»   » ಗುಟ್ಟಾಗಿದ್ದ 'ಪ್ರಣಯ ರಾಜ' ನಟ ಶ್ರೀನಾಥ್ ರ ಪ್ರಣಯ ಪುರಾಣ ಬಯಲು

ಗುಟ್ಟಾಗಿದ್ದ 'ಪ್ರಣಯ ರಾಜ' ನಟ ಶ್ರೀನಾಥ್ ರ ಪ್ರಣಯ ಪುರಾಣ ಬಯಲು

Posted By:
Subscribe to Filmibeat Kannada

ಬ್ಲಾಕ್ ಅಂಡ್ ವೈಟ್ ಕಾಲದಿಂದ ಹಿಡಿದು ಇಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ನಟ 'ಪ್ರಣಯ ರಾಜ' ಶ್ರೀನಾಥ್.

1967ರಲ್ಲಿ ತೆರೆಕಂಡ 'ಲಗ್ನ ಪತ್ರಿಕೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಶ್ರೀನಾಥ್, ಐದು ದಶಕಗಳಿಂದ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. [ಶ್ರೀನಾಥ್ ರನ್ನ 'ಸ್ಟಾರ್' ಮಾಡಿದ್ದೇ ಕೆ.ಎಸ್.ಎಲ್.ಸ್ವಾಮಿ.!]

ತೆರೆ ಮೇಲೆ 'ಪ್ರಣಯ ರಾಜ' ಅಂತಲೇ ಖ್ಯಾತಿ ಪಡೆದಿರುವ ನಟ ಶ್ರೀನಾಥ್ ನಿಜ ಜೀವನದಲ್ಲೂ ಪ್ರಣಯದಲ್ಲಿ ರಾಜನೇ! ನಾಲ್ಕನೇ ಕ್ಲಾಸ್ ನಲ್ಲಿರುವಾಗಲೇ ಕ್ಲಾಸ್ ಮೇಟ್ ಹುಡುಗಿಯನ್ನ ಇಷ್ಟಪಟ್ಟಿದ್ದ ಶ್ರೀನಾಥ್, ಬಾಲಿವುಡ್ ನಟಿ ಆಶಾ ಪರೇಖ್ ಗೆ ಮನಸೋತು ಬಾಂಬೆಗೆ ಹೊರಟ ಘಟನೆ ಬಹುಶಃ ನಿಮಗ್ಯಾರಿಗೂ ಗೊತ್ತಿಲ್ಲ.

ಪ್ರಣಯ ರಾಜ ಶ್ರೀನಾಥ್ ರವರ 'ಪ್ರಣಯ ಪುರಾಣ' ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಯ್ತು. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ನಟ ಶ್ರೀನಾಥ್ ಕುರಿತು....

ನಿಜ ನಾಮ - ನಾರಾಯಣ ಸ್ವಾಮಿ
ಜನ್ಮ ದಿನ - 28 ಡಿಸೆಂಬರ್ 1943
ತಂದೆ - ದಿವಂಗತ ರಾಮ ಶಾಸ್ತ್ರಿ, ತಾಯಿ ದಿವಂಗತ ಲಲಿತಾ
ಅಣ್ಣ - ಸಿ.ಆರ್.ಸಿಂಹ
ಪತ್ನಿ - ಗೀತಾ
ಮಕ್ಕಳು - ರೋಹಿತ್, ಅಮೂಲ್ಯ

ಸ್ವಾತಂತ್ರೋತ್ಸವದಲ್ಲಿ ಭಾಗಿ

''1947ನೇ ಇಸವಿ, ಆಗಸ್ಟ್ 15 ರಂದು ಯಲ್ಲಿ ನಮ್ಮ ಅಪ್ಪ ಡಿ.ವಿ.ಜಿ ರಸ್ತೆಗೆ ಕರ್ಕೊಂಡು ಹೋಗಿದ್ರು. ಅಲ್ಲಿ ದೊಡ್ಡ ಮೆರವಣಿಗೆ ಹೋಗ್ತಾಯಿತ್ತು. ನನಗೆ ಅದೆಲ್ಲಾ ಅರ್ಥ ಆಗ್ತಿರ್ಲಿಲ್ಲ. 'ಭಾರತ್ ಮಾತಾ ಕೀ ಜೈ' ಅಂತ ಎಲ್ಲರೂ ಕೂಗುತ್ತಾ ಇದ್ದರು. ನಾನೂ ಕೂಡ ಸ್ವಾತಂತ್ರೋತ್ಸವದಲ್ಲಿ ಭಾಗವಹಿಸಿದ ಒಂದು ಖುಷಿ ಇದೆ'' - ಶ್ರೀನಾಥ್ ['ಬೆಣ್ಣೆ ದೋಸೆ' ಸೆಟ್ ನಲ್ಲಿ ಮತ್ತೆ ನೆನಪಾದ 'ಮಾನಸ ಸರೋವರ']

ತಾಯಿಗೆ ಕ್ಷಯ ರೋಗ

''ನಮ್ಮ ತಾಯಿಗೆ ಕ್ಷಯ ರೋಗ ಬಂದಿತ್ತು. ನಾನು ಅವರ ಹತ್ತಿರ ಹೋಗುವ ಹಾಗೆ ಇರ್ಲಿಲ್ಲ. ನಮ್ಮ ತಂದೆ ಫೀಡಿಂಗ್ ಬಾಟಲ್ ಇಟ್ಕೊಂಡು ನನಗೆ ಹಾಲು ಕುಡಿಸೋರು. ತಾಯಿ ಆಸ್ಪತ್ರೆಯಲ್ಲಿದ್ದರು. ನನ್ನನ್ನ ಶನಿವಾರ ಮತ್ತು ಭಾನುವಾರ ಮಾತ್ರ ಕರ್ಕೊಂಡು ಹೋಗ್ತಿದ್ರು'' - ಶ್ರೀನಾಥ್

ತಂದೆ ಹೇಗೆ ಅಂದ್ರೆ...

''ನನ್ನ ತಂದೆ ನನಗೆ ಬೈದಿಲ್ಲ ಮತ್ತು ಹೊಡೆದಿಲ್ಲ. ಅವರು ಒಂಥರಾ ಯೂನಿವರ್ಸಿಟಿ ಇದ್ದ ಹಾಗೆ'' - ಶ್ರೀನಾಥ್

ದಿಲ್ ದೇಕೇ ದೇಖೋ...

''ನಾನು ಎಸ್.ಎಸ್.ಎಲ್.ಸಿ ಪಾಸ್ ಮಾಡಿ ಕಾಲೇಜು ಸೇರಿದ್ದೆ. ಆಗಿನ್ನೂ 16 ವರ್ಷ ನನಗೆ. 'ದಿಲ್ ದೇಕೇ ದೇಖೋ' ಸಿನಿಮಾ ರಿಲೀಸ್ ಆಗಿತ್ತು. ಅದರಲ್ಲಿ ಆಶಾ ಪರೇಖ್ ಹೀರೋಯಿನ್. ನಾನು ಆ ಸಿನಿಮಾ ನೋಡೋಕೆ ಹೋಗಿದ್ದೆ'' - ಶ್ರೀನಾಥ್

ಕರೆದದ್ದು ನನ್ನನ್ನೇ.!

''ದಿಲ್ ದೇಕೇ ದೇಖೋ' ಸಿನಿಮಾ 15 ಬಾರಿ ನೋಡೋಕೆ ಹೋಗಿದ್ದೆ. 16 ನೇ ಬಾರಿ ಹೋಗಿದ್ದಾಗ, ಇಂಟರ್ವಲ್ ಮುಂಚೆ ಆಶಾ ಪರೇಖ್ ಅವರದ್ದು ಒಂದು ಕ್ಲೋಸ್ ಅಪ್ ಬರುತ್ತೆ. ಅವರು ಹೀರೋನ ಕರೆಯುವ ಕ್ಲೋಸ್ ಅಪ್ ಅದು. ಅದನ್ನ ನೋಡಿ ನನ್ನನ್ನೇ ಕರೆಯುತ್ತಿದ್ದಾರೆ ಅಂತ ನಾನು ಹೊರಡಲು ಸಿದ್ಧವಾದೆ'' - ಶ್ರೀನಾಥ್

ಬಾಂಬೆ ಟ್ರೇನ್ ಹತ್ತು ಬಿಟ್ಟೆ!

''ನಾನು ಮನೆಗೆ ಹೋಗಿ ಅಪ್ಪನ ಜೇಬಿನಲ್ಲಿ ದುಡ್ಡು ತಗೊಂಡು ಬಾಂಬೆ ಟ್ರೇನ್ ಹತ್ತಿದೆ. ಆಶಾ ಪರೇಖ್ ನನ್ನನ್ನ ಕರೆಯುತ್ತಿದ್ದಾರೆ ಅಂತ. ಆಗ ಅಪ್ಪನಿಗೆ ಬರೆದ ಲೆಟರ್ ಇದು'' - ಶ್ರೀನಾಥ್

ಬಾಂಬೆ ಕೆಟ್ಟ ಊರು!

''ಬಾಂಬೆ ಬ್ರಿಡ್ಜ್ ಮೇಲೆ ಒಬ್ಬನೇ ನಿಂತಿದ್ದೆ. ಎರಡು ಗಂಟೆ ಹಾಗೇ ನಿಂತಿದ್ದರೂ, ಯಾರೂ ನೋಡಲೇ ಇಲ್ಲ ನನ್ನ. ಆಶಾ ಪರೇಖ್ ಗೆ ಹೀರೋ ಆಗೋನು ನಾನು. ನನ್ನ ಯಾರೂ ನೋಡಲೇ ಇಲ್ಲ ಅಂತ ಬೇಜಾರಾಗೋಯ್ತು. ಬಾಂಬೆ ಕೆಟ್ಟ ಊರು ಅಂತ ಗೊತ್ತಾಗಿದ್ದೇ ಅವಾಗ. ಅದಕ್ಕೆ ವಾಪಸ್ ಬಂದುಬಿಟ್ಟೆ'' - ಶ್ರೀನಾಥ್

ವಾಪಸ್ ಬಂದಮೇಲೆ..

''ನಾನು ವಾಪಸ್ ಮನೆಗೆ ಬಂದಾಗ ಅಪ್ಪ ಹೇಳಿದಿಷ್ಟು, ''ಎಲ್ಲೇ ಹೋಗುವುದಿದ್ದರೂ, ಹೇಳಿಬಿಟ್ಟು ಹೋಗು. ಹೇಳದೆ ಹೋಗಬೇಡ'' ಅಂತ. ಆಮೇಲೆ ಸುಮಾರು ಬಾರಿ ಬಾಂಬೆಗೆ ಹೋದೆ. ಒಂದು ಬಾರಿ ಕೂಡ ಆಶಾ ಪರೇಖ್ ರವರನ್ನ ಮೀಟ್ ಮಾಡುವುದಕ್ಕೆ ಆಗಲಿಲ್ಲ'' - ಶ್ರೀನಾಥ್

ಒಲಿದ ಅದೃಷ್ಟ

''1988ರಲ್ಲಿ ಕುಮಾರ್ ಬಂಗಾರಪ್ಪ 'ಶರವೇಗದ ಸರದಾರ' ಅಂತ ಸಿನಿಮಾ ಮಾಡಿದ್ರು. ಅದರಲ್ಲಿ ನಾನು ಕುಮಾರ್ ಬಂಗಾರಪ್ಪನ ಅಪ್ಪನ ಪಾತ್ರ ಮಾಡಬೇಕಿತ್ತು. ಅದರಲ್ಲಿ ನನ್ನ ಹೆಂಡತಿ ಪಾತ್ರ ಆಶಾ ಪರೇಖ್. ಇದನ್ನ ಕೇಳಿ ದಢಾರ್ ಅಂತ ಬಿದ್ದು ಬಿಟ್ಟೆ'' - ಶ್ರೀನಾಥ್

ಆಶಾ ಪರೇಖ್ ಭೇಟಿ ಆದ ಕ್ಷಣ

''ಆಶಾ ಪರೇಖ್ ಬರ್ತಾರೆ ಅಂತ ಅವತ್ತು ಶೂಟಿಂಗ್ ದಿನ ಬೆಳಗ್ಗೆ 7.30ಗೆ ಹೋಗಿದ್ದೀನಿ. ಅವರು 8.45 ಕ್ಕೆ ಬಂದರು. ಅದರಲ್ಲಿ ಅಣ್ಣ ಸಿ.ಆರ್.ಸಿಂಹ ಜೊತೆ ಆಗಲೇ ಅವರು ಮೂರು ದಿನ ನಟಿಸಿದ್ದರು. ಅಣ್ಣ ಆಗಲೇ ನನ್ನ ಬಗ್ಗೆ 'Mad man' ಅಂತ ಅವರಿಗೆ ಹೇಳಿದ್ದ'' - ಶ್ರೀನಾಥ್

ಆಶಾ ಪರೇಖ್ ಜೊತೆ ಮಾತನಾಡಿದ ಕ್ಷಣ

''ಅವರನ್ನ ನೋಡಿ 'ನಾನು ಚಿತ್ರರಂಗಕ್ಕೆ ಬರೋಕೆ ನೀವೇ ಕಾರಣ' ಅಂತ ಹೇಳಿದೆ. ಮೂರ್ನಾಲ್ಕು ದಿನ ನಡೆಯುವ ಶೂಟಿಂಗ್ ನಲ್ಲಿ ನಾನು ನಿಮ್ಮನ್ನೇ ನೋಡ್ತಿದ್ರೆ ತಪ್ಪು ತಿಳಿಯಬೇಡಿ ಅಂತ ಆಶಾ ಪರೇಖ್ ಗೆ ಹೇಳಿಬಿಟ್ಟೆ'' - ಶ್ರೀನಾಥ್

ನಾಲ್ಕನೇ ಕ್ಲಾಸ್ ನಲ್ಲಿ ಲವ್ ಸ್ಟೋರಿ!

''ನಾನು ನಾಲ್ಕನೇ ಕ್ಲಾಸ್ ನಲ್ಲಿರುವಾಗಲೇ, ಒಂದು ಕಾಂಪಿಟೇಶನ್ ಮಾಡಿದರು. ಹುಡುಗ-ಹುಡುಗಿ ಇಬ್ಬರೂ ನಟಿಸಬೇಕಿತ್ತು. 'ಮೇಜಿನ ಮೇಲಿಟ್ಟ ಗಾಜಿನ ಲೋಟವ ಒಡೆದವರ್ಯಾರಣ್ಣ' ಅಂತ ಹುಡುಗಿ ಕೇಳಿದ್ರೆ, ನಾನು 'ಇಲ್ಲ' ಅನ್ನಬೇಕಿತ್ತು. ನನಗೆ ಆ ಹುಡುಗಿ 'ಅಣ್ಣ' ಅಂತ ಕರೆಯುತ್ತಾಳಲ್ಲಾ ಅಂತ 'ನಿಲ್ಲಿಸಿ' ಅಂತ ಜೋರಾಗಿ ಕೂಗಿದೆ. ಮೇಷ್ಟ್ರು ಕೇಳಿದಾಗ, 'ಅವಳ ಕೈಯಲ್ಲಿ ಅಣ್ಣ ಅಂತ ಅನಿಸಿಕೊಳ್ಳುವುದು ಇಷ್ಟ ಇಲ್ಲ' ಅಂತ ಹೇಳಿದೆ. ಅಲ್ಲಿಂದಲೇ ಶುರುವಾಗಿದ್ದು. ನಾಲ್ಕನೇ ಕ್ಲಾಸ್ ನಿಂದಲೇ!'' - ಶ್ರೀನಾಥ್

ಆಶಾ ಪರೇಖ್ ಗೆ ಶ್ರೀನಾಥ್ ಇಟ್ಟ ಬೇಡಿಕೆ!

''ಆಶಾ ಜಿ., ನಾನು ನಿಮ್ಮನ್ನ 1958 ರಲ್ಲಿ ನೋಡಿದೆ. 1988ರಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ವಿ. ನೀವು ಕರ್ನಾಟಕಕ್ಕೆ ಬಂದಿದ್ರಿ. ನಾವಿಬ್ಬರು ಗಂಡ-ಹೆಂಡತಿ ಆಗಿ ನಟಿಸಿದ್ವಿ. ಅದಿನ್ನೂ ನನಗೆ ಚೆನ್ನಾಗಿ ಜ್ಞಾಪಕ ಇದೆ. ಇಷ್ಟು ವರ್ಷ ಕಳೆದಿದೆ. ಈಗಲಾದರೂ ಒಮ್ಮೆ ಬೆಂಗಳೂರಿಗೆ ಬನ್ನಿ. ಒಮ್ಮೆ ಆದರೂ ಭೇಟಿ ಮಾಡಬೇಕು ಮತ್ತು ನಿಮ್ಮ ಜೊತೆ ಮಾತನಾಡಬೇಕು'' - ಶ್ರೀನಾಥ್

ಹೀರೋ ಆಗ್ಬೇಕೆನ್ನುವ ಕನಸು

''ಒಂದಿನ ಸ್ಕೂಲ್ ಗೆ ಹೋಗ್ತಿದ್ದಾಗ, ಒಬ್ಬ ಏಣಿ ಹಾಕೊಂಡು ಸಿನಿಮಾ ಪೋಸ್ಟರ್ ಅಂಟಿಸುತ್ತಿದ್ದ. ಅದನ್ನ ನೋಡಿ, ಒಂದು ದಿನ ನನ್ನದೂ ಹೀಗೆ ಬರುತ್ತೆ ಅಂತ ಹೇಳಿದ್ದೆ. ಅವರು ನನ್ನ ತಲೆ ಮೇಲೆ ಹೊಡೆದು 'ಮೊದಲು ಸ್ಕೂಲ್ ಗೆ ಹೋಗು' ಅಂತ ಹೇಳಿದ್ರು'' - ಶ್ರೀನಾಥ್

ಶ್ರೀನಾಥ್ ಹೆಸರು ಬಂದಿದ್ದು?

''ಎಸ್.ಕೆ.ಆಚಾರಿ ಅಂತ ಡೈರೆಕ್ಟರ್ ಒಬ್ಬರು ಇದ್ದರು. ಅವರು ನನ್ನ ಹೀರೋ ಆಗಿ ಸೆಲೆಕ್ಟ್ ಮಾಡಿದರು. ಅಪ್ಪನಿಗೆ ಇಷ್ಟ ಆಗಿ ನನ್ನನ್ನ ಕಳುಹಿಸಿದರು. ನನಗೆ ಇದ್ದ ಒಂದೇ ಆಸೆ ಅಂದ್ರೆ ನಾರಾಯಣ ಸ್ವಾಮಿ ಹೆಸರು ಚೇಂಜ್ ಮಾಡಿಕೊಳ್ಳಬೇಕಿತ್ತು. ನಾನು 'ಗೌತಮ್' ಅಂತ ಹೆಸರು ಇಟ್ಟುಕೊಳ್ಳಬೇಕು ಅಂತ ತುಂಬಾ ಆಸೆ ಇತ್ತು. ಅಷ್ಟರಲ್ಲಿ ಡೈರೆಕ್ಟರ್ ಕರೆದು ನನ್ನ ಹೆಸರನ್ನ 'ಶ್ರೀನಾಥ್' ಆಗಿ ಮಾಡಿದರು. ಬೇಡ ಅಂದ್ರೆ ಎಲ್ಲಿ ಓಡಿಸುತ್ತಾರೋ ಅಂತ ಭಯ ಇತ್ತು'' - ಶ್ರೀನಾಥ್

ಅಣ್ಣ ಸಿ.ಆರ್.ಸಿಂಹ ಬಗ್ಗೆ!

''ನಾನು ರಂಗಭೂಮಿಗೆ ಬರಲು ಮುಖ್ಯ ಕಾರಣ ನಮ್ಮ ಅಣ್ಣ ಸಿ.ಆರ್.ಸಿಂಹ. ಅವನು ನನಗೆ ಎಲ್ಲಾ. ನನ್ನ ತಂದೆ, ತಾಯಿ, ಅಣ್ಣ ಎಲ್ಲಾ ಅವನೇ. ಸ್ಟೇಜ್ ಮೇಲೆ ಅವನು ಸಿಂಹ. ಎಂಥೆಂತ ಪಾತ್ರ ಮಾಡಿದ್ದ. ಈ ವಯಸ್ಸಲ್ಲಿ ಅಂತಹ ಆತುರ ಏನಿತ್ತು ಅವನಿಗೆ. ಅವನು ಇನ್ನೂ ಇರಬೇಕಿತ್ತು. ಸಿಂಹ, ಸಿಂಹನೇ. ಆ ಜಾಗವನ್ನ ಯಾರೂ ತುಂಬಲು ಸಾಧ್ಯವಿಲ್ಲ'' - ಶ್ರೀನಾಥ್

'ಲಗ್ನ ಪತ್ರಿಕೆ' ಸಿನಿಮಾದಲ್ಲಿ ಸಣ್ಣ ಪಾತ್ರ

''ಲಗ್ನ ಪತ್ರಿಕೆ' ಚಿತ್ರದಲ್ಲಿ ಸಣ್ಣ ಪಾತ್ರ ನನ್ನದು. ನನಗೆ ಸಿಕ್ಕಿದ್ದು ಮನ್ಮಥ ಪಾತ್ರ. ಶಿವರಾಂ ನಿಂದ ನನಗೆ ಆ ಪಾತ್ರ ಸಿಕ್ಕಿದ್ದು'' - ಶ್ರೀನಾಥ್

ಪತ್ನಿಯನ್ನ ಮೊದಲು ನೋಡಿದ್ದು

''ರವೀಂದ್ರ ಕಲಾಕ್ಷೇತ್ರದಲ್ಲಿ 69ನೇ ಇಸವಿಯಲ್ಲಿ ಒಂದು ದಿನ ನಾಟಕ ನಡೆಯುತ್ತಿತ್ತು. ಅಲ್ಲಿ ನನ್ನ ಪತ್ನಿಯನ್ನ ಮೊದಲ ಬಾರಿ ನೋಡಿದ್ದು. ಮೂರು ದಿನ ಮಾತನಾಡಿದ್ದು ಅಷ್ಟೇ. ನಂತರ ಮದುವೆ ಮಾತುಕತೆ ಆಯ್ತು'' - ಶ್ರೀನಾಥ್

ಕದ್ದು-ಮುಚ್ಚಿ ಮೀಟಿಂಗ್

''ನಮ್ಮ ಅಮ್ಮ ಮೀಟ್ ಮಾಡಿಸಿದ್ದು. ನಾವು ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಕೊಳ್ಳಲೇ ಇಲ್ಲ. ಸ್ಕೂಟರ್ ನಲ್ಲಿ ಬರ್ತಿದ್ರು. ನೆಪೋಲಿ ಹೋಟೆಲ್ ಗೆ ಕರ್ಕೊಂಡು ಹೋಗ್ತಿದ್ರು. ಕದ್ದು-ಮುಚ್ಚಿ ಮೀಟ್ ಮಾಡ್ತಿದ್ವಿ. 72ನಲ್ಲಿ ಮದುವೆ ಆಯ್ತು. 43 ವರ್ಷ ಆಯ್ತು ಮದುವೆ ಆಗಿ'' - ಗೀತಾ, ಶ್ರೀನಾಥ್ ಪತ್ನಿ

ಹನಿಮೂನ್ ಆಗಲೇ ಇಲ್ಲ!

''ಮದುವೆ ಆಗಿ ಹನಿಮೂನ್ ಗೆ ಅಂತ ಕೊಡೈಕೆನಾಲ್ ಗೆ ಹೋಗಿದ್ವಿ. ನಾವು ಹೋಗಿದ್ದು ಒಂದೇ ದಿನ. ಅಷ್ಟು ಬೇಗ ಶೂಟಿಂಗ್ ಅಂತ ಫೋನ್ ಬಂತು. ಮೊದಲನೇ ದಿನವೇ ಜಗಳ ಶುರುವಾಯ್ತು'' - ಗೀತಾ, ಶ್ರೀನಾಥ್ ಪತ್ನಿ

ಪ್ರಣಯ ರಾಜ ಆಗಿದ್ದು ಹೇಗೆ?

''ರೋಮ್ಯಾಂಟಿಕ್ ಸೀನ್ ಬಂದಾಗ ನ್ಯಾಚುರಲ್ ಆಗಿ ಬರಬೇಕು ಅಂತ ನನಗೆ ನನ್ನ ಹೆಂಡತಿ ಸದಾ ಹೇಳ್ತಿದ್ಲು. ನನಗೆ ಪ್ರಣಯರಾಜ ಅಂತ ಟೈಟಲ್ ಬರುವುದಕ್ಕೆ ನನ್ನ ಹೆಂಡತಿನೇ ಕಾರಣ'' - ಶ್ರೀನಾಥ್

English summary
Kannada Actor Srinath's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada