For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಿಂಗ್ ರಜಪೂತ್ ಬದುಕಿನ ಪಯಣ ಹೀಗಿತ್ತು....

  |

  ಸುಶಾಂತ್ ಸಿಂಗ್ ರಜಪೂತ್ ಎಂಬ ಸ್ಫುರದ್ರೂಪಿ ಯುವಕನ ಬದುಕೇ ಒಂದು ಸ್ಫೂರ್ತಿದಾಯಕ, ಅವರು ತಮ್ಮ ಬದುಕಿನ ಅಂತ್ಯವನ್ನು ಕಂಡ ಬಗೆಯ ಹೊರತು! ವಿದ್ಯಾರ್ಥಿಯಾಗಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಹತ್ತಾರು ಆಯಾಮಗಳಲ್ಲಿ ಚಿಂತಿಸಬಲ್ಲ ವ್ಯಕ್ತಿಯಾಗಿ, ಅದ್ಭುತ ನಟನಾಗಿ, ಸಾಮಾಜಿಕ ಕಾರ್ಯಗಳ ಮೂಲಕ ಮಾನವೀಯತೆಯನ್ನು ಪ್ರದರ್ಶಿಸುವ ಸಹೃದಯಿಯಾಗಿ ಸುಶಾಂತ್ ಜನರಿಗೆ ಹತ್ತಿರವಾಗಿದ್ದರು.

  ಸುಶಾಂತ್ ಅವರ ನಗುವೇ ಅನೇಕರನ್ನು ಅವರ ಅಭಿಮಾನಿಯನ್ನಾಗಿಸಿತ್ತು. ಸುಶಾಂತ್ ನಗುವಿನಲ್ಲಿ ಕಲ್ಮಶವಿರಲಿಲ್ಲ. ಬಿಹಾರದ ಪೂರ್ನಿಯಾ ಜಿಲ್ಲೆಯ ಮಾಲ್ದಿಯಾ ಎಂಬ ಊರಿನ ರಜಪೂತ ಕುಟುಂಬದಿಂದ ಬಂದ ಅವರಿಗೆ ಚಿತ್ರರಂಗದಲ್ಲಿ ಗಾಡ್ ಫಾದರ್‌ಗಳೇನೂ ಇರಲಿಲ್ಲ. ಹಾಗೆ ನೋಡಿದರೆ ಅವರು ನಟನಾಗಬೇಕು ಎಂದು ಚಿಕ್ಕಂದಿನಲ್ಲಿ ಬಯಸಿದವರಲ್ಲ. ಅವರು ಕಂಡ ಕನಸೇ ಬೇರೆಯದು. ಅದಕ್ಕೆ ತಕ್ಕಂತೆಯೇ ವಿದ್ಯಾರ್ಥಿದೆಸೆಯನ್ನು ರೂಪಿಸಿಕೊಂಡರು. ತಮ್ಮ ಗುರಿಗಳನ್ನು ಬದಲಿಸಿಕೊಳ್ಳುತ್ತಲೇ ಹೋದರು. ಮುಂದೆ ಓದಿ...

  ಅಮ್ಮನ ಪ್ರೀತಿ ಕಳೆದುಕೊಂಡರು

  ಅಮ್ಮನ ಪ್ರೀತಿ ಕಳೆದುಕೊಂಡರು

  ಅಮ್ಮ ಎಂದರೆ ಸುಶಾಂತ್‌ಗೆ ಬಹಳ ಪ್ರೀತಿ. ಆದರೆ ಅವರನ್ನು ಕಳೆದುಕೊಂಡಾಗ ಸುಶಾಂತ್‌ಗೆ ಇನ್ನೂ 16ರ ತಾರುಣ್ಯ. ಅಮ್ಮನ ನೆನಪು ತೀವ್ರವಾಗಿ ಕಾಡುತ್ತಿರುವುದನ್ನು ಅವರು ಜೂನ್ 2ರಂದು ಮಾಡಿದ್ದ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಆ ಬರಹವನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಮ್ಮ ಆತ್ಮಹತ್ಯೆಯ ಸುಳಿವನ್ನು ಅಲ್ಲಿಯೇ ನೀಡಿದ್ದರು ಎನಿಸುವಂತಿದೆ.

  2002ರಲ್ಲಿ ಅಮ್ಮನನ್ನು ಕಳೆದುಕೊಂಡಾಗ ಕಣ್ಣೀರು ಸುರಿಸಿರಲಿಲ್ಲ ಎಂದು ಸುಶಾಂತ್ ಹೇಳಿಕೊಂಡಿದ್ದರು. ಆದರೆ ತಮ್ಮ ಪ್ರತಿ ಸಂದರ್ಶನಗಳಲ್ಲಿಯೂ ಅಮ್ಮನ ಕುರಿತು ಮಾತನಾಡುತ್ತಿದ್ದರು. 'ನನ್ನೊಂದಿಗೆ ಎಂದೆಂದಿಗೂ ಇರುತ್ತೇನೆ ಎಂದು ಮಾತು ನೀಡಿದ್ದೀಯ. ಏನೇ ಸ್ಥಿತಿ ಬಂದರೂ ನಾನು ನಗುತ್ತಾ ಇರುತ್ತೇನೆ ಎಂದು ನಿನಗೆ ಮಾತು ಕೊಟ್ಟಿದ್ದೆ. ನಾವಿಬ್ಬರೂ ತಪ್ಪಿದ್ದೇವೆ ಎನಿಸುತ್ತದೆ ಅಮ್ಮಾ' ಎಂಬ ಕವಿತೆಯ ಸಾಲನ್ನು ಒಮ್ಮೆ ಸುಶಾಂತ್ ಬರೆದಿದ್ದರು.

  ವಿಪರ್ಯಾಸವೆಂದರೆ ಇದು: ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂದು ಹೇಳಿದ್ದರು ಸುಶಾಂತ್!

  ಓದಿನಲ್ಲಿ ಬಹಳ ಚುರುಕು

  ಓದಿನಲ್ಲಿ ಬಹಳ ಚುರುಕು

  ಸುಶಾಂತ್ ತಂದೆ ಸರ್ಕಾರಿ ಅಧಿಕಾರಿ. ಈ ಕುಟುಂಬದ ಅತ್ಯಂತ ಕಿರಿಯ ಹಾಗೂ ಏಕೈಕ ಗಂಡು ಮಗ ಸುಶಾಂತ್. ಸುಶಾಂತ್ ಅವರಿಗಿಂತ ಮೊದಲು ನಾಲ್ವರು ಹೆಣ್ಣುಮಕ್ಕಳು ಜನಿಸಿದ್ದರು. ರಾಜ್ಯಮಟ್ಟದಲ್ಲಿ ಬಿಹಾರ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಮಿತು ಸಿಂಗ್, ಸುಶಾಂತ್ ಅಕ್ಕಂದಿರಲ್ಲಿ ಒಬ್ಬರು.

  ಸುಶಾಂತ್ ಆರಂಭದ ವಿದ್ಯಾಭ್ಯಾಸ ಮುಗಿಸಿದ್ದು ಪಟ್ನಾದ ಸೇಂಟ್ ಕರೆನ್ ಹೈಸ್ಕೂಲ್‌ನಲ್ಲಿ. ಚಿಕ್ಕಂದಿನಿಂದಲೂ ಓದಿನಲ್ಲಿ ಬಹಳ ಚೂಟಿ. ಹೈಸ್ಕೂಲು ಮುಗಿದ ಬಳಿಕ ದೆಹಲಿಯ ಹನ್ಸ್‌ರಾಜ್ ಮಾಡೆಲ್ ಶಾಲೆಗೆ ಸೇರಿದರು. ಅಮ್ಮ ತೀರಿಕೊಂಡ ದುಃಖದಲ್ಲಿಯೂ ಓದಿನಲ್ಲಿ ಹಿಂದುಳಿಯಲಿಲ್ಲ. 2003ರಲ್ಲಿ ದೆಹಲಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಏಳನೆಯ ರಾಂಕ್ ಪಡೆದುಕೊಂಡಿದ್ದರು. ಅಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಸೇರಿಕೊಂಡರು.

  ವಾರದ ಹಿಂದಷ್ಟೇ ಎಂದೆಂದಿಗೂ ನಿಮಗೆ ಚಿರರುಣಿ ಎಂದಿದ್ದ ಸುಶಾಂತ್ ಹೀಗೇಗೆ ಮಾಡಿಕೊಂಡರು?

  ಓದಿನಲ್ಲಿ ಚುರುಕಾಗಿದ್ದ ಅವರು, ಭೌತಶಾಸ್ತ್ರದಲ್ಲಿ ನ್ಯಾಷನಲ್ ಒಲಿಂಪಿಯಾಡ್ ಗೆದ್ದಿದ್ದರು. ಒಟ್ಟು ಹನ್ನೊಂದು ಕಡೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದು ಎಲ್ಲದರಲ್ಲಿಯೂ ಉತ್ತೀರ್ಣರಾಗಿದ್ದರು. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಸ್ಕಾಲರ್ ಶಿಪ್ ಕೂಡ ದೊರೆತಿತ್ತು. ಆದರೆ ಅಷ್ಟರಲ್ಲಾಗಲೇ ಅವರನ್ನು ನಟನಾ ಲೋಕ ಕೈಬೀಸಿ ಕರೆದಿತ್ತು.

  ಹೀರೋಯಿನ್ ಬರಲೇ ಇಲ್ಲ!

  ಹೀರೋಯಿನ್ ಬರಲೇ ಇಲ್ಲ!

  'ಬಾಲಿವುಡ್ ಸಿನಿಮಾಗಳನ್ನು ನೋಡುತ್ತಿದ್ದವನಿಗೆ ಅದರಲ್ಲಿನ ಕಥೆಗಳು ಏನೇನೋ ಕಲ್ಪನೆಗಳನ್ನು ಹುಟ್ಟುಹಾಕಿದ್ದವು. ಪಟ್ನಾದಿಂದ ದೆಹಲಿಗೆ ಹೋದವನಿಗೆ ಟಿಪಿಕಲ್ ಹೀರೋನ ಅವತಾರ ಮೈದಳೆದಂತೆ ಅನಿಸಿತ್ತು. ಕಾಲೇಜಿನ ಮೊದಲ ದಿನ. ಹೀರೋಯಿನ್ ಹುಡುಕಲು ವೇದಿಕೆ ಸಿದ್ಧವಾಗಿತ್ತು. ಆದರೆ ಹೀರೋಯಿನ್ ಎಲ್ಲಿ? ಆ ಕಾಲೇಜಿನಲ್ಲಿ ಕೆಲವೇ ಕೆಲವು ಯುವತಿಯರಿದ್ದರು. ಕಾಲೇಜಿಗೆ ಹೋದ ಬಳಿಕವಾದರೂ ಕೆಲವು ಚೆನ್ನಾಗಿರುವ ಹುಡುಗಿಯರು ಸಿಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಆಗ ಹುಡುಗಿಯರು ಅಷ್ಟಾಗಿ ಎಂಜಿನಿಯರಿಂಗ್ ಬಗ್ಗೆ ಆಸಕ್ತಿ ತೋರಿಸುತ್ತಿರಲಿಲ್ಲ' ಎಂದು ಹೇಳಿಕೊಂಡಿದ್ದರು ಸುಶಾಂತ್.

  'ನೀವು ನೆನಪಾಗುತ್ತೀರಿ' ಎಂದಿದ್ದ ಸುಶಾಂತ್ ಸಿಂಗ್ ತಾವೇ ನೆನಪಾಗಿಬಿಟ್ಟರು

  ಎಂಜಿನಿಯರಿಂಗ್ ಎಂಬ ಅನಿವಾರ್ಯ ಆಯ್ಕೆ

  ಎಂಜಿನಿಯರಿಂಗ್ ಎಂಬ ಅನಿವಾರ್ಯ ಆಯ್ಕೆ

  ವಿಶೇಷವೆಂದರೆ ಎಂಜಿನಿಯರಿಂಗ್ ಅವರ ಆಯ್ಕೆಯಾಗಿರಲಿಲ್ಲ. ತಾನೊಬ್ಬ ಗಗನಯಾತ್ರಿ ಆಗಬೇಕು ಎಂದು ಅವರು ಆರಂಭದಲ್ಲಿ ಕನಸು ಕಂಡಿದ್ದರು. ಬಳಿಕ ಏರ್ ಫೋರ್ಸ್ ಪೈಲಟ್ ಆಗುವ ಬಯಕೆ ಮೂಡಿತ್ತು. ಇದೆಲ್ಲ ಸಾಧ್ಯವಾಗುವುದಿಲ್ಲ ಎಂದು ಪೋಷಕರು ಹೇಳಿದ ಬಳಿಕ 'ಟಾಪ್ ಗನ್' (ಏರ್ ಫೋರ್ಸ್ ಕುರಿತ ಹಾಲಿವುಡ್) ಪೋಸ್ಟರ್ ಹರಿದುಹಾಕಿದ್ದೆ. ಕೊನೆಗೆ ವಿಧಿಯಿಲ್ಲದೆ ಎಂಜಿನಿಯರಿಂಗ್ ಸೇರಬೇಕಾಯ್ತು. ಅಂದು ನಾನು ಮಾಡಿದ್ದ ನಾಟಕವನ್ನು ನೋಡಿದ್ದ ಮನೆಯವರು ನಾನು ಮುಂದೇನಾಗುತ್ತೇನೆ ಎಂಬ ಸುಳಿವನ್ನು ಗ್ರಹಿಸಬೇಕಿತ್ತು. ಆದರೆ ಮಾಡಲಿಲ್ಲ ಎಂದು ತಮಾಷೆಯಾಗಿ ಹೇಳಿಕೊಂಡಿದ್ದರು.

  ಡ್ಯಾನ್ಸಿಂಗ್ ಕ್ಲಾಸಲ್ಲಿ ಹುಡುಗಿಯರು

  ಡ್ಯಾನ್ಸಿಂಗ್ ಕ್ಲಾಸಲ್ಲಿ ಹುಡುಗಿಯರು

  ಕುಟುಂಬದವರಲ್ಲಿ ಹೆಚ್ಚಿನವರು ವಕೀಲರು ಮತ್ತು ವೈದ್ಯರು. ಜತೆಗೆ ಅಕ್ಕಂದಿರೆಲ್ಲರೂ ಓದಿನಲ್ಲಿ ಬಹಳ ಮುಂದೆ. ಹೀಗಾಗಿ ತಾವೂ ಓದಲೇಬೇಕಾದ ಅನಿವಾರ್ಯತೆ ಇತ್ತು. ನಟನೆ ಎನ್ನುವುದು ಕಲ್ಪನೆಯಲ್ಲಿಯೂ ಸುಳಿಯಲು ಸಾಧ್ಯವಿರಲಿಲ್ಲ ಎಂದಿದ್ದರು ಸುಶಾಂತ್. ಆದರೆ ಶಾರುಖ್ ಖಾನ್ ಅಭಿಮಾನಿಯಾದ ಅವರಲ್ಲಿ 'ದಿಲ್ವಾಲೆ ದುನಿಯಾ ಲೇ ಜಾಯೇಂಗೆ' ಚಿತ್ರ ನೋಡಿ ಕಾಲೇಜಿನ ಬದುಕು ಹೀಗಿರುತ್ತದೆಯೇ ಎಂದೆಲ್ಲ ಎನಿಸಿತ್ತು. ಆದರೆ ಕಾಲೇಜಿಗೆ ಬಂದರೆ ಹುಡುಗಿಯರೇ ಇಲ್ಲ! ಯಾರಾದರೂ ಸಿಗುತ್ತಾರಾ ಎಂದು ಕಾಯುತ್ತಿದ್ದಾಗ, ಹುಡುಗಿಯರನ್ನು ಭೇಟಿ ಮಾಡಬೇಕು ಎಂದರೆ ಡ್ಯಾನ್ಸಿಂಗ್ ಕ್ಲಾಸ್ ಸೇರು ಎಂದು ಸ್ನೇಹಿತರೊಬ್ಬರು ಸಲಹೆ ನೀಡಿದರು. ಹೇಗೂ ಓದು ಚೆನ್ನಾಗಿ ಸಾಗುತ್ತಿದೆಯಲ್ಲ, ಇದೊಂದು ನೋಡೋಣ ಎಂದು ಡ್ಯಾನ್ಸ್ ಕ್ಲಾಸ್ ಸೇರಿದ್ದು ಸುಶಾಂತ್ ಬದುಕಿಗೆ ತಿರುವು ನೀಡಿತು.

  ಕುತೂಹಲಕಾರಿ ತಿರುವು ಪಡೆಯಲಿದೆಯೇ ಸುಶಾಂತ್ ಸಿಂಗ್ ಸಾವು?

  ಇದ್ದ ಗೆಳೆಯರು ಮೂವರು ಮಾತ್ರ

  ಇದ್ದ ಗೆಳೆಯರು ಮೂವರು ಮಾತ್ರ

  ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುವಾಗಲೇ ಸುಶಾಂತ್ ಕನ್ನಡಿ ಮುಂದೆ ನಿಂತು 'ಸೂರಜ್ ಹುವಾ ಮದ್ದಮ್' ಹಾಡು ಗುನುಗುತ್ತಿದ್ದರಂತೆ. ಆದರೆ ಸಿನಿಮಾ ನಟನಾಗಬೇಕೆಂಬ ಯೋಚನೆ ಆಗಲೂ ಮೂಡಿರಲಿಲ್ಲ. ಅವರ ಮನಸಲ್ಲಿ ಇದ್ದಿದ್ದು, ಸಿನಿಮಾಗಳಲ್ಲಿ ಬರುವಂತೆ ಕಾಲೇಜಲ್ಲಿ ಹುಡುಗಿಯರು ಸಿಗುತ್ತಾರೆ ಎಂಬ ಕಲ್ಪನೆಯಷ್ಟೇ. ಆಗ ಯಾರಾದರೂ ಅವಕಾಶ ನೀಡಿದರೂ ಒಪ್ಪಿಕೊಳ್ಳುತ್ತಿರಲಿಲ್ಲ. ಅದೆಲ್ಲ ನಡೆಯುತ್ತಿದ್ದದ್ದು ಕನ್ನಡಿ ಮುಂದೆ ಮಾತ್ರ. ಶಾಲೆಯಲ್ಲಿ ಭಾಷಣ ಮಾಡುವ ಸಂದರ್ಭ ಬಂದ ದಿನ ಶಾಲೆಗೇ ಹೋಗುತ್ತಿರಲಿಲ್ಲ. ಯಾರ ಗಮನ ಸೆಳೆಯುವುದೂ ಇಷ್ಟವಿರಲಿಲ್ಲ. ನನಗೆ ಗುರುತಿಸಿಕೊಳ್ಳಬೇಕು ಎಂಬ ಬಯಕೆ ಇದ್ದಿದ್ದು ಶಿಕ್ಷಣದ ಮೂಲಕವಷ್ಟೇ. ನನಗೆ ಆತ್ಮೀಯರೆಂದು ಇದ್ದ ಗೆಳೆಯರೆಂದರೆ ಇಬ್ಬರು ಮೂವರು ಮಾತ್ರ. ಆದರೂ ಜೀವನ ಪರ್ಫೆಕ್ಟ್ ಆಗಿತ್ತು ಎಂದಿದ್ದರು ಸುಶಾಂತ್.

  ಬದುಕು ಬದಲಿಸಿದ ನೃತ್ಯ

  ಬದುಕು ಬದಲಿಸಿದ ನೃತ್ಯ

  ಶೈಮಕ್ ದೇವರ್ ನೃತ್ಯ ಗುಂಪಿಗೆ ಸೇರಿಕೊಂಡ ಬಳಿಕ ಸುಶಾಂತ್ ಯೋಚನೆಗಳು ಬದಲಾದವು. ಅಲ್ಲಿಂದ ದೊಡ್ಡ ತಿರುವು ಸಿಕ್ಕಿತು. ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿಯಿಂದ ಬಂದ ಸ್ಕಾಲರ್‌ಶಿಪ್ ಆಫರ್ ಕೈಬಿಟ್ಟು ಮುಂಬೈನ ವರ್ಸೋವಾದಲ್ಲಿ ಒಂದು ಕೊಠಡಿ ಮತ್ತು ಅಡುಗೆ ಮನೆಯುಳ್ಳ ರೂಮ್ ಸೇರಿಕೊಂಡರು. ಅಂದಹಾಗೆ ಆ ರೂಮ್‌ನಲ್ಲಿ ಇನ್ನೂ ಆರು ಮಂದಿ ಇದ್ದರು.

  2006ರಲ್ಲಿ ಎಂಜಿನಿಯರಿಂಗ್ ಕೊನೆಯ ವರ್ಷ. ಸುಶಾಂತ್ ಸಿಡಿಸಿದ ಬಾಂಬ್‌ಗೆ ಅವರ ಮನೆಯವರೆಲ್ಲ ಬೆಚ್ಚಿಬಿದ್ದಿದ್ದರು. ಓದಿಗೆ ಗುಡ್ ಬೈ ಹೇಳಿ ನಟನೆಯತ್ತ ಮುಖ ಮಾಡುವುದಾಗಿ ತಿಳಿಸಿದ್ದರು. ಮನೆಯವರ ಮೌನವೇ ಸಮ್ಮತಿ ಎಂದು ಪರಿಗಣಿಸಿದ ಸುಶಾಂತ್ ಬಾಂಬೆಯತ್ತ ಹೊರಟರು. ಆ ಸಮಯದಲ್ಲಿ ಅದು ಬಹಳ ಕಠಿಣ ನಿರ್ಧಾರವಾಗಿದ್ದರೂ ನಂತರ ಎಲ್ಲ ಬದಲಾಯಿತು. ಅಪ್ಪ ಎಲ್ಲಿಯೋ ನಡೆದು ಹೋಗುವಾಗ ಜನರು ಅವರನ್ನು ಕರೆದು ನನ್ನ ವಿಡಿಯೋವೊಂದನ್ನು ತೋರಿಸುತ್ತಿದ್ದರು. ಅದು ಅಪ್ಪನಲ್ಲಿ ನನ್ನ ಬಗ್ಗೆ ಹೆಮ್ಮೆ ಮೂಡಿಸುತ್ತಿತ್ತು. ಆದರೆ ಈಗಲೂ ಮಾತು ಮುಗಿಸುವಾಗ ಅಪ್ಪ, 'ಮಗನೇ ಪದವಿ ಮುಗಿಸು' ಎಂದು ಹೇಳುತ್ತಲೇ ಇರುತ್ತಾರೆ ಎಂದು ಸುಶಾಂತ್ ಹೇಳಿದ್ದರು.

  ನಟನೆಯ ಹಾದಿ ತೋರಿದ ಗುರು

  ನಟನೆಯ ಹಾದಿ ತೋರಿದ ಗುರು

  ಹುಡುಗಿಯರನ್ನು ನೋಡುವ ಸಲುವಾಗಿಯೇ ಡ್ಯಾನ್ಸಿಂಗ್ ಕ್ಲಾಸ್‌ಗೆ ಹೋಗಿದ್ದು. ಆದರೆ ಆ ತರಗತಿಗಳು ನಿಜಕ್ಕೂ ಇಷ್ಟವಾಗತೊಡಗಿತ್ತು ಎಂದು ಸುಶಾಂತ್ ಹೇಳಿಕೊಂಡಿದ್ದರು. ಸುಶಾಂತ್ ನೃತ್ಯ ನೋಡಿ ಮೆಚ್ಚಿದ ಗುರು ಶೈಮಕ್, ನಿನ್ನಲ್ಲಿ ನೃತ್ಯದಷ್ಟ ಅದ್ಭುತ ಭಾವನೆಗಳನ್ನು ಹೊಮ್ಮಿಸುವ ಶಕ್ತಿಯಿದೆ. ರಂಗಭೂಮಿಗೆ ಏಕೆ ಹೋಗಬಾರದು ಎಂದು ಕೇಳಿದರು. ಗುರುವಿನ ಸಲಹೆಯಂತೆ ನಟನಾ ತರಗತಿಗೆ ಸೇರಿಕೊಂಡರು. ಕೊನೆಗೆ ಅಭಿನಯವನ್ನೇ ವೃತ್ತಿಯನ್ನಾಗಿ ಪರಿಗಣಿಸಯವ ಬಗ್ಗೆ ಗಂಭೀರವಾಗಿ ಯೋಚಿಸಿದರು. ಜನರನ್ನು ನಗಿಸುವ, ಅಳಿಸುವ ಕಲೆ ಕರಗತವಾಯಿತು. ಬದುಕಿನ ಮೊದಲ 20 ವರ್ಷ ಜನರನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆನಿಸಿದ್ದ ಅವರಿಗೆ, ಅದು ಸುಲಭವಾಗತೊಡಗಿತು.

  ಪ್ರಯೋಗಾತ್ಮಕ ಸಿನಿಮಾಗಳು

  ಪ್ರಯೋಗಾತ್ಮಕ ಸಿನಿಮಾಗಳು

  ರಂಗಭೂಮಿ, ನೃತ್ಯ, ಮಾರ್ಷಿಯಲ್ ಆರ್ಟ್ಸ್ ಹೀಗೆ ಹತ್ತಾರು ಚಟುವಟಿಕೆಗಳು ಶುರುವಾದವು. ನೃತ್ಯ ಮತ್ತು ಮಾರ್ಷಿಯಲ್ ಆರ್ಟ್ಸ್ ಕಲಿತ ಅವರು ಸುಲಭವಾಗಿ ಆಕ್ಷನ್ ಚಿತ್ರಗಳನ್ನು ಸಾಲು ಸಾಲಾಗಿ ಮಾಡಿ ಹಣ ಗಳಿಸಬಹುದಾಗಿತ್ತು. ಆದರೆ ಹಣ ಅಥವಾ ಕೀರ್ತಿಯತ್ತ ಆಸಕ್ತಿ ಹೊಂದದ ಸುಶಾಂತ್, ತೀರಾ ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳತೊಡಗಿದರು. ಪ್ರಯೋಗಗಳಿಗೆ ಒಡ್ಡಿಕೊಳ್ಳತೊಡಗಿದರು.

  ಅಕ್ಕ ಕ್ರಿಕೆಟ್ ಆಟಗಾರ್ತಿಯಾಗಿದ್ದರೂ ಒಮ್ಮೆಯೂ ಕ್ರಿಕೆಟ್ ಆಡದ ಸುಶಾಂತ್, 'ಎಂಎಸ್ ಧೋನಿ' ಬಯೋಪಿಕ್‌ನಲ್ಲಿ ಧೋನಿಯ ಪಾತ್ರಕ್ಕಾಗಿ ಧೋನಿಯ ಪ್ರತಿ ಶೈಲಿಯನ್ನೂ ಅನುಕರಿಸಿದ್ದು ಅವರ ಆಸಕ್ತಿಗೆ ಸಾಕ್ಷಿ. ನಟನೆ ಎನ್ನುವುದು ಸುಶಾಂತ್ ತುಡಿತವಾಗಿತ್ತು. ಬಾಲಿವುಡ್‌ಗೆ ಕಾಲಿಡುವ ಬಯಕೆಗೆ ಮೆಟ್ಟಿಲಾಗಿ ಧಾರಾವಾಹಿಯನ್ನು ಬಳಸಿಕೊಂಡರು. ಜತೆಗೆ ಡ್ಯಾನ್ಸ್ ಶೋಗಳೂ ಖ್ಯಾತಿ ನೀಡಿದ್ದವು. ಕಣ್ಣುಗಳಲ್ಲೇ ಮಾತಾಡುವ ಛಾತಿಯುಳ್ಳ ಸುಶಾಂತ್‌ಗೆ ಬಾಲಿವುಡ್ ಬಾಗಿಲು ತೆರೆಯುವುದು ಹೆಚ್ಚು ಸಮಯ ಹಿಡಿಯಲಿಲ್ಲ.

  ಅಂಕಿತಾ ಜತೆ ಪ್ರೇಮ ಸಲ್ಲಾಪ

  ಅಂಕಿತಾ ಜತೆ ಪ್ರೇಮ ಸಲ್ಲಾಪ

  ಸುಶಾಂತ್ ವೈಯಕ್ತಿಕ ಬದುಕು ಕೂಡ ಸಿನಿಮೀಯವಾಗಿತ್ತು. 'ಪವಿತ್ರಾ ರಿಷ್ತಾ' ಧಾರಾವಾಹಿಯಲ್ಲಿ ತನ್ನೊಟ್ಟಿಗೆ ಮುಖ್ಯಪಾತ್ರದಲ್ಲಿ ನಟಿಸಿದ್ದ ಅಂಕಿತಾ ಲೋಖಂಡೆ ಜತೆ ಪ್ರೇಮ ಸಲ್ಲಾಪ ಆರಂಭವಾಗಿತ್ತು. 2010ರಲ್ಲಿ ಝಲಕ್ ದಿಖ್ಲಾ ಜಾ 4ರ ನೃತ್ಯ ಸ್ಪರ್ಧೆಯ ವೇಳೆ ವೇದಿಕೆಯಲ್ಲಿಯೇ ಅಂಕಿತಾಗೆ ಪ್ರೇಮ ನಿವೇದನೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಅಂದಿನಿಂದ ಇಬ್ಬರೂ ಯಾವ ಮುಚ್ಚುಮರೆಯಿಲ್ಲದೆ ಓಡಾಡಿಕೊಂಡಿದ್ದರು. ಲಿವ್ ಇನ್ ರಿಲೇಷನ್‌ಷಿಪ್ ಬದುಕು ಆರಂಭಿಸಿದ್ದರು. ಸುಮಾರು ಒಂಬತ್ತು ವರ್ಷ ಲಿವಿಂಗ್ ಟುಗೆದರ್‌ನಲ್ಲಿದ್ದ ಇಬ್ಬರೂ 2019ರಲ್ಲಿ ಮದುವೆಯಾಗುವುದಾಗಿ ಬಹಿರಂಗವಾಗಿ ಹೇಳಿದ್ದರು. ಆದರೆ ಹಾಗೆ ಘೋಷಿಸಿದ ಕೆಲವೇ ತಿಂಗಳಲ್ಲಿ ಇಬ್ಬರ ಬ್ರೇಕಪ್ ಆಗಿತ್ತು.

  ಡೇಟಿಂಗ್ ಸುತ್ತಮುತ್ತ

  ಡೇಟಿಂಗ್ ಸುತ್ತಮುತ್ತ

  ಅಂಕಿತಾರಿಂದ ದೂರವಾದ ಬಳಿಕ ಸುಶಾಂತ್ ವರ್ತನೆಯಲ್ಲಿ ಸಾಕಷ್ಟು ಬದಲಾಗತೊಡಗಿತ್ತು. ಅವರಲ್ಲಿ ಆಗಲೇ ಖಿನ್ನತೆ ಕಾಡಲು ಆರಂಭಿಸಿತ್ತು. ಬಳಿಕ ಕೆಲವು ಕಾಲ ಕೃತಿ ಸನೊನ್ ಜತೆ ಸುಶಾಂತ್ ಹೆಸರು ಕೇಳಿಬಂದಿತ್ತು. ಇತ್ತೀಚೆಗೆ ರಿಹಾ ಚಕ್ರವರ್ತಿ ಮತ್ತು ಸುಶಾಂತ್ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ಮಾತುಕತೆ, ಅನೇಕ ಊಹಾಪೋಹಗಳನ್ನು ಹುಟ್ಟುಹಾಕಿತ್ತು. ಅದರ ಮಧ್ಯೆಯೇ ಅಂಕಿತಾ ಲೋಖಂಡೆ, ವಿಕ್ಕಿ ಜೈನ್ ಜತೆ ಡೇಟಿಂಗ್ ನಡೆಸುತ್ತಿರುವ ಸುದ್ದಿ ಬಂದಿತ್ತು. ಅದನ್ನು ಅಂಕಿತಾ ಕೂಡ ಬಹಿರಂಗಪಡಿಸಿದ್ದರು. ಅವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿದೆ ಎನ್ನಲಾಗಿತ್ತು.

  ಖಿನ್ನತೆಗೆ ಕಾರಣವಾಗಿದ್ದೇನು?

  ಖಿನ್ನತೆಗೆ ಕಾರಣವಾಗಿದ್ದೇನು?

  ಸುಶಾಂತ್ ಸಿಂಗ್ ಅವರಿಗೆ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಕೆಲವು ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಖಿನ್ನತೆಗೆ ಒಳಗಾಗಿದ್ದ ಸುಶಾಂತ್, ಬೇಗನೆ ಕೋಪಗೊಳ್ಳುತ್ತಿದ್ದರು. ಸ್ನೇಹಿತರಿಂದ ದೂರವಾಗಿದ್ದರು. ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿದ್ದ ವಿಷಯಗಳು ಮಾನಸಿಕ ತೊಳಲಾಟವನ್ನು ವಿವರಿಸುತ್ತಿದ್ದವು. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಸುಶಾಂತ್ ಸಾವು ಆತುರದ ತೀರ್ಮಾನವಾಗಿರಲಾರದು. ತಮ್ಮ ಬದುಕು ಹಾಗೂ ಸುತ್ತಲೂ ನಡೆದ ಘಟನೆಗಳು ಮತ್ತು ಒಂಟಿತನ ಹಂತ ಹಂತವಾಗಿ ಅವರನ್ನು ಬದುಕನ್ನು ಅಂತ್ಯಗೊಳಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳುವಂತೆ ಮಾಡಿವೆ ಎನ್ನಲಾಗುತ್ತಿದೆ.

  English summary
  Sushant Singh Rajput's Life Journey: Sushant Singh Rajput's life was very inspiring, but not the end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X