For Quick Alerts
  ALLOW NOTIFICATIONS  
  For Daily Alerts

  ನನ್ನ ದೃಷ್ಟಿಯಲ್ಲಿ ಬಿಗ್ ಬಾಸ್ ಯೋಗ್ಯ ಕಾರ್ಯಕ್ರಮ

  By ಶಾಂತಾ ನಾಗರಾಜ್, ಬೆಂಗಳೂರು
  |

  ಕನ್ನಡದ ಹವ್ಯಾಸಿ ಬರಹಗಾರ್ತಿ ಶಾಂತಾ ನಾಗರಾಜ್ ಅವರ ಹಲವಾರು ವಿಚಾರಪೂರ್ಣ ಲೇಖನಗಳು ಹಾಗೂ ಕಥೆಗಳು ಈ ಹಿಂದೆ ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿವೆ. ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಅವರು ಇತ್ತೀಚೆಗೆ ಸವಿಸ್ತಾರವಾಗಿ ಅವಧಿಮ್ಯಾಗ್ ಗೆ ಬರೆದ ವಿಚಾರವತ್ತಾದ ಲೇಖನ ಇಲ್ಲಿದೆ ಓದಿ.

  ಕನ್ನಡದ ಟಿ.ವಿ.ವಾಹಿನಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತಿದ್ದಂತೇ 'ಸುಧಾ'ಪತ್ರಿಕೆಯ 'ಜಾಣರ ಪೆಟ್ಟಿಗೆ'ಯಲ್ಲಿ ಅದರ ವಿರುದ್ಧ ದ್ವನಿಗಳು ಕೇಳಿಬರತೊಡಗಿದವು. ಕನ್ನಡಿಗರಿಗೆ ಇದು ಬೇಕಾ? ಕನ್ನಡ ಸಂಸ್ಕೃತಿಗೆ ಇದು ಸಲ್ಲದು, ಇವರೆಲ್ಲ ಮಲಗುವುದು, ತಿನ್ನುವುದು, ಜಗಳವಾಡುವುದನ್ನು ನಾವ್ಯಾಕೆ ನೋಡಬೇಕು? ಇತ್ಯಾದಿ ಇತ್ಯಾದಿ.

  ಆದರೆ ದಿನದಿನಕ್ಕೂ ಬಿಗ್ ಬಾಸ್ ನ ಟಿ.ಆರ್.ಪಿ ಹೆಚ್ಚುತ್ತಲೇ ಹೋಯಿತು. ಈ 'ಜಗಳವಾಡುವುದು' ಎನ್ನುವುದಿದೆಯಲ್ಲ ಅದೇ ಬಿಗ್ ಬಾಸ್ ನ ಮೂಲ ಮಂತ್ರ. ಉದಾಹರಣೆಗೆ - ನೀವು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮಷ್ಟಕ್ಕೆ ಓದುವುದೋ, ಟಿವಿ ನೋಡುವುದೋ ಮಾಡುತ್ತಿರುತ್ತೀರಿ. ನಿಮ್ಮ ಮನೆಯ ರಸ್ತೆಯಲ್ಲಿ ವಾಹನಗಳ ಹಾರ್ನ್, ಜನರ ಮಾತುಗಳು ಮುಂತಾಗಿ ಕೇಳುತ್ತಿದ್ದರೂ ನೀವು ಆ ಶಬ್ದದ ಬಗ್ಗೆ ವಿಚಲಿತರಾಗದೇ ನಿಮ್ಮ ಕೆಲಸವನ್ನು ಮುಂದುವರೆಸುತ್ತೀರಿ.

  ಅದೇ ರಸ್ತೆಯಲ್ಲಿ ಯಾರೋ ಇಬ್ಬರು ಜೋರು ಧ್ವನಿಯಲ್ಲಿ ಕಿರುಚಾಡಲು ಶುರು ಮಾಡಿದರೆ, ಆ ಜಗಳದ ಮಾತಿನ ಹಿಂದೆಯೇ ಧಪ್ ಧಪ್ ಎಂದು ಹೊಡೆತದ ಶಬ್ದವೂ ಕೇಳಿಸಿದರೆ ನೀವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಅದೇನೆಂದು ನೋಡಲು ಓಡುತ್ತೀರಿ ತಾನೆ? ಇದು ಮನುಷ್ಯನ ಮೂಲ ಗುಣಗಳಲ್ಲಿ ಒಂದು. ನಮ್ಮಲ್ಲಿ ಎರಡು ಬಗೆಯ ಕುತೂಹಲವಿರುತ್ತದೆ.

  ಒಂದು ಊರ್ಧ್ವಗಾಮಿ ಕುತೂಹಲ. ಈ ಕುತೂಹಲವನ್ನು ತಣಿಸಲು ಮನುಷ್ಯ ಒಳ್ಳೆಯ ಅಡುಗೆಯ ಪ್ರಯೋಗದಿಂದ ಹಿಡಿದು ಚಂದ್ರನ ಮೇಲೆ ಕಾಲಿಡುವವರೆಗೆ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಹೋಗುತ್ತಾನೆ. ಎರಡನೆಯದೇ ಅಧೋಗಾಮಿ ಕುತೂಹಲ. ಇದನ್ನು ಆಡುಮಾತಿನಲ್ಲಿ 'ಕೆಟ್ಟಕುತೂಹಲ' ಎಂದೂ ಹೇಳುತ್ತೇವೆ.ಇದು ಮೆದುಳಿಗೆ ಬೇಕಾದ ಮನರಂಜನೆಯನ್ನು ಬಯಸುತ್ತದೆ. ಎರಡೂ ಕುತೂಹಲವೂ ನಮಗೆ ಅಗತ್ಯವೇ.

  ಆದರೆ ಯಾರಲ್ಲಿ ಅದು ಯಾವ ಮಟ್ಟದಲ್ಲಿರುತ್ತದೆ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ನಿಲ್ಲುತ್ತದೆ. ಐನ್ ಸ್ಟೀನ್, ಸರ್.ಎಂ. ವಿಶ್ವೇಶ್ವರಯ್ಯ, ಸರ್. ಸಿ.ವಿ.ರಾಮನ್ ಇಂಥವರಲ್ಲಿ ಒಳ್ಳೆಯ ಕುತೂಹಲ ಅಧಿಕವಾಗಿದ್ದ ಕಾರಣಕ್ಕೇ ಅವರೆಲ್ಲಾ ಜಗತ್ಪ್ರಸಿದ್ಧರಾದರು. ನಾವೆಲ್ಲಾ ಸಾಧಾರಣರು, ನಮ್ಮಲ್ಲಿ ಸಾಧಾರಣ ಮಟ್ಟದ ಕೆಟ್ಟ ಕುತೂಹಲವಿರುವುದರಿಂದಲೇ ಟಿ.ವಿಗೆ ಅಂಟಿಕೊಳ್ಳುತ್ತೇವೆ. ನಮ್ಮನ್ನು ತಣಿಸಲು ಮತ್ತು ತಮ್ಮ ಬೊಕ್ಕಸವನ್ನು ಹೇರಳವಾಗಿ ತುಂಬಿಕೊಳ್ಳಲು ವಾಹಿನಿಯವರು ಹೊಸಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಅದರಲ್ಲಿ ಬಿಗ್ ಬಾಸ್ ಸಹ ಒಂದು.

  ನನ್ನ ದೃಷ್ಟಿಯಲ್ಲಿ ಬಿಗ್ ಬಾಸ್ ಯೋಗ್ಯ ಕಾರ್ಯಕ್ರಮ

  ನನ್ನ ದೃಷ್ಟಿಯಲ್ಲಿ ಬಿಗ್ ಬಾಸ್ ಯೋಗ್ಯ ಕಾರ್ಯಕ್ರಮ

  ನನ್ನ ದೃಷ್ಟಿಯಲ್ಲಿ ಬಿಗ್ ಬಾಸ್ ನೋಡಲು ಯೋಗ್ಯವಾದ ಕಾರ್ಯಕ್ರಮ. ಯಾರೋ ಒಬ್ಬರ ತಲೆಯಲ್ಲಿ ಹುಟ್ಟಿದ ಕಥೆ ಮತ್ತು ಪಾತ್ರಗಳು ಅಸಹಜತೆಯ ಸ್ವರೂಪವನ್ನು ಪಡೆದುಕೊಳ್ಳುತ್ತಾ, ತರ್ಕಕ್ಕೆ ನಿಲುಕದಂತಹ ವಿಕೃತ ಭಾವ ಮತ್ತು ಕುರೂಪ ಧೋರಣೆಗಳನ್ನು ಅತಿರಂಜಿತವಾಗಿ, ಓವರ್ ಆಕ್ಟಿಂಗ್ ರೂಪದಲ್ಲಿ ಧಾರಾವಾಹಿಯಾಗಿ ವರ್ಷಗಟ್ಟಲೇ ಎಳೆಯುವುದೂ, ಹಾಸ್ಯದ ಹೆಸರಿನಲ್ಲಿ ಅಪಹಾಸ್ಯ, ಹಳಸಲು ಹಾಸ್ಯ ಮತ್ತು ಕುಚೇಷ್ಟೆಗಳನ್ನು ಒಳಗೊಂಡ ಕಾರ್ಯಕ್ರಮಗಳಿಗಿಂತ ಬಿಗ್ ಬಾಸ್ ಹೆಚ್ಚು ಸಹಜವಾಗಿದೆ.

  ಗ್ಲಿಸರೈನ್ ಇಲ್ಲದೆ ಇಲ್ಲಿ ಕಣ್ಣೀರು ಕೋಡಿಯಾಗಿ ಹರಿಯುತ್ತದೆ

  ಗ್ಲಿಸರೈನ್ ಇಲ್ಲದೆ ಇಲ್ಲಿ ಕಣ್ಣೀರು ಕೋಡಿಯಾಗಿ ಹರಿಯುತ್ತದೆ

  ಏಕೆಂದರೆ ಅವರ ಕೋಪವಾಗಲೀ, ಅಳುವಾಗಲೀ, ನಗುವಾಗಲೀ, ಜಗಳವಾಗಲೀ ಯಾರೂ ಮೊದಲೇ ನಿರ್ಧರಿಸಿದ್ದೂ ಅಲ್ಲ, ಬರೆದುಕೊಟ್ಟ ಸಂಭಾಷಣೆಗಳೂ ಅಲ್ಲ. ಅಲ್ಲಿ ಬಾಟಲ್ ಗಟ್ಟಲೇ ಗ್ಲಿಸರಿನ್ ಸುರಿದರೂ ಬರದ ಕಣ್ಣೀರು ಇಲ್ಲಿ ಕೋಡಿಯಾಗಿ ಹರಿಯುತ್ತದೆ. ಅಲ್ಲಿ ಅತಿರಂಜಿತ ಮೇಕಪ್ ಮತ್ತು ವೇಷಭೂಷಣಗಳಿಗೂ, ಅತಿ ಕಳಪೆಮಟ್ಟದ ಸಂಭಾಷಣೆಯನ್ನು ವಿಕಾರವಾಗಿ ಉದುರಿಸುತ್ತಾ ಆಡುವ ಜಗಳಕ್ಕೂ ಒಂದಕ್ಕೊಂದು ಹೊಂದಾಣಿಕೆಯಾಗದೇ ವಿಚಿತ್ರವೆನಿಸುತ್ತದೆ.

  ಟಾಸ್ಕ್ ಗಳು ಹೃದಯಕ್ಕೆ ಹತ್ತಿರವಾಗುತ್ತವೆ

  ಟಾಸ್ಕ್ ಗಳು ಹೃದಯಕ್ಕೆ ಹತ್ತಿರವಾಗುತ್ತವೆ

  ಆದರೆ ಇಲ್ಲಿ ಮನದಾಳದಿಂದ ಹೊರಹೊಮ್ಮುವ ಸಿಟ್ಟು, ಅಸಹಾಯಕತೆ ಜಗಳದ ರೂಪ ಪಡೆದಾಗ ಅರ್ಥಪೂರ್ಣವೆನಿಸುತ್ತದೆ. ಬಿಗ್ ಬಾಸ್ ಕೊಡುವ ಟಾಸ್ಕ್‌ಗಳನ್ನು ಅವರು ಕೈಗೊಳ್ಳುವಾಗ ನಡೆಯುವ ಅವಾಂತರಗಳು ಸಹಜ ನಗುವನ್ನು ಉಕ್ಕಿಸುತ್ತದೆ. ಅದಕ್ಕೇ ಅದು ಹೃದಯಕ್ಕೆ ಹತ್ತಿರವೂ ಆಗುತ್ತದೆ. ದಿನಗಳೆದಂತೆ ಬಿಗ್ ಬಾಸ್ ಮನೆಯ ಜನ ನಮ್ಮದೇ ಮನೆಯ ಜನರಾಗಿ ಹೋಗುತ್ತಾರೆ.

  ಭಾವನೆಗಳ ಏರಿಳಿತದ ಮಹಾಪೂರವೇ ಹರಿಯುತ್ತದೆ

  ಭಾವನೆಗಳ ಏರಿಳಿತದ ಮಹಾಪೂರವೇ ಹರಿಯುತ್ತದೆ

  ಬಿಗ್ ಬಾಸ್ ಕಾರ್ಯಕ್ರಮ ನಮ್ಮಂತಹ ಆಪ್ತಸಲಹಾಗಾರರಿಗೆ ಅತಿ ಕುತೂಹಲದ ವಿಷಯವೂ ಆಗುತ್ತದೆ. ಏಕೆಂದರೆ ನಾವು ಕೆಲಸ ಮಾಡುವುದೇ ಮನುಷ್ಯರ ಭಾವನೆಗಳ ಏರಿಳಿತದ ಜೊತೆ. ಬಿಗ್ ಬಾಸ್ ಮನೆಯಲ್ಲಿ ಭಾವನೆಗಳ ಏರಿಳಿತದ ಮಹಾಪೂರವೇ ಹರಿಯುತ್ತಿರುತ್ತದೆ. ಈ ಕಾಲದ ಎಲ್ಲ ಮಾನವಜೀವಿಗಳಿಗೂ ಕೈತುಂಬಾ ಕೆಲಸ ಮತ್ತು ಮನದ ತುಂಬಾ ವಿಚಾರಧಾರೆಗಳು ಅನಿವಾರ್ಯವೇ ಆಗಿಹೋಗಿದೆ.

  ಯಾರಿಗೂ ಇಂಥಾ ವೇಗ ಆವೇಗಗಳ ಅಗತ್ಯವಿಲ್ಲ

  ಯಾರಿಗೂ ಇಂಥಾ ವೇಗ ಆವೇಗಗಳ ಅಗತ್ಯವಿಲ್ಲ

  ಹೆಚ್ಚೇನಿಲ್ಲ ಒಂದು ಐವತ್ತು ವರ್ಷಗಳ ಹಿಂದೆ ಇದ್ದ ಸಾಮಾಧಾನದ, ವಿಶ್ರಾಂತದ, ನಿಧಾನಿಸಿ ನೋಡುವ ಮನಃಸ್ಥಿತಿ ಈಗ ಯಾರಲ್ಲೂ ಇಲ್ಲವೆನ್ನುವ ಸತ್ಯ ನಮಗೆಲ್ಲರಿಗೂ ತಿಳಿದೇ ಇದೆ. ಓಟದ ಶೈಲಿ ನಮ್ಮ ಬದುಕಿನ ಭಾಗವೇ ಆಗಿಹೋಗಿದೆ. ಆದರೆ ನೋಡಿ ಬಿಗ್ ಬಾಸ್ ಮನೆಯಲ್ಲಿ ಯಾರಿಗೂ ಇಂಥಾ ವೇಗ ಆವೇಗಗಳ ಅಗತ್ಯವಿಲ್ಲ. ಆಹಾರದಿಂದ ಹಿಡಿದು ಎಲ್ಲ ಮೂಲ ಸೌಕರ್ಯಗಳ ಏರ್ಪಾಟು ಸಮೃದ್ಧವಾಗಿಯೇ ಇವೆ. ಕೈಯ್ಯಲ್ಲಿ ಮಾಡಲು ಕೆಲಸವೇನೂ ಇಲ್ಲ.

  ಒಬ್ಬರು ಮತ್ತೊಬ್ಬರ ಕಾಲೆಳೆಯಲು ಸದಾ ಹೊಂಚು

  ಒಬ್ಬರು ಮತ್ತೊಬ್ಬರ ಕಾಲೆಳೆಯಲು ಸದಾ ಹೊಂಚು

  ಆದರೂ ಅವರು ಯಾರೂ ಸಮಾಧಾನ ಚಿತ್ತರಾಗಿಲ್ಲ. ಹೊರಗಿರುವ ನಮಗಿಂತಾ ಹೆಚ್ಚು ವಿಚಲಿತರಾಗಿ ಕಾಣುತ್ತಾರೆ. ಯಾಕೆಂದರೆ ನಮಗೆಲ್ಲ ದಿನನಿತ್ಯದ ಬದುಕಿಗೂ ಸಣ್ಣಸಣ್ಣ ಗುರಿಗಳಿವೆ. ಅವರಿಗೋ ನೂರುದಿನಗಳ ಕಾಲ ಗುರಿಯಿಲ್ಲದ ಬದುಕು! ಯಾರೋ ಎಬ್ಬಿಸಿದಾಗ ಏಳಬೇಕು, ಯಾರೋ ಹೇಳಿದ ಹಾಗೆ ಕುಣಿಯಬೇಕು. ಅಲ್ಲದೇ ಎಲ್ಲರಿಗೂ ಕೊನೆಯವರೆಗಿನ ಉಳಿವಿಗಾಗಿ ಹೋರಾಟ ಅನಿವಾರ್ಯವಾದ ಕಾರಣ ಒಬ್ಬರು ಮತ್ತೊಬ್ಬರ ಕಾಲೆಳೆಯಲು ಸದಾ ಹೊಂಚು ಹಾಕುತ್ತಲೇ ಇರುತ್ತಾರೆ. ಮತ್ತು ಒಬ್ಬರು ಮತ್ತೊಬ್ಬರನ್ನು ಗುಮಾನಿಯಿಂದಲೇ ಗಮನಿಸುತ್ತಾರೆ!

  ಅಧ್ಯಾತ್ಮದ ದೃಷ್ಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ

  ಅಧ್ಯಾತ್ಮದ ದೃಷ್ಟಿಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ

  ಅಧ್ಯಾತ್ಮದ ದೃಷ್ಟಿಯಲ್ಲೂ ಬಿಗ್ ಬಾಸ್ ಕಾರ್ಯಕ್ರಮವನ್ನು ವೀಕ್ಷಿಸಬಹುದು ಎಂದರೆ ನಿಮಗೆಲ್ಲಾ ಆಶ್ಚರ್ಯವಾಗುತ್ತದೇನೋ. ಎಲ್ಲ ಧರ್ಮಗ್ರಂಥಗಳೂ ಹೇಳುವುದೇನು? ‘ನಿನ್ನ ಕರ್ಮವನ್ನು ನೀನು ಮಾಡು. ಕೆಲಸದಲ್ಲಿ ಪರಿಶ್ರಮ ಮತ್ತು ಬದ್ಧತೆ ಇರಿಸು. ಫಲಾಫಲಗಳನ್ನು ಭಗವಂತ ಕರುಣಿಸುತ್ತಾನೆ' ಎಂದಲ್ಲವೇ? ಇದನ್ನೇ ಬಸವಣ್ಣನವರು ಸರಳ ಸುಂದರವಾಗಿ ‘ಕಾಯಕವೇ ಕೈಲಾಸ' ಎಂದರು.

  ಉನ್ನತ ವಿಚಾರವುಳ್ಳ ಮನಃಸ್ಥಿತಿಯೂ ಮುಖ್ಯ

  ಉನ್ನತ ವಿಚಾರವುಳ್ಳ ಮನಃಸ್ಥಿತಿಯೂ ಮುಖ್ಯ

  ಬಿಗ್ ಬಾಸ್ ನಂಥಾ ಯೋಜನೆಯಲ್ಲಿ ತೊಡಗಿಕೊಂಡವರಿಗೆ ಬದುಕನ್ನು ಭಿನ್ನವಾಗಿ ನೋಡುವ ಹೊಸ ನೋಟವಾದರೂ ಲಭಿಸಬಹುದು ಎನ್ನುವುದು ಒಂದು ಊಹೆಯಷ್ಟೇ. ಇಂಥಾ ಹೊಸನೋಟಗಳನ್ನು ತಮ್ಮದಾಗಿಸಿಕೊಳ್ಳಲು ಉನ್ನತ ವಿಚಾರವುಳ್ಳ ಮನಃಸ್ಥಿತಿಯೂ ಮುಖ್ಯ. ತ್ಯಾಗದ ಸಂಕೇತವಾದ ಕಾವಿ ತೊಟ್ಟು ಬಂದವರಿಗೆ ಅದು ಜನರನ್ನು ಸನ್ಮೋಹಗೊಳಿಸಲು ಸಾಧನ ಅಷ್ಟೇ. ಆಂತರ್ಯದಲ್ಲಿ ಅವರು ಸಾಮಾನ್ಯರಿಗಿಂತಾ ಅತಿ ಸಾಮಾನ್ಯರು ಎನ್ನುವುದನ್ನು ಬಿಗ್ ಬಾಸ್ ರುಜುವಾತುಪಡಿಸಿದೆ.

  ಒಂದು ಗಂಟೆಯನ್ನು ಕ್ಷಣಗಳನ್ನಾಗಿಸುವ ಕಾರ್ಯಕ್ರಮ

  ಒಂದು ಗಂಟೆಯನ್ನು ಕ್ಷಣಗಳನ್ನಾಗಿಸುವ ಕಾರ್ಯಕ್ರಮ

  ಏನಾದರಾಗಲಿ ನನ್ನ ಮಟ್ಟಿಗಂತೂ 'ಬಿಗ್ ಬಾಸ್' ಹಲವು ಚಿಂತನೆಗಳಿಗೆ ದಾರಿ ಮಾಡಿಕೊಡುವ ಕಾರ್ಯಕ್ರಮ. ಅದರ ಆಗುಹೋಗುಗಳಿಗೆ ನೋಡಗರನ್ನು ಪ್ರತಿಸ್ಪಂದಿಸುವಂತೆ ಮಾಡುವ ಕಾರ್ಯಕ್ರಮ. ಒಂದು ಗಂಟೆಯನ್ನು ಹಲವು ಕ್ಷಣಗಳನ್ನಾಗಿಸುವ ಕಾರ್ಯಕ್ರಮ. ಬಿಗ್ ಬಾಸ್ ಬಹಳ ದೊಡ್ಡ ಆಕರ್ಷಣೆ ಎಂದರೆ, ಕೆಲವರನ್ನು ಮಾತ್ರ ಹೊರತು ಪಡಿಸಿದರೆ, ಉಳಿದವರೆಲ್ಲರೂ ಆಡುವ ಸುಂದರ ಕನ್ನಡ!

  ಜೀವಂತಿಕೆಯನ್ನು ಕಟ್ಟಿಕೊಡುವ ಸುದೀಪ್

  ಜೀವಂತಿಕೆಯನ್ನು ಕಟ್ಟಿಕೊಡುವ ಸುದೀಪ್

  ಮತ್ತು ತುಂಬಾ ಜೀವಂತಿಕೆಯನ್ನು ಕಟ್ಟಿಕೊಡುವ ಸುದೀಪ್ ಅವರ ಮೂರುದಿನದ ಸಾಂಗತ್ಯ. ವರ್ಷಗಟ್ಟಲೇ ಪ್ರಸಾರಗೊಂಡರೂ ಅದರ ಶೀರ್ಷಿಕೆ ಸಹ ನೆನಪಿರದಂತೆ ಕಣ್ಣತುದಿಯಲ್ಲೇ ಜಾರಿಹೋಗುವ ಧಾರಾವಾಹಿಗಳಿಗಿಂತಾ, ಮಕ್ಕಳ ಹಾಡು ಮತ್ತು ನೃತ್ಯ, ಹಾಗೂ ಬಿಗ್ ಬಾಸ್ ನಂಥಾ ವಾಸ್ತವವನ್ನು ಬಿಂಬಿಸುವ ‘ಜೀವಂತ' ಕಾರ್ಯಕ್ರಮಗಳು ಸ್ವಾಗತಾರ್ಹವೇ.

  English summary
  Kannada blogger Shantha Nagaraj writes about on Bigg Boss Kannada. Why she likes the show? Here is her free thoughts and openion about the show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X