»   » ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ

ಜೀವಂತ ದಂತಕಥೆ ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯಕಥೆ

Posted By:
Subscribe to Filmibeat Kannada

''ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಂದು ಕೂತ್ರೆ, ಜನ ಟಿವಿಯನ್ನೇ ನೋಡ್ತಾರೆ ಹೊರತು ಸಿನಿಮಾ ನೋಡಲ್ಲ'' ಅಂತ ಮೊದಲು ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾಗಿ ಬರಲು ಅಂಬರೀಶ್ ನಿರಾಕರಿಸಿದ್ದ ಬಗ್ಗೆ ನಿಮಗೆಲ್ಲಾ ಗೊತ್ತಿದೆ.

ಈಗ ಅದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬರೀಶ್ ಖುಷಿಯಿಂದ ತಮ್ಮ ಮನದಾಳ ಹಂಚಿಕೊಂಡಿದ್ದಾರೆ. ಯಾರಿಗೂ ಗೊತ್ತಿಲ್ಲದ ಎಷ್ಟೋ ಘಟನೆಗಳನ್ನ ರಮೇಶ್ ಅರವಿಂದ್ ಮುಂದೆ ಮೆಲುಕು ಹಾಕಿದ್ದಾರೆ. ಕೆಲವು ವಿಷಯ ಪ್ರಸ್ತಾಪ ಮಾಡುತ್ತಾ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. [ಪುಟ್ಟಣ್ಣ ಕಣಗಾಲ್-ಆರತಿ ಬಗ್ಗೆ ಅಂಬರೀಶ್ ಬಿಚ್ಚಿಟ್ಟ ಸತ್ಯ ಸಂಗತಿ]

ಅಂಬರೀಶ್ ರವರ 'ರೆಬೆಲ್' ಜೀವನದ ಸತ್ಯ ಘಟನೆಗಳನ್ನೆಲ್ಲಾ ಅಂಬರೀಶ್ ರವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ರೆಬೆಲ್ ಸ್ಟಾರ್ ಅಂಬರೀಶ್ ಕುರಿತು....

ನಿಜನಾಮ - ಮಳವಳ್ಳಿ ಹುಚ್ಚೇಗೌಡ ಅಮರ್ ನಾಥ್
ಜನ್ಮ ದಿನಾಂಕ - ಮೇ 29, 1952
ಊರು - ಮಂಡ್ಯ ಜಿಲ್ಲೆಯ ದೊಡ್ಡ ಅರಸಿನಕೆರೆ
ತಂದೆ - ಹುಚ್ಚೇಗೌಡ, ತಾಯಿ - ಪದ್ಮಮ್ಮ
ತಾತ - 'ಸಂಗೀತ ಕ್ಷೇತ್ರದ ಪಿತಾಮಹ' ಪಿಟೀಲು ಚೌಡಯ್ಯ
ಪತ್ನಿ - ಸುಮಲತಾ
ಪುತ್ರ - ಅಭಿಶೇಕ್
1972ರಲ್ಲಿ ಬಿಡುಗಡೆ ಆದ 'ನಾಗರಹಾವು' ಚಿತ್ರದಿಂದ ಸಿನಿ ಪಯಣ ಆರಂಭ

ಕಾಲೇಜ್ ತಂಟೆಗೆ ಬರಬೇಡಿ!

''ಚೈಲ್ಡ್ ಹುಡ್ ಚೆನ್ನಾಗಿತ್ತು. ಕಾಲೇಜ್ ಬಂದ್ಮೇಲೆ ಏನೂ ತೋರಿಸ್ಬೇಡಿ. ಹ್ಹಾ...ಹ್ಹಾ....'' - ಅಂಬರೀಶ್

ಕ್ಲಾಸ್ ಗೆ ಚಕ್ಕರ್!

''ನಾನು ಸರ್ಕಾರಿ ಶಾಲೆಯಲ್ಲಿ ಓದಿದವನು. ಆಮೇಲೆ ಶಾರದಾ ವಿಲಾಸ್ ಕಾಲೇಜ್ ಗೆ ಸೇರ್ಕೊಂಡೆ. ಕಾಲೇಜ್ ಗೆ ಹೋಗ್ತಿದ್ದೆ. ಕ್ಲಾಸ್ ರೂಮ್ ಗೆ ಹೋಗ್ತಿರ್ಲಿಲ್ಲ. ಎಲ್ಲಾದರಲ್ಲೂ ಆಬ್ಸೆಂಟ್...ಆಬ್ಸೆಂಟ್...'' - ಅಂಬರೀಶ್

ಲಾಸ್ಟ್ ಬೆಂಚ್ ಸ್ಟೂಡೆಂಟ್!

''ಕಾಲೇಜ್ ನಲ್ಲಿ ಒಬ್ರು ಕನ್ನಡ ಲೆಕ್ಚರರ್ ಬಂದರು. ನಾವು ಲಾಸ್ಟ್ ಬೆಂಚ್ ಸ್ಟೂಡೆಂಟ್. ಅವರು ಬಂದ ತಕ್ಷಣ. 'ನಮಸ್ಕಾರ...ನಮಸ್ಕಾರ...ನಮಸ್ಕಾರ' ಅಂದ್ರು. ನಾನು ಹಿಂದ್ಗಡೆಯಿಂದ 'ನಮಸ್ಕಾರ ಸಾರ್...' ಅಂದೆ. ಅವರು 'ನಮಸ್ಕಾರ ಪಾ' ಅಂದ್ರು. 'ನನ್ನ ಪಾಠದ ಶೈಲಿಯೇ ಬೇರೆ. ನಾನು ನಿಮಗೆ ಅಧ್ಯಾಪಕರಲ್ಲ. ನಾನು ನಿಮ್ಮ ಸ್ನೇಹಿತ' ಅಂದ್ರು. 'ನಾನು ನಿಮ್ಮ ಸ್ನೇಹಿತ ಸಾರ್' ಅಂತ ನಾನಂದೆ. ಆಮೇಲೆ ಬೋರ್ಡ್ ಮೇಲೆ 'ಶ್ರೀರಾಮನು ಮನೆಗೆ ಬಂದನು' ಅಂತ ಬರೆದ್ರು. ಅದಕ್ಕೆ ನಾನು 'ಅಂಬರೀಶ ಮನೆಗೆ ಹೋದನು' ಅಂತ ಹೊರಟು ಹೋದೆ. ಅವತ್ತಿಂದ ಇನ್ನೊಂದು ಬಾರಿ ಆ ಕ್ಲಾಸ್ ಗೆ ಹೋಗಲೇ ಇಲ್ಲ. ಕ್ಲಾಸ್ ಮುಗಿದ ತಕ್ಷಣ ಕೆಳಗಡೆ ನೋಡಿ 'ಕೊಟ್ಟಿದ್ದೀನಪ್ಪಾ, ಅಟೆಂಡೆನ್ಸ್' ಅನ್ನೋರು'' - ಅಂಬರೀಶ್

ಮಹಾರಾಜರ ದರ್ಬಾರ್ ಗೆ ಹೋಗ್ತಿದ್ದೆ

''ನಮ್ಮ ತಾತ ವಿದ್ವಾನ್ ಆಗ. ಚಿಕ್ಕವನಿದ್ದಾಗ ಅವರ ಜೊತೆ ಮಹಾರಾಜರ ದರ್ಬಾರ್ ಗೆ ಹೋಗ್ತಾಯಿದ್ದೆ. ಅವರೆಲ್ಲಾ ಸಂಗೀತ ಕಛೇರಿ ಕೊಡ್ತಿರುವಾಗ ನನಗೆ ನಿದ್ದೆ ಬಂದು ಬಿಡೋದು'' - ಅಂಬರೀಶ್

ಏಳು ಜನ ಮಕ್ಕಳು

''ತಾತನ ಮನೆಯಲ್ಲಿ ಹಬ್ಬದ ವಾತಾವರಣ. ಅವರ ಮನೆಗೆ ಹೋದಾಗೆಲ್ಲಾ ಎಣ್ಣೆ ಸ್ನಾನ. ಒಂದೊಂದು ಬಾರಿ ಅವರು ಎಣ್ಣೆ ಸ್ನಾನ ಮಾಡಿಸಿದರೆ 24 ಗಂಟೆ ಮಲ್ಕೊಂಡ್ಬಿಡ್ತಾಯಿದ್ದೆ. ನಾವು ಏಳು ಜನ ಮಕ್ಕಳು. ನಮ್ಮ ಅಮ್ಮನ ಹತ್ರ ಯಾರು ಮಲ್ಕೋಬೇಕು ಎನ್ನುವ ಬಗ್ಗೆ ಎಲ್ಲರೂ ಕಿತ್ತಾಟ. ನಾನು ಯಾರನ್ನೂ ಬಿಡ್ತಾಯಿರ್ಲಿಲ್ಲ. ನಮ್ಮಪ್ಪನ್ನೂ ಬಿಡ್ತಾಯಿರ್ಲಿಲ್ಲ. ನಾನೇ ಅಮ್ಮನ ಪಕ್ಕಾ ಯಾವಾಗ್ಲೂ ಮಲಗ್ತಾಯಿದ್ದದ್ದು'' - ಅಂಬರೀಶ್

ಅಣ್ಣನಿಗೆ ಟಾರ್ಚರ್

''ಹರೀಶ ಅಂತ ನಮ್ಮಣ್ಣ. ಅವರು ಕಾಲೇಜ್ ಗೆ ಹೋಗ್ತಿದ್ರು. ನನಗೆ 25-30 ದೋಸೆ ಬೇಕು. ಅವನಿಗೆ ಸಿಕ್ತಿರ್ಲಿಲ್ಲ. ಅವನಿಗೆ ಚಟ್ನಿಯಲ್ಲಿ ಮೊಸರು ಹಾಕ್ಬಿಟ್ರೆ ತಿನ್ತಿರ್ಲಿಲ್ಲ. ಥೂ ನನ್ ಮಗನೇ ಅಂತ ಓಡಿ ಬಿಡೋನು. ಈ ತರಹ ಎಲ್ಲಾ ತುಂಬಾ ತೊಂದರೆ ಕೊಟ್ಟಿದ್ದೀನಿ'' - ಅಂಬರೀಶ್

ಮೊದಲ ಬಾರಿ ರೆಬೆಲ್ ಆಗಿದ್ದು...

''ನಮ್ಮ ದೊಡ್ಡಣ್ಣ ಬಹಳ ಕೋಪಿಷ್ಟ. ಹೆದರುವವರು ಅವನು ಮನೆಗೆ ಬಂದ್ರೆ, ಮನೆಯೇ ಸೈಲೆಂಟ್. ಒಂದು ದಿನ 21 ಟರ್ಲಿನ್ ಪ್ಯಾಂಟ್, ಶರ್ಟ್ ತಂದುಕೊಟ್ಟ. ಅವತ್ತು ನಾನು ಹೋಗಿ ಕ್ರಿಕೆಟ್ ಮ್ಯಾಚ್ ಆಡ್ಬೇಕಿತ್ತು. 'ಅಂಬಿಕಾ ಲಾಂಡ್ರಿ' ಅಂತ ಇತ್ತು. ಅಲ್ಲಿ ಹೋಗಿ ಕೂತು ಹುಷಾರ್ ಆಗಿ ಐರನ್ ಮಾಡಿಸ್ದೆ. ಅವರೆಲ್ಲಾ ನನ್ನ ನೋಡಿ ಹೆದರೋರು. ನಾನು ನಮ್ಮಣ್ಣನಿಗೆ ಹೆದರುತ್ತಾಯಿದ್ದೆ. ಮೂರು ಗಂಟೆ ತನಕ ಕಾದು ಐರನ್ ಮಾಡಿಸಿಕೊಂಡು ಹೊತ್ಕೊಂಡು ಬಂದೆ. ಬರ್ತಿದ್ದಹಾಗೆ, 'ಇಷ್ಟೊತ್ವರೆಗೂ ಎಲ್ಲಿಗೆ ಹೋಗಿದ್ದೆ' ಅಂತ ಅಣ್ಣ ಹೊಡ್ದ. ಕೈಯಲ್ಲಿದ್ದ ಬಟ್ಟೆ ಎಸ್ದು, ''ನಿನ್ನ ಮನೆ ಜವಾನ ಅಲ್ಲ. ಹೋಗಿ ಬೇಕಾದ್ರೆ ಮಾಡಿಸ್ಕೋ'' ಅಂತ ಬೈದೆ. ಅವಾಗಲೇ ಮೊದಲ ಬಾರಿ ರೆಬೆಲ್ ಆಗಿದ್ದು. ಅವನ ಮದುವೆಗೂ ಕರ್ದ. ನಾನು ಬರಲ್ಲ ಅಂದಿದ್ದೆ. ಆಮೇಲೆ ಅವನೇ ಮೋಟರ್ ಸೈಕಲ್ ನಲ್ಲಿ ಕರ್ಕೊಂಡು ಹೋದ'' - ಅಂಬರೀಶ್

ಅಪ್ಪನಲ್ಲಿದ್ದ ಭರವಸೆ

''ನಮ್ಮ ತಾಯಿಗೆ ಒಂದು ನೋವಿತ್ತು. ತಂದೆ ಬಳಿ ಒಮ್ಮೆ ಮಾತನಾಡುತ್ತಾ, ''ಏನ್ರೀ ನನ್ನ ಮಗನ ಬೀದಿಗೆ ಇಳಿಸಿಬಿಟ್ರಲ್ಲಾ, ಅವನು ಏನೂ ಮಾಡಲೇ ಇಲ್ಲ. ಏನ್ರಿ ಮಾಡೋದು'' ಅಂತ ಅಳೋರು. ನಮ್ಮ ತಂದೆ ಯಾವ ರೀತಿ ಸಮಾಧಾನ ಮಾಡೋರು ಅಂದ್ರೆ, ''ನಿನ್ನ ಮಕ್ಕಳು ಒಬ್ಬ ಎಂಜಿನಿಯರ್, ಇನ್ನೊಬ್ಬ ಡಾಕ್ಟರ್ ಆಗಿದ್ದಾನೆ. ಅವರ್ಯಾರು ಶೈನ್ ಆಗಲ್ಲ. ನಿಮ್ಮಪ್ಪ ಪಿಟೀಲು ಚೌಡಯ್ಯನವರು ಇದ್ರಲ್ಲಾ, ಅವರ ಫೋಟೋ ಮಾತ್ರ ನ್ಯೂಸ್ ಪೇಪರ್ ನಲ್ಲಿ ಬರ್ತಿತ್ತು. ನೆಕ್ಸ್ಟು ನಿನ್ನ ಮಗನದ್ದೇ ಬರುವುದು ಪೇಪರ್ ನಲ್ಲಿ'' ಅಂತ ಹೇಳ್ತಿದ್ರು. ಸತ್ಯ ಹೇಳ್ಬೇಕು ಅಂದ್ರೆ ಇದನ್ನೆಲ್ಲಾ ನಾವು ತಮಾಷೆ ಅಂತ ತಿಳ್ಕೊಂಡಿದ್ವಿ. ಅವಾಗ ಇವನಿನ್ನೂ ಸಿನಿಮಾಗೆ ಸೇರಿರ್ಲಿಲ್ಲ'' - ಹರೀಶ್, ಅಂಬರೀಶ್ ಅಣ್ಣ

ಎಕ್ಸಾಂನಲ್ಲಿ ಫೇಲ್

''ಕಾಲೇಜ್ ನಲ್ಲಿ ನನಗೆ ಇದ್ದಿದ್ದೇ 6% ಅಟೆಂಡೆನ್ಸ್. ನಮ್ಮ ತಂದೆ ಸ್ವಲ್ಪ influential. ಅವರ ಸಹಾಯದಿಂದ 60% ಮಾಡಿಸಿ ಹಾಲ್ ಟಿಕೆಟ್ ತಗೊಂಡೆ. 5 ಸಬ್ಜೆಕ್ಟ್ ನಲ್ಲಿ 4 ಸಬ್ಜೆಕ್ಟ್ ಪಾಸ್ ಆದೆ. ಇನ್ನೊಂದು ಪಾಸ್ ಆಗ್ಬಿಟ್ಟಿದ್ರೆ ನನ್ನ ಎಂಜಿನಿಯರ್ ಮಾಡಿಬಿಡ್ತಾಯಿದ್ರು'' - ಅಂಬರೀಶ್

ಬೆಂಗಳೂರಿಗೆ ಶಿಫ್ಟ್

''ಮೈಸೂರಲ್ಲಿ ವಾತಾವರಣ ಸರಿ ಇಲ್ಲ ಅಂತ ಬೆಂಗಳೂರಿನ ವಿಜಯ ಕಾಲೇಜ್ ಗೆ ಸೇರಿಸಿದರು. ಈ ಬಾರಿಯಾದ್ರೂ ಚೆನ್ನಾಗಿ ಓದ್ಬೇಕು, ಅಪ್ಪ ಅಮ್ಮಗೆ ಒಳ್ಳೆ ಹೆಸರು ತರ್ಬೇಕು ಅಂತ ಇದ್ದೆ. ಒಂದೇ ವಾರ. ಇಡೀ ಕಾಲೇಜ್ ಫ್ರೆಂಡ್ಸ್ ಆದರು. ಮತ್ತೆ 6% ಅಟೆಂಡೆನ್ಸ್.!'' - ಅಂಬರೀಶ್

ಮೊದಲು ಬಣ್ಣ ಹಚ್ಚಿದ್ದು....

''ನನ್ನ ಮುಖ ಸ್ವಲ್ಪ ಶತ್ರುಘ್ನ ಸಿನ್ಹ ತರಹ ಇತ್ತು. ನಾನು ಸಿಗರೇಟ್ ಹಿಡ್ಕೊಂಡು ಸ್ಟೈಲ್ ಮಾಡ್ತಿದ್ದೆ. ಅದನ್ನ ನೋಡಿ ರಾಜೇಂದ್ರ ಸಿಂಗ್ ಬಾಬು ಮೇಕಪ್ ಹಾಕ್ಸಿ, ಇವನಿಗೊಂದು ಇನ್ಸ್ ಪೆಕ್ಟರ್ ಪಾತ್ರ ಕೊಡೋಣ ಅಂದ್ರು. 'ಬಂಗಾರದ ಕಳ್ಳ' ಸಿನಿಮಾ. ಅದಕ್ಕೆ ಮೊದಲು ಬಣ್ಣ ಹಚ್ಚಿದ್ದು. ಅದೇ ಚಿತ್ರದಲ್ಲಿ ನಾನೇ ಕಳ್ಳ, ನಾನೇ ಪೊಲೀಸ್'' - ಅಂಬರೀಶ್

'ನಾಗರಹಾವು' ಚಿತ್ರಕ್ಕೆ ಸೆಲೆಕ್ಟ್ ಆಗಿದ್ದು

''ಪುಟ್ಟಣ್ಣ ಹೊಸ ಸಿನಿಮಾಗೆ ಹೊಸಬರನ್ನ ಹುಡುಕ್ತಾಯಿದ್ದಾರೆ. ನಾಳೆ ಬೆಳಗ್ಗೆ ಮೇಕಪ್ ಟೆಸ್ಟ್ ಅಂತ ಬಾಬು ಹೇಳ್ದ. ಬೆಳಗ್ಗೆ 8.30ಗೆ ಹೋಗೋಣ ಅಂದ. ನಾನು 7.30ಕ್ಕೆ ಮನೆ ಖಾಲಿ. ನನಗೆ ಆಕ್ಟಿಂಗ್ ಗೊತ್ತಿರ್ಲಿಲ್ಲ. ಪುಟ್ಟಣ್ಣ ತುಂಬಾ ಸ್ಟ್ರಿಕ್ಟ್ ಅಂತಾರೆ. ಯಾಕ್ಬೇಕು ಅಂತ ನಾನು. ಈ ಸಹವಾಸನೇ ಬೇಡ ಅಂತ ನಾನು. ನನ್ನ ಹಾಗೂ ಹೀಗೂ ಹುಡುಕಿ, ಬಾರೋ ಅಂತ ನನ್ನ ಕರ್ಕೊಂಡು ಹೋದ. ಅಷ್ಟರಲ್ಲಿ ವಿಷ್ಣುದೆಲ್ಲಾ ಆಡಿಷನ್ ಮುಗಿದಿತ್ತು. ಲಾಸ್ಟ್ ಗೆ ಹೋಗಿದ್ದು ನಾನೇ 35ನೇಯವನು. ಪುಟ್ಟಣ್ಣ ಹೊರಗಡೆ ಸಿಗರೇಟ್ ಸೇದ್ತಾ ಇದ್ರು. ಮೇಕಪ್ ಹಾಕೊಂಡು ಬಂದ್ಮೇಲೆ ಒಂದು ಡೈಲಾಗ್ ಕೊಟ್ರು. ಅದನ್ನ ನೋಡಿ 'ಜಲೀಲ' ರೋಲ್ ಫಿಕ್ಸ್ ಮಾಡಿದ್ರು'' - ಅಂಬರೀಶ್

ಆರತಿಗೆ ಶಾಕ್

''ಆರತಿಗೆ ನನ್ನ ಬಗ್ಗೆ ಗೊತ್ತಿತ್ತು. ಮೈಸೂರಿನವರೇ ಅಲ್ವಾ. ಮೇಕಪ್ ಮಾಡಿಕೊಳ್ಳೋಕೆ ಒಳಗೆ ಹೋದೆ. ನನ್ನ ಕನ್ನಡಿಯಲ್ಲಿ ನೋಡಿ ದಢಾರ್ ಅಂತ ಎದ್ದು ಬಿಟ್ಟರು. ಇವನು ಯಾಕೆ ಬಂದ ಇಲ್ಲಿ ಅಂತ. ನಾನು ಸುಮ್ನೆ ಇದ್ದೆ'' - ಅಂಬರೀಶ್

ಪುಟ್ಟಣ್ಣ ಕೊಟ್ಟ ಭರವಸೆ

''ನನಗೆ ಮತ್ತು ವಿಷ್ಣುಗೆ ಈ ಸಿನಿಮಾದಿಂದ ಒಳ್ಳೆ ಹೆಸರು ಬರುತ್ತೆ ನೋಡಿ ಅಂತಿದ್ರು. 'ಸಾರ್, ಅವನು ಹೀರೋ. ಅವನಿಗೆ ಬರುತ್ತೆ ಸರಿ. ನಾನು ಬರೋದೇ ಒಂದು ಸೀನ್ ನಲ್ಲಿ. ಹುಡುಗಿನ ಚುಡಾಯಿಸ್ತೀನಿ, ಹೋಗ್ತೀನಿ ಅಷ್ಟೇ ಅಲ್ವಾ' ಅಂತ ಪುಟ್ಟಣ್ಣನ ಕೇಳಿದ್ದೆ. 'ಇಲ್ಲಾಪ್ಪಾ, ಖಂಡಿತ ಬರುತ್ತೆ' ಅಂತ ಹೇಳಿದ್ರು. ಅವರು ಹೇಳಿದ ಹಾಗೇ ಆಯ್ತು. ಈ ಸಿನಿಮಾದಿಂದ ನನಗೆ ಸಿಕ್ಕ ಸಂಭಾವನೆ 500 ರೂಪಾಯಿ. ಅದನ್ನ ನಾನು ನನ್ನ ತಾಯಿಗೆ ಕೊಟ್ಟೆ'' - ಅಂಬರೀಶ್

ಖುಷಿ ಆದ ಕ್ಷಣ

''ರಿಲೀಸ್ ಆದ ಮೊದಲನೇ ದಿನ ಸೆಕೆಂಡ್ ಶೋಗೆ ಹೋದ್ವಿ. ಪದ್ಮ ಟಾಕೀಸ್ ಗೆ. ಅಲ್ಲಿ, ನನ್ನ ಎಂಟ್ರಿಗೆ ಚಪ್ಪಾಳೆ ಹೊಡೆಯುತ್ತಿದ್ದರು. I was the first villain to take claps. ಸೂಪರ್ ಡ್ಯೂಪರ್ ಹಿಟ್ ಆಯ್ತು 'ನಾಗರಹಾವು'. 25 ವಾರ ಓಡ್ತು'' - ಅಂಬರೀಶ್

'ಬೆಸ್ಟ್ ವಿಲನ್ ಅವಾರ್ಡ್'

''ದೇವರ ಕಣ್ಣು' ಸಿನಿಮಾ. ಅದಕ್ಕೆ ನನಗೆ ಬೆಸ್ಟ್ ವಿಲನ್ ಅವಾರ್ಡ್ ಸಿಕ್ತು. ಅದರಲ್ಲಿ ನನ್ನ ರೇಪ್ ಸೀನ್ ನೋಡಿ ಅಪ್ಪ ಬೈದಿದ್ರು. ಅದು ಆಕ್ಟಿಂಗ್ ಅಂತ ಹೇಳಿ ಸಮಾಧಾನ ಮಾಡಿದ್ದೆ'' - ಅಂಬರೀಶ್

ಅಮ್ಮನಿಗಿದ್ದ ಏಕೈಕ ಆಸೆ

''ನನ್ನ ತಾಯಿಗೆ ನಾನು ಅಣ್ಣಾವ್ರ ಜೊತೆ ಆಕ್ಟ್ ಮಾಡ್ಬೇಕು ಅಂತ ಆಸೆ. ನನಗೆ ಬೆಸ್ಟ್ ವಿಲನ್ ಅವಾರ್ಡ್ ಸಿಕ್ಕಿತ್ತು. ಅದೇ ಫಂಕ್ಷನ್ ನಲ್ಲಿ ರಾಜ್ ಕುಮಾರ್ ಗೆ ಬೆಸ್ಟ್ ಹೀರೋ ಅವಾರ್ಡ್. ಅದುವರೆಗೂ ನನಗೆ ರಾಜ್ ಕುಮಾರ್ ಪರಿಚಯ ಇಲ್ಲ. ಅವರು ನನ್ನ ಅಲ್ಲಿ ಮಾತನಾಡಿಸಿಬಿಟ್ಟರು. 'ಹೇಗಿದ್ದೀರಾ ಅಂಬರೀಶ್' ಅಂತ. ನಂತರ ಅಮ್ಮ ಬೈಯ್ಯೋಕೆ ಶುರುಮಾಡಿದರು. ದೊಡ್ಡವರನ್ನ ನೀನು ಮೊದಲು ಮಾತನಾಡಿಸಬೇಕು ಅಂತ. ಆಮೇಲೆ 'ಒಡಹುಟ್ಟಿದವರು' ಸಿನಿಮಾ ಮಾಡಿದ್ವಿ. ಅದನ್ನ ನೋಡೋಕೆ ಅಮ್ಮ ಇರ್ಲಿಲ್ಲ'' - ಅಂಬರೀಶ್

'ಒಡಹುಟ್ಟಿದವರು' ಚಿತ್ರಕ್ಕೆ ಹಾಕಿದ ಕಂಡೀಷನ್

''ಒಡಹುಟ್ಟಿದವರು' ಕಥೆ ಕೇಳ್ಲಿಲ್ಲ. ಮನೆಗೆ ಹೋದಾಗ, ''ಸಾರ್ ನಾನು ಕಥೆ ಕೇಳೋಕೆ ಬಂದಿಲ್ಲ. ನಂದು ಎರಡು ಕಂಡೀಷನ್ ಇದೆ ಅಂದೆ. ಸಿನಿಮಾದಲ್ಲಿ ನಾನು ನಿಮಗೆ ಹೊಡೀಬಾರ್ದು, ನೀವು ನಂಗೆ ಹೊಡೀಬಾರ್ದು. ನಾನು ನಿಮಗೆ ಬೈಯಲ್ಲ. ನೀವು ನನಗೆ ಬೈಬಾರ್ದು. ಹೀಗಿದ್ದು, ನನಗೆ ಕಸ ಗುಡಿಸುವುದು ಕೊಟ್ರೂ ಮಾಡ್ತೀನಿ'' ಅಂದೆ'' - ಅಂಬರೀಶ್

ಸುಮಲತಾ-ಅಂಬರೀಶ್ 'ಆಹುತಿ'

''ಆಹುತಿ' ಸಿನಿಮಾದಲ್ಲಿ ಸುಮಲತಾ ಹೀರೋಯಿನ್. ಅಲ್ಲಿಗೆ ನಾವು 'ಆಹುತಿ' ಆದ್ವಿ...ಹ್ಹಾ...ಹ್ಹಾ...'' - ಅಂಬರೀಶ್

ಸಂಥಿಂಗ್ ಸ್ಪೆಷಲ್

''ನನಗೆ ಮೊದಲು ಅವರ ಬಗ್ಗೆ ಇಂಪ್ರೆಷನ್ ಬೇರೆ ತರಹ ಇತ್ತು. 'ಆಹುತಿ' ಸಿನಿಮಾದಲ್ಲಿ ಅವರನ್ನ ಮೀಟ್ ಮಾಡಿದಾಗ ಸಂಥಿಂಗ್ ಸ್ಪೆಷಲ್ ಅನಿಸ್ತಾಯಿತ್ತು. ಮೊದಲು ಕೋ-ಸ್ಟಾರ್ಸ್ ಆದ್ವಿ, ನಂತರ ಫ್ರೆಂಡ್ಸ್. ಆಮೇಲೆ ಪತಿ-ಪತ್ನಿ.'' - ಸುಮಲತಾ ಅಂಬರೀಶ್

ಮಗು ಹುಟ್ಟಿದ ಕ್ಷಣ

''ರಾತ್ರಿ ಇವರ ಅಣ್ಣ ಫೋನ್ ಮಾಡಿ ಮಗು ಯಾವಾಗ ಆದ್ರೂ ಹುಟ್ಟಬಹುದು ಬನ್ನಿ ಅಂದಿದ್ರು. ಇವರು ತುಂಬಾ ಒದ್ದಾಡ್ತಾಯಿದ್ದಾಳೆ. ನಾನು ಹೋಗಿ ಇವಳ ಹೊಟ್ಟೆ ಮುಟ್ಟಿದೆ. ಆಮೇಲೆ ಇವಳು ಆರಾಮ್ ಆದಳು. ಅವಾಗ ಡಾಕ್ಟರ್ ಹೇಳಿದ್ದು ನೆನಪು, 'ಓ ಮಗುಗೆ ಅಪ್ಪ ಯಾರು ಅಂತ ಆಗಲೇ ಗೊತ್ತಿದೆ'' ಅಂದ್ರು. ಆಮೇಲೆ ಡೆಲಿವರಿ ಆಯ್ತು'' - ಅಂಬರೀಶ್

'ವೀಕೆಂಡ್ ವಿತ್ ರಮೇಶ್' ನಿರಾಕರಿಸಿದ್ದು!

''ತಾರಾ ಮೊದಲ ಅಪ್ರೋಚ್ ಮಾಡಿದ್ದು 'ವೀಕೆಂಡ್ ವಿತ್ ರಮೇಶ್'ಗೆ. ನಾನು ಆಗಲ್ಲ ಅಂದ್ರೆ ಆಗಲ್ಲ ಅಂದೆ. ಅದನ್ನ ಕೇಳಲೇ ಇಲ್ಲ ಯಾಕೆ ಅಂತ. ಯಾಕಂದ್ರೆ ನಾನು ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ. ವೀಕೆಂಡ್ ವಿತ್ ರಮೇಶ್ ತುಂಬಾ ಫೇಮಸ್ ಆಗ್ಬಿಟ್ಟು, ಜನ ಎಲ್ಲಾ ಇದನ್ನೇ ನೋಡ್ತಾರೆ. ಸಿನಿಮಾ ಮರೆತು ಬಿಡ್ತಾರೆ ಅಂತ ನಾನು ಮಾಡಲ್ಲ ಅಂದಿದ್ದೆ'' - ಅಂಬರೀಶ್

ಮಂಡ್ಯದ ಚಂದಮಾಮ ಇಷ್ಟ

''ಯಾವುದೇ ಫಂಕ್ಷನ್ ಗೆ ಹೋದರೂ 'ಮಂಡ್ಯದ ಗಂಡು' ಹಾಡು ಹಾಕ್ತಾರೆ. ಅದಾದ ಮೇಲೆ ಮಂಡ್ಯದ ಚಂದಮಾಮ ಬರೆದದ್ದು ಯೋಗರಾಜ್ ಭಟ್. This is one of the best lyric'' - ಅಂಬರೀಶ್

English summary
Kannada Actor Ambareesh's life story was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada