twitter
    For Quick Alerts
    ALLOW NOTIFICATIONS  
    For Daily Alerts

    ಮೌನವಾಗಿದ್ದ ಸಿನಿಮಾಕ್ಕೆ ಸೇರಿಕೊಂಡಿತು ಮಾತು, ಸಂಗೀತ

    |

    ಅಮೆರಿಕದ ಅಲೆನ್ ಕ್ರೋಸ್‌ಲ್ಯಾಂಡ್ ಎಂಬಾತ 1927ರಲ್ಲಿ ನಿರ್ದೇಶಿಸಿದ 'ದಿ ಜಾಜ್ ಸಿಂಗರ್' ಸಿನಿಮಾ ವಿಶ್ವದ ಮೊದಲ ಟಾಕಿ ಸಿನಿಮಾ ಎನಿಸಿಕೊಂಡಿತು. ಅಲ್ಲಿವರೆಗೆ ಮೂಕಿ ಆಗಿದ್ದ ಸಿನಿಮಾಗಳಿಗೆ 1927ರಿಂದ ಮಾತು ಬಂದಿತು.

    'ದಿ ಜಾಜ್ ಸಿಂಗರ್' ಸಿನಿಮಾದಲ್ಲಿ ಹಾಡು ಮತ್ತು ಸಂಗೀತವೇ ಪ್ರಧಾನವಾಗಿತ್ತು, ಸಿನಿಮಾ ಅಂತ್ಯವಾದ ಬಳಿಕವೂ 15 ನಿಮಿಷದ ಹಾಡೊಂದು ಆ ಸಿನಿಮಾದಲ್ಲಿ ಇತ್ತಂತೆ. ಭಾರತಕ್ಕೆ 'ದಿ ಜಾಜ್ ಸಿಂಗರ್' ಸಿನಿಮಾದ ಸುದ್ದಿ ತಲುಪಿದ್ದು ತಡವಾಗಿ. ಬ್ರಿಟೀಷರ ಆಳ್ವಿಕೆಯಲ್ಲಿದ್ದ ಕಾರಣ ಅಮೆರಿಕಕ್ಕಿಂತಲೂ ಬ್ರಿಟನ್ ನಮಗೆ ಹತ್ತಿರವಾಗಿತ್ತು. ಹಾಗಾಗಿ ಅಮೆರಿಕದ ಸುದ್ದಿಗಳಿಗಿಂತಲೂ ಬ್ರಿಟನ್ ಸುದ್ದಿಗಳು, ಬದಲಾವಣೆಗಳು ಭಾರತಕ್ಕೆ ಬಹು ಬೇಗ ಬರುತ್ತಿದ್ದವು.

    ಟಾಕಿ ಸಿನಿಮಾದ ಶಕೆ ಭಾರತದಲ್ಲಿ ಆರಂಭವಾಗಿದ್ದು 1931ರಲ್ಲಿ ಆದರೆ ಟಾಕಿ ಸಿನಿಮಾದ ಕನಸು ಆರಂಭವಾಗಿದ್ದು 1929 ರಲ್ಲಿ. ಅದೇ ವರ್ಷ ಬಿಡುಗಡೆ ಆಗಿದ್ದ ಅರೆ ಟಾಕಿ ಇಂಗ್ಲೀಷ್ ಸಿನಿಮಾ 'ಶೋ ಬೋಟ್' ಮುಂಬೈನ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಸಿನಿಮಾ ವೀಕ್ಷಿಸಿದ ಅರ್ದೇಶಿರ್ ಇರಾನಿ ಟಾಕಿ ಸಿನಿಮಾ ನಿರ್ಮಾಣ ಮಾಡಲೇ ಬೇಕೆಂದು ನಿಶ್ಚಯಿಸಿ ಕಾರ್ಯಪ್ರವೃತ್ತರಾದರು. ಅದಕ್ಕೂ ಮುನ್ನ ಕೆಲವು ಮೂಕಿ ಸಿನಿಮಾಗಳನ್ನು ಮಾಡಿದ ಅನುಭವ ಅವರ ಬೆನ್ನಿಗಿತ್ತು. ಅವರಿಗೆ ಬೆಂಬಲವಾಗಿ ನಿಂತಿದ್ದು ಆಗಿನ ದೊಡ್ಡ ಉದ್ಯಮಪತಿ ಬದ್ರಿಪ್ರಸಾದ್ ದುಬೆ. ಪಾರ್ಸಿ ನಾಟಕ 'ಆಲಂ ಆರಾ' ಅನ್ನು ಅದೇ ಹೆಸರಲ್ಲಿ ಟಾಕಿ ಸಿನಿಮಾ ಮಾಡಲು ಚಿತ್ರಕತೆ ಸಿದ್ಧಪಡಿಸಿಕೊಂಡರು ಇರಾನಿ.

    ರಾತ್ರಿ ಸಮಯವೇ ಚಿತ್ರೀಕರಣ ಮಾಡಲಾಗುತ್ತಿತ್ತು

    ರಾತ್ರಿ ಸಮಯವೇ ಚಿತ್ರೀಕರಣ ಮಾಡಲಾಗುತ್ತಿತ್ತು

    ಸಿನಿಮಾ ಚಿತ್ರೀಕರಣ ವೇಳೆಯಲ್ಲಿಯೇ ಮೈಕ್‌ಗಳನ್ನು ಇಟ್ಟು ರೆಕಾರ್ಡ್ ಮಾಡಿಕೊಂಡು ಅದನ್ನು ತೆರೆಯ ಮೇಲೆ ಮೂಡಿಸುವ ಯೋಜನೆಯನ್ನು ಅರ್ದೇಶಿರ್ ಇರಾನಿ ಹಾಕಿದ್ದರು. ಆದರೆ ಚಿತ್ರೀಕರಣದ ಸ್ಟುಡಿಯೋ ರೈಲ್ವೆ ಟ್ರ್ಯಾಕ್‌ ಒಂದರ ಬಳಿಯೇ ಇತ್ತು. ಬೆಳಗಿನ ಹೊತ್ತು ಚಿತ್ರೀಕರಿಸಿದರೆ ಬೇರೆ ಶಬ್ದಗಳು ಹೆಚ್ಚಾಗಿ ಇರುತ್ತಿದ್ದವಾದ್ದರಿಂದ ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 4 ಗಂಟೆವರೆಗೆ ಚಿತ್ರೀಕರಣ ಮಾಡಲಾಗುತ್ತಿತ್ತು. ಚಿತ್ರೀಕರಣ ಮಾಡುತ್ತಿರುವ ವಿಷಯವನ್ನೂ ಸಹ ಗೌಪ್ಯವಾಗಿ ಇಡಲಾಗಿತ್ತು. ಸೆಟ್‌ನ ಬಳಿ ಹೆಚ್ಚು ಜನ ಬಂದರೆ ಸಪ್ಪಳವಾಗುತ್ತದೆ ಶಬ್ದ ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ನಿರ್ದೇಶಕರ ಲೆಕ್ಕಾಚಾರ.

    ಮೊಹಮ್ಮದ್ ಅಲಿ ಜಿನ್ನಾಗೂ 'ಆಲಂ ಆರ' ಸಿನಿಮಾಕ್ಕೂ ನಂಟಿದೆ!

    ಮೊಹಮ್ಮದ್ ಅಲಿ ಜಿನ್ನಾಗೂ 'ಆಲಂ ಆರ' ಸಿನಿಮಾಕ್ಕೂ ನಂಟಿದೆ!

    'ಆಲಂ ಆರಾ' ಸಿನಿಮಾದಲ್ಲಿ ಪಾತ್ರ ಮಾಡಲು ನಟ-ನಟಿಯರು ನಾ ಮುಂದು ತಾ ಮುಂದು ಎನ್ನುತ್ತಿದ್ದರು. ಸಿನಿಮಾದ ನಾಯಕಿ ಪಾತ್ರಕ್ಕೆ ರೂಬಿ ಮೇರಿಸ್ ಅನ್ನು ಆರಿಸಲಾಗಿತ್ತು ಆದರೆ ಆಕೆಗೆ ಡೈಲಾಗ್ ಹೇಳಲು ಬಾರದ ಕಾರಣ ಜುಬೈದಾ ಅನ್ನು ಆಯ್ಕೆ ಮಾಡಲಾಯಿತು. ನಾಯಕ ಪಾತ್ರಕ್ಕೆ ಮೆಹಬೂಬ್ ಖಾನ್ ಅನ್ನು ಆಯ್ಕೆ ಮಾಡಲಾಗಿತ್ತು ನಂತರ ಮನಸ್ಸು ಬದಲಾಯಿಸಿ ಮೂಕಿ ಸಿನಿಮಾಗಳ ಸ್ಟಂಟ್ ಮ್ಯಾನ್ ಆಗಿದ್ದ ಮಾಸ್ಟರ್ ವಿಠಲ್ ಅನ್ನು ಆರಿಸಿಕೊಂಡರು. ಆಗ ಶರಧಿ ಸ್ಟುಡಿಯೋದಲ್ಲಿ ವಿಠಲ್ ಸ್ಟಂಟ್ ಮ್ಯಾನ್ ಆಗಿದ್ದರು. ಅಲ್ಲಿಯ ಒಪ್ಪಂದ ಮುರಿದು 'ಆಲಂ ಆರ' ಸಿನಿಮಾಕ್ಕೆ ನಟಿಸಲು ಬಂದರು. ಇದರಿಂದಾಗಿ ಶರಧಿ ಸ್ಟುಡಿಯೋದವರು ವಿಠಲ್ ವಿರುದ್ಧ ದಾವೆ ಹೂಡಿದರು. ಆಗ ವಿಠಲ್, ಮೊಹಮ್ಮದ್ ಅಲಿ ಜಿನ್ನಾ (ಪಾಕಿಸ್ತಾನದ ರಾಷ್ಟ್ರಪಿತ) ಅನ್ನು ಸಂಪರ್ಕಿಸಿ ಸಹಾಯ ಮಾಡಲು ಕೋರಿದರು. ನ್ಯಾಯಾಲಯದಲ್ಲಿ ವಿಠಲ್ ಪರ ವಾದ ಮಾಡಿದ ಮೊಹಮ್ಮದ್ ಅಲಿ ಜಿನ್ನಾ ಕೇಸು ಗೆದ್ದು ವಿಠಲ್, 'ಆಲಂ ಆರ' ಸಿನಿಮಾದಲ್ಲಿ ನಟಿಸುವಂತೆ ಮಾಡಿದರು.

    ಭಾರತೀಯ ಸಿನಿಮಾದ ಮೊದಲ ಹಾಡು

    ಭಾರತೀಯ ಸಿನಿಮಾದ ಮೊದಲ ಹಾಡು

    ಇರಾನಿ ಮತ್ತು ರುಸ್ತುಂ ಭರೂಚ ಎಂಬುವರು ಸಿನಿಮಾಕ್ಕೆ ಸೌಂಡ್ ರೆಕಾರ್ಡ್ ಮಾಡಿದರು. ಸಿನಿಮಾದಲ್ಲಿ ಬರೋಬ್ಬರಿ ಏಳು ಹಾಡುಗಳು ಇದ್ದವು. ಸಿನಿಮಾದ ಮೊದಲ ಹಾಡು 'ದೇ ದೇ ಖುದಾ ಕೆ ನಾಮ್‌ ಪೆ ಪ್ಯಾರ್ ದೇ' ಈ ಹಾಡು ಹಿಂದಿ ಸಿನಿಮಾದ ಮೊದಲ ಹಾಡು ಎಂದು ದಾಖಲಾಗಿದೆ. ಹಾಡನ್ನು ಮೊಹಮ್ಮದ್ ವಜೀರ್ ಖಾನ್ ಹಾಡಿದ್ದರು. ಉಳಿದ ಹಾಡುಗಳನ್ನು ಜುಬೈದಾ ಹಾಡಿದ್ದರು. ಈ ಸಂಗೀತಮಯ ಸಿನಿಮಾದ ಸಂಗೀತ ನಿರ್ದೇಶಕ ಹಾಗೂ ಗೀತ ರಚನೆಕಾರರ ಹೆಸರನ್ನು ಟೈಟಲ್‌ಕಾರ್ಡ್‌ನಲ್ಲಿ ಹಾಕುವುದನ್ನೇ ಮರೆತಿದ್ದರು ನಿರ್ದೇಶಕರು. ಈ ಸಿನಿಮಾದ ಆಡಿಯೋ ತಟ್ಟೆ (ಗ್ರಾಮಾಫೋನ್)ಯನ್ನು ಸಾರೆಗಾಮ ಸಂಸ್ಥೆ ಹೊರತಂದಿತ್ತು. ಸಾರೆಗಾಮ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. 'ಆಲಂ ಆರ' ಸಿನಿಮಾದಿಂದಲೇ ಹಾಡುಗಳು ಭಾರತೀಯ ಸಿನಿಮಾದ ಅಂಗಗಳಾಗಿ ಹೋದವು.

    ಸಿನಿಮಾ ರೀಲ್ ಹೊತ್ತು ತಂದವನ ಸಂದರ್ಶನ

    ಸಿನಿಮಾ ರೀಲ್ ಹೊತ್ತು ತಂದವನ ಸಂದರ್ಶನ

    ಭಾರತದ ಮೊದಲ ಟಾಕಿ ಸಿನಿಮಾ 'ಆಲಂ ಆರ' ಮಾರ್ಚ್ 13, 1931ಕ್ಕೆ ಬಿಡುಗಡೆ ಆಯಿತು. ಮೊದಲ ಟಾಕಿ ಸಿನಿಮಾ ನೋಡಲು ಜನ ಸಾಲುಗಟ್ಟಿ ನಿಂತಿದ್ದರು. ಸಿನಿಮಾದ ಜನಪ್ರಿಯತೆ ಎಷ್ಟಿತ್ತೆಂದರೆ 3 ಗಂಟೆಯ ಶೋಗೆ ಬೆಳಿಗ್ಗೆ 9 ಗಂಟೆಯಿಂದಲೇ ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರ ಸಹಾಯ ಪಡೆಯಬೇಕಾಗಿ ಬಂತು. ಮೊದಲ ಶೋಗೆ ರೀಲ್ ಅನ್ನು ಚಿತ್ರಮಂದಿರಕ್ಕೆ ಹೊತ್ತು ತಂದಿದ್ದ ರಮೇಶ್ ರಾಯ್ ಎಂಬ ವ್ಯಕ್ತಿ 2006ರ ಸಂದರ್ಶನದಲ್ಲಿ ಮಾತನಾಡುತ್ತಾ, 'ಅದೊಂದು ಐತಿಹಾಸಿಕ ಕ್ಷಣ. ಸಿನಿಮಾ ನೋಡಿ ಹೊರಬಂದ ಜನ ಸಿನಿಮಾ ಬಗ್ಗೆ ಮಾತನಾಡುವುದನ್ನು ನಿಲ್ಲಿಸುತ್ತಲೇ ಇರಲಿಲ್ಲ. ಮೊದಲ ಬಾರಿಗೆ ಮಾತನಾಡುವ ಪಾತ್ರಗಳನ್ನು ಕಂಡು ಜನರು ಆಶ್ಚರ್ಯಚಕಿತರಾಗಿ ಹೋಗಿದ್ದರು'' ಎಂದಿದ್ದರು.

    ಕೆಲವು ಟೀಕೆಗಳು ಸಹ ವ್ಯಕ್ತವಾದವು

    ಕೆಲವು ಟೀಕೆಗಳು ಸಹ ವ್ಯಕ್ತವಾದವು

    ಸಿನಿಮಾವು ಭರ್ಜರಿ ಹಿಟ್ ಆಯಿತು. 'ಆಲಂ ಆರ' ಸಿನಿಮಾ ಬಿಡುಗಡೆ ಆದ ಎರಡು ತಿಂಗಳಲ್ಲಿಯೇ ಎರಡನೇ ಟಾಕಿ ಸಿನಿಮಾ 'ಶಿರಿನ್ ಫರ್ಹಾದ್' ಬಿಡುಗಡೆ ಆಯಿತು. ಅದನ್ನು ಆಗಿನ ಟಾಪ್ ಉದ್ಯಮಿಗಳಲ್ಲೊಬ್ಬರಾದ ಜೆಜೆ ಮದನ್ ನಿರ್ದೇಶಿಸಿ, ನಿರ್ಮಾಣ ಮಾಡಿದ್ದರು. ಆದರೆ ಆ ಸಿನಿಮಾಕ್ಕಿಂತಲೂ 'ಆಲಂ ಆರ' ದೊಡ್ಡ ಯಶಸ್ಸನ್ನು ಗಳಿಸಿತು. ಆದರೆ ಕೆಲವರು ಈ ಸಿನಿಮಾವನ್ನು ಟೀಕಿಸಿದ್ದರು ಸಹ. 'ಇದು ಸಿನಿಮಾ ಶಿಶುವಿನ ಮೊದಲ ಅಳು' ಎಂದು ಪತ್ರಿಕೆಯೊಂದು ಕರೆದಿತ್ತು. 'ಈ ಸಿನಿಮಾದ ನಟರಿಗೆ ಮೈಕ್‌ನ ಎದುರು ಮಾತನಾಡುವ ಅನುಭವ ಇಲ್ಲ ಹಾಗಾಗಿ ಅವರು ಮಾತನಾಡುವ ಬದಲು ಕಿರುಚಿದ್ದಾರೆ' ಎಂದು ಮತ್ತೊಬ್ಬರು ಬರೆದಿದ್ದರು. ಸೌಂಡ್ ರೆಕಾರ್ಡಿಂಗ್ ಹಾಗೂ ಲ್ಯಾಬ್ ಪ್ರೊಸೆಸಿಂಗ್ ಸೂಕ್ತವಾಗಿ ಆಲ್ಲ ಎಂದು ಬ್ರಿಟಿಷ್ ಪತ್ರಕರ್ತರೊಬ್ಬರು ಬರೆದಿದ್ದರು. ಹೀಗೆ ಹಲವು ಟೀಕೆಗಳನ್ನು ಪಡೆದುಕೊಂಡರೂ ಸಹ 'ಆಲಂ ಆರ' ಭಾರತದ ಮೊದಲ ಟಾಕಿ ಸಿನಿಮಾ ಆಗಿ ಇತಿಹಾಸದಲ್ಲಿ ಸೇರಿ ಹೋಯಿತು.

    English summary
    Indian Cinema History Part 6: How India's first talkie movie Alam Ara was made and how was the reaction of people.
    Thursday, July 22, 2021, 12:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X