»   » ಸುವರ್ಣ ರಿಯಾಲಿಟಿ ಶೋ ನಿರೂಪಕರಾಗಿ ಸಂತೋಷ್

ಸುವರ್ಣ ರಿಯಾಲಿಟಿ ಶೋ ನಿರೂಪಕರಾಗಿ ಸಂತೋಷ್

Posted By:
Subscribe to Filmibeat Kannada

ಬಿಗ್ ಬಾಸ್ ರಿಯಾಲಿಟಿ ಶೋಗೆ ತೆರೆಬೀಳಲು ಸಮಯ ಹತ್ತಿರವಾಗುತ್ತಿದೆ. ಇದಾಗ ಬಳಿಕ ಏನು ಎಂಬ ಪ್ರಶ್ನೆಗೆ ಉತ್ತರಕ್ಕೆ ಸುವರ್ಣ ವಾಹಿನಿ ಮತ್ತೊಂದು ರಿಯಾಲಿಟಿ ಶೋಗೆ ಅಣಿಯಾಗಿದೆ.

'ಪ್ಯಾಟೆ ಹುಡ್ಗೀರ ಹಳ್ಳಿ ಲೈಫು' ಕಾರ್ಯಕ್ರಮದ ಎರಡು ಆವೃತ್ತಿಗಳ ಭಾರಿ ಯಶಸ್ಸಿನ ನಂತರ ಸ್ಟಾರ್ ನೆಟ್ ವರ್ಕ್ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು ಈಗ ಅದರ 3ನೇ ಆವೃತ್ತಿ ಪ್ರಾರಂಭಿಸುತ್ತಿರುವುದನ್ನು ಘೋಷಿಸಿದೆ.

ಇದೊಂದು ವಿಭಿನ್ನ ಶೈಲಿಯ ಕಾರ್ಯಕ್ರಮವಾಗಿದ್ದು ಇದರಲ್ಲಿ ನಗರ ಪ್ರದೇಶದಲ್ಲಿ ಬೆಳೆದ ಹಳ್ಳಿಯ ಸೊಗಡಿನ ವಾಸನೆಯನ್ನೂ ಅರಿಯದ ಹುಡುಗಿಯರು ಸುಮಾರು 3 ತಿಂಗಳುಗಳ ಕಾಲ ಹಳ್ಳಿಯಲ್ಲಿಯೇ ವಾಸ್ತವ್ಯ ಹೂಡುವುದಾಗಿದೆ. ಸ್ಪರ್ಧಿಗಳು ನಗರದ ಐಷಾರಾಮಿ ಜೀವನವನ್ನು ಸಂಪೂರ್ಣವಾಗಿ ತೊರೆದು ಮೂಲಭೂತ ಸೌಕರ್ಯಗಳನ್ನು ಪಡೆಯಲು ಹಳ್ಳಿಯಲ್ಲಿ ಪರದಾಡುವ ಪರಿಸ್ಥಿಯ ಹಂದರವೇ 'ಪ್ಯಾಟೆ ಹುಡ್ಗೀರ ಹಳ್ಳಿ ಲೈಫು'.

ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರಿಯೆ

ಅಲ್ಲದೇ ಪ್ರತಿದಿನ ವಿವಿಧ ಬಗೆಯ ಸವಾಲುಗಳನ್ನು ಸ್ವೀಕರಿಸಿ ಸೆಣಸಾಡಬೇಕಾಗುತ್ತದೆ. ಪ್ರತಿ ವಾರವೂ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದ್ದು ಯಾರು ಕಾರ್ಯಕ್ರಮದ ಎಲ್ಲ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತಾ ಕೊನೆಯವರೆಗೂ ಸಾಗುತ್ತಾರೊ ಅವರೇ ವಿಜಯಶಾಲಿ ಎಂದು ಘೋಷಿಸಲಾಗುತ್ತದೆ.

ಹಳ್ಳಿ ಲೈಫನ್ನು ಪ್ರಸ್ತುತ ಪಡಿಸುವ ಕಾರ್ಯಕ್ರಮ

ಸುವರ್ಣ ವಾಹಿನಿಯಿಂದ ಕಿರುತೆರೆಗೆ ಪರಿಚಯಿಸಲ್ಪಟ್ಟ ಕಾರ್ಯಕ್ರಮ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು, ಇದರ ಮೊದಲ ಎರಡು ಆವೃತ್ತಿಗಳು ಯಶಸ್ವಿಗೊಂಡಿದ್ದು ಇದು ಕಾರ್ಯಕ್ರಮದ ಮೂರನೇ ಆವೃತ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳೆಂದರೆ ಬೃಹತ್ತಾದ ಸೆಟ್ ಗಳು, ದೊಡ್ಡ ದೊಡ್ಡ ಬಂಗಲೆಗಳಿಗೆ ಪ್ರಮುಖ ಸ್ಥಾನವಿರುತ್ತದೆ ಆದರೆ ಈ ಕಾರ್ಯಕ್ರಮ ನಿಸರ್ಗ ಹಾಗೂ ಹಳ್ಳಿಯ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮವಾಗಿದೆ.

ಇದೇ ಅಕ್ಟೋಬರ್ 6 ರಿಂದ ಪ್ರಾರಂಭ

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಇದೇ ಅಕ್ಟೋಬರ್ 6 ರಿಂದ ಪ್ರಾರಂಭವಾಗುತ್ತದೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ನೂರು ಜನ್ಮಕೂ, ಅಭಿರಾಮ ಚಲನಚಿತ್ರದ ನಾಯಕ ನಟ, ಬಿಗ್ ಬಾಸ್ ಸೀಸನ್ -2 ಕಾರ್ಯಕ್ರಮದ ಸ್ಪರ್ಧಿ ಸಂತೋಷ ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ 3 ನೇ ಆವೃತ್ತಿಯ ನಿರೂಪಕರು.

ಮೇಲುಕೋಟೆ ಹತ್ತಿರವಿರುವ ರಾಯಸಮುದ್ರ ಗ್ರಾಮ

18 ರಿಂದ 24 ವರ್ಷದ ಹತ್ತು ಹುಡುಗಿಯರನ್ನು ಸೂಕ್ತ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗಿದೆ. ಈ 10 ಜನ ಹುಡುಗಿಯರು ಮೇಲುಕೋಟೆ ಹತ್ತಿರವಿರುವ ರಾಯಸಮುದ್ರ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದು ಸಾಕಷ್ಟು ಟಾಸ್ಕ್ ಮತ್ತು ತಿರುವುಗಳನ್ನು ಎದುರಿಸಲಿದ್ದಾರೆ.

13 ವಾರಗಳ ಕಾಲ ಮೊಬೈಲ್ ನಿಂದ ದೂರ

ಇವರು ಮೊಬೈಲ್, ಸೋಷಿಯಲ್ ನೆಟ್‍ವರ್ಕ್, ವಾಟ್ಸ್ ಅಪ್ ಮೊದಲಾದವುಗಳ ಸಂಪರ್ಕದಿಂದ 13 ವಾರಗಳ ಕಾಲ ದೂರವಿದ್ದು ಹಳ್ಳಿಯ ಸೊಗಡು ಸೌಂದರ್ಯವನ್ನು ಸವಿಯುತ್ತಾ ಹಳ್ಳಿ ಜೀವನದ ಕೆಲವೊಂದು ಕಠಿಣತೆಗಳನ್ನು ಎದುರಿಸಿ ಸಾಮಾನ್ಯ ಜೀವನ ನಡೆಸಬೇಕಾಗುತ್ತದೆ.

ಈ ಹೊಸ ಕಾರ್ಯಕ್ರಮ ವೀಕ್ಷಕರಿಗೆ ಇಷ್ಟವಾಗಲಿದೆ

ಸುವರ್ಣ ವಾಹಿನಿಯ ಬಿಜಿನೆಸ್ ಹೆಡ್ ಅನುಪ್ ಚಂದ್ರಶೇಖರನ್ ಹೇಳುವಂತೆ, "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ಪ್ರಾರಂಭಿಸುತ್ತಿರುವುದಕ್ಕೆ ನಮಗೆ ತುಂಬಾ ಸಂತಸವೆನಿಸುತ್ತಿದೆ. ಇದರ ಮೊದಲೆರಡು ಆವೃತ್ತಿಗಳು ಭರ್ಜರಿ ಯಶಸ್ಸು ಕಂಡಿದ್ದವು. ನಮ್ಮ ಪ್ರತಿಯೊಂದು ಕಾರ್ಯಕ್ರಮವು ಕನ್ನಡ ಪ್ರೇಕ್ಷಕರಿಗೆ ಹೊಸದು ಮತ್ತು ಮನೋರಂಜನೆಯನ್ನು ಕೊಡುವ ಪ್ರಯತ್ನವಾಗಿದೆ. ಈ ಆವೃತ್ತಿಯು ಮೊದಲೆರಡರ ಆವೃತ್ತಿಗಿಂತ ಹೆಚ್ಚು ಮನೋರಂಜನೆಯಿಂದ ಕೂಡಿರುವಂತೆ ಆಯೋಜಿಸಲಾಗಿದೆ. ನಮ್ಮ ವೀಕ್ಷಕರು ಈ ಹೊಸ ಕಾರ್ಯಕ್ರಮವನ್ನು ಇಷ್ಟಪಡುತ್ತಾರೆಂಬ ನಂಬಿಕೆ ನಮ್ಮದು" ಎಂದರು.

English summary
Star Networks Suvarna channel launchs a new reality show 'Pyate Hudgeer Halli Lifu Season-3' on October 6 th 8pm (Mon- Fri). This is a unique format show where girls from city have to live in a village for over 3 months. Anchoring by Bigg Boss contestant Santhosh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada