twitter
    For Quick Alerts
    ALLOW NOTIFICATIONS  
    For Daily Alerts

    ಪರರ ಹೆಸರಲ್ಲಿ ಚಿತ್ರಗೀತೆ ಬರೆದು ಸಂಗಾತಿಗಳಿಂದ ಬೈಸಿಕೊಂಡಿದ್ದ ಸಿದ್ದಲಿಂಗಯ್ಯ

    |

    ಬಂಡಾಯ ಕವಿ ಸಿದ್ದಲಿಂಗಯ್ಯ ನಿನ್ನೆ ವಿಧಿವಶರಾಗಿದ್ದಾರೆ. ಕೊರೊನಾ ಜೊತೆಗೆ ಹಲವು ದಿನಗಳ ಹೋರಾಡಿ ಕೊನೆಗೆ ನಿನ್ನೆ ಕಣ್ಣು ಮುಚ್ಚಿದ್ದಾರೆ ಕವಿ ಸಿದ್ದಲಿಂಗಯ್ಯ.

    ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಹಲವು ಸಚಿವರು, ವಿಪಕ್ಷ ನಾಯಕರು, ಸಾಮಾಜಿಕ ಹೋರಾಟಗಾರರು, ಕವಿಗಳು, ಸಿನಿಮಾ ಗಣ್ಯರು ಅನೇಕರು ಸಿದ್ದಲಿಂಗಯ್ಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಎಚ್ಚರಿಕೆಯ ದನಿಯಾಗಿದ್ದ ಸಿದ್ದಲಿಂಗಯ್ಯ ಅವರು ಸಿನಿಮಾರಂಗದಲ್ಲಿಯೂ ಅನೇಕ ಗೆಳೆಯರನ್ನು ಹೊಂದಿದ್ದರು. ಸಿನಿಮಾಕ್ಕಾಗಿ ಹಲವು ಚಂದದ ಹಾಡುಗಳನ್ನು ಸಹ ಸಿದ್ದಲಿಂಗಯ್ಯ ಬರೆದಿದ್ದಾರೆ. ತಾವು ಸಿನಿಮಾ ಹಾಡುಗಳನ್ನು ಬರೆದು ಅದರಿಂದ ಪೇಚಿಗೆ ಸಿಲುಕಿದ್ದನ್ನು ಸ್ವತಃ ಸಿದ್ದಲಿಂಗಯ್ಯ ಹೇಳಿಕೊಂಡಿದ್ದರು.

    ಸಿದ್ದಲಿಂಗಯ್ಯ ಕವಿಯಾಗಿ ಜನಪ್ರಿಯರಾಗುವ ವೇಳೆಗೆ ಬಂಡಾಯ ಸಾಹಿತ್ಯ ಉಚ್ರಾಯದಲ್ಲಿತ್ತು. ಅದು ಅಲ್ಲಿಗೆ ತಲುಪುವಲ್ಲಿ ಸಿದ್ದಲಿಂಗಯ್ಯನವರ ಪಾತ್ರವೂ ಮಹತ್ವದ್ದು. ಅದೇ ಸಮಯದಲ್ಲಿ ಸಿದ್ದಲಿಂಗಯ್ಯನವರಿಗೆ ಆತ್ಮೀಯರಾಗಿದ್ದ ಟಿ.ಎನ್.ಸೀತಾರಾಮ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಬಳಿ ಕೆಲಸ ಮಾಡುತ್ತಿದ್ದರು. ಪುಟ್ಟಣ್ಣನವರಿಗೆ ಸಿದ್ದಲಿಂಗಯ್ಯನವರಿಂದ ಹಾಡು ಬರೆಸುವ ಆಸೆಯಾಯಿತು.

    ದುಂಬಾಲು ಬಿದ್ದಿದ್ದ ಟಿ.ಎನ್.ಸೀತಾರಾಮ್

    ದುಂಬಾಲು ಬಿದ್ದಿದ್ದ ಟಿ.ಎನ್.ಸೀತಾರಾಮ್

    ಅಂತೆಯೇ ಸೀತಾರಾಮ್‌, ಸಿದ್ದಲಿಂಗಯ್ಯ ಅವರನ್ನು ಕೇಳಿದಾಗ, ತಾವು ಸಿನಿಮಾಕ್ಕೆ ಹಾಡು ಬರೆದುಕೊಟ್ಟರೆ ಬಂಡಾಯ ಹೋರಾಟದ ಸಂಗಾತಿಗಳು ಸಿಟ್ಟು ಮಾಡಿಕೊಳ್ಳುತ್ತಾರೆ ಎನಿಸಿ ಸುಮ್ಮನಾಗಿಬಿಟ್ಟಿದ್ದರು ಸಿದ್ದಲಿಂಗಯ್ಯ ಆದರೆ ಟಿ.ಎನ್.ಸೀತಾರಾಮ್ ಸುಮ್ಮನಿರಲಿಲ್ಲ. ಒಳ್ಳೆಯ ಸಂಭಾವನೆ ಬೇರೆ ಸಿಗುವುದರಲ್ಲಿತ್ತು ಹಾಗಾಗಿ ಆದಿತ್ಯ ಎಂಬ ಹೆಸರಿನಲ್ಲಿ 'ಗೆಳತಿ, ಓ ಗೆಳತಿ ಅಪ್ಪಿಕೋ ನನ್ನ ಅಪ್ಪಿಕೋ' ಎಂಬ ಹಾಡು ಬರೆದು ಕೊಟ್ಟರು.

    ಮೂರು ಹಾಡು ಬರೆದುಕೊಟ್ಟ ಸಿದ್ದಲಿಂಗಯ್ಯ

    ಮೂರು ಹಾಡು ಬರೆದುಕೊಟ್ಟ ಸಿದ್ದಲಿಂಗಯ್ಯ

    ಸಿದ್ದಲಿಂಗಯ್ಯನವರು ಬರೆದ ಹಾಡು ಪುಟ್ಟಣನವರಿಗೆ ಇಷ್ಟವಾಗಿ ಮತ್ತೊಂದು ಹಾಡು ಬರೆಯಲು ಹೇಳಿದರು. ಆಗ 'ಕಲಿಗಾಲವಯ್ಯ' ಹಾಡು ಬರೆದುಕೊಟ್ಟರು ನಂತರ ಮತ್ತೊಂದು ಹಾಡು ಬರೆಯಲು ಕೇಳಿದಾಗ 'ಕನಸಿನ ಬಲೆಯನು ಬೀಸಿ' ಹಾಡು ಬರೆದುಕೊಟ್ಟರು. ಹಾಡುಗಳನ್ನು 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಕ್ಕೆ ಬಳಸಿಕೊಳ್ಳಲಾಯಿತು. ಆ ಸಿನಿಮಾದ ಗೀತರಚನೆಗೆ ಸಿದ್ದಲಿಂಗಯ್ಯನವರಿಗೆ ಪ್ರಶಸ್ತಿ ಘೋಷಿಸಿತು ರಾಜ್ಯ ಸರ್ಕಾರ.

    ಅಯ್ಯೋ ಇವನೇ ಏನ್ರಿ ಆದಿತ್ಯ ಎಂದುಕೊಂಡಿದ್ದರು ಹಲವರು

    ಅಯ್ಯೋ ಇವನೇ ಏನ್ರಿ ಆದಿತ್ಯ ಎಂದುಕೊಂಡಿದ್ದರು ಹಲವರು

    ಪ್ರಶಸ್ತಿ ಪಡೆದುಕೊಳ್ಳಲು ಹೋದಾಗಲೇ ಜನರಿಗೆ ಗೊತ್ತಾಗಿದ್ದು ಆದಿತ್ಯ ಎಂದರೆ ಸಿದ್ದಲಿಂಗಯ್ಯ ಎಂದು. ಸಿದ್ದಲಿಂಗಯ್ಯನವರು ಪ್ರಶಸ್ತಿ ತೆಗೆದುಕೊಳ್ಳಲು ಹೋದಾಗ 'ಅಯ್ಯೊ ಇವನೇ ಏನ್ರಿ ಆದಿತ್ಯ' ಎಂದುಕೊಂಡರಂತೆ ಹಲವರು. ಆದರೆ ಬಂಡಾಯ ಚಳವಳಿಗಾರ ಸಿದ್ದಲಿಂಗಯ್ಯ ಸಿನಿಮಾಗಳಿಗೆ ಪ್ರೇಮಗೀತೆಗಳನ್ನು ಬರೆದಿದ್ದಾರೆಂದು ಚಳವಳಿಯ ಸದಸ್ಯರಿಗೆ ತೀವ್ರ ಸಿಟ್ಟುಬಂದಿತ್ತು. ಸಿದ್ದಲಿಂಗಯ್ಯ ಅವರನ್ನು ಮಧ್ಯೆ ಕೂರಿಸಿಕೊಂಡು ಸಭೆಯನ್ನೇ ಮಾಡಿದ್ದರು ಕಾಮ್ರೆಡುಗಳು.

    'ಏನ್ರಿ ಕಾಮ್ರೆಡ್, ನಾಚಿಕೆ ಆಗೊಲ್ವೇನ್ರಿ ನಿಮಗೆ ಎಂದು ಬೈದಿದ್ದರು'

    'ಏನ್ರಿ ಕಾಮ್ರೆಡ್, ನಾಚಿಕೆ ಆಗೊಲ್ವೇನ್ರಿ ನಿಮಗೆ ಎಂದು ಬೈದಿದ್ದರು'

    "ಏನು ಬರೀತೀರ್ರಿ ನೀವು...ಥೋ..ಗೆಳತಿ ಓ ಗೆಳತಿ ಎಂದು ಬರೆದಿದ್ದೀರಿ. ಇದನ್ನಾದರೂ ನಾವು 'ಕಾಮ್ರೇಡ್ ಓ ಕಾಮ್ರೇಡ್' ಎಂದು ಅಡ್ಜೆಸ್ಟ್ ಮಾಡಿಕೊಳ್ಳುತ್ತೇವೆ. ಆದರೆ ಮುಂದಿನ ಸಾಲು ನೋಡಿ...'ಅಪ್ಪಿಕೋ ಎನ್ನ ಅಪ್ಪಿಕೋ' ಎಂದು ಬರೆದಿದ್ದೀರಿ. ನಾಚಿಕೆ ಆಗಲ್ವೇನ್ರಿ....ಇನ್ನೂ ಮುಂದೆ ಬಂದರೆ, 'ಬಾಳೆಲ್ಲ ಎನ್ನ ತಬ್ಬಿಕೊ"... ಥೋ ಏನ್ರೀ ಇದು;ಪರಮಾವಧಿ...ಬರೀತಾರೇನ್ರಿ ಹೀಗೆಲ್ಲ. ಬರೆದರೆ ಬಿರು ಬಿಸಿಲಿನಲ್ಲಿ ಸಿಡಿಲ ಮರಿಗಳ ಹಾಗೆ ಎದ್ದು ಬರಬೇಕು. ನೀವು ನೋಡಿದರೆ...ಛೆಛೆಛೆ ಎಂದು ನನ್ನನ್ನ ತರಾಟೆಗೆ ತೆಗೆದುಕೊಂಡರು. ಅದೂ ಹೆಣ್‌ ಮಕ್ಳು ಕಣ್ರಿ" ಎಂದು ಸಿದ್ದಲಿಂಗಯ್ಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

    ಮದ್ರಾಸಿಗೆ ಕರೆಸಿಕೊಂಡು ಹಾಡು ಬರೆಸಿಕೊಂಡಿದ್ದ ಅಬ್ಬಯ್ಯ ನಾಯ್ಡು

    ಮದ್ರಾಸಿಗೆ ಕರೆಸಿಕೊಂಡು ಹಾಡು ಬರೆಸಿಕೊಂಡಿದ್ದ ಅಬ್ಬಯ್ಯ ನಾಯ್ಡು

    ಸಿದ್ದಲಿಂಗಯ್ಯನವರು ಬರೆದ 'ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ', 'ಬಾ ನಲ್ಲೆ ಮಧುಚಂದ್ರಕೆ' ಕವಿತೆಗಳು ಸಿನಿಮಾಗಳಲ್ಲಿ ಬಳಕೆ ಆಗಿವೆ. 'ಬಾ ನಲ್ಲೆ ಮಧುಚಂದ್ರಕೆ' ಅಂತೂ ಎರಡು ಸಿನಿಮಾಗಳಲ್ಲಿ ಬಳಕೆ ಆಗಿದೆ. ಮತ್ತೊಮ್ಮೆ ಪುಟ್ಟಣ್ಣನವರು ಹಣವನ್ನೆಲ್ಲ ಕಳೆದುಕೊಂಡು ಸಣ್ಣ ಮನೆಯಲ್ಲಿ ವಾಸವಿದ್ದಾಗ ಸಿದ್ದಲಿಂಗಯ್ಯನವರನ್ನು ಕರೆಸಿಕೊಂಡು ಶ್ರೀಮಂತರನ್ನು ಬೈದು ಹಾಡು ಬರೆಯಲು ಹೇಳಿದ್ದಾಗಿಯೂ ಅದಕ್ಕಾಗಿ ತಾವು 'ಹಣ ತೂರಿ ಎಸೆದು ಸೂರ್ಯನ ಕೊಳ್ಳುವಿರೆ' ಎಂಬಿತ್ಯಾದಿ ಕ್ರಾಂತಿಕಾರಿ ಸಾಲುಗಳಿದ್ದ ಹಾಡನ್ನು ಬರೆದುದ್ದಾಗಿ ಹೇಳಿದ್ದಾರೆ. ನಂತರ ಒಮ್ಮೆ ಖ್ಯಾತ ನಿರ್ಮಾಪಕ ಅಬ್ಬಯ್ಯ ನಾಯ್ಡು ಅವರು ಸಿದ್ದಲಿಂಗಯ್ಯರನ್ನು ಮದ್ರಾಸಿಗೆ ಕರೆಸಿ ಅಲ್ಲಿ ಅವರಿಂದ ಸಿನಿಮಾಕ್ಕೆ ಹಾಡು ಬರೆಸಿಕೊಂಡಿದ್ದರು.

    English summary
    Poet Siddalingaiah wrote some Kannada movie songs. Initially he wrote songs in fake name. He receives award for his songs.
    Saturday, June 12, 2021, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X