For Quick Alerts
  ALLOW NOTIFICATIONS  
  For Daily Alerts

  ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ

  By Harshitha
  |

  ಕನ್ನಡ ಚಿತ್ರರಂಗದಲ್ಲಿ ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಸ್ಯಾಂಡಲ್ ವುಡ್ ಗೆ ಕಾಲಿಟ್ಟ 20 ವರ್ಷಗಳಲ್ಲಿ ಇಂತಹ ಸಾಧನೆ ಮಾಡಿರುವ ದರ್ಶನ್ ಒಂದ್ಕಾಲದಲ್ಲಿ ಒಂದೊಂದು ರೂಪಾಯಿ ಸಂಪಾದನೆ ಮಾಡುವುದಕ್ಕೂ ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ.

  ತಂದೆ ತೂಗುದೀಪ ಶ್ರೀನಿವಾಸ್ ತೀರಿಕೊಂಡ ನಂತರ ದರ್ಶನ್ ಕುಟುಂಬ ಅನುಭವಿಸಿದ ಯಾತನೆ ಹೇಳತೀರದು. [ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!]

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ತಮ್ಮ ಬದುಕಿನ ನೋವಿನ ಕ್ಷಣಗಳನ್ನ ದರ್ಶನ್ ಮೆಲುಕು ಹಾಕಿದರು. ಅದೆಲ್ಲವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

  ಮನೆ ಮಾರುವುದಕ್ಕೆ ರೆಡಿಯಾಗಿದ್ದು...

  ಮನೆ ಮಾರುವುದಕ್ಕೆ ರೆಡಿಯಾಗಿದ್ದು...

  ''ನನಗೆ ಅಮ್ಮ ಅನ್ನೋಕ್ಕಿಂತ ಹೆಚ್ಚಾಗಿ ಫ್ರೆಂಡ್. ಎಲ್ಲವನ್ನೂ ಶೇರ್ ಮಾಡ್ತೀವಿ. ನಮ್ಮದೇನೇನಿದೆ ಎಲ್ಲವನ್ನೂ ಮಾತಾಡ್ತೀವಿ. ನಮ್ಮ ತಂದೆಗೆ ಆರೋಗ್ಯ ಹದಗೆಟ್ಟಾಗ ನಮ್ಮ ತಾಯಿ ಏನೇನು ಕೂಡಿ ಇಟ್ಟಿದ್ರು, ಅದೆಲ್ಲಾ ಕಳೆದುಬಿಟ್ರು. ನಮ್ಮ ತಾಯಿಗೆ ಇದ್ದ ಆಸೆ ಏನು ಅಂದ್ರೆ, ಮಕ್ಕಳಿಗೆ ತಂದೆಯಾಗಿ ಅವರು ಮನೆಯಲ್ಲಿರಲಿ ಸಾಕು ಅಂತ. ಕೊನೆಗೆ ಮನೆ ಮಾರೋಕೆ ಕೂಡ ರೆಡಿಯಾಗಿದ್ವಿ. ಅಪ್ಪ ಹೇಳ್ತಿದ್ರು, ''ಭಗವಂತ ನನ್ನ ಬೇಗ ಕರ್ಕೊಂಡ್ಬಿಟ್ಟರೆ ಸಾಕು. ಇಲ್ಲಾಂದ್ರೆ ಮನೆ ಮಾರೋಕೂ ರೆಡಿ ಇದ್ದೀರಾ ಅಂತ'' - ದರ್ಶನ್ ['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?]

  ತಂದೆ ಹೋದ ನಂತರ ಕಷ್ಟ

  ತಂದೆ ಹೋದ ನಂತರ ಕಷ್ಟ

  ''ತುಂಬಾ ಸುಂದರವಾದ ಸಂಸಾರ. ಬಹಳ ಚೆನ್ನಾಗಿದ್ವಿ ನಾವು. ತಂದೆ ಹೋದ್ಮೇಲೆ ತುಂಬಾ ಕಷ್ಟ ಆಯ್ತು. ಊಟಕ್ಕೂ ಕೂಡ ಕಷ್ಟ ಆಯ್ತು. ಅರ್ಧ ಲೀಟರ್ ಹಾಲು ತರುವುದಕ್ಕೂ ಕೂಡ ಕಾಸು ಇರ್ಲಿಲ್ಲ ನಮ್ಮ ಹತ್ರ. ಮೂರು ಜನ ಮಕ್ಕಳು ಮತ್ತು ನಾನು. ನಾವೇ ಕಷ್ಟವನ್ನ ಅನುಭವಿಸಿದ್ದೀವಿ'' - ಮೀನಾ ತೂಗುದೀಪ ಶ್ರೀನಿವಾಸ್, ದರ್ಶನ್ ತಾಯಿ

  ಕಿಡ್ನಿ ಸಮಸ್ಯೆ

  ಕಿಡ್ನಿ ಸಮಸ್ಯೆ

  ''ಅಪ್ಪನಿಗೆ ಕಿಡ್ನಿ ಸಮಸ್ಯೆ ಇತ್ತು. ಅದೊಂಥರಾ ಬಿಳಿ ಆನೆ ಸಾಕಿದ ಹಾಗೆ. ಮಾತ್ರೆಗೆ 10 ಸಾವಿರ. ಆಗಿನ ಕಾಲಕ್ಕೆ! ತಿಂಗಳಿಗೆ 40 ಸಾವಿರ ಬೇಕಿತ್ತು. ಎಲ್ಲಿಂದ ತರಬೇಕಿತ್ತು ನಾವು. ಎಲ್ಲರೂ ಅಂದುಕೊಂಡಿರಬಹುದು ನಮ್ಮ ತಂದೆ ದೊಡ್ಡ ಕಲಾವಿದ ಅಂತ. ಅವರು ಹೆಚ್ಚು ಸಂಭಾವನೆ ಪಡೆದಿರುವುದು ಅಂದ್ರೆ 10 ಸಾವಿರ ರೂಪಾಯಿ. ಅಷ್ಟೆ!'' - ದರ್ಶನ್

  ಯಾವ ಸಂಬಂಧಿಕರೂ ಬರ್ಲಿಲ್ಲ!

  ಯಾವ ಸಂಬಂಧಿಕರೂ ಬರ್ಲಿಲ್ಲ!

  ''ತಂದೆಗೆ ಕಿಡ್ನಿ ಹೋಯ್ತು. ಎಲ್ಲಾ ದುಡ್ಡು ಹೋಯ್ತು. ಇವತ್ತು ಹೇಳಬಹುದು ರಿಲೇಷನ್ಸ್ ಇದ್ದಾರೆ ಅಂತ. ಆದರೆ ನಮಗೆ ಯಾರೂ ಇಲ್ಲ. ಇವತ್ತು ನನ್ನ ತಾಯಿ ತಮ್ಮಂದಿರಲ್ಲಿ ಒಬ್ಬ ನನ್ನ ಮುಂದೆ ನಿಂತುಕೊಳ್ಳುವುದಕ್ಕೆ ಹೇಳಿ..ಯಾರೂ ನಿಲ್ಲಲ್ಲ. ಅಂತಹ ಸನ್ನಿವೇಶ ನಡೆದಿದೆ. ನನಗೆ ಅಜ್ಜಿ-ತಾತ ಅಂತ ಹೇಳಿಕೊಳ್ಳುವುದಕ್ಕೂ ನಾಚಿಕೆ ಆಗುತ್ತೆ. ನಮ್ಮಮ್ಮನ ಅಪ್ಪ-ಅಮ್ಮ. ಅವರು ಸತ್ತಾಗಲೂ ನಾನು ನೋಡೋಕೆ ಹೋಗಲಿಲ್ಲ. ಅಷ್ಟು ಚೀಪ್ ಆಗಿ ಜನ ಇರ್ತಾರಾ ಅನ್ಸುತ್ತೆ. ನಿಜವಾಗಲೂ ದೇವರಂತಹ ಬಾವ ಸಿಕ್ಕಿದ್ರು ನಮಗೆ'' - ದರ್ಶನ್

  500 ರೂಪಾಯಿ ಇಟ್ಕೊಂಡು ಬಂದಿದ್ದು

  500 ರೂಪಾಯಿ ಇಟ್ಕೊಂಡು ಬಂದಿದ್ದು

  ''ನಮಗೆ ಯಾರೂ ಇರ್ಲಿಲ್ಲ. ಇವತ್ತೇನೋ ಆಸ್ತಿಗೆ ಕಿತ್ತಾಟ ಅಂತಾರೆ. ಅಂತಹ ಆಸ್ತಿಗೆ ಏನೇನೋ ಆಗಿ ಹೋಗಿದೆ. 500 ಇಟ್ಕೊಂಡು ಬೆಂಗಳೂರಿಗೆ ಬಂದೋನು ನಾನು. ಜನರು ಹೊಟ್ಟೆ ತುಂಬಾ ಊಟ ಹಾಕಿದ್ದಾರೆ. ಕಣ್ಣಲ್ಲಿ ನೋಡಿದ್ದು ತೆಗೆದುಕೊಳ್ಳುವ ಹಾಗೆ ಕೊಟ್ಟಿದ್ದಾರೆ. ಇನ್ನೇನ್ ಬೇಕು ನನಗೆ'' - ದರ್ಶನ್

  ತಿನ್ನೋಕೂ ಗತಿ ಇರ್ಲಿಲ್ಲ

  ತಿನ್ನೋಕೂ ಗತಿ ಇರ್ಲಿಲ್ಲ

  ''ಅಪ್ಪ ಹೋದ ಮೇಲೆ ನಮಗೆ ತಿನ್ನೋಕೂ ಗತಿ ಇರ್ಲಿಲ್ಲ. ನಮ್ಮ ಪಕ್ಕದ ಮನೆಯಲ್ಲಿ ನಿರ್ಮಲಾ ಆಂಟಿ ಅಂತಿದ್ರು. ಅವರಿಗೆ ತುಂಬಾ ಚೆನ್ನಾಗಿ ಗೊತ್ತು ನಾನು ನಾನ್-ವೆಜ್ ಪ್ರಿಯ ಅಂತ. ಅವರ ಮನೆಯಲ್ಲಿ ಮಾಡಿದಾಗ ನಮಗೂ ಕೊಡ್ತಿದ್ರು. ಹೀಗೆ ನಮ್ಮ ಅಕ್ಕ-ಪಕ್ಕದವರು, ನಮ್ಮ ಫ್ರೆಂಡ್ಸ್ ಸಾಕಿದ್ದಾರೆ ಹೊರತೂ ನಮ್ಮ ಫ್ಯಾಮಿಲಿ ಮಾತ್ರ ಸಾಕಿಲ್ಲ. ಅವತ್ತೆ ಅಂದುಕೊಂಡೆ ಫ್ಯಾಮಿಲಿ ಎಲ್ಲಾ ವೇಸ್ಟ್ ಅಂತ'' - ದರ್ಶನ್

  ತಂದೆ ಸತ್ತಾಗ...

  ತಂದೆ ಸತ್ತಾಗ...

  ''ನಮ್ಮ ತಂದೆಗೆ ಕಿಡ್ನಿ ಟ್ರ್ಯಾನ್ಸ್ ಪ್ಲಾಂಟ್ ಆದ್ಮೇಲೆ ನಾನು 'ನೀನಾಸಂ'ಗೆ ಹೋಗಿದ್ದು. ಅಮ್ಮನೇ ಒಂದು ಕಿಡ್ನಿಯನ್ನ ಅವರಿಗೆ ನೀಡಿದರು. ಇವತ್ತಿಗೂ ಅವರು ಒಂದು ಕಿಡ್ನಿಯಲ್ಲೇ ಇದ್ದಾರೆ. ಅವರು ತೀರಿಕೊಂಡರು ಅಂತ ಗೊತ್ತಾದಾಗ ನಾನು 'ನೀನಾಸಂ'ನಲ್ಲಿದ್ದೆ. ಅವತ್ತು ಕಾವೇರಿ ಗಲಾಟೆ. ಎಲ್ಲೂ ಒಂದು ಬಸ್ ಇಲ್ಲ. ಒಬ್ಬರ ಹತ್ತಿರ ಡ್ರಾಪ್ ಕೇಳಿದೆ. ನಾನು ತೂಗುದೀಪ ಶ್ರೀನಿವಾಸ್ ಮಗ ಅಂತ ಗೊತ್ತಾದ್ಮೇಲೆ ಅವರೇ ಊಟ ಮಾಡಿಸಿ, ಮನೆ ಹತ್ರ ಬಿಟ್ಟು ಹೋದರು. ಆ ಪುಣ್ಯಾತ್ಮ ಎಲ್ಲಿದ್ದಾರೋ, ಚೆನ್ನಾಗಿರಲಿ ಅಂತ ನಾನು ಆಶಿಸುತ್ತೇನೆ'' - ದರ್ಶನ್

  ಬಾವನಿಗೆ ಹ್ಯಾಟ್ಸ್ ಆಫ್

  ಬಾವನಿಗೆ ಹ್ಯಾಟ್ಸ್ ಆಫ್

  ''ನಮ್ಮ ಬಾವ ನೋಡಿದಾಗ, ನನಗೆ ಅಪ್ಪ ಇಲ್ಲ ಅಂತ ಅನಿಸುವುದೇ ಇಲ್ಲ. ನಮ್ಮ ಅಕ್ಕನ ಮದುವೆ ಮಾಡಿದ್ದೇ ಒಂದು ದೊಡ್ಡ ಮಿರಾಕಲ್. ಯಾಕಂದ್ರೆ, ಮನೆಯಲ್ಲಿ ದುಡಿಯುವವರು ಯಾರು ಇಲ್ಲ. ಮೇಲಿನ ಮನೆ ಭೋಗ್ಯಕ್ಕೆ ಹಾಕಿ, ಆ ದುಡ್ಡಲ್ಲಿ ಮದುವೆ ಮಾಡಿದ್ದು. ಏನನ್ನೂ ಡಿಮ್ಯಾಂಡ್ ಮಾಡದೆ ಮದುವೆ ಆದರು ನಮ್ಮ ಬಾವ. ಅದಕ್ಕೆ ನಾನು ಹ್ಯಾಟ್ಸ್ ಆಫ್ ಹೇಳ್ತೀನಿ. ನಮ್ಮ ಮನೆ ಪರಿಸ್ಥಿತಿ ಅವರಿಗೆ ತುಂಬಾ ಚೆನ್ನಾಗಿ ಗೊತ್ತಿತ್ತು'' - ದರ್ಶನ್

  ಕೈಯಲ್ಲಿ ಏನೂ ಇರ್ಲಿಲ್ಲ!

  ಕೈಯಲ್ಲಿ ಏನೂ ಇರ್ಲಿಲ್ಲ!

  ''ನಮ್ಮ ಕೈಯಲ್ಲಿ ಏನೂ ಇರ್ಲಿಲ್ಲ. ಎಕ್ಸಿಬಿಷನ್ ಗೆ ಹೋದಾಗ, ನನ್ನ ಕೈಗೆ ಐದು ಸಾವಿರ, ದಿನಕರ್ ಕೈಗೆ ಐದು ಸಾವಿರ ಕೊಟ್ಟು ಅವರು ಕೇಳ್ತಿದ್ರು, ಅದು ಕೊಡ್ಸು, ಇದು ಕೊಡ್ಸು ಅಂತ. ನಮ್ಮ ಹತ್ರ ಖಾಲಿ ಆದ್ಮೇಲೆ ಮತ್ತೆ ಕೊಡ್ತಿದ್ರು. ಅವರು ಒಂದು ಮಾತು ಹೇಳಿದ್ರು, ''ನೀವಿಬ್ರು ದುಡಿಯೋಕೆ ಶುರು ಮಾಡಿ, ಅವತ್ತು ನಾನು ಪರ್ಸ್ ತರಲ್ಲ'' ಅಂತ. ಇವತ್ತಿಗೂ ನಮ್ಮ ಬಾವನ್ನ ನಾವು ಪರ್ಸ್ ತೆಗೆಯುವುದಕ್ಕೆ ಬಿಡ್ತಾಯಿಲ್ಲ'' - ದರ್ಶನ್

  ಹಾಲು ಮಾರಲು ಶುರು ಮಾಡಿದೆ

  ಹಾಲು ಮಾರಲು ಶುರು ಮಾಡಿದೆ

  ''ಮನೆಯಲ್ಲಿ ವರಮಾನ ಇಲ್ಲ. ಅಕ್ಕನಿಗೆ ಮದುವೆ ಆಯ್ತು. ಹಾಲು ಮಾರೋಣ ಅಂತ, ಆಗ ನಮ್ಮ ತಾಯಿಯ ಎರಡು ಬಳೆಗಳನ್ನ ಮೊದಲು ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಗಿರವಿ ಇಟ್ಟವನು ನಾನೇ. ಅದರಿಂದ ಬಂದ 11 ಸಾವಿರ ರೂಪಾಯಿಯಲ್ಲಿ 10 ಸಾವಿರಕ್ಕೆ ಒಂದು ಹಸು ತಗೊಂಡೆ. ಅದರಿಂದ ಹಾಲು ಮಾರೋಕೆ ಶುರು ಮಾಡಿದ್ದು'' - ದರ್ಶನ್

  ಮೆಸ್ ಮಾಡಿದ್ರು!

  ಮೆಸ್ ಮಾಡಿದ್ರು!

  ''ನಾನು ಮೆಸ್ ಮಾಡಿ ನನ್ನ ಮಕ್ಕಳನ್ನ ಸಾಕಿದ್ದೀನಿ. ಅದರಲ್ಲಿ ಏನೂ ಹಿರಿಮೆ ಇಲ್ಲ. ಆದ್ರೆ, ತೂಗುದೀಪ ಶ್ರೀನಿವಾಸ್ ಹೆಸರಿಗೆ ಕಳಂಕ ತಂದಿಲ್ಲ. ಅವರಿಂದ ಈ ಸ್ಥಾನಕ್ಕೆ ನಾವು ಬಂದಿದ್ದೀವಿ. ಆ ಹೆಸರು ಹಾಗೇ ಉಳಿದುಕೊಳ್ಳಬೇಕು ಅನ್ನೋದು ನನ್ನ ಆಸೆ'' - ಮೀನಾ ತೂಗುದೀಪ ಶ್ರೀನಿವಾಸ್, ದರ್ಶನ್ ತಾಯಿ

  ರಿಯಲ್ ಹೀರೋ

  ರಿಯಲ್ ಹೀರೋ

  ''ನಮ್ಮ ತಂದೆ was a Real Hero at home. ತಕ್ಕ ಗಂಡ, ಮಕ್ಕಳಿಗೆ ತಕ್ಕ ಅಪ್ಪ. ನಮ್ಮನ್ನ ಯಾವುದೇ ಆಡಂಬರದಲ್ಲಿ ಬೆಳೆಸಿಲ್ಲ. ಅವರು ಬದುಕಿದ್ದು ಹಾಗೆ. ಅವರು ಬದುಕಿದ್ದ ದಾರಿಯನ್ನ ನಾವು ಮಾದರಿಯಾಗಿ ಇಟ್ಕೊಂಡು ಎತ್ಕೊಂಡು ಹೋಗ್ತಿದ್ದೀವಿ ಅಷ್ಟೆ'' - ದರ್ಶನ್

  English summary
  Kannada Actor Darshan's struggling life story was revealed in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X