twitter
    For Quick Alerts
    ALLOW NOTIFICATIONS  
    For Daily Alerts

    ಹಲವು ಅಡೆ-ತಡೆಗಳ ದಾಟಿ ಬಿಡುಗಡೆಯಾಯ್ತು ಭಾರತದ ಮೊದಲ ಸಿನಿಮಾ

    |

    ಲಂಡನ್‌ಗೆ ಹೋಗಿ, ಕ್ಯಾಮೆರಾ, ರೀಲು, ಲ್ಯಾಬ್ ಪರಿಕರಗಳನ್ನು ಖರೀದಿಸಿ ತಂದು, ಮನೆಯಲ್ಲಿಯೇ ಲ್ಯಾಬ್ ನಿರ್ಮಿಸಿ, ಚಿತ್ರೀಕರಣ ಮಾಡಿ, ಪ್ರೊಸೆಸಿಂಗ್ ಮಾಡಿ ಪರಿಣಿತಿ ಪಡೆದಿದ್ದ ದಾದಾ ಸಾಹೇಬ್ ಫಾಲ್ಕೆ ಆ ವೇಳೆಗಾಗಲೆ ಕೈಲಿರುವ ಹಣ ಕಳೆದುಕೊಂಡಿದ್ದರು. ಮನೆಯವರ ಒಡವೆಯನ್ನೂ ಮಾರಿ ಆಗಿತ್ತು. ಈಗ ಸಿನಿಮಾ ನಿರ್ಮಾಣಕ್ಕೆ ಅವರಿಗೆ ನಿರ್ಮಾಪಕರ ಅವಶ್ಯಕತೆ ಇತ್ತು. ಸಿನಿಮಾ ಒಂದನ್ನು ತೆರೆಯ ಮೇಲೆ ಮೂಡಿಸಬಹುದು ಎಂಬುದೇ ಹೊಸ ವಿಷಯವಾಗಿದ್ದ ಆ ಕಾಲಘಟ್ಟದಲ್ಲಿ ಯಾರೂ ದಾದಾ ಸಾಹೇಬ್ ಫಾಲ್ಕೆ ಮಾತನ್ನು ನಂಬಿರಲಿಲ್ಲ. ಆಗ ಐಡಿಯಾ ಒಂದನ್ನು ಮಾಡಿದರು ಫಾಲ್ಕೆ.

    ತಮ್ಮ ಮನೆಯ ಹೂಕುಂಡದಲ್ಲಿ ಬೀಜವೊಂದನ್ನು ನೆಟ್ಟು ಅದರ ಬೆಳವಣಿಗೆಯನ್ನು ಪ್ರತಿದಿನ ಚಿತ್ರೀಕರಣ ಮಾಡಿದರು. ಒಂದು ತಿಂಗಳ ಚಿತ್ರೀಕರಣದ ಬಳಿಕ ಆ ವಿಡಿಯೋ ರೀಲ್‌ಗಳನ್ನೆಲ್ಲ ಸಂಗ್ರಹಿಸಿ ಪ್ರೊಸೆಸ್ ಮಾಡಿ ಅದನ್ನು ಒಂದು ನಿಮಿಷದ ವಿಡಿಯೋವನ್ನಾಗಿ ಮಾಡಿ ಅದಕ್ಕೆ 'ಅಂಕುರಾಚಿ ವಾಡ್' ಎಂದು ಹೆಸರಿಟ್ಟು ಕೆಲವು ಶ್ರೀಮಂತರಿಗೆ ತೋರಿಸಿ ಸಿನಿಮಾ ನಿರ್ಮಾಣಕ್ಕೆ ಹಣ ನೀಡುವಂತೆ ಮನವಿ ಮಾಡಿದರು. ಆಗ ಯಶವಂತರಾವ್ ನಂದಕರ್ಣಿ ಹಾಗೂ ನಾರಾಯಣ ರಾವ್ ದೇವಹರೆ ಫಾಲ್ಕೆಗೆ ಸಿನಿಮಾ ನಿರ್ಮಾಣಕ್ಕೆ ಹಣ ಸಾಲ ನೀಡಿದರು.

    ಹರಿಶ್ಚಂದ್ರನ ಬಗ್ಗೆ ಸಿನಿಮಾ ಮಾಡುವುದಾಗಿ ಮೊದಲೇ ನಿರ್ಧರಿಸಿದ್ದ ಫಾಲ್ಕೆ ಅದಕ್ಕಾಗಿ ಚಿತ್ರಕತೆ ತಯಾರು ಮಾಡಿಟ್ಟುಕೊಂಡಿದ್ದರು. ಸಿನಿಮಾದಲ್ಲಿ ನಟಿಸಲು ನಟರು ಬೇಕೆಂದು ಜಾಹೀರಾತು ನೀಡಿದಾಗ ನೂರಾರು ಮಂದಿ ಅರ್ಜಿ ಕಳಿಸಿದ್ದರು. ಆದರೆ ಒಬ್ಬ ಮಹಿಳೆ ಸಹ ಅರ್ಜಿ ಹಾಕಿರಲಿಲ್ಲ. ಹಾಗಾಗಿ ಪುರುಷರಿಗೆ ಮಹಿಳೆ ವೇಷ ತೊಡಿಸುವುದೆಂದು ನಿಶ್ಚಯವಾಯ್ತು. ಅದೇ ಸಮಯಕ್ಕೆ ರಾಜಪೂರ್ಕರ್ ನಾಟಕ ಮಂಡಳಿ ಬಾಂಬೆಗೆ ಬಂತು. ಅದರ ಮಾಲೀಕರೊಟ್ಟಿಗೆ ಮಾತನಾಡಿ ಕೆಲವು ನಟರನ್ನು ಸಿನಿಮಾದಲ್ಲಿ ನಟಿಸಲು ಕರೆಸಿಕೊಂಡರು ಫಾಲ್ಕೆ. ಅಷ್ಟು ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಬೇಕಾದ ಕತ್ತಿ, ಗುರಾಣಿ, ವಸ್ತ್ರಗಳು ಇನ್ನೂ ಕೆಲವು ವಸ್ತುಗಳನ್ನು ಅವರಿಂದಲೇ ಪಡೆದುಕೊಂಡರು.

    ಮಹಿಳೆ ಪಾತ್ರ ಮಾಡಲು ನಟರ ಹಿಂದೇಟು

    ಮಹಿಳೆ ಪಾತ್ರ ಮಾಡಲು ನಟರ ಹಿಂದೇಟು

    ಮಹಿಳೆ ಪಾತ್ರಗಳನ್ನು ನಿರ್ಹಿಸಲು ನಿಗದಿಯಾಗಿದ್ದ ನಟರು ಮೀಸೆ ತೆಗೆಯಲು ನಿರಾಕರಿಸಿದರು. ಫಾಲ್ಕೆ ತಾವೇ ಮೀಸೆ ಬೋಳಿಸಿಕೊಂಡು ಸೀರೆ ಉಟ್ಟುಕೊಂಡು ಅಭಿನಯಿಸಿ ಅವರಿಗೆ ಸ್ಪೂರ್ತಿ ತುಂಬಿದರು. ಆಗ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಹೇಳುವುದು ಮುಜುಗರದ ವಿಷಯವಾಗಿತ್ತು ಹಾಗಾಗಿ ಫಾಲ್ಕೆಯವರೇ ಎಲ್ಲರಿಗೂ ಹೇಳಿಕೊಟ್ಟು, 'ಹರೀಶ್ಚಂದ್ರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ' ಎಂದಿದ್ದರಂತೆ.

    ಡಕಾಯಿತರು ಬಂದರೆಂದು ಹೆದರಿದ್ದ ಹಳ್ಳಿ ಜನ

    ಡಕಾಯಿತರು ಬಂದರೆಂದು ಹೆದರಿದ್ದ ಹಳ್ಳಿ ಜನ

    ಕಾಡು, ಗುಹೆ, ಬೆಟ್ಟಗುಡ್ಡಗಳು ಇಂಥಹುಗಳಲ್ಲೆಲ್ಲ ಚಿತ್ರೀಕರಣ ಮಾಡಲಾಗುತ್ತಿರಲಿಲ್ಲವಾದ್ದರಿಂದ ಅವುಗಳ ಚಿತ್ರಗಳನ್ನು ಬರೆದು ಒಳಾಂಗಣದಲ್ಲಿಯೇ ಚಿತ್ರೀಕರಣ ಮಾಡಲಾಯಿತು. ಚಿತ್ರಗಳನ್ನು ಫಾಲ್ಕೆಯವರೇ ಬರೆದರು. ಹೊರಾಂಗಣ ಚಿತ್ರೀಕರಣವನ್ನು ಬಾಂಬೆಯಿಂದ ತುಸು ದೂರದಲ್ಲಿದ್ದ ವಂಗನಿ ಎಂಬ ಹಳ್ಳಿಯಲ್ಲಿ ಮಾಡಲಾಯಿತು. ಮೊದಲ ಬಾರಿಗೆ ನಟರು ಹಳ್ಳಿಗೆ ಹೋಗಿ ಮೇಕಪ್, ವಸ್ತ್ರಗಳನ್ನು ಹಾಕಿ ಅಭಿನಯಿಸಲು ಆರಂಭಿಸಿದಾಗ ಹಳ್ಳಿ ಜನರು, ಊರಿಗೆ ಡಕಾಯಿತರು ಬಂದಿದ್ದಾರೆಂದು ದೂರು ನೀಡಿದ್ದರಂತೆ. ನಂತರ ಅವರನ್ನು ಸಮಾಧಾನಪಡಿಸಿ ಚಿತ್ರೀಕರಣ ಪ್ರಾರಂಭಿಸಲಾಯಿತು.

    ಹಲವು ಅಡೆ-ತಡೆಗಳು ಎದುರಾದವು

    ಹಲವು ಅಡೆ-ತಡೆಗಳು ಎದುರಾದವು

    ಚಿತ್ರೀಕರಣದ ವೇಳೆ ಹಲವು ಅಡೆ-ತಡೆಗಳಾದವು. ಚಿತ್ರೀಕರಣದ ವೇಳೆ ಫಾಲ್ಕೆ ಮಗ ಬಾಲಚಂದ್ರ ಫಾಲ್ಕೆ ತಲೆಗೆ ಪೆಟ್ಟಾಗಿ ಜ್ಞಾನ ಹೋಗಿತ್ತು. ಆದರೆ ಅವನನ್ನು ಆಸ್ಪತ್ರೆಗೆ ಸಾಗಿಸಿದರೆ ಸಮಯ ಹೆಚ್ಚು ಬೇಕಾಗುತ್ತದೆಂದು ಹಳ್ಳಿಯಲ್ಲಿಯೇ ಚಿಕಿತ್ಸೆ ನೀಡಿ ಹರಿಶ್ಚಂದ್ರನ ಮಗ ಸಾಯುವ ದೃಶ್ಯವನ್ನು ಬಾಲಚಂದ್ರಗೆ ಜ್ಞಾನ ಇಲ್ಲದ ಪರಿಸ್ಥಿತಿಯಲ್ಲಿಯೇ ಚಿತ್ರೀಕರಿಸಲಾಗಿತ್ತು. ಬೆಳಿಗ್ಗೆ ಎಲ್ಲ ಚಿತ್ರೀಕರಣ ಮಾಡಿ ಅದನ್ನು ರಾತ್ರಿ ಸಮಯ ಪ್ರೊಸೆಸಿಂಗ್ ಮಾಡುತ್ತಿದ್ದರು ಫಾಲ್ಕೆ. ಇದರಿಂದಾಗಿ ತಿಂಗಳುಗಟ್ಟಲೆ ನಿದ್ದೆ ಬಿಟ್ಟಿದ್ದರು ಅವರು. ಆರು ತಿಂಗಳ ನಂತರ ಸಿನಿಮಾದ ಚಿತ್ರೀಕರಣ ಮುಗಿಯಿತು.

    ಏಪ್ರಿಲ್ 12, 1913ರಂದು ಮೊದಲ ಪ್ರದರ್ಶನ

    ಏಪ್ರಿಲ್ 12, 1913ರಂದು ಮೊದಲ ಪ್ರದರ್ಶನ

    ಸಿನಿಮಾವನ್ನು ಏಪ್ರಿಲ್ 21, 1913 ರಂದು ಮುಂಬೈನ ಒಲಂಪಿಯಾ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಯಿತು. ಸಿನಿಮಾಕ್ಕೆ ಬಾಂಬೆಯ ಗಣ್ಯಾತಿಗಣ್ಯರನ್ನು ಕರೆಸಲಾಗಿತ್ತು. ಪತ್ರಿಕೆಗಳ ಸಂಪಾದಕರನ್ನೂ ಕರೆಸಲಾಗಿತ್ತು. ಎಲ್ಲರೂ ಸಿನಿಮಾವನ್ನು ಬಹುವಾಗಿ ಹೊಗಳಿದರು. ಪತ್ರಿಕೆಗಳಲ್ಲೆಲ್ಲ ದಾದಾಸಾಹೇಬ್ ಫಾಲ್ಕೆಯ 'ರಾಜಾ ಹರಿಶ್ಚಂದ್ರ' ಸಿನಿಮಾದ ಸುದ್ದಿ. ನಂತರ ಮೇ 03, 1913 ಕ್ಕೆ ಸಿನಿಮಾವು ಚಿತ್ರಮಂದಿರದಲ್ಲಿ ಬಿಡುಗಡೆ ಆಯಿತು. ಸಿನಿಮಾದ ಒಟ್ಟು ಕಾಲಾವಧಿ ಒಂದೂವರೆ ಗಂಟೆ ಇತ್ತು. ದಿನಕ್ಕೆ ನಾಲ್ಕು ಶೋ ಪ್ರದರ್ಶನ ಮಾಡಲಾಗುತ್ತಿತ್ತು. ಬಾಂಬೆಯಲ್ಲಿ 'ರಾಜಾ ಹರಿಶ್ಚಂದ್ರ' ಸಿನಿಮಾ ಹಿಟ್ ಆಯಿತು. ನಂತರ ಅದೇ ಸಿನಿಮಾವನ್ನು ಪುಣೆ, ರಂಗೂನ್, ಶ್ರೀಲಂಕಾದ ಕೊಲಂಬೊ ಇನ್ನಿತರೆ ಪ್ರದೇಶಗಳಲ್ಲಿ ಪ್ರದರ್ಶಿಸಿ ಒಳ್ಳೆಯ ಹಣವನ್ನೇ ಫಾಲ್ಕೆ ಸಂಪಾದನೆ ಮಾಡಿದರು.

    1917ರಲ್ಲಿ ರೀಲುಗಳು ಸುಟ್ಟುಹೋದವು

    1917ರಲ್ಲಿ ರೀಲುಗಳು ಸುಟ್ಟುಹೋದವು

    1917ರಲ್ಲಿ ನಡೆದ ಅಗ್ನಿ ಅವಘಡದಲ್ಲಿ 'ರಾಜಾ ಹರಿಶ್ಚಂದ್ರ' ಸಿನಿಮಾದ ರೀಲ್‌ಗಳು ಸುಟ್ಟುಹೋದವು. ಕೇವಲ ಮೊದಲ ಹಾಗೂ ಕೊನೆಯ ಕೆಲವು ದೃಶ್ಯಗಳ ರೀಲ್‌ಗಳಷ್ಟೆ ಉಳಿದಿದ್ದು, ಅವುಗಳನ್ನು ನ್ಯಾಷನಲ್ ಫಿಲಂ ಆರ್ಕೈವ್‌ನಲ್ಲಿ ಸಂಗ್ರಹಿಸಿ ಇಡಲಾಗಿದೆ. 'ರಾಜಾ ಹರಿಶ್ಚಂದ್ರ' ಸಿನಿಮಾವು ಭಾರತದ ಮೊಟ್ಟ ಮೊದಲ ಸಿನಿಮಾ ಆಗಿದ್ದು, ಭಾರತೀಯ ಸಿನಿಮಾರಂಗದ ಇಷ್ಟು ಹೆಮ್ಮರವಾಗಿ ಬೆಳೆಯಲು ಕಾರಣವಾದ ಬೀಜ 'ರಾಜಾ ಹರಿಶ್ಚಂದ್ರ' ಆ ಬೀಜವನ್ನು ನೆಟ್ಟವರು ದಾದಾ ಸಾಹೇಬ್ ಫಾಲ್ಕೆ ಎಂಬ ಕನಸುಗಾರ.

    English summary
    Indian Cinema History Part 3: Dadasaheb Phalke started Raja Harishchandra movie shooting but after that also he faced many problems finally on April 21, 1913 movie premiered for the first time. Then its released to theaters on May 03, 1913.
    Thursday, July 15, 2021, 17:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X