For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್‌ ಜೀವನದ ವಿಲನ್ ಬೆಂಗಳೂರು! ಕಾರಣ?

  |

  ಅಮಿತಾಬ್ ಬಚ್ಚನ್ ಹುಟ್ಟುಹಬ್ಬ ಇಂದು (ಅಕ್ಟೋಬರ್ 11). ಭಾರತೀಯ ಸಿನಿಮಾ ರಂಗದ ಲೆಜೆಂಡ್ ಎನಿಸಿಕೊಂಡಿರುವ ಬಚ್ಚನ್‌ಗೆ ಪ್ರಧಾನಿ ಮೋದಿಯಾಗಿ ಹಲವರು ಶುಭಾಶಯ ಕೋರಿದ್ದಾರೆ.

  ಅಮಿತಾಬ್ ಬಚ್ಚನ್‌ ಇಂದು ದಂತಕತೆಯಾಗಿ ರೂಪುಗೊಂಡಿದ್ದರ ಹಿಂದೆ ಸುದೀರ್ಘ ಏಳು-ಬೀಳಿನ ಕತೆ ಇದೆ. ಅಮಿತಾಬ್ ಬಚ್ಚನ್ ತಮ್ಮ ವೃತ್ತಿ, ಗೌರವ, ಇರುವ ಮನೆಯನ್ನೆಲ್ಲ ಕಳೆದುಕೊಂಡು ಬೀದಿಗೆ ಬರಲಿದ್ದ ಸ್ಥಿತಿಯನ್ನು ತಲುಪಿ ಆ ಬಳಿಕ ಮತ್ತೆ ಎದ್ದುನಿಂತು ಎಲ್ಲವನ್ನೂ ಗಳಿಸಿಕೊಂಡವರು.

  ಅಮಿತಾಬ್ ಬಚ್ಚನ್‌ರ ಸಿನಿಮಾಗಳಂತೆಯೇ ಅವರ ಜೀವನದ ಕತೆಯೂ ಹಲವು ತಿರುವುಗಳಿಂದ ಕೂಡಿದೆ. ಆದರೆ ಅವರ ಜೀವನ ಕತೆಯಲ್ಲಿ ವಿಲನ್ ಆಗಿರುವುದು ಬೆಂಗಳೂರು! ಹೌದು, ಕೋಟ್ಯಂತರ ಜನರ ಪಾಲಿನ ಸುಂದರ ನಗರಿ, ಅವಕಾಶಗಳ ನಗರಿ, ಆತ್ಮೀಯತೆ ನಗರಿ ಬೆಂಗಳೂರು, ಅಮಿತಾಬ್ ಬಚ್ಚನ್‌ ಪಾಲಿಗೆ ಮಾತ್ರ ವಿಲನ್! ಅಮಿತಾಬ್ ಬಚ್ಚನ್‌ರ ಜೀವನದ ಎರಡು ಅತ್ಯಂತ ಕಹಿ ಘಟನೆಗಳು ನಡೆದಿದ್ದು ಬೆಂಗಳೂರಿನಲ್ಲಿಯೇ!

  ಅದು 80 ರ ದಶಕ, ಆಂಗ್ರಿಯಂಗ್ ಮ್ಯಾನ್ ಆಗಿ ಅಮಿತಾಬ್ ಬಚ್ಚನ್ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದರು. ಮರ ಸುತ್ತುವ ಪಾತ್ರಗಳಿಗೆ ಸೀಮಿತವಾಗಿದ್ದ ಬಾಲಿವುಡ್‌ ನಾಯಕ ಪಾತ್ರಗಳ ರೂಪವನ್ನೇ ಬದಲಾಯಿಸಿದ ಅಮಿತಾಬ್ ಬಚ್ಚನ್ ರಫ್ ಆಂಡ್ ಟಫ್ ಇಮೇಜನ್ನು ಜನಪ್ರಿಯಗೊಳಿಸಿದರು. ಒಂದರ ಮೇಲೊಂದು ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದರು. ಅದೇ ಸಮಯಕ್ಕೆ 'ಕೂಲಿ' ಹೆಸರಿನ ಮಾಸ್ ಸಿನಿಮಾವನ್ನು ಕೈಗೆತ್ತಿಕೊಂಡರು. ಶೂಟಿಂಗ್‌ಗೆ ಆರಿಸಿಕೊಂಡಿದ್ದು ಬೆಂಗಳೂರನ್ನು.

  ಜೀವನ್ಮರಣ ಹೋರಾಟಕ್ಕೆ ಸಿಲುಕಿದ ಅಮಿತಾಬ್ ಬಚ್ಚನ್

  ಜೀವನ್ಮರಣ ಹೋರಾಟಕ್ಕೆ ಸಿಲುಕಿದ ಅಮಿತಾಬ್ ಬಚ್ಚನ್

  ಬೆಂಗಳೂರಿನ ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಬಚ್ಚನ್ ನಟನೆಯ 'ಕೂಲಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿತ್ತು. 1986, ಜುಲೈ 26 ರಂದು ಫೈಟ್ ದೃಶ್ಯದ ಚಿತ್ರೀಕರಣವನ್ನು ಬೆಂಗಳೂರಿನ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಡ್ಯೂಪ್ ಇಲ್ಲದೆ ಮಾಡುತ್ತಿದ್ದ ಚಿತ್ರೀಕರಣದಲ್ಲಿ ಎದುರಾಳಿ ನಟ ಪುನೀತ್ ಎಸ್ಸಾರ್ ಹೊಡೆದ ಏಟು ಅಮಿತಾಬ್ ಬಚ್ಚನ್‌ರ ಕಿಬ್ಬೊಟ್ಟೆಗೆ ತಗುಲಿ, ಲಿವರ್‌ಗೆ ಗಂಭೀರ ಗಾಯವಾಯಿತು. ಒಳ ಗಾಯ ಅದೆಷ್ಟು ತೀವ್ರವಾಗಿತ್ತೆಂದರೆ ಅಮಿತಾಬ್ ಬಚ್ಚನ್ ಬದುಕುವುದೇ ಸಾಧ್ಯವಿಲ್ಲ ಎನ್ನಲಾಗಿತ್ತು. ಬಚ್ಚನ್ ಕೆಲ ದಿನಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದರು. ದೇಶದಾದ್ಯಂತ ಅಭಿಮಾನಿಗಳು ಅವರು ಬದುಕಿ ಬರಲೆಂದು ಪ್ರಾರ್ಥಿಸಿದ್ದರು. ಹಲವು ತಿಂಗಳ ಬಳಿಕ ಅವರು ಹುಷಾರಾದರಾದರೂ, ಆ ಘಟನೆ ನಂತರ ಅವರ ಆರೋಗ್ಯ, ದೇಹ ಸಧೃಢತೆ ಮೊದಲಿನಂತಿರಲಿಲ್ಲ.

  ಆರ್ಥಿಕ ದುರ್ಘಟನೆ ನಡೆದಿದ್ದೂ ಸಹ ಬೆಂಗಳೂರಿನಲ್ಲೇ

  ಆರ್ಥಿಕ ದುರ್ಘಟನೆ ನಡೆದಿದ್ದೂ ಸಹ ಬೆಂಗಳೂರಿನಲ್ಲೇ

  ಆ ನಂತರ 1995 ರ ಬಳಿಕ ಅಮಿತಾಬ್ ಬಚ್ಚನ್ ಜೀವನದ ಅತ್ಯಂತ ಕಠಿಣ ದಿನಗಳನ್ನು ಎದುರಿಸಿದರು. ಅದೆಷ್ಟರ ಮಟ್ಟಿಗೆ ಎಂದರೆ ಇದ್ದ ಮನೆಯನ್ನು ಮಾರಾಟ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿತ್ತು. ಆತ್ಮಹತ್ಯೆ ಯೋಚನೆಯೂ ಬಚ್ಚನ್ ತಲೆಯಲ್ಲಿ ಸುಳಿದಿತ್ತು. ಅಮಿತಾಬ್ ಬಚ್ಚನ್‌ರಿಗೆ ಆ ದುಸ್ಥಿತಿ ಬಂದೊದಗಿದ್ದಕ್ಕೆ ಮೂಲ ಕಾರಣವಾದ ಘಟನೆ ನಡೆದಿದ್ದೂ ಸಹ ಬೆಂಗಳೂರಿನಲ್ಲೇ!

  ಮಿಸ್ ವರ್ಲ್ಡ್‌ 1996

  ಮಿಸ್ ವರ್ಲ್ಡ್‌ 1996

  1990 ರ ಬಳಿಕ ಶಾರುಖ್, ಸಲ್ಮಾನ್, ಅನಿಲ್ ಕಪೂರ್, ಗೋವಿಂದಾ, ಸಂಜಯ್ ದತ್ ಇನ್ನಿತರರ ಕಾಲ ಶುರುವಾಗಿ ಅಮಿತಾಬ್ ಬಚ್ಚನ್‌ಗೆ ಅವಕಾಶಗಳು ತುಸು ಕಡಿಮೆಯಾಗಿದ್ದವು. ಆಗ 1994 ರಲ್ಲಿ ಅಮಿತಾಬ್ ಬಚ್ಚನ್ ಎಬಿಸಿಎಲ್ ಹೆಸರಿನ ಸಂಸ್ಥೆ ತೆರೆದು ಸಿನಿಮಾ ನಿರ್ಮಾಣ, ಇವೆಂಟ್ ಮ್ಯಾನೇಜ್‌ಮೆಂಟ್ ಉದ್ಯಮಕ್ಕೆ ಕೈ ಹಾಕಿದರು. ಆರಂಭದಲ್ಲಿ ನಿರ್ಮಿಸಿದ ಒಂದೆರಡು ಸಿನಿಮಾ ಸಾಧಾರಣ ಹಿಟ್ ಆಯಿತು. ಆದರೆ ಅಮಿತಾಬ್ ಬಚ್ಚನ್ ದೊಡ್ಡದಾಗಿ ಕೈಸುಟ್ಟುಕೊಂಡಿದ್ದು ಮಿಸ್ ವರ್ಲ್ಡ್‌ 1996 ಇವೆಂಟ್‌ಗೆ ಕೈಯಿಟ್ಟು.

  ಸಾಲದಲ್ಲಿ ಸಿಲುಕಿಕೊಂಡ ಅಮಿತಾಬ್ ಬಚ್ಚನ್

  ಸಾಲದಲ್ಲಿ ಸಿಲುಕಿಕೊಂಡ ಅಮಿತಾಬ್ ಬಚ್ಚನ್

  ಮಿಸ್ ವರ್ಲ್ಡ್‌ 1996 ಇವೆಂಟ್ ಅನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಿಬಿಟ್ಟರು ಅಮಿತಾಬ್ ಬಚ್ಚನ್. ಆದರೆ ಇದಕ್ಕೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಯಿತು. ಹಿಂದು ಸಂಘಟನೆಗಳು ತೀವ್ರ ವಿರೋಧ ಮಾಡಿದವು. ಆಗ ಕರ್ನಾಟಕದಲ್ಲಿ ಆಗಿದ್ದ ಸಿಎಂ ಜೆಎಚ್‌ ಪಟೇಲರ ಬೆಂಬಲದೊಂದಿಗೆ ಇವೆಂಟ್ ಏನೋ ಪೂರ್ಣವಾಯಿತು ಆದರೆ ಅಮಿತಾಬ್ ಬಚ್ಚನ್‌ರ ಸಂಸ್ಥೆ ಆಗಿನ ಕಾಲಕ್ಕೆ ಕೋಟ್ಯಂತರ ರುಪಾಯಿ ಹಣ ನಷ್ಟ ಅನುಭವಿಸಬೇಕಾಯ್ತು. ಕರ್ನಾಟಕ ಪೊಲೀಸ್ ಇಲಾಖೆ ಸೇರಿದಂತೆ ಹಲವರಿಗೆ ಬಾಕಿ ಹಣ ಉಳಿಸಿಕೊಂಡಿತು. ಹಲವರು ಕೋರ್ಟ್ ಮೆಟ್ಟಿಲೇರಿದರು. ಕೋಟ್ಯಂತರ ರುಪಾಯಿ ಸಾಲ ಹಾಗೂ ಬಡ್ಡಿಯ ಕೂಪದಲ್ಲಿ ಅಮಿತಾಬ್ ಬಚ್ಚನ್ ಸಿಕ್ಕಿಹಾಕಿಕೊಂಡರು.

  ನನ್ನ ಜೀವನದ ಅತ್ಯಂತ ಸಂಕಷ್ಟದ ದಿನಗಳವು: ಬಚ್ಚನ್

  ನನ್ನ ಜೀವನದ ಅತ್ಯಂತ ಸಂಕಷ್ಟದ ದಿನಗಳವು: ಬಚ್ಚನ್

  2013 ರ ಸಂದರ್ಶನವೊಂದರಲ್ಲಿ ಸ್ವತಃ ಅಮಿತಾಬ್ ಬಚ್ಚನ್ ಹೇಳಿಕೊಂಡಿರುವಂತೆ, ''ಆಗ ಮನೆಯ ಮುಂದೆ ಪ್ರತಿದಿನ ಸಾಲಗಾರರು ಸಾಲುಗಟ್ಟಿ ನಿಲ್ಲುತ್ತಿದ್ದರು. ನನಗೆ, ನನ್ನ ಕುಟುಂಬಕ್ಕೆ ಬೈಗುಳ ನೀಡುತ್ತಿದ್ದರು, ಬೆದರಿಕೆ ಹಾಕುತ್ತಿದ್ದರು. ಜೀವನ ಸಾಕು ಎನಿಸಿಬಿಟ್ಟಿತ್ತು. ನಾನಿದ್ದ ಪ್ರತೀಕ್ಷಾ ಮನೆಯನ್ನು ಮಾರಲು ಮುಂದಾದೆ, ಬ್ಯಾಂಕ್‌ನವರು ಅದನ್ನೂ ಜಪ್ತಿ ಮಾಡಿಬಿಟ್ಟರು. ಅದನ್ನು ಮಾರಿ ಸಾಲವನ್ನು ತೀರಿಸಲು ಸಹ ಸಾಧ್ಯವಾಗಲಿಲ್ಲ. ನನಗಿದ್ದ ಇನ್ನೆರಡು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಿದೆ. ಹಾಗಿದ್ದರೂ ಸಾಲ ತೀರಲಿಲ್ಲ, ದಿನೇ ದಿನೇ ಒತ್ತಡ ಹೆಚ್ಚಾಗುತ್ತಲೇ ಹೋಯ್ತು. ಆಗ ನನ್ನ ಜೀವನದಲ್ಲಿ ಮೊದಲ ಬಾರಿಗೆ ನಿರ್ದೇಶಕರೊಬ್ಬರನ್ನು ಅವಕಾಶಕ್ಕಾಗಿ ಗೋಗರೆದೆ'' ಎಂದು ನೆನಪು ಮಾಡಿಕೊಂಡಿದ್ದಾರೆ.

  ಅವಕಾಶಕ್ಕಾಗಿ ಗೋಗರೆದಿದ್ದ ಅಮಿತಾಬ್ ಬಚ್ಚನ್

  ಅವಕಾಶಕ್ಕಾಗಿ ಗೋಗರೆದಿದ್ದ ಅಮಿತಾಬ್ ಬಚ್ಚನ್

  ''ನಿರ್ಮಾಪಕ ಯಶ್ ಚೋಪ್ರಾ ಮನೆ, ನನ್ನ ಮನೆಯ ಹಿಂದೆಯೇ ಇತ್ತು, ಅವರ ಬಳಿ ಹೋಗಿ ನನ್ನ ಕಷ್ಟ ಹೇಳಿಕೊಂಡು ಅವಕಾಶ ನೀಡುವಂತೆ ಕೇಳಿದೆ. ಆಗ ಅವರು 'ಮೊಹಬತ್ತೇನ್' ಸಿನಿಮಾ ನೀಡಿದರು. ಅಳುಕಿನಿಂದಲೇ ಆ ಪೋಷಕ ಪಾತ್ರವನ್ನು ಒಪ್ಪಿಕೊಂಡೆ ಆದರೆ ಆ ಪಾತ್ರ ನನ್ನ ವೃತ್ತಿಯ ದಿಕ್ಕನ್ನೇ ಬದಲಿಸಿತು. ಇಂದಿಗೂ ಆ ಸಿನಿಮಾದ ಪಾತ್ರ, ಲುಕ್ ಸೂಪರ್ ಹಿಟ್ ಆಗಿ, ಅದೇ ಮಾದರಿಯ ಹಲವಾರು ಪಾತ್ರಗಳು ಸಿಗಲು ಆರಂಭವಾದವು. ಅದೇ ಸಮಯಕ್ಕೆ ಕೌನ್ ಬನೇಗಾ ಕರೋಡ್‌ಪತಿಯೂ ಸಹ ಪ್ರಾರಂಭವಾಗಿ ಸೂಪರ್ ಹಿಟ್ ಆಯಿತಾದ್ದರಿಂದ ನಿಧಾನಕ್ಕೆ ಬಚ್ಚನ್‌ರ ಸಾಲಗಳೆಲ್ಲವೂ ಕರಗಿ, ಜೀವನದಲ್ಲಿ ಮತ್ತೆ ಹಣಕಾಸು ಸಮಸ್ಯೆ ಬಾರದಷ್ಟು ಹಣ ಸಂಪಾದನೆ ಸಹ ಮಾಡಿದರು.

  ಬೆಂಗಳೂರಿನಲ್ಲಿ ವಿರೋಧ ಎದುರಿಸಿದ್ದ ಬಚ್ಚನ್

  ಬೆಂಗಳೂರಿನಲ್ಲಿ ವಿರೋಧ ಎದುರಿಸಿದ್ದ ಬಚ್ಚನ್

  ಇವು ಮಾತ್ರವಲ್ಲ ಅಮಿತಾಬ್ ಬಚ್ಚನ್ ಬೆಂಗಳೂರಿನಲ್ಲಿ ಕೆಲವು ಬಾರಿ ವಿರೋಧವನ್ನೂ ಎದುರಿಸಿದ್ದರು. ರಾಜ್‌ಕುಮಾರ್ ಸಿನಿಮಾಕ್ಕೆ ಎದುರಾಗಿ ನಿಲ್ಲುವ ಪ್ರಯತ್ನಗಳನ್ನು ಮಾಡಿದಾಗ ಪ್ರತಿಭಟನೆಗಳನ್ನು ಎದುರಿಸಿದ್ದರು. ಕಟೌಟ್‌ಗೆ ಬೆಂಕಿ ಇಟ್ಟ ಪ್ರಸಂಗವೂ ನಡೆದಿತ್ತು. ಇದೇ ಕಾರಣಕ್ಕೆ ಅಮಿತಾಬ್ ಬಚ್ಚನ್ ಓಡೋಡಿ ಬಂದು ರಾಜ್‌ಕುಮಾರ್ ಅವರೊಟ್ಟಿಗೆ ಸ್ನೇಹ ಬೆಳೆಸಿಕೊಂಡರು ಎಂಬ ಮಾತೂ ಸಹ ಚಾಲ್ತಿಯಲ್ಲಿದೆ. ಏನೇ ಆಗಲಿ, ರಾಜ್‌ಕುಮಾರ್ ಹಾಗೂ ಅಮಿತಾಬ್ ಬಚ್ಚನ್ ಪರಸ್ಪರ ಆತ್ಮೀಯ ಗೆಳೆಯರಾಗಿದ್ದರು ಎಂಬುದಂತೂ ಸತ್ಯ.

  English summary
  Actor Amitabh Bachchan seen many ups and downs in his personal as well as proffesion career. But two big set backs of his life happened in Bengaluru.
  Tuesday, October 11, 2022, 18:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X