'ಮಾಮರವೆಲ್ಲೊ ಕೋಗಿಲೆ ಎಲ್ಲೊ' ಎಂಬ ಕನ್ನಡ ಹಾಡೊಂದನ್ನು ಸಹ ಅನಿಲ್ ಕುಂಬ್ಳೆ ಹಾಡಿದ್ದಾರೆ. ಈ ಹಿಂದೆಯೂ ಇದೇ ಹಾಡನ್ನು ದುಬೈನ ಪಾರ್ಟಿಯೊಂದರಲ್ಲಿ ಅನಿಲ್ ಕುಂಬ್ಳೆ ಹಾಡಿದ್ದರು. ಆ ವಿಡಿಯೋ ಬಹಳ ವೈರಲ್ ಆಗಿತ್ತು.

  ಕನ್ನಡ ಸಾಂಸ್ಕೃತಿಕ ಲೋಕದ ಬಗ್ಗೆ ಅಪಾರ ಪ್ರೀತಿ, ಗೌರವವುಳ್ಳ ಅನಿಲ್ ಕುಂಬ್ಳೆ 2019 ರಲ್ಲಿ ಪ್ರಾರಂಭವಾಗಿದ್ದ ಕವನ ಓದುವ ಸವಾಲು ಅಭಿಯಾನದಲ್ಲಿ ಭಾಗವಹಿಸಿದ್ದರು. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ನೀಡಿದ್ದ ಸವಾಲು ಸ್ವೀಕರಿಸಿದ್ದ ಅನಿಲ್ ಕುಂಬ್ಳೆ, ಕುವೆಂಪು ರಚಿತ 'ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು' ಕವನವನ್ನು ವಾಚಿಸಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್ ಹಾಗೂ ವಿಜಯಪ್ರಕಾಶ್‌ಗೆ ಕವನ ಓದುವಂತೆ ಸವಾಲನ್ನು ಎಸೆದಿದ್ದರು.

  ಅನಿಲ್ ಕುಂಬ್ಳೆಗೆ ಕ್ಯಾಮೆರಾ ಎದುರಿಸುವುದು ಹೊಸದೇನೂ ಅಲ್ಲ, ಕ್ರಿಕೆಟಿಗರಾಗಿದ್ದಾಗ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದ ಅನಿಲ್ ಕುಂಬ್ಳೆ, 'ಮೀರಾಭಾಯಿ ನಾಟ್‌ಔಟ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು.

  English summary
  Sa Re Ga Ma Pa : Anil Kumble Grace The Show As Guest On Weekend Episodes. Kumble Sang a Kannada song in the show.
  Thursday, December 23, 2021, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X