»   » ಬಾಲಿವುಡ್ ನಟರು ಹಣ ಕೊಟ್ಟರೆ ಮದ್ವೆಗೂ ಬರ್ತಾರೆ!

ಬಾಲಿವುಡ್ ನಟರು ಹಣ ಕೊಟ್ಟರೆ ಮದ್ವೆಗೂ ಬರ್ತಾರೆ!

Posted By:
Subscribe to Filmibeat Kannada

ನವದೆಹಲಿ, ಡಿ.21 : ಈಗೀಗ ಮದುವೆ ಖರ್ಚುಗಳು ಅಧಿಕವಾಗಿ, ಹೆಣ್ಣು ಹೆತ್ತವರ ಗೋಳು ಕೇಳುವವರೇ ಇಲ್ಲ ಬಿಡಿ. ಇರುವವರು ಮದುವೆಯನ್ನು ಅದ್ದೂರಿಯಾಗಿ ಮಾಡಿದರೆ ಇಲ್ಲದವರು ಹೇಗೋ ಮಾಡಿ ಮುಗಿಸುತ್ತಾರೆ. ಖರ್ಚು ಎಷ್ಟಾದರೂ ಪರ್ವಾಗಿಲ್ಲ... ಮದುವೆ ಮಾತ್ರ ಅದ್ದೂರಿಯಾಗಿ ನಡೀಬೇಕು ಅನ್ನುವವರಿಗೆ ಇಲ್ಲೊಂದು ಅವಕಾಶ ಇದೆ. ಇಂತಿಷ್ಟು ಹಣ ಕೊಟ್ಟು ತಾರೆಯರನ್ನು ಮದುವೆಗೆ ಆಹ್ವಾನಿಸಿ ಸಂಭ್ರಮಿಸಬಹುದು. ಪ್ರಸಿದ್ಧ ಸಿನಿಮಾ ತಾರೆಯರು, ಗಾಯಕರು ಶುರುವಿಟ್ಟುಕೊಂಡ ಹೊಸ ವ್ಯಾಪಾರ ಇದು.

ವ್ಯಾಪಾರದ ಮೂಲಗಳನ್ನು ಹುಡುಕುತ್ತಿದ್ದ ಬಾಲಿವುಡ್ ಗಾಯಕ, ನಾಯಕ ಹಾಗೂ ನಟಿಯರಿಗೆ ಮದುವೆ ಎಂಬ ಹೊಸ ವೇದಿಕೆ ಸಿಕ್ಕಿದೆ. ಇಂತಿಷ್ಟು ಹಣ ಕೊಟ್ಟರೆ ಸಾಕು ಬಂದು ಹಾಡುತ್ತಾರೆ, ಕುಣಿಯುತ್ತಾರೆ. ಒಬ್ಬೊಬ್ಬರದೂ ಒಂದೊಂದು ರೇಟ್. ಅವರು ಬರಬೇಕೆಂದರೆ ಹಣ ನೀರಿನಂತೆ ಖರ್ಚು ಮಾಡಬೇಕಷ್ಟೆ. ಇನ್ನು ಮುಂದೆ ಯಾರಾದರೂ ಗಣ್ಯರ ಅದ್ದೂರಿ ಮದುವೆಗಳಲ್ಲಿ ಬಾಲಿವುಡ್ ತಾರೆಯರೇನಾದರೂ ಕಾಣಿಸಿಕೊಂಡರೆ ಆಶ್ಚರ್ಯಪಡಬೇಡಿ. ಯಾಕೆಂದರೆ ಅವರನ್ನು ದುಡ್ಡು ಕೊಟ್ಟು ಕರೆಸಿರುತ್ತಾರೆ, ಅಷ್ಟೆ!

ಇಶಾ ಕೊಪ್ಪಿಕರ್, ಐಟಂ ಗರ್ಲ್ ರಾಖಿ ಸಾವಂತ್, ಮಲೈಕಾ ಅರೋರಾ, ದಿಯಾ ಮಿರ್ಜಾ, ಸೆಲಿನಾ ಜೇಟ್ಲಿ... ಇವರಿಗೆಲ್ಲಾ 10 ಲಕ್ಷ ರೂ. ಕೊಟ್ಟರೆ ಸಾಕು ಬಂದು ಹಾಡಿ, ಕುಣಿದು ಕುಪ್ಪಳಿಸುತ್ತಾರೆ. ಇನ್ನು ಸ್ವಲ್ಪ ಕಮ್ಮಿ ರೇಟಿಗೆ ಯಾರಾದರೂ ಸಿಗ್ತಾರಾ? ಅಂದರೆ, ಶೆಫಾಲಿ ಜರಿವಾಲ್, ಕೊಯಿನಾ ಮಿಶ್ರಾ, ಪ್ರೀತಿ ಜಿಂಗಾನಿಯಾ, ನೇಹಾ ಕಾಕ್ಕರ್, ಮಂದಿರಾ ಬೇಡಿ... ಇವರಿಗೆ 5ರಿಂದ 7 ಲಕ್ಷ ರೂ.ಗೆ ಸಿಗುತ್ತಾರೆ. ಇಷ್ಟೆಲ್ಲಾ ದುಡ್ಡುಕೊಟ್ಟರೂ ಇವರೇನು ಮದುವೆ ಮುಗಿಯುವವರೆಗೂ ಹಾಡಿ, ಕುಣಿಯುವುದಿಲ್ಲ. ಎಂಟತ್ತು ನಿಮಿಷ ಅಷ್ಟೇ.

ಅನಿಸುತಿದೆ ಯಾಕೋ ಇಂದು... ಈ ಸಂಜೆಯಾಕಾಗಿದೆ... ಹಂಸವೇ ಹಂಸವೇ ಹಾಡು ಬಾ... ಹಾಡುಗಳನ್ನು ಸೋನು ನಿಗಮ್ ಅವರಿಂದ ಹಾಡಿಸಬೇಕಾ? ಅವರನ್ನು ಮದುವೆಗೆ ಆಹ್ವಾನಿಸಿದರೆ 30 ಲಕ್ಷ ರೂ. ಕೊಡಬೇಕು. ಶಾನ್‌ಗೆ 25 ಲಕ್ಷ ರೂ., ಕೈಲಾಶ್ ಖೇರ್‌‍ಗೆ 15 ಲಕ್ಷ ರೂ., ಭಲ್ಲೆ ಭಲ್ಲೆ ಖ್ಯಾತಿಯ ದಲೇರ್ ಮೆಹಂದಿಗೆ 1,20,000 ರೂ., ಮಿಕಾಗೆ 4 ಲಕ್ಷ ರೂ., ಸುಖ್‌ಬೀರ್‌ಗೆ 8 ಲಕ್ಷ ರೂ.ಗಳಿಗೆ ಫಿಕ್ಸ್ ಆಗಿದ್ದಾರೆ.

ಇನ್ನು ಮದುವೆಗೆ ಶಾರುಖ್ ಖಾನ್‌ರನ್ನೇ ಆಹ್ವಾನಿಸಬೇಕೆಂದರೆ ಬರೋಬ್ಬರಿ 1 ಕೋಟಿ ರೂ. ಕೊಡಬೇಕು. ಮದುವೆಗೆ ಯಾರಾದರೂ ಗಣ್ಯ ವ್ಯಕ್ತಿ ಬಂದರೆ ಮದುವೆ ಕಳೆ ಹೆಚ್ಚುತ್ತದೆ. ಹಾಗೆಯೇ ಸಿನಿಮಾ ನಟನಟಿಯರು ಬಂದರೆ ಮದುವೆ ಸಂಭ್ರಮಕ್ಕೆ ಮತ್ತಷ್ಟು ಕಳೆ. ಮದುವೆಗೆ ಅತಿಥಿಗಳನ್ನು ಆಹ್ವಾನಿಸುವುದು ತಪ್ಪಲ್ಲ. ಆದರೆ ದುಡ್ಡು ಕೊಟ್ಟು ಆಹ್ವಾನಿಸುವುದೆಂದರೆ ಇದೇ ಏನೋ?

(ಏಜನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada