For Quick Alerts
  ALLOW NOTIFICATIONS  
  For Daily Alerts

  ಸ್ಟಾರ್‌ ನಟರೇಕೆ ಮಾತನಾಡುವುದಿಲ್ಲ? ಸರಿ ತಪ್ಪು ಹೇಳಲು ಹೆದರಿಕೆ ಏಕೆ?

  |

  ರಿಷಬ್ ಶೆಟ್ಟಿಯ 'ನೋ ಕಮೆಂಟ್ಸ್‌'ಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಕಮೆಂಟ್ಸ್‌ಗಳು ಬರುತ್ತಿವೆ. ಮೋದಿಯನ್ನು ಹೊಗಳಿ, ರಾಹುಲ್ ಗಾಂಧಿ ಬಗ್ಗೆ ನೋ ಕಮೆಂಟ್ಸ್ ಎಂದಿದ್ದರ ಬಗ್ಗೆ ಚರ್ಚೆ ಜೋರಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಎಡಪಂಥೀಯರು ಸಹ ರಿಷಬ್ ಶೆಟ್ಟಿಯ 'ನೋ ಕಮೆಂಟ್ಸ್' ಹೇಳಿಕೆಯನ್ನು ಟೀಕಿಸುತ್ತಿದ್ದಾರೆ. ಕೆಲವರಂತೂ 'ನೋ ಕಮೆಂಟ್ಸ್‌' ಕಾರಣವನ್ನೇ ಹಿಡಿದು ರಿಷಬ್‌ರ ಹೊಸ ಸಿನಿಮಾ 'ಕಾಂತಾರ'ದ ಬಗ್ಗೆ ಕೂದಲು ಸೀಳುವಂತೆ ವಿಮರ್ಶೆ ಬರೆದಿರುವುದೂ ಉಂಟು.

  ಸಿನಿಮಾ ತಾರೆಯರು ಯಾವುದೇ ಒಂದು ಪಕ್ಷದ ನರೆಟಿವ್ ಪರವಾಗಿ, ಅಥವಾ ಒಂದು ಪಕ್ಷದ, ಪಕ್ಷದ ನಾಯಕನ ಪರವಾಗಿ ಮಾತನಾಡಿದಾಗ ಎದುರಾಳಿಗಳಿಂದ ಟೀಕೆ, ಬೈಗುಳ, ವ್ಯಂಗ್ಯಗಳು ವ್ಯಕ್ತವಾಗುವುದು ಸಾಮಾನ್ಯ. ನಟ ಪ್ರಕಾಶ್ ರೈ, ಮೋದಿ ವಿರುದ್ಧ ಮಾತನಾಡಿದಾಗ ಬಲಪಂಥದವರು ಹಲವರು ತೀರ ಕೆಳಮಟ್ಟದ ಕಮೆಂಟ್‌ಗಳನ್ನು ಮಾಡಿದ್ದು, ಪ್ರಕಾಶ್‌ ರೈ ವ್ಯಕ್ತಿತ್ವ ಹರಣಕ್ಕೆ ಯತ್ನಿಸಿದ್ದು, ಯತ್ನಿಸುತ್ತಲೇ ಇರುವುದು ರಹಸ್ಯವಲ್ಲ.

  ಯಾವುದೇ ಸಿನಿಮಾ ನಟರು, ರಾಜಕೀಯ ಪಕ್ಷದ ಅಥವಾ ರಾಜಕೀಯ ನಾಯಕನ ಪರ ಅಥವಾ ವಿರೋಧವಾಗಿ ಮಾತನಾಡಿದಾಗ ಟೀಕೆಗೆ ಗುರಿಯಾಗುವುದು ಸಾಮಾನ್ಯ. ಆದರೆ ಹೀಗೆ ಪಕ್ಷದ ಬಗ್ಗೆ, ರಾಜಕೀಯ ನಾಯಕರ ಬಗ್ಗೆ ಅಥವಾ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳ ಬಗ್ಗೆ ನಿಲವು ಹೊಂದಿ ಅದನ್ನು ಈ ರಾಜಕೀಯ ಸೂಕ್ಷ್ಮ ಕಾಲದಲ್ಲಿ ಬಹಿರಂಗವಾಗಿ ಹೇಳುವ ಬೆರಳೆಣಿಕೆಯ ಸಿನಿಮಾ ಮಂದಿಯ ಧೈರ್ಯವನ್ನಂತೂ ಮೆಚ್ಚಲೇ ಬೇಕು. ಆದರೆ, ದೊಡ್ಡ ಸಂಖ್ಯೆಯ ಜನರನ್ನು ಪ್ರಭಾವಿಸುವ ಶಕ್ತಿ ಹೊಂದಿರುವ ಬಹುತೇಕ ಸಿನಿಮಾ ಸ್ಟಾರ್ ನಟ-ನಟಿಯರು, ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಕುರುಡುತನ, ಮೂಗತನ ತೋರಿಸುತ್ತಿರುವುದು ವಿಪರ್ಯಾಸ.

  ಕುರುಡ, ಮೂಗರಾಗುವುದು ಏಕೆ?

  ಕುರುಡ, ಮೂಗರಾಗುವುದು ಏಕೆ?

  ಎಲ್ಲೋ ವಿದೇಶದಲ್ಲಿ ನಡೆದ ಅಥವಾ ದೇಶದಲ್ಲಿ ನಡೆದ ಎಲ್ಲದರ ಬಗ್ಗೆಯೂ ಸಿನಿಮಾ ತಾರೆಯರು ಅಭಿಪ್ರಾಯಗಳನ್ನು ಹೊಂದಬೇಕು, ಅವನ್ನು ಪ್ರಕಟಿಸಬೇಕು ಎಂಬ ಒತ್ತಾಯವೇನೂ ಇಲ್ಲ. ಆದರೆ ತಾವಿರುವ ರಾಜ್ಯದಲ್ಲಿ, ಪ್ರದೇಶದಲ್ಲಿ ನಡೆವ ಸಾಮಾಜಿಕ ಘಟನೆಗಳಿಗೆ ಸರಿಯಾದ ದಾರಿಯಲ್ಲಿ ಸ್ಪಂದಿಸದಿದ್ದರೆ ಒಪ್ಪತಕ್ಕುದಲ್ಲ, ಅದು, ಜವಾಭ್ದಾರಿಯುತ ನಾಗರೀಕನ ನಡೆ ಅಲ್ಲ. ಅನ್ಯಾಯ ನಡೆದಾಗ ನೋಡುತ್ತಾ ಸುಮ್ಮನೆ ಕೂರುವುದೂ ಸಹ ಅನ್ಯಾಯದಲ್ಲಿ ಪಾಲ್ಗೊಂಡಂತೆಯೇ. ಆದರೆ ಸಿನಿಮಾ ತಾರೆಯರು ಸಾಮಾಜಿಕ ಸಂಗತಿಗಳ ಬಗ್ಗೆ ಬಹುತೇಕ ಕುರುಡರಾಗಿರುತ್ತಾರೆ ಅಥವಾ ಹಾಗೆ ನಟಿಸುತ್ತಾರೆ. ತಾವು ರಾಜಕೀಯೇತರರು ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುವ ನಟರೂ ಸಹ ನಮ್ಮ ನಡುವೆ ಇದ್ದಾರೆ.

  ಹಲವು ವಿಷಯಗಳು ರಾಜ್ಯದಲ್ಲಿ ನಡೆದಿವೆ

  ಹಲವು ವಿಷಯಗಳು ರಾಜ್ಯದಲ್ಲಿ ನಡೆದಿವೆ

  ದೇಶವೇ ನೋಡಿದ, ಚರ್ಚಿಸಿದ ಹಲವು ವಿಷಯಗಳು ಕರ್ನಾಟಕದಲ್ಲಿ ಇತ್ತೀಚೆಗೆ ನಡೆದಿವೆ. ಹಿಜಬ್ ಗಲಾಟೆ, ಧರ್ಮಾಂದರಿಂದ ಸರಣಿ ಕೊಲೆ, ಬೆಂಗಳೂರು ಮಳೆ, ರೈತರ ಪ್ರತಿಭಟನೆ, ದ್ವೇಷ ಭಾಷಣಗಳ ಹೆಚ್ಚಳ, ಮಸೀದಿ-ಮಂದಿರ ವಿವಾದ ಹೀಗೆ ಹತ್ತು ಹಲವು ಸಾಮಾಜಿಕ ಸಮಸ್ಯೆಗಳನ್ನು ರಾಜ್ಯ ಕಂಡಿದೆ. ವಿಪ್ಲವ ಉಂಟುಮಾಡಿದ ಸಂಗತಿಗಳಿದ್ದಾಗಿಯೂ ಸಿನಿಮಾ ತಾರೆಯರು ತಮ್ಮ ಇಮೇಜಿನ ಬಗ್ಗೆ ಕಾಳಜಿವಹಿಸಿ ಸುಮ್ಮನೆ ಕೂರುವುದು ಅವರ ಸ್ವಾರ್ಥದ ದರ್ಶನ ಮಾಡಿಸುತ್ತದೆಯಷ್ಟೆ. ಧರ್ಮದ ಹೆಸರಲ್ಲಿ ಸರಣಿ ಕೊಲೆಗಳಾದಾಗ ಒಂದು ಶಾಂತಿಯ, ಭಾವೈಕ್ಯತೆಯ ಸಂದೇಶದ ಅವಶ್ಯಕತೆ ಇತ್ತು. ಆ ಕಾರ್ಯವನ್ನು ಸುಲಭವಾಗಿ ಸಿನಿಮಾ ತಾರೆಯರು ಮಾಡಬಹುದಿತ್ತು. ತೆರೆಯ ಮೇಲೆ ಅನಾಥ ರಕ್ಷಕರಾಗಿ ಕಾಣಿಸಿಕೊಳ್ಳುವವರು, ಸಂದರ್ಭ ಬಂದಾಗ ನಿಜವಾದ ಹೀರೋ ಎನ್ನಿಸಿಕೊಳ್ಳದೆ ಚಿಪ್ಪಿನಲ್ಲಿ ಅವಿತುಕೊಂಡರು. ಕಾವೇರಿ ವಿಷಯದಲ್ಲಿ ಕುದಿಯುವ ಸಿನಿಮಾ ನಟರ ರಕ್ತ, ಬಡವರ ಮಕ್ಕಳು ಬೀದಿ ಹೆಣವಾದಾಗ ಕುದಿಯುವುದಿಲ್ಲ. ಇದಕ್ಕೊಂದು ಅಂತ್ಯ ಬೇಕು ಎನ್ನಿಸುವುದಿಲ್ಲ. ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳಲು ಹಿಂಜರಿಕೆಯೇ?.

  ಸಿನಿಮಾ ತಾರೆಯರು ಏಕೆ ಮಾತನಾಡಬೇಕು?

  ಸಿನಿಮಾ ತಾರೆಯರು ಏಕೆ ಮಾತನಾಡಬೇಕು?

  ಸಿನಿಮಾ ತಾರೆಯರು ಏಕೆ ಮಾತನಾಡಬೇಕು? ಅವರೇಕೆ ರಾಜಕೀಯ ನಿಲವು ಹೊಂದಬೇಕು? ಎಂದು ಕೇಳುವವರಿದ್ದಾರೆ. ಅದು ನಿಜ, ಅವರು ಮಾತನಾಡಲೇ ಬೇಕೆಂದೇನೂ ಇಲ್ಲ. ಆದರೆ ಅವರಿಗೊಂದು ಸ್ಪಷ್ಟ ರಾಜಕೀಯ ನಿಲವು ಇರಬೇಕಾಗುತ್ತದೆ. ಮತಚಲಾಯಿಸುವ ಪ್ರತಿ ವ್ಯಕ್ತಿಗೂ ಒಂದು ರಾಜಕೀಯ ನಿಲವು ಬೇಕೆ ಬೇಕು. ಇನ್ನು ಅವರೇಕೆ ಮಾತನಾಡಬೇಕು ಎಂದರೆ, ಅವರಿಗೆ ಹೆಚ್ಚು ಸಂಖ್ಯೆಯ ಜನರನ್ನು ಒಟ್ಟಿಗೆ ಪ್ರಭಾವಿಸುವ ಶಕ್ತಿ ಇದೆ. ಬಿಯರ್ ಬಾಟಲಿ ಕೈಯಲ್ಲಿ ಹಿಡಿದು 'ಇದನ್ನು ಕುಡಿಯಿರಿ ಸ್ಟ್ರಾಂಗ್ ಇದೆ', 'ರಮ್ಮಿ ಆಟವಾಡಿ', 'ಇಲ್ಲೇ ನಿಮ್ಮ ಚಿನ್ನ ಅಡವಿಡಿ', 'ಇದೇ ಪೇಸ್ಟಿನಿಂದ ನಿಮ್ಮ ಹಲ್ಲು ತಿಕ್ಕಿ' ಎಂದು ಜನರನ್ನು ಪ್ರಭಾವಿಸುವ, ಪ್ರೇರೇಪಿಸುವ ನಟರು, ಜನರಿಗೆ ಸಹಾಯವಾಗುವ, ಸಾಮಾಜಿಕ ಪರಿಸ್ಥಿತಿ ಉತ್ತಮ ಪಡಿಸುವ ನಿಟ್ಟಿನಲ್ಲಿ ಜನರನ್ನು ಪ್ರಭಾವಿಸಲಿ ಎಂದುಕೊಳ್ಳುವುದರಲ್ಲಿ ಸತಪ್ಪೇನು?

  ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳುವ ಧೈರ್ಯ

  ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳುವ ಧೈರ್ಯ

  ಅಲ್ಲದೆ, ಮೈಕ್ ಸಿಕ್ಕಾಗ ಪ್ರತಿ ನಟರೂ ಹೊಡೆವ ಸಾಮಾನ್ಯ ಡೈಲಾಗ್, ಅಭಿಮಾನಿಗಳಿಗಾಗಿ ಏನು ಮಾಡಲು ಸಿದ್ಧ, ಅಭಿಮಾನಿಗಳೇ ನಮಗೆಲ್ಲ, ಕನ್ನಡ ಭಾಷೆಯೇ ನಮ್ಮ ತಾಯಿ. ರಾಜ್ಯದ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ, ಕರ್ನಾಟಕವೇ ನಮ್ಮ ಪ್ರಾಣ ಎಂದೆಲ್ಲ ಹೇಳಿದ್ದಾರೆ. ಮುಂದೆಯೂ ಹೇಳುತ್ತಾರೆ. ಹಾಗಿದ್ದ ಮೇಲೆ ಅದೇ ರಾಜ್ಯಕ್ಕಾಗಿ ಒಂದೆರಡು ಹೆಜ್ಜೆ ಮುಂದಿಡಿ ಎನ್ನುವುದರಲ್ಲಿ ತಪ್ಪೇನು? ಹಾಗೆಂದು ಎಲ್ಲ ಸಿನಿಮಾ ಸ್ಟಾರ್‌ ನಟರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿಲ್ಲ, ಡಾಲಿ ಧನಂಜಯ್, ಚೇತನ್ ಅಹಿಂಸ, ಪ್ರಣಿತಾ ಸುಭಾಷ್, ರೂಪಾ ಐಯ್ಯರ್, ಪ್ರಕಾಶ್ ರೈ, ಕವಿರಾಜ್, ಮಂಸೋರೆ, ಅನಿತಾ ಭಟ್, ರಿಷಬ್ ಶೆಟ್ಟಿ ಇನ್ನೂ ಕೆಲವು ಬೆರಳೆಣಿಕೆಯ ಸಿನಿಮಾ ಮಂದಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ. ಇಂಥಹವರ ಸಂಖ್ಯೆ ಹೆಚ್ಚಾಗಲಿ, ಇಮೇಜಿನ ಹಂಗುತೊರೆದು ಸ್ಟಾರ್ ನಟರು ಇನ್ನಷ್ಟು ಸಮಾಜಪರವಾಗಲಿ, ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳುವ ಧೈರ್ಯ ಒಗ್ಗೂಡಿಸಿಕೊಳ್ಳಲಿ.

  English summary
  Why Kannada star actors not talking openly about social issues of Karnataka. why is so much hesitation.
  Wednesday, October 12, 2022, 18:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X