»   » ಹಿಂದಿ ಚಿತ್ರದಲ್ಲಿ ಶಾರುಖ್ ಜೊತೆ ಅನುಷ್ಕಾ ಇಷ್ಕ್‌ವಿಷ್ಕ್

ಹಿಂದಿ ಚಿತ್ರದಲ್ಲಿ ಶಾರುಖ್ ಜೊತೆ ಅನುಷ್ಕಾ ಇಷ್ಕ್‌ವಿಷ್ಕ್

Posted By:
Subscribe to Filmibeat Kannada

ದೇವರು ವರ ಕೊಟ್ರೆ ಆಕಾಶ ಕಳಚಿ ಬೀಳುವ ಹಾಗೆ ವರ ಕೊಡ್ತಾನೆ ಅಂತಾರೆ. ಹಾಗೆಯೇ ಹಿಂದಿ ಚಿತ್ರರಂಗದ ಬಾದಷಾ ಶಾರುಖ್ ಖಾನ್ ಕೃಪಾಕಟಾಕ್ಷ ಯಾವುದೇ ನಟಿಯ ಮೇಲೆ ಬಿದ್ರೆ ಆಕೆ ಉದ್ಧಾರವಾದಂತೆಯೇ ಎಂಬ ಮಾತು ಉತ್ಪ್ರೇಕ್ಷೆಯಲ್ಲ. ಇದಕ್ಕೆ ಸಾಕ್ಷಿಯಾಗಿ ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಪ್ರಿಯಾಂಕಾ ಚೋಪ್ರಾ ಮೊದಲಾದವರಿದ್ದಾರೆ. ಶಾರುಖ್ ಜೊತೆ ತನ್ನ ಮೊದಲ ಹಿಂದಿ ಚಿತ್ರ 'ಓಂ ಶಾಂತಿ ಓಂ'ನಲ್ಲಿ ನಟಿಸುವ ಭಾಗ್ಯ ಕಂಡ ಕನ್ನಡತಿ(?) ದೀಪಿಕಾ ಪಡುಕೋಣೆ ಸದ್ಯಕ್ಕೆ ಕೈಗೆ ಸಿಗಲಾರದಷ್ಟು ದೂರಕ್ಕೆ ಹೋಗಿದ್ದಾರೆ.

ಈಗ ಮತ್ತೊಬ್ಬ ಬೆಂಗಳೂರಿನ ಬಾಲೆಯ ಅದೃಷ್ಟದ ಬಾಗಿಲು ತೆರೆದುಕೊಂಡಿದೆ. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ 19 ಹರೆಯದ ಅನುಷ್ಕಾ ಶರ್ಮಾಳೇ ಈ ಅದೃಷ್ಟವಂತೆ. ಹಿಂದಿಯ ಪ್ರತಿಷ್ಠಿತ ಯಶ್ ಚೋಪ್ರಾ ಅವರ ಬ್ಯಾನರ್‌ನಡಿಯಲ್ಲಿ ತಯಾರಾಗುತ್ತಿರುವ 'ರಬ್ ನೆ ಬನಾದಿ ಜೋಡಿ' ಚಿತ್ರದಲ್ಲಿ 43 ವರ್ಷದ ಶಾರುಖ್ ನಾಯಕಿಯಾಗಿ ಟೀನೇಜ್ ಸೆನ್ಶೇಷನ್ ಆಯ್ಕೆಯಾಗಿದ್ದಾಳೆ. ಇದೇ ಮೇ 16ರಿಂದ ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಲಿದೆ.

ಶಾರುಖ್‌ಗೆ ಜೋಡಿಯಾಗಿ ನಟಿಸಲು ಯಶ್ ಚೋಪ್ರಾ ಪಂಜಾಬಿ ಹುಡುಗಿಯ ಕಳೆಯಿರುವ ಅತ್ಯಂತ ತಾಜಾ ಮುಖವನ್ನು ಹುಡುಕುತ್ತಿದ್ದರು. ಆಕೆಗೆ ಯಾವುದೇ ನಟನೆಯ ಅನುಭವವಿಲ್ಲದಿದ್ದರೂ ಶಾರುಖ್‌ಗೆ ಸರಿಸಾಟಿಯಾಗಿ ನಟಿಸುವ ತಾಕತ್ತು, ಆ ಸೆಳೆತ ಆಕೆಯ ಕಂಗಳಲ್ಲಿದೆ ಎಂಬುದು ಯಶ್ ಚೋಪ್ರಾ ಅನಿಸಿಕೆ.

ಅನುಷ್ಕಾ ಬಾಲ್ಯದಿಂದಲೇ ಮಾರ್ಜಾಲ ನಡಿಗೆಯನ್ನು ಅಭ್ಯಸಿಸಿದಾಕೆ. ಇನ್ನೂ ಟೀನೇಜಿಕೆ ಕಾಲಿಟ್ಟಿರಲಿಲ್ಲ ಆಗಲೇ ಅನುಷ್ಕಾಳನ್ನು ಬೆಂಗಳೂರಿನ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ ಅವರ ಸುಪರ್ದಿಗೆ ಒಪ್ಪಿಸಿದವರು ಆಕೆಯ ಪಾಲಕರೇ. ಆ ವಯಸ್ಸಿನಲ್ಲೇ ಎತ್ತರ ಮತ್ತು ಅತ್ಯಂತ ಸುಂದರವಾಗಿದ್ದ ಆಕೆಯ ಕಂಗಳಲ್ಲಿ ಉತ್ತಮ ರೂಪದರ್ಶಿ ಮಾಡುವ ಸಂಕಲ್ಪವನ್ನು ಪ್ರಸಾದ್ ಬಿದ್ದಪ್ಪ ಅಂದೇ ತೊಟ್ಟಿದ್ದರು. ಆರು ವರ್ಷಗಳ ಕಾಲ ಸತತ ಪ್ರಸಾದ್ ಕೈಯಲ್ಲಿ ನಡಿಗೆ, ಉಡಿಗೆ ತೊಡಿಗೆ, ಹಾವ ಭಾವ, ಬೆಡಗು ಬಿನ್ನಾಣಗಳ 'ಪ್ರಸಾದ' ಸ್ವೀಕರಿಸಿರುವ ಅನುಷ್ಕಾ ಶಾರುಖ್ ಕಣ್ಣಿಗೆ ಹೊಳೆದದ್ದರಲ್ಲಿ ಆಶ್ಚರ್ಯವಿಲ್ಲ.

ಸ್ನಿಗ್ಧ ಸೌಂದರ್ಯ, ಮುಗ್ಧತೆ, ವಿಷಣ್ಣತೆ ಮೇಳೈಸಿಕೊಂಡಿರುವ ಆಕೆಯ ಮುಖಭಾವ ಹಿಂದಿ ಚಿತ್ರರಂಗದ ಹಳೆಯ ನಟಿ ಮೀನಾ ಕುಮಾರಿಯನ್ನು ಹೋಲುತ್ತದೆ ಎಂಬುದು ಆಕೆಯನ್ನು ಮುಂಬೈನ ಫ್ಯಾಷನ್ ಲೋಕಕ್ಕೂ ಪರಿಚಯಿಸಿದ ವ್ಯಾಂಡೆಲ್ ರಾಡ್ರಿಗ್ಸ್ ಅವರ ಅಭಿಪ್ರಾಯ. ಅನುಷ್ಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವುದರಿಂದ ಈಕೆಗಾದರೂ ಕನ್ನಡ ಮಾತಾಡಲು ಬರುತ್ತಾ ಎಂಬ 'ಅಸಂಬದ್ಧ' ಪ್ರಶ್ನೆ ಮಾತ್ರ ಕೇಳಬೇಡಿ. ಫ್ಯಾಷನ್ ಲೋಕದ ಥಳಕನ್ನು ನೋಡಲು ಪ್ರಾರಂಭಿಸಿದಾಗಿಂದ ಆ ಲೋಕದ ಭಾಷೆಯನ್ನೇ ಅರಗಿಸಿಕೊಂಡಿರುವುದರಿಂದ ಈ ಕುರಿತಾಗಿ ನಿರೀಕ್ಷೆ ಮಾಡುವುದೂ ತಪ್ಪು, ಏನಂತೀರಿ?

ಕರ್ನಾಟಕದ ಕುವರಿಯರು
ಬೆಂಗಳೂರಿನ ರೂಪದರ್ಶಿ ಅನುಷ್ಕಾ ಶರ್ಮಾ ಚಿತ್ರಪಟ
ಗಣೇಶ್ ಚಿತ್ರದಲ್ಲಿ ಮುಂಬೈ ಕನ್ನಡತಿ ವೇದಿಕಾ
ಬಾಲಿವುಡ್‌ಗೆ ಜಿಗಿದಿರುವ ದೀಪಿಕಾ ಪಡುಕೋಣೆ ಚಿತ್ರಪಟ
ಚಿತ್ರರಂಗದಲ್ಲಿ ಮಿಂಚುತ್ತಿರುವ ಕರ್ನಾಟಕದ ಮಿಂಚುಳ್ಳಿ ಸ್ನೇಹಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada