twitter
    For Quick Alerts
    ALLOW NOTIFICATIONS  
    For Daily Alerts

    ತಾಂಡಾದಲ್ಲಿ ಹುಟ್ಟಿದ ಸತ್ಯವತಿ, ಮಂಗ್ಲಿ ಆದ ಮುಳ್ಳಿನ ಹಾದಿಯ ಪಯಣ

    |

    ಆಂಧ್ರದ ರಾಯಲ ಸೀಮ ಪ್ರದೇಶ ಅನಂತಪುರಂ ಜಿಲ್ಲೆಯ ಬಸನೇಪಲ್ಲಿ ಎಂಬ ಲಂಬಾಣಿ ತಾಂಡಾದಲ್ಲಿ ಬಾಲು ನಾಯಕ್-ಲಕ್ಷ್ಮಿ ದೇವಿ ದಂಪತಿಗೆ ವಿವಾಹವಾಗಿ ಹನ್ನೆರಡು ವರ್ಷವಾದರೂ ಮಕ್ಕಳಾಗಿರಲಿಲ್ಲ. ಅರಣ್ಯದೇವತೆಗೆ ಹರಕೆ ಹೊತ್ತಮೇಲೆ ಗರ್ಭ ಧರಿಸಿದ ಲಕ್ಷ್ಮಿ ದೇವಿಗೆ ಎಲ್ಲರೂ ಹೇಳುತ್ತಿದ್ದರಂತೆ, ಇಷ್ಟುವರ್ಷಗಳ ಕಾಯುವಿಕೆ ಬಳಿಕ ಹುಟ್ಟುವ ಮಗು ಗಂಡೇ ಆಗಿರುತ್ತದೆ ಎಂದು. ಆದರೆ ಹುಟ್ಟಿದ್ದು ಹೆಣ್ಣುಮಗು. ಕಣ್ಣೀರು ಹಾಕಿಕೊಂಡೆ ಆ ಹೆಣ್ಣುಮಗುವನ್ನು ಬರಮಾಡಿಕೊಂಡರು ಲಕ್ಷ್ಮಿ ದೇವಿ-ಬಾಲು ನಾಯಕ್. ಆ ಮಗುವೆ ಮುಂದೆ ಬೆಳೆದು ಖ್ಯಾತ ಗಾಯಕಿ ಮಂಗ್ಲಿ ಆಗಿದ್ದು.

    ಮಂಗ್ಲಿ ತಾಯಿ ಲಕ್ಷ್ಮೀದೇವಿ ಹೇಳಿದಂತೆ, ತಾಂಡಾದಲ್ಲಿ ಹೆಣ್ಣು ಮಕ್ಕಳನ್ನು ಕೊಲ್ಲುವ, ಮಾರಿಬಿಡುವ ಅನಾಚಾರಗಳು ಇದ್ದುವಂತೆ. ಆದರೆ ಲಕ್ಷ್ಮಿದೇವಿ-ಬಾಲು ನಾಯಕ್ ದಂಪತಿ ಹನ್ನೆರಡು ವರ್ಷ ಕಾದ ನಂತರ ಹುಟ್ಟಿದ ಮಗು ಮಂಗ್ಲಿ. ತೀವ್ರ ಬಡತನದಲ್ಲಿಯೂ ಆಕೆಯನ್ನು ಬಹಳ ಜೋಪಾನದಿಂದ ಸಾಕಿದರು ಈ ದಂಪತಿ. ಅಂದಹಾಗೆ ಮಂಗ್ಲಿಯ ನಿಜ ಹೆಸರು ಸತ್ಯವತಿ.

    ಮಂಗ್ಲಿಗೆ ಇಬ್ಬರು ತಂಗಿಯರು, ಒಬ್ಬ ತಮ್ಮ ಇದ್ದಾನೆ. ಮನೆಗೆ ಮೊದಲ ಮಗಳಾದ್ದರಿಂದ ಹೆಚ್ಚಿನ ಜವಾಬ್ದಾರಿ ಮಂಗ್ಲಿ ಮೇಲಿತ್ತು. ಅಡುಗೆ ಮಾಡುವುದು, ಮನೆ ಸ್ವಚ್ಛ ಮಾಡುವುದು. ಹೊಲಕ್ಕೆ ಹೋದ ಅಪ್ಪ-ಅಮ್ಮನಿಗೆ ಬುತ್ತಿ ಹೊತ್ತುಕೊಂಡು ಹೋಗುವುದು. ಶಾಲೆ ರಜೆ ಇದ್ದ ದಿನದಲ್ಲಿ ಇತರರ ಹೊಲಗಳಿಗೆ ಕೂಲಿಗೆ ಹೋಗುವುದು ಮಾಡುತ್ತಿದ್ದಳು ಮಂಗ್ಲಿ. ಲಂಬಾಣಿಗಳಿಗೆ ಹಾಡು ಎಂಬುದು ಜೀವನದ ಭಾಗ. ಅವರ ದಿನನಿತ್ಯದ ಜೀವನದಲ್ಲಿಯೇ ಹಾಡು ಬೆಸೆದುಕೊಂಡಿದೆ. ತಾಂಡಾದಲ್ಲಿ ಹೆಣ್ಣು ಮಕ್ಕಳು ಹಾಡುತ್ತಿದ್ದ ಹಾಡುಗಳು ಮಂಗ್ಲಿಗೆ ಎಳವೆಯಲ್ಲೇ ಬಾಯಿಪಾಟವಾಗಿದ್ದವು. ಸಣ್ಣ ವಯಸ್ಸಿನಲ್ಲಿದ್ದಾಗಿಯೇ ಬಹಳ ಚೆನ್ನಾಗಿ ಹಾಡಲು ಆರಂಭಿಸಿದ್ದರು ಮಂಗ್ಲಿ.

    ಎನ್‌ಜಿಓ ಒಂದರ ಕಣ್ಣಿಗೆ ಬಿದ್ದ ಮಂಗ್ಲಿ

    ಎನ್‌ಜಿಓ ಒಂದರ ಕಣ್ಣಿಗೆ ಬಿದ್ದ ಮಂಗ್ಲಿ

    1980-90 ರ ದಶಕದಲ್ಲಿ ತಾಂಡಾಗಳಲ್ಲಿ ವಾಸಿಸುವ ಲಂಬಾಣಿಗಳ ಜೀವನ ಪರಿಸ್ಥಿತಿ ಸುಧಾರಿಸಬೇಕೆಂದು ಕೆಲವು ಎನ್‌ಜಿಓಗಳು ಕೆಲಸ ಆರಂಭಿಸಿದವು. ಆಗ ರೂರಲ್ ಡೆವೆಲಪ್‌ಮೆಂಟ್ ಟ್ರಸ್ಟ್ ಎಂಬ ಎನ್‌ಜಿಓ ದವರ ಕಣ್ಣಿಗೆ ಮಂಗ್ಲಿ ಬಿದ್ದರು. ಮೂಡನಂಬಿಕೆ ವಿರುದ್ಧ ಹಾಡುಗಳನ್ನು ಕಟ್ಟಿ ಅದನ್ನು ಮಂಗ್ಲಿಯಿಂದ ಹಾಡಿಸಲಾಗುತ್ತಿತ್ತು. ಮಂಗ್ಲಿಯನ್ನು ಸಂಗೀತ ಶಾಲೆಗೆ ಸಹ ಸೇರಿಸಿದರು ಎನ್‌ಜಿಒ ಸದಸ್ಯರು. ಯಾವಾಗ ಮಂಗ್ಲಿ ವೇದಿಕೆ ಏರಿ ಹಾಡಲು ಪ್ರಾರಂಭಿಸಿದರೋ ಆಗ ತಾಂಡಾದಲ್ಲಿ ವಿರೋಧ ಎದುರಿಸಬೇಕಾಯಿತು. 'ಮಹಿಳೆಯರು ಕಟ್ಟುಪಾಡಿನಲ್ಲಿರಬೇಕು, ವೇದಿಕೆ ಏರಬಾರದು, ಜನರಿಂದ ಗುರುತಿಸಿಕೊಳ್ಳಬಾರದು' ಎಂದು ಮಂಗ್ಲಿಯ ಪೋಷಕರ ಮೇಲೆ ಒತ್ತಡ ಹೇರಿದರಂತೆ ತಾಂಡಾದ ಜನ.

    ಕುಟುಂಬಕ್ಕಾಗಿ ಓದು ಅರ್ಧಕ್ಕೆ ಬಿಟ್ಟ ಮಂಗ್ಲಿ

    ಕುಟುಂಬಕ್ಕಾಗಿ ಓದು ಅರ್ಧಕ್ಕೆ ಬಿಟ್ಟ ಮಂಗ್ಲಿ

    ಆದರೆ ಮಂಗ್ಲಿಯ ಪೋಷಕರು ಇದಕ್ಕೆ ಬಗ್ಗಲಿಲ್ಲ. ತಾಂಡಾದ ಹಿರಿಯರೊಂದಿಗೆ ಜಗಳವಾಡಿ ಮಂಗ್ಲಿಯನ್ನು ಪಂಜಾಬ್‌ನಲ್ಲಿ ನಡೆದ ಜನಪದ ಹಾಡಿನ ಸ್ಪರ್ಧೆಗೆ ಕಳಿಸಿದ್ದರು ತಂದೆ ಬಾಲು ನಾಯಕ್. ಅಲ್ಲಿ ಮಂಗ್ಲಿಗೆ ಮೊದಲ ಬಹುಮಾನ ಸಿಕ್ಕಿತು. ಆಗ ಮಂಗ್ಲಿ ಒಂಬತ್ತನೇ ತರಗತಿ ಓದುತ್ತಿದ್ದರು. ಎನ್‌ಜಿಓ ತಂಡದ ಒತ್ತಾಸೆ ಹಾಗೂ ಆರ್ಥಿಕ ಸಹಾಯದಿಂದ ಹತ್ತನೇ ತರಗತಿ ಬಳಿಕ ತಿರುಪತಿಯಲ್ಲಿನ ವಿಶ್ವವಿದ್ಯಾಲಯದಲ್ಲಿ ಸಂಗೀತ ಮತ್ತು ನೃತ್ಯ ವಿಷಯದ ಡಿಪ್ಲೆಮೊ ಕೋರ್ಸ್‌ ಸೇರಿಕೊಂಡರು. ಅಲ್ಲಿ ಮಂಗ್ಲಿ ಸಂಗೀತದ ಪಟ್ಟುಗಳನ್ನು ಕಲಿಯುವ ಹೊತ್ತಿಗೆ ಇತ್ತ ಕುಟುಂಬವು ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿಕೊಂಡಿತು. ಮಂಗ್ಲಿಯ ಶುಲ್ಕ ಎನ್‌ಜಿಓ ನೀಡುತ್ತಿದ್ದಾರೂ ಇತರೆ ಖರ್ಚುಗಳಿಗೆ ಹಣ ಹೊಂದಿಸುವುದು ಕಷ್ಟವಾಗುತ್ತಿತ್ತು. ಮನೆಯಲ್ಲಿ ಮಂಗ್ಲಿಯನ್ನು ಬಿಟ್ಟು ಇನ್ನೂ ಮೂರು ಮಂದಿ ಮಕ್ಕಳಿದ್ದರು. ಅವರನ್ನು ಓದಿಸುವುದು ಬಾಲುನಾಯಕ್-ಲಕ್ಷ್ಮಿ ದೇವಿ ದಂಪತಿಗೆ ದೊಡ್ಡ ಭಾರವಾಗಿತ್ತು. ಹಾಗಾಗಿ ಕೋರ್ಸ್‌ನ ಅಂತಿಮವರ್ಷದಲ್ಲಿ ವಿವಿ ಬಿಟ್ಟು ತಾಂಡಾಕ್ಕೆ ಮರಳಿದರು ಮಂಗ್ಲಿ.

    ಹೈದರಾಬಾದ್‌ನಲ್ಲಿ ಶಿಕ್ಷಕಿಯಾದ ಮಂಗ್ಲಿ

    ಹೈದರಾಬಾದ್‌ನಲ್ಲಿ ಶಿಕ್ಷಕಿಯಾದ ಮಂಗ್ಲಿ

    ಮಂಗ್ಲಿಯ ತಂದೆ ಕುಡುಕ ಆದರೆ ಮಗಳ ಮೇಲೆ ಪ್ರೀತಿ ಹೆಚ್ಚು. ಅಪ್ಪನಿಗೆ ಸಹಾಯ ಮಾಡಲೆಂದು ಹೈದರಾಬಾದ್‌ಗೆ ಬಂದ ಮಂಗ್ಲಿ, ಸಂಗೀತ ಶಿಕ್ಷಕಿಯಾಗಿ ಶಾಲೆಯೊಂದರಲ್ಲಿ ಸೇರಿಕೊಂಡರು, ಹೊರಗೆ ಸಹ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದರು. ಹಾಗೆ ಮಾಡುತ್ತಲೇ ಶಿಕ್ಷಕ ತರಬೇತಿ (ಟಿಸಿಎಚ್‌) ಸಹ ಮುಗಿಸಿದರು. ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಜನಪದ ಗಾಯಕ ಬಿಕ್ಷು ನಾಯಕ್ ಅವರು ತಮ್ಮ ತಂಡದಲ್ಲಿ ಗಾಯಕಿಯಾಗಿ ಸೇರಿಕೊಳ್ಳಲು ಮಂಗ್ಲಿಯನ್ನು ಆಹ್ವಾನಿಸಿದರು. ಹಾಗೆಯೇ ಅವರ ತಂಡ ಸೇರಿಕೊಂಡು ಕಾರ್ಯಕ್ರಮದಲ್ಲಿ ಹಾಡಿ ಅಲ್ಪ-ಸ್ವಲ್ಪ ಹಣ ಗಳಿಸುತ್ತಿದ್ದರು. ಹೀಗಿರಬೇಕಾದರೆ ವಿ6 ಟಿವಿ ಚಾನೆಲ್‌ನಲ್ಲಿ ಜನಪದ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸತ್ಯವತಿಯನ್ನು ಕಳಿಸಿದರು ಭಿಕ್ಷು ನಾಯಕ್. ಅಲ್ಲಿ ಆಕೆಯ ಹಾಡು, ಆಕೆ ಮಾತನಾಡುವ ಶೈಲಿ ಚಾನೆಲ್‌ನವರಿಗೆ ಇಷ್ಟವಾಗಿ 'ನಮ್ಮ ಚಾನೆಲ್‌ನಲ್ಲಿ ನಿರೂಪಕಿ ಆಗುತ್ತೀರಾ' ಎಂದು ಅವಕಾಶ ಕೊಟ್ಟರಂತೆ.

    ಆಂಧ್ರದಲ್ಲಿ ಮನೆ-ಮಾತಾದ ಮಂಗ್ಲಿ

    ಆಂಧ್ರದಲ್ಲಿ ಮನೆ-ಮಾತಾದ ಮಂಗ್ಲಿ

    ಅವಶ್ಯಕತೆ ಇಲ್ಲದೆ ಮಾತನ್ನೇ ಆಡದಿದ್ದ ಮಂಗ್ಲಿ, ಒಮ್ಮೆಲೆ ನಿರೂಪಕಿ ಆಗುವುದು ಹೇಗೆಂಬ ಯೋಚನೆಯಲ್ಲಿದ್ದಾಗ ಚಾನೆಲ್‌ನವರು, ನಾವೆ ಕಲಿಸುತ್ತೇವೆ, ನೀವು ನಿಮ್ಮ ಆಡುಭಾಷೆಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಸಾಕು ಎಂದು ಹೇಳಿ ಒಪ್ಪಿಸಿದರು. ಕಾರ್ಯಕ್ರಮಕ್ಕಾಗಿ ಹೆಸರು ಬದಲಾಯಿಸಿಕೊಳ್ಳಲು ಕೇಳಿದಾಗ ಸತ್ಯವತಿ ಎಂಬ ಮೊದಲ ಹೆಸರನ್ನು ಬಿಟ್ಟು ತಮ್ಮ ಅಜ್ಜಿಯ ಹೆಸರು ಮಂಗ್ಲಿ ಅನ್ನು ಆಯ್ಕೆ ಮಾಡಿಕೊಂಡರು. ಆ ಹೆಸರು ಚಾನೆಲ್‌ನವರಿಗೆ ಬಹಳ ಇಷ್ಟವಾಗಿ 'ಮಾಟಕಾರಿ ಮಂಗ್ಲಿ' ಹೆಸರಿನ ವಿಶೇಷ ಶೋ ಪ್ರಾರಂಭಿಸಿದರು. ಈ ಶೋ ನಿಂದ ಜನಪ್ರಿಯತೆ ಗಳಿಸಿದ ಮಂಗ್ಲಿ ಆ ನಂತರ ತೀನ್‌ಮಾರ್, ತೀನ್‌ಮಾರ್ ನ್ಯೂಸ್‌ ಎಂಬ ಎರಡು ಶೋ ಗಳನ್ನು ಪ್ರಾರಂಭಿಸಿ ಅವಿಭಜಿತ ಆಂಧ್ರಪ್ರದೇಶದ ಮನೆ ಮಾತಾದರು.

    'ರೇಲಾ ರೇ ರೇಲಾ' ಹಾಡು ಸೂಪರ್ ಡೂಪರ್ ಹಿಟ್

    'ರೇಲಾ ರೇ ರೇಲಾ' ಹಾಡು ಸೂಪರ್ ಡೂಪರ್ ಹಿಟ್

    ಆ ನಂತರ ಎಚ್‌ಎಂಟಿವಿ ಗೆ ಹೋದ ಮಂಗ್ಲಿ ಅಲ್ಲಿ 'ಜಬರ್ದಸ್ತ್ ನ್ಯೂಸ್' ಹೆಸರಿನಲ್ಲಿ 'ಸಟೈರಿಕಲ್' ಸುದ್ದಿಗಳನ್ನು ಓದಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಸೆಲೆಬ್ರಿಟಿಗಳ ಸಂದರ್ಶನವನ್ನೂ ಮಾಡುತ್ತಿದ್ದರು. ಆ ನಂತರ 'ಮೈಕ್ ಟಿವಿ' ಯಲ್ಲಿ ಮತ್ತೆ ಹಾಡಲು ಪ್ರಾರಂಭಿಸಿದರು. ತೆಲಂಗಾಣ ವಿಭಜನೆ ಸಮಯದಲ್ಲಿ ಮಂಗ್ಲಿ ಹಾಡಿದ 'ರೇಲಾ ರೇ ರೇಲಾ' ಹಾಡು ಭಾರಿ ಹಿಟ್ ಆಯಿತು. ಆ ನಂತರ ತೆಲಂಗಾಣ ಸ್ಥಾಪನಾ ದಿನಕ್ಕಾಗಿ ಹಾಡಿದ 'ಒರುಗಲ್ಲು ಕೋಟನಡುಗು' ಹಾಡಂತೂ ಸೂಪರ್ ಡೂಪರ್ ಹಿಟ್. ಮಂಗ್ಲಿ ಹಾಡಿದ ಸಂಕ್ರಾಂತಿ, ಯುಗಾದಿ ಜನಪದ ಹಾಡುಗಳು ಸಹ ಯೂಟ್ಯೂಬ್‌ನಲ್ಲಿ ಕೋಟ್ಯಂತರ ವೀವ್ಸ್ ಪಡೆದವು. ವಿದೇಶಗಳಲ್ಲಿ ನಡೆವ ತೆಲುಗು ಕಾರ್ಯಕ್ರಮದಲ್ಲಿ ಮಂಗ್ಲಿ ಗೆ ಹಾಡುವ ಅವಕಾಶ ದೊರೆಯಲು ಪ್ರಾರಂಭವಾಯಿತು. ಆಗ ಸಿನಿಮಾ ಸಂಗೀತ ನಿರ್ದೇಶಕರ ಕಣ್ಣಿಗೆ ಬಿದ್ದರು ಮಂಗ್ಲಿ.

    ಸಿನಿಮಾಕ್ಕೆ ಮೊದಲು ಹಾಡಿದ್ದು 2018 ರಲ್ಲಿ

    ಸಿನಿಮಾಕ್ಕೆ ಮೊದಲು ಹಾಡಿದ್ದು 2018 ರಲ್ಲಿ

    2018 ರಲ್ಲಿ ಬಿಡುಗಡೆ ಆಗಿ ಸಾಧಾರಣ ಹಿಟ್ ಎನಿಸಿಕೊಂಡ, ನಾಗ ಚೈತನ್ಯ ನಟಿಸಿದ್ದ 'ಶೈಲಜಾ ರೆಡ್ಡಿ ಅಲ್ಲುಡು' ಸಿನಿಮಾದ ಟೈಟಲ್ ಹಾಡು ಮಂಗ್ಲಿ ಹಾಡಿದರು. ಇದೇ ಅವರು ಹಾಡಿದ ಮೊದಲ ಸಿನಿಮಾ ಹಾಡು. ಸಿನಿಮಾ ಸಾಧಾರಣ ಹಿಟ್ ಆದರೂ ಮಂಗ್ಲಿ ಹಾಡಿದ ಹಾಡು ಸೂಪರ್ ಹಿಟ್ ಆಯಿತು. ಆ ನಂತರ ಇನ್ನೂ ಕೆಲವು ಸಿನಿಮಾಗಳಲ್ಲಿ ಹಾಡಿದ ಮಂಗ್ಲಿಗೆ ದೊಡ್ಡ ಹೆಸರು ತಂದುಕೊಟ್ಟಿದ್ದು 'ಅಲಾ ವೈಕುಂಟಪುರಂಲೋ' ಸಿನಿಮಾದ 'ರಾಮುಲೋ ರಾಮುಲಾ' ಹಾಡು. ಆ ನಂತರ ಇದೀಗ 'ರಾಬರ್ಟ್' ಸಿನಿಮಾದ ತೆಲುಗು ಡಬ್‌ನಲ್ಲಿ ಹಾಡಿರುವ 'ಕಣ್ಣೇ ಅಧಿರಿಂದಿ' ಹಾಡಂತೂ ಮಂಗ್ಲಿಗೆ ದೊಡ್ಡ ಅಭಿಮಾನಿ ವರ್ಗವನ್ನೇ ತಂದುಕೊಟ್ಟಿದೆ.

    Recommended Video

    ರಾಬರ್ಟ್ ಹಾಡಿನ ತೆಲುಗು ಗಾಯಕಿಗೆ ಕನ್ನಡಿಗರು ಫಿದಾ | Filmibeat Kannada
    ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ ಮಂಗ್ಲಿ

    ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ ಮಂಗ್ಲಿ

    ಇನ್ನೊಂದು ವಿಶೇಷತೆಯೆಂದರೆ ಮಂಗ್ಲಿ ಸಿನಿಮಾ ಒಂದರಲ್ಲಿ ನಾಯಕಿಯಾಗಿಯೂ ನಟಿಸಿದ್ದಾರೆ. 'ಗೂರ್ ಜೀವನ್' ಹೆಸರಿನ ಲಂಬಾಣಿ ತಾಂಡಾದ ಜೀವನ ತೋರಿಸುವ ಹಾಗೂ ಲಂಬಾಣಿ ಹೆಣ್ಣು ಮಕ್ಕಳ ಕಷ್ಟಗಳ ಮೇಲೆ ಬೆಳಕು ಚೆಲ್ಲುವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದರು. ಆ ಸಿನಿಮಾದಲ್ಲಿ ಹಾಡುವುದರ ಜೊತೆಗೆ ಫೈಟ್‌ ಸಹ ಮಾಡಿದ್ದಾರೆ ಮಂಗ್ಲಿ. ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿರುವ ಮಂಗ್ಲಿ, ಲಂಬಾಣಿ ಹೆಣ್ಣುಮಕ್ಕಳ ರಕ್ಷಣೆ, ಶಿಕ್ಷಣಕ್ಕಾಗಿ ಎನ್‌ಜಿಓಗಳೊಂದಿಗೆ ಕೈಜೋಡಿಸಿ ಶ್ರಮಿಸುತ್ತಿದ್ದಾರೆ. ಈ ಗಾಯಕಿಗೆ ಹಲವು ಪ್ರಶಸ್ತಿಗಳು ಸಹ ದೊರೆತಿವೆ. ಮಹಿಳಾ ದಿನಾಚರಣೆ ದಿನ ಮಂಗ್ಲಿಗೆ 'ಈನಾಡು ವಸುಂಧರ' ಪ್ರಶಸ್ತಿ ದೊರೆತಾಗ, ಮಂಗ್ಲಿ ತಾಯಿ ಹೇಳಿದರಂತೆ, 'ನೀನು ಹುಟ್ಟಿದಾಗ ಹೆಣ್ಣುಮಗು ಎಂದು ಎಲ್ಲರೂ ಜರಿದರು. ನಿನ್ನನ್ನು ಕೊಂದುಬಿಡಲು ಸಹ ಸಲಹೆ ಕೊಟ್ಟಿದ್ದರು. ಆದರೆ ನಾವು ನಿನ್ನನ್ನು ಕಾಪಾಡಿದೆವು. ಆದರೆ ಹೆಣ್ಣು ಮಗು ಹುಟ್ಟಿತಲ್ಲ ಎಂದು ಬಹಳ ಅತ್ತಿದ್ದೆವು. ಆದರೆ ಈಗ ನೀನು ಗಂಡುಮಗನಿಗಿಂತಲೂ ಚೆನ್ನಾಗಿ ಕುಟುಂಬವನ್ನು ನೋಡಿಕೊಳ್ಳುತ್ತಿದ್ದೀಯ. ಅಷ್ಟೇ ಅಲ್ಲ ಸಮುದಾಯದ ಹೆಣ್ಣು ಮಕ್ಕಳಿಗೆ ದಾರಿದೀಪವಾಗಿದ್ದೀಯಾ' ಎಂದು ಕಣ್ಣೀರು ಹಾಕಿದರಂತೆ. ಮಂಗ್ಲಿ ಕೇವಲ ಹಾಡುಗಾರ್ತಿ ಮಾತ್ರವೇ ಅಲ್ಲ ಎಷ್ಟೋ ಮಂದಿ ಹೆಣ್ಣು ಮಕ್ಕಳಿಗೆ ಸ್ಪೂರ್ತಿ.

    English summary
    Who is singer Mangli, what is her life journey. What is Mangli's real name and why it is changed to Mangli.
    Saturday, March 13, 2021, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X