»   » ಮಂಡ್ಯ: ಬಿಜೆಪಿಯಿಂದ ಕನ್ನಡದ ಹೆಸರಾಂತ ನಟ ಕಣಕ್ಕೆ?

ಮಂಡ್ಯ: ಬಿಜೆಪಿಯಿಂದ ಕನ್ನಡದ ಹೆಸರಾಂತ ನಟ ಕಣಕ್ಕೆ?

Posted By:
Subscribe to Filmibeat Kannada

ಕಾವೇರಿ ಕಣಿವೆಯ ಮಂಡ್ಯ ಕ್ಷೇತ್ರ ಜಿದ್ದಾಜಿದ್ದಿನ ಹೋರಾಟಕ್ಕೆ ಎತ್ತಿದ ಕೈ. ಎಲ್ಲಾ ಪಕ್ಷಗಳಿಗೂ ಮಂಡ್ಯ ಪ್ರತಿಷ್ಠೆಯ ಕ್ಷೇತ್ರ. ಆದರೆ ಇದುವರೆಗೂ ಇಲ್ಲಿ ತ್ರಿಕೋಣ ಪೈಪೋಟಿ ನಡೆದ ಉದಾಹರಣೆಗಳು ವಿರಳ. ಅಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ.

ಕಾವೇರುತ್ತಿರುವ ಸಾರ್ವತ್ರಿಕ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ದಿನಕ್ಕೊಂದು ಹೊಸ ಹೊಸ ಅಭ್ಯರ್ಥಿಗಳ ಹೆಸರನ್ನು ಹೊರಬಿಡುತ್ತಿವೆ. ಇದರಲ್ಲಿ ಅಂತಿಮವಾಗಿ ಬಿ ಫಾರಂ ಯಾರಿಗೆ ಸಿಗುತ್ತೋ ಎನ್ನುವುದು ಆಯಾ ಪಕ್ಷದ ಅಧ್ಯಕ್ಷರಿಗೂ ಸದ್ಯದ ಮಟ್ಟಿಗೆ ತಿಳಿದಿರಲಿಕ್ಕಿಲ್ಲವೇನೋ?

ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಅಲ್ಲಿನ ಮತದಾರ ಕಾಂಗ್ರೆಸ್ಸಿಗೆ ಮಣೆ ಹಾಕಿದ. ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿ ಕೊಳ್ಳುತ್ತಿರುವ ಅಲ್ಲಿನ ಕಾಂಗ್ರೆಸ್ ಸಂಸದೆ ರಮ್ಯಾ, ಮತದಾರನ ಮನ ಗೆಲ್ಲುತ್ತಾ ಮತ್ತೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟಿಗೆ ಹೆಚ್ಚಿನ ಪೈಪೋಟಿ ಅಥವಾ ಗೊಂದಲ ಇದ್ದ ಹಾಗೇ ಕಾಣಿಸುವುದಿಲ್ಲ. ಅಲ್ಲಿ ಹೆಚ್ಚುಕಮ್ಮಿ ರಮ್ಯಾಗೆ ಕಾಂಗ್ರೆಸ್ ಟಿಕೆಟ್ ಕನ್ಫರ್ಮ್ ಎನ್ನುತ್ತವೆ ಕೆಪಿಸಿಸಿ ಮೂಲಗಳು. ಇನ್ನು ಇಲ್ಲಿ ಜೆಡಿಎಸ್ ಯಾರಿಗೆ ಟಿಕೆಟ್ ನೀಡುತ್ತೆ ಎನ್ನುವುದೇ ಕುತೂಹಲ.

ಬಿಜೆಪಿಯಿಂದ ಕನ್ನಡದ ಹೆಸರಾಂತ ನಟ ಕಣಕ್ಕೆ? ಅವರು ಯಾರು ಸ್ಲೈಡ್ ನೋಡಿ..

ನರೇಂದ್ರ ಮೋದಿ ಹೆಸರನ್ನು ಸರಿಯಾಗಿ ಬಳಸಿಕೊಳ್ಳುವುದು

ಹೇಗೂ, ಮೋದಿ ಹೆಸರು ಸಿಕ್ಕಾಪಟ್ಟೆ ಚಾಲ್ತಿಯಲ್ಲಿದೆ, ನಾವೂ ಒಳ್ಳೆ ಕ್ಯಾಂಡಿಡೇಟ್ ಹಾಕಿ ಯಾಕೆ ಟ್ರೈ ಮಾಡಬಾರದು ಎನ್ನುವ ಆಲೋಚನೆಯಲ್ಲಿದ್ದಾರಂತೆ ಕಮಲದ ನಾಯಕರು. ಹೇಗೂ, ಮಂಡ್ಯದ ಜನತೆಗೆ ಸಿನಿಮಾ ಅಂದ್ರೆ ಪಂಚಪ್ರಾಣ, ಬಣ್ಣದ ಲೋಕದಲ್ಲಿ ಹೆಸರು ಮಾಡಿರುವ ವ್ಯಕ್ತಿಯನ್ನು ಕಣಕ್ಕಿಳಿಸಿ ಇಬ್ಬರ ನಡುವೆ ಮೂರನೇಯವನಿಗೆ ಲಾಭ ಮಾಡಿಕೊಳ್ಳುವ ರಾಜಕೀಯ ತಂತ್ರಗಾರಿಕೆ ಬಿಜೆಪಿಯವರದ್ದು.

ನಾನು ಸೂಪರ್ರೋ ರಂಗ

ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಹೇಳಿದ ಪ್ರಕಾರ, ನಾವು ಉಪೇಂದ್ರ ಅವರನ್ನು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವೊಲಿಸುತ್ತಿದ್ದೇವೆ. ಅಲ್ಲಿ ಸದ್ಯ ರಮ್ಯಾ ಕೂಡಾ ಸಿನಿಮಾ ಜಗತ್ತಿನವರಾಗಿದ್ದರಿಂದ ಉಪೇಂದ್ರ ಮೂಲಕ ನಾವು ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದೇವೆ. ಉಪೇಂದ್ರ ಅವರ ಸ್ಪಷ್ಟನೆಗೆ ಕಾಯುತ್ತಿದ್ದೇವೆ ಎಂದಿದ್ದಾರೆ. ಉಪೇಂದ್ರ ಕೂಡಾ ಬಿಜೆಪಿ ಆಫರಿಗೆ ಪೂರಕವಾಗಿ ಸ್ಪಂದಿಸಿದ್ದಾರೆನ್ನಲಾಗುತ್ತಿದೆ.

ಸೂಪರ್ ಚಿತ್ರ

ಉಪೇಂದ್ರ ಅವರೇ ನಿರ್ದೇಶಿಸಿ, ನಾಯಕ ನಟನಾಗಿ ನಟಿಸಿದ್ದ ಬ್ಲಾಕ್ ಬಸ್ಟರ್ ಸೂಪರ್ ಚಿತ್ರದಲ್ಲಿ ನಾಯಕನ ಪಾತ್ರವೇ ಜನನಾಯಕನಾಗಿ ರಾಜಕೀಯದಲ್ಲಿ ತೊಡಗಿಸಿ ಕೊಳ್ಳುವುದು. ಆ ಚಿತ್ರ ಬಿಡುಗಡೆಯ ಸಮಯದಲ್ಲೂ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆಂದು ಸುದ್ದಿಯಾಗಿತ್ತು. ಸೂಕ್ತವಾದ ಸಮಯದಲ್ಲಿ ರಾಜಕೀಯದ ಬಗ್ಗೆ ನಿಲುವು ತೆಗೆದು ಕೊಳ್ಳುತ್ತೇನೆಂದು ಉಪೇಂದ್ರ ಚಿತ್ರ ಬಿಡುಗಡೆಯ ಸಮಯದಲ್ಲಿ ಹೇಳಿದ್ದರು.

ನಾನು ಕೂಡಾ ಮಂಡ್ಯದ ಸೊಸೆ

ನಾನು ಮಂಡ್ಯದ ಸೊಸೆ, ನನಗೂ ಸ್ಪರ್ಧಿಸ ಬೇಕೆನ್ನುವ ಆಸೆಯಿದೆ. ನಾನು ಚುನಾವಣೆಗೆ ನಿಂತರೆ ಅದು ಮಂಡ್ಯದಿಂದ ಮಾತ್ರ ಎಂದು ರಕ್ಷಿತಾ ಪ್ರೇಮ್ ಜಿಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಸದ್ಯ ಕುಮಾರಣ್ಣ ರಕ್ಷಿತಾಗೆ ಟಿಕೆಟ್ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ತಾರಾ ಸಮರ

ಒಟ್ಟಿನಲ್ಲಿ ಜಿದ್ದಾಜಿದ್ದಿನ ಮಂಡ್ಯ ಕ್ಷೇತ್ರ ತಾರಾ ಸಮರಕ್ಕೆ ಸಜ್ಜಾಗುತ್ತಿದೆ. ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದು ಸದ್ಯದಲ್ಲೇ ಅಂತಿಮವಾಗಲಿದೆ. ಮೂರು ಪಕ್ಷಗಳು ಯಾವ ರಾಜಕೀಯ ತಂತ್ರ ಬಳಸಿಕೊಳ್ಳಲಿದೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

English summary
BJP trying to rope Leading Kannada actor Real Star Upenda to contest in Mandya seat in the upcoming Loksabha election 2014.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada