»   » ನೀವೇ ನಿಜವಾದ ಕನ್ನಡದ ಕೋಟ್ಯಧಿಪತಿಯಾಗಿರಿ!

ನೀವೇ ನಿಜವಾದ ಕನ್ನಡದ ಕೋಟ್ಯಧಿಪತಿಯಾಗಿರಿ!

By: * ಮತ್ತೂರು ರಘು, ಮತ್ತೂರು
Subscribe to Filmibeat Kannada
Why should you not participate in Kannadada Kotyadhipati
ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ? ಹಿಂದಿಯ 'ಕೌನ್ ಬನೇಗ ಕರೋಡ್ ಪತಿ'ಗೆ ಕನ್ನಡತನವನ್ನು, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ 'ಮಾನವೀಯತೆ'ಯನ್ನು ಹೊತ್ತು ನಮಗೆ ನೀಡುತ್ತಿರುವ 'ಕನ್ನಡದ ಕೋಟ್ಯಧಿಪತಿ'ಯನ್ನು ನೋಡಿದರೆ ಯಾವ ಕನ್ನಡಿಗನಿಗೆ ತಾನೇ ಹೆಮ್ಮೆಯಾಗುವುದಿಲ್ಲ?

ಸಾಕಷ್ಟು ದಿನಗಳಿಂದ ದುಬಾರಿ ಬೆಂಗಳೂರಲ್ಲಿ ಸಣ್ಣ ಮನೆಯನ್ನು ಮಾಡಬೇಕು ಎಂಬ ಮಹದಾಸೆಯಿರುವ ಸ್ನೇಹಿತನೊಬ್ಬನಿಗೆ 'ನೀನ್ಯಾಕೆ ಕನ್ನಡದ ಕೋಟ್ಯಧಿಪತಿ ಅವಕಾಶಕ್ಕೆ ಪ್ರಯತ್ನಿಸಬಾರದು?' ಅಂತ ತಮಾಷೆಗೆ ಕೇಳಿದ್ದಕ್ಕೆ ಅವನು "ನಾನ್ಯಾಕ್ ಮಾರಾಯ? ಆ ದೇವರ ಕೃಪೆಯಿಂದ ನನ್ನ ಹಣದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕೆ ದುಡಿಯುವ ಸಾಮರ್ಥ್ಯವನ್ನು ಕೊಟ್ಟಿದಾನೆ. ತಕ್ಷಣದಲ್ಲಿ ಲಕ್ಷಾಂತರ ರೂಪಾಯಿಗಳ ಅನಿವಾರ್ಯತೆಗಳಿಲ್ಲ ನನಗೆ.

ಆದರೆ ಆರೋಗ್ಯದ ಸಮಸ್ಯೆಗಳಿಂದ ನರಳುತ್ತಿರುವ, ದಿನದ ಹೊಟ್ಟೆಪಾಡಿಗೂ ಕಷ್ಟ ಪಡುತ್ತಿರುವ ಎಷ್ಟೋ ಜನರಿಗೆ ಅವಕಾಶ ಸಿಗುತ್ತಿರುವ ನಮ್ಮ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮಕ್ಕೆ ನಮ್ಮಂತಹವರು ಪ್ರಯತ್ನಿಸುವುದು ನನಗೆ ಸರಿ ಕಾಣೋಲ್ಲ. ಅಂತಹವರು ಮಾತ್ರ ಅಲ್ಲಿಗೆ ಬರುವಂತಾಗಬೇಕು. ಅದೇ ನನ್ನ ಹಾರೈಕೆ" ಅಂದಾಗ, ಛೆ, ನನಗೂ ಯಾಕೆ ಹಾಗನ್ನಿಸುವುದಿಲ್ಲ? ನನಗೆ ಯಾಕೆ ಇಷ್ಟು ಒಳ್ಳೆ ಮನಸ್ಸಿಲ್ಲ ಅಂತ ಬೇಸರವಾಯಿತು.

'ಸೆಲೆಬ್ರಿಟಿ' ಸುತ್ತುಗಳಲ್ಲಿ ಗಣ್ಯರನ್ನು ಕರೆಸಿ ಅವರ ಕೈಗಳಿಂದಲೂ ಅವರು ಗೆದ್ದ ಹಣವನ್ನೂ ಒಳ್ಳೆಯ ಉದ್ದೇಶಗಳಿಗೆ ವಿನಿಯೋಗಿಸುವ ಪ್ರೇರಣಾದಾಯಿ ಕಾರ್ಯಕ್ರಮ ನಮ್ಮ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗ್ತಿದೆ ಅಂತ ಹೇಳಿಕೊಳ್ಳಲಿಕ್ಕೆ ಖುಷಿಯಾಗುತ್ತೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಕಿರುಪರಿಚಯದ ವಿಡಿಯೋ ಮುಖಾಂತರ ಅವರು ಗೆಲ್ಲುವ ಹಣದ ಸದ್ವಿನಿಯೋಗದ ಕುರಿತಾದ ಮಾಹಿತಿಯನ್ನೂ ನೀಡಿ ವೀಕ್ಷಕರ ಹೃದಯ ಮುಟ್ಟುವಂತಹ ಪ್ರಯತ್ನಕ್ಕೆ ನಮ್ಮದೊಂದು ಸಲಾಂ.

ಬಹುಶಃ ಪುನೀತ್ ರಾಜ್ ಕುಮಾರ್ ರವರು ಚಿತ್ರಗಳನ್ನು ಮಾಡಿರುವುದಕ್ಕಿಂತ ಹೆಚ್ಚಾಗಿ ಜನರ ಮನಸ್ಸನ್ನು ತಲುಪಲು 'ಕನ್ನಡದ ಕೋಟ್ಯಧಿಪತಿ' ಎಂಬ 'ಮಾಧ್ಯಮ' ಕಾರಣವಾಗಬಹುದು. ಅದಕ್ಕಿಂತಲೂ ಹೆಚ್ಚಾಗಿ ಪುನೀತ್ ರವರು ನಟಸಾರ್ವಭೌಮ ಡಾ||ರಾಜ್ ಕುಮಾರ್ ರವರ ಮಗನಾಗಿರುವುದರಿಂದಲೇ ಇಡೀ ಕುಟುಂಬದ ಮೇಲಿನ ಶ್ರದ್ಧಾ-ಗೌರವಗಳು ಇಮ್ಮಡಿಗೊಳ್ಳಲು ಈ 'ಕನ್ನಡದ ಕೋಟ್ಯಧಿಪತಿ' ಕಾರಣವಾಗುತ್ತಿದೆ ಎಂದರೆ ಹೆಚ್ಚು ಸರಿಯಾಗಬಹುದೇನೋ.

ಆದರೆ ಬಹುಮಾನರೂಪಿ ಹಣ ಮತ್ತು ಅದರ ಪ್ರಮಾಣದ ಕಾರಣಕ್ಕೆ ಇದನ್ನು ನೋಡಿದ ಬಹುಪಾಲು ವೀಕ್ಷಕರಿಗೆ ಇದೆಲ್ಲ ಸುಳ್ಳು, ಕಾರ್ಯಕ್ರಮದ ಪ್ರಚಾರಕ್ಕೆ ಎಂಬೆಲ್ಲ ಅಭಿಪ್ರಾಯ ಬರುವುದು ಸಹಜ. ಅದು ಸುಳ್ಳಾಗಿರಲಿ ಎಂಬ ಆಶಯ ಎಲ್ಲರ ಪರವಾಗಿ ನಮ್ಮದು. ಹಣ ಮಾಡುವ ಆಶಯ ಎಲ್ಲರಲ್ಲೂ ಇರುತ್ತದೆ. ಸಾಕಷ್ಟು ಇದ್ದರೂ ಇನ್ನಷ್ಟು ಬೇಕು ಅನ್ನುವ ಮನೋಭಾವ ಅನೇಕರಲ್ಲಿ ಇರುತ್ತದೆ. ಆದರೆ, ನನಗಿರುವುದು ಸಾಕು, ಬಡವರಿಗೂ ಇಂತಹ ಅವಕಾಶ ಸಿಗಲಿ ಎಂದು ಆಶಿಸುವವರು ಕೋಟಿಗೊಬ್ಬರು ಮಾತ್ರ. ಅವರೇ ನಿಜವಾದ ಕನ್ನಡದ ಕೋಟ್ಯಧಿಪತಿಗಳು!

English summary
Why should you not participate in Kannadada Kotyadhipati. We have been seeing all kinds of people participating in this reality show conducted by Actor Puneeth Rajkumar. But, no one thinks that the opportunity should go the poor people.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada