»   » ಕಮಲ್ ಸಂಬಂಧದ ಬಗ್ಗೆ ಮೌನ ಮುರಿದ ಗೌತಮಿ

ಕಮಲ್ ಸಂಬಂಧದ ಬಗ್ಗೆ ಮೌನ ಮುರಿದ ಗೌತಮಿ

Posted By:
Subscribe to Filmibeat Kannada

ಇಷ್ಟಕ್ಕೂ ನಟಿ ಗೌತಮಿ ಹಾಗೂ ಮಹಾನ್ ನಟ ಕಮಲ್ ಹಾಸನ್ ಒಬ್ಬರಿಗೊಬ್ಬರು ಏನಾಗಬೇಕು? ಇವರಿಬ್ಬರ ನಡುವಿನ ಸಂಬಂಧಕ್ಕೆ ಏನೆಂದು ಕರೆಯಬೇಕು. ಈ ಪ್ರಶ್ನೆಗಳಿಗೆ ಸ್ವತಃ ಕಮಲ್ ಹಾಸನ್ ಹಾಗೂ ನಟಿ ಗೌತಮಿ ಅವರ ಬಳಿ ಉತ್ತರವಿಲ್ಲ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೆ?

ಇತ್ತೀಚೆಗೆ ತಮ್ಮ ಮತ್ತು ಕಮಲ್ ಸಂಬಂಧದ ಬಗ್ಗೆ ಗೌತಮಿ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಈ ಪ್ರಶ್ನೆ ಬಹಳಷ್ಟು ಸಲ ನಮ್ಮಿಬ್ಬರನ್ನೂ ಕಾಡಿದೆ. ಆದರೆ ನಮ್ಮಿಬ್ಬರ ಸಂಬಂಧಕ್ಕೆ ಯಾವ ಹೆಸರನ್ನೂ ಇಟ್ಟುಕೊಳ್ಳಲಿಲ್ಲ. "ಸ್ನೇಹಿತರು, ಪ್ರೇಮಿಗಳು ಅಥವಾ ಗಂಡ ಹೆಂಡತಿ...ಹೀಗೆ ಸಂಬಂಧಗಳಿಗೆ ಅದೆಷ್ಟೋ ಹೆಸರುಗಳಿವೆ. ಆದರೆ ಕಮಲ್ ಜೊತೆಗಿನ ನನ್ನ ಸಂಬಂಧಕ್ಕೆ ಹೆಸರಿಲ್ಲ...ಎಂದಿದ್ದಾರೆ.

ನಾನು ಮದುವೆಯಾದ ಬಳಿಕ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳಲಿಲ್ಲ. ಇತ್ತೀಚೆಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮಿಬ್ಬರ ಬಾಳಿನಲ್ಲಿ ಎದುರಾದ ಸಮಸ್ಯೆಗಳು, ತಮ್ಮ ಸಿನಿಮಾ ವೃತ್ತಿ ಬದುಕಿನ ಬಗ್ಗೆ ಗೌತಮಿ ಹೇಳಿಕೊಂಡಿದ್ದಾರೆ. ಬಣ್ಣದ ಬದುಕಿಗೆ ಅಡಿಯಿಟ್ಟದ್ದು ಅಚಾನಕ್ ಆಗಿ. ಬಳಿಕ ಹಿಂತಿರುಗಿ ನೋಡಲಿಲ್ಲ ಎಂದಿರುವ ಗೌತಮಿಯ ಆಕಸ್ಮಿಕ ಕಥೆ ಇಲ್ಲಿದೆ.

ತನ್ನ ಮೊದಲ ಪತಿಯಿಂದ ದೂರ ಇರುವ ಗೌತಮಿ ಪುತ್ರಿಯನ್ನು ತನ್ನೊಂದಿಗೆ ಉಳಿಸಿಕೊಂಡಿದ್ದಾರೆ. ಕಮಲ್ ಹಾಸನ್ ಜೊತೆಗೆ ಸಹಜೀವನವನ್ನೂ ನಡೆಸುತ್ತಿದ್ದಾರೆ. 2005ರಲ್ಲಿ ಗೌತಮಿಗೆ ಸ್ತನ ಕ್ಯಾನ್ಸರ್ ಆಗಿತ್ತು. ಸುಮಾರು ಆರೇಳು ವರ್ಷಗಳ ಕಾಲ ನಿರಂತರವಾಗಿ ಚಿಕಿತ್ಸೆ ತೆಗೆದುಕೊಂಡ ಬಳಿಕ ಕ್ಯಾನ್ಸರ್ ಜಯಿಸಿದರು.

ಬೆಳ್ಳಿತೆರೆಯಿಂದ ದೂರ ಉಳಿದಿರುವ ಗೌತಮಿ ಸದ್ಯಕ್ಕೆ ಕಿರುತೆರೆಯ ಕಾರ್ಯಕ್ರವೊಂದನ್ನು ನಡೆಸಿಕೊಡುತ್ತಿದ್ದಾರೆ. ಇದು ಬಿಟ್ಟರೆ ತನ್ನ ಬಹುತೇಕ ಸಮಯವನ್ನು ಮಗಳೊಂದಿಗೆ ಕಳೆಯುತ್ತಾರೆ. ತನ್ನ ಮಗಳು ಓದಿನಲ್ಲಿ ಚುರುಕಾಗಿದ್ದಾಳೆ. ಆಕೆಯ ಭವಿಷ್ಯವನ್ನು ತಿದ್ದಿ ತೀಡುವುದೇ ತಮ್ಮ ಮುಂದಿನ ಗುರಿ ಎನ್ನುತ್ತಾರೆ ಗೌತಮಿ.

ಕಮಲ್ ಹಾಸನ್ ನನ್ನನ್ನು ಬಹಳ ಗೌರವದಿಂದ ನೋಡುತ್ತಾರೆ. ನಾವಿಬ್ಬರೂ ಮನೆಯಲ್ಲಿದ್ದರೆ ರಾಜಕೀಯ, ಇತರೆ ಸಮಸ್ಯೆಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಿಕೊಳ್ಳುತ್ತೇವೆ. ಪ್ರಶಾಂತವಾಗಿ ಹಸಿರು ಹುಲ್ಲು ಹಾಸಿನ ಮೇಲೆ ಕುಳಿತು ಸಮಯ ಕಳೆಯುತ್ತೇವೆ. ಒಮ್ಮೊಮ್ಮೆ ಅವರನ್ನು ನೋಡಿದರೆ ಹೊಟ್ಟೆ ಕಿಚ್ಚು ಆಗುತ್ತದೆ. ನೋಡಲು ಎಷ್ಟು ಮುದ್ದಾಗಿ, ಆಕರ್ಷಕವಾಗಿ ಇದ್ದಾರಲ್ಲಾ ಎಂಬುದೇ ಅದಕ್ಕೆ ಕಾರಣ ಎನ್ನುತ್ತಾರೆ.

ಕಮಲ್ ಅವರನ್ನು ನಾನು ಈಗಲೂ ಸರ್ ಎನ್ನುತ್ತೇನು

ಕಮಲ್ ಅವರನ್ನು ಮೊದಲ ಸಲ ಭೇಟಿಯಾದ ಬಗ್ಗೆ ನೆನಪಿಸಿಕೊಳ್ಳುತ್ತಾ...ಕಮಲ್ ಅವರನ್ನು ಮೊದಲು ಭೇಟಿಯಾದದ್ದು 'ಅಪೂರ್ವ ಸಹೋದರ್ ಗಳ್' ಸೆಟ್ಸ್ ನಲ್ಲಿ. ಆಗ ಅವರು ತುಂಬಾ ಹಿರಿಯ ನಟ. ಸರ್ ಎಂದು ಕರೆಯುತ್ತಿದ್ದೆ. ಈಗಲೂ ಹಾಗೆಯೇ ಕರೆಯುತ್ತೇನೆ.

ಗೌತಮಿ ಕೆನ್ನೆ ಈಗಲೂ ಕೆಂಪಾಗುತ್ತದೆ

ನನ್ನ ವೃತ್ತಿ ಬದುಕಿನಲ್ಲಿ ಮರೆಯಲಾಗದ ಹೊಗಳಿಕೆ ಅಂದರೆ ಕಮಲ್ ಹಾಸನ್ ಅವರದು. 'ಕ್ಷತ್ರಿಯ ಪುತ್ರುಡು' ಚಿತ್ರದಲ್ಲಿ ನನ್ನದು ಗ್ಲಾಮರ್ ಪಾತ್ರ. ಆ ಚಿತ್ರದಲ್ಲಿನ ಒಂದು ಸನ್ನಿವೇಶವನ್ನು ನೋಡಿ ಕಮಲ್ ತುಂಬಾ ಮೆಚ್ಚಿಕೊಂಡರು. ಈ ಹುಡುಗಿಯನ್ನು ನೋಡಿ ಏನು ಅಭಿನಯಿಸುತ್ತಾರೋ ಏನೋ ಅಂದುಕೊಂಡಿದ್ದೆ. ಆದರೆ ನಿಜಕ್ಕೂ ಗ್ರೇಟ್ ಎಂದಿದ್ದನ್ನು ಈಗಲೂ ಗೌತಮಿ ನೆನಪಿಸಿಕೊಂಡು ಕೆಂಪಾಗುತ್ತಾರೆ.

ಕಮಲ್ ವ್ಯಕ್ತಿತ್ವ ಮಾತು ನನಗೆ ತುಂಬಾ ಹಿಡಿಸಿತು

ನಾವಿಬ್ಬರೂ ಒಟ್ಟಿಗೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ಆಗ ನಮ್ಮಿಬ್ಬರ ನಡುವೆ ಅಷ್ಟೊಂದು ಸ್ನೇಹ ಇರಲಿಲ್ಲ. ಸಿನಿಮಾಗಳು ಮುಗಿದ ಬಳಿಕ ಸಹ ಸಂಪರ್ಕದಲ್ಲಿರುತ್ತಿರಲಿಲ್ಲ. ಬಳಿಕ ನಾವಿಬ್ಬರೂ ಕಲೆತದ್ದು 2004ರಲ್ಲಿ ನಡೆದ ಪ್ರಚಾರ ಕಾರ್ಯಕ್ರಮ ಒಂದರಲ್ಲಿ. ಆಗ ಕಮಲ್ ಜಿ ಸಹ ಒಂಟಿಯಾಗಿದ್ದರು. ಕಮಲ್ ಅವರ ವ್ಯಕ್ತಿತ್ವ, ಅವರ ಮಾತುಗಳು ನನಗೆ ತುಂಬಾ ಹಿಡಿಸಿದವು. ಕೆಲ ದಿನಗಳಲ್ಲಿ ಇಬ್ಬರೂ ಒಟ್ಟಿಗೆ ಇರಲು ನಿರ್ಣಯಿಸಿದೆವು.

ಶ್ರುತಿ, ಅಕ್ಷರಾ ನಮ್ಮಿಬ್ಬರ ಸಂಬಂಧವನ್ನು ಅರ್ಥಮಾಡಿಕೊಂಡಿದ್ದಾರೆ

ಶ್ರುತಿ, ಅಕ್ಷರ...ಇಬ್ಬರೂ ನಮ್ಮಿಬ್ಬರನ್ನೂ ಅರ್ಥಮಾಡಿಕೊಳ್ಳುವಷ್ಟು ದೊಡ್ಡವರಾಗಿದ್ದರು. ಅವರಿಬ್ಬರೂ ನನ್ನೊಂದಿಗೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ಕಷ್ಟನಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು. ನನ್ನ ಮಗು ಸುಬ್ಬುಲಕ್ಷ್ಮಿ ನಮ್ಮಿಬ್ಬರನ್ನೂ ಬಹಳ ವರ್ಷಗಳಿಂದ ನೋಡುತ್ತಾ ಬೆಳೆದಿದ್ದ ಕಾರಣ ಅವಳೂ ಹೊಂದಿಕೊಂಡಳು. ನಾನು ಬಯಸಿದ್ದ ಸುಖಕರ ಜೀವನ ಮತ್ತೆ ನನಗೆ ದಕ್ಕಿತು ಎಂದು ಹೇಳಿಕೊಂಡಿದ್ದಾರೆ.

ಪ್ರೀತಿ ಅನುರಾಗ ಇಲ್ಲದ ಕಡೆ ಸಂಬಂಧಗಳು ಉಳಿಯುವುದಿಲ್ಲ

ಸಿನಿಮಾಗಳಲ್ಲಿ ಬಿಜಿಯಾಗಿದ್ದ ಸಮಯದಲ್ಲೇ ಮದುವೆಯಾದೆ. ಮದುವೆಯಾದ ಬಳಿಕ ಸಿನಿಮಾಗಳಿಂದ ದೂರವಾದೆ. ವರ್ಷದಲ್ಲೇ ಸುಬ್ಬುಲಕ್ಷ್ಮಿ ಹುಟ್ಟಿದಳು. ಯಾವುದೇ ಸಂಬಂಧ ಗಟ್ಟಿಯಾಗಿರಬೇಕಾದರೆ ಒಬ್ಬರನ್ನೊಬ್ಬರು ಗೌರವಿಸುವ, ಇಷ್ಟಪಡುವುದು ಬಹಳ ಮುಖ್ಯ. ಅವು ಇಲ್ಲದ ಕಡೆ ಯಾವ ಸಂಬಂಧಗಳೂ ಉಳಿಯುವುದಿಲ್ಲ. ನನ್ನ ವೈವಾಹಿಕ ಬದುಕಿನಲ್ಲೂ ಪ್ರೇಮಾನುರಾಗಗಳು ಕಡಿಮೆಯಾದವು. ಆಗಲೇ ತನ್ನ ಕೂಸಿನೊಂದಿಗೆ ಒಂಟಿ ಬಾಳು ಆರಂಭಿಸಿದೆ. ಆಗ ನನ್ನ ಯೋಚನೆಯಲ್ಲಾ ಮಗುವಿಗೆ ಒಳ್ಳೆಯ ಜೀವನ ನೀಡುವುದಷ್ಟೇ ಆಗಿತ್ತು.

ಸ್ತನ ಕ್ಯಾನ್ಸರ್ ಜಯಿಸಿದ ಗೌತಮಿ

ಜೀವನ ಎಂದರೆ ಏರಿಳಿತಗಳು ಇದ್ದೇ ಇರುತ್ತವೆ. ಈ ವಿಷಯ ನನಗೆ ಅದಾಗಲೆ ಅರ್ಥವಾಗಿದೆ. ಎಲ್ಲವೂ ಆನಂದವಾಗಿದ್ದ ಸಮಯಸಲ್ಲಿ 2005ರಲ್ಲಿ ಸ್ತನ ಕ್ಯಾನ್ಸರ್ ಬಂತು. ಆಗ ಕಮಲ್ ಹಾಸನ್ 'ಮುಂಬೈ ಎಕ್ಸ್ ಪ್ರೆಸ್' ಶೂಟಿಂಗ್ ಗೆ ಹೋಗಿದ್ದರು. ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಹೇಳಿದೆ. ಊಹಿಸಿದಂತೆ ಸ್ತನಕ್ಯಾನ್ಸರ್ ಎಂದು ಗೊತ್ತಾಯಿತು. ಸುಮಾರು ಆರು ವರ್ಷಗಳ ಕಾಲ ಕಿಮೋಥೆರಪಿ ಚಿಕಿತ್ಸೆ ಪಡೆದೆ. 35 ಬಾರಿ ರೇಡಿಯೇಷನ್ ಥೆರಪಿ ಮಾಡಿಸಿಕೊಂಡೆ. ಆಸ್ಪತ್ರೆಗೆ ದಾಖಲಾದ ದಿನದಿಂದ ಕಮಲ್ ಜಿ ನನ್ನ ಜೊತೆಗೇ ಇದ್ದು ಧೈರ್ಯ ತುಂಬಿದರು.

ನನ್ನನ್ನು ನೋಡಿ ಮಗು ಭಯಬಿತ್ತು

ನಾನಿದ್ದ ಕೊಠಡಿಯಲ್ಲಿ ಮೂರು ಕ್ಯಾಮೆರಾಗಳನ್ನು ಇಟ್ಟೆವು. ನಾವು ಮಾತನಾಡಿಕೊಂಡ ಸಂಗತಿಗಳು, ನಮ್ಮ ಭಾವೋದ್ವೇಗಗಳನ್ನು ಅವು ಸೆರೆಹಿಡಿದವು. ಕ್ಯಾನ್ಸರ್ ಚಿಕಿತ್ಸೆಯ ಭಾಗವಾಗಿ ತೆಗೆದುಕೊಂಡು ಕಿಮೋಥೆರಪಿಯಿಂದ ನನ್ನ ಕೂದಲು ಉದುರಿತು. ತುಂಬಾ ಬಳಲಿದೆ. ಹೊಸತರಲ್ಲಿ ನನ್ನ ಮಗು ನನ್ನನ್ನು ನೋಡಿ ಭಯಬಿತ್ತು. ಕಮಲ್ ಮತ್ತು ನಾನು ಇಬ್ಬರೂ ಅವಳಿಗೆ ಅರ್ಥವಾಗುವಂತೆ ಹೇಳಿದೆವು. ಈಗ ಅವಳು ಚೆನ್ನಾಗಿ ಓದುತ್ತಿದ್ದಾಳೆ. ಈಗ ನನ್ನ ಗುರಿ ಅವಳನ್ನು ಚೆನ್ನಾಗಿ ಓದಿಸುವುದಷ್ಟೇ ಎಂದಿದ್ದಾರೆ.

ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಊಹಿಸಿರಲಿಲ್ಲ

ಇಂಜಿನಿಯರಿಂಗ್ ಸೀಟ್ ಗಾಗಿ ನನ್ನ ತಂದೆಯ ಜೊತೆ ಹೈದರಾಬಾದ್ ಗೆ ಹೋಗಿದ್ದೆ. ಅಲ್ಲಿ ವ್ಯಕ್ತಿಯೊಬ್ಬರು ನನ್ನನ್ನು ನೋಡಿ ಸಿನಿಮಾ ಒಂದರಲ್ಲಿ ಅಭಿನಯಿಸಲು ಕೇಳಿದರು. ಅದು ತುಂಬಾ ಚಿಕ್ಕ ಪಾತ್ರ. ಕೇಳಿದ್ದು ಬಂಧುಗಳೇ ಆಗಿದ್ದ ಕಾರಣ ಅಭಿನಯಿಸಿದೆ. ಆ ಸಣ್ಣ ಪಾತ್ರವೇ ನನ್ನನ್ನು ಹೀರೋಯಿನ್ ಮಾಡುತ್ತದೆ ಎಂದು ಊಹಿಸಿರಲಿಲ್ಲ.

ಅಪ್ಪ ಅಮ್ಮನ ಸಲಹೆ ಮೇರೆಗೆ ಬೆಳ್ಳಿಪರದೆಗೆ

ವಿಶಾಖಪಟ್ಟಣದಲ್ಲಿ ಗೀತಂ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೇರಿದೆ. ತರಗತಿಗಳಿಗೆ ಹೋಗುತ್ತಾ, ಓದುತ್ತಿರಬೇಕಾದರೆ ಎರಡು ಚಿತ್ರಗಳಲ್ಲಿ ಅವಕಾಶ ಬಂತು. ಸಿನಿಮಾ ವೃತ್ತಿಬದುಕಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದುಕೊಂಡಿರಲಿಲ್ಲ. ಏನು ಮಾಡಬೇಕು ಎಂದು ತಂದೆತಾಯಿ ಬಳಿ ಚರ್ಚಿಸಿದೆ. ಅಮ್ಮ ಒಂದೇ ಒಂದು ಮಾತು ಹೇಳಿದರು, "ನಿನಗೆ ಮೆರಿಟ್ ಸೀಟ್ ಸಿಕ್ಕಿದೆ...ಇದು ಎಲ್ಲರಿಗೂ ಸಾಧ್ಯವಾಗಲ್ಲ. ಸಿನಿಮಾ ಹೀರೋಯಿನ್ ಆಗುವ ಅವಕಾಶ ಕೂಡ ಕಡಿಮೆ ಮಂದಿಗೆ ಬರುತ್ತದೆ. ನಿನಗೇನು ಇಷ್ಟವೂ ಅದೇ ಮಾಡು. ನೀನು ಏನು ಮಾಡಿದರೂ ನಮಗಿಷ್ಟ" ಎಂದರು.

ಹಲವು ಆಸಕ್ತಿಯಿಂದ ಭಾಷೆಗಳನ್ನು ಕಲಿತೆ

ಬಳಿಕ ಸಾಕಷ್ಟು ಚಿತ್ರಗಳಲ್ಲಿ ಅವಕಾಶಗಳು ಬಂದವು. ಅಪ್ಪ ಅಮ್ಮ ಇಬ್ಬರೂ ಪ್ರಾಕ್ಟೀಸ್ ಬಿಟ್ಟು, ಆಸ್ಪತ್ರೆಯನ್ನು ಕ್ಲೋಸ್ ಮಾಡಿ ಚೆನ್ನೈಗೆ ಬಂದುಬಿಟ್ಟರು. ತೆಲುಗು, ಕನ್ನಡ (ಏಳು ಸುತ್ತಿನ ಕೋಟೆ, ಚಿಕ್ಕ ಯಜಮಾನ್ರು, ಚೆಲುವ ಮುಂತಾದವು), ಮಲಯಾಳಂ, ಹಿಂದಿ ಚಿತ್ರಗಳಲ್ಲಿ ಸಾಲು ಸಾಲು ಅವಕಾಶಗಳು ಬಂದವು. ಆಯಾ ಚಿತ್ರಗಳಲ್ಲಿ ಅಭಿನಯಿಸುವುದಷ್ಟೇ ಅಲ್ಲದೆ ಆ ಭಾಷೆಗಳನ್ನು ಆಸಕ್ತಿಯಿಂದ ಕಲಿತೆ.

ಎರಡೇ ಎರಡು ಗಂಟೆ ನಿದ್ದೆ ಮಾಡುತ್ತಿದ್ದೆ

ಆಯಾ ಭಾಷೆಗಳಲ್ಲಿ ಮಾತನಾಡುವುದಷ್ಟೇ ಅಲ್ಲದೆ ಬರೆಯುತ್ತೇನೆ. ತಮಿಳಿನಲ್ಲಾದರೆ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡೆ. ರಜನಿಕಾಂತ್ ಜೊತೆ ನಾಲ್ಕು ಚಿತ್ರಗಳಲ್ಲಿ ಅಭಿನಯಿಸಿದೆ. ಒಂದಾನೊಂದು ಕಾಲದಲ್ಲಿ ಎಷ್ಟು ಬಿಜಿಯಾಗಿ ಹೋದೆ ಎಂದರೆ ನಿದ್ದೆಗಾಗಿ ಕೇವಲ ಎರಡು ಗಂಟೆ ಮಾತ್ರ ಸಿಗುತ್ತಿತ್ತು. ಆ ರೀತಿ ಎಂಟು ವರ್ಷಗಳ ಕಾಲ ಕಳೆದುಬಿಟ್ಟೆ ಎನ್ನುತ್ತಾರೆ ಗೌತಮಿ.

ತಂದೆ ಬಗ್ಗೆ ಶ್ರುತಿ ಹಾಸನ್ ಏನಂತಾರೆ?

ನಮ್ಮ ತಂದೆಯವರಿಗೂ ಹಾಗೂ ಗೌತಮಿಗೂ ನಡುವಿನ ಸಂಬಂಧ ಬಗ್ಗೆ ನನಗೇನು ಅಭ್ಯಂತವಿಲ್ಲ. ನಮ್ಮ ಜೀವನದಲ್ಲಿ ಗೌತಮಿ ಬಂದದ್ದನ್ನು ತುಂಬಾ ಸಂತೋಷವಾಗಿ ಆಹ್ವಾನಿಸಿದ್ದೇವೆ. ನಮ್ಮ ತಂದೆ ಯಾವ ರೀತಿಯ ನಿರ್ಣಯ ತೆಗೆದುಕೊಂಡರೂ ನಾನು ಬೆಂಬಲಿಸುತ್ತೇನೆ ಎನ್ನುತ್ತಾರೆ ಶ್ರುತಿ ಹಾಸನ್. ನಮ್ಮ ತಂದೆ ನನಗೆ ರೋಲ್ ಮಾಡೆಲ್. ನಾನು ಚಿಕ್ಕಂದಿನಿಂದಲೂ ಅವರ ಅಭಿನಯ ನೋಡುತ್ತಲೇ ಬೆಳೆದವಳು. ನಟನೆ ಎಂದರೆ ಕಲಿತರೆ ಬರುವುದಿಲ್ಲ. ಅದು ನಮ್ಮಲ್ಲೇ ಇರುತ್ತದೆ ಎಂಬುದನ್ನು ಶ್ರುತಿ ಮತ್ತೆ ಮತ್ತೆ ಹೇಳುತ್ತಾರೆ.

English summary
Speaking about Kamal Haasan, Gouthami was reported saying “Several relationships like Friends, Lovers, Wife and Husband exist in our society, but I can’t name my relationship with Kamal Hassan. We have mutual respect for each other. Since 2005, she and acclaimed Kamal Haasan have been in a live-in relationship. She and Kamal have refused to marry each other, citing 'lack of faith in marriage' as the main reason.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada