»   » ಇಮ್ರಾನ್ ಸರ್ದಾರಿಯಾ ಮಲ್ಟಿ ಸ್ಟಾರರ್ ಚಿತ್ರಕ್ಕೆ ಸಜ್ಜು

ಇಮ್ರಾನ್ ಸರ್ದಾರಿಯಾ ಮಲ್ಟಿ ಸ್ಟಾರರ್ ಚಿತ್ರಕ್ಕೆ ಸಜ್ಜು

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ಹೊಸ ಪ್ರಯೋಗವೊಂದಕ್ಕೆ ಮತ್ತೆ ಒಳಗಾಗಲಿದೆ. ಬಹುತಾರಾಗಣದ ಸಿನಿಮಾವೊಂದು ಕನ್ನಡದಲ್ಲಿ ಬರುತ್ತಿದೆ. ಇದು ಅಪರೂಪವೇ ವಿಷಯವೇ ಸರಿ. ಸದ್ಯದಲ್ಲೇ ಅಂತಹ ಪ್ರಯತ್ನಕ್ಕೆ ಕೈಹಾಕಲಿದ್ದಾರೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಎಂಬ ಮಾತು ಗಾಂಧಿನಗರದ ಗಲ್ಲಿಯಲ್ಲಿ ಸುತ್ತಾಡುತ್ತಿದೆ.

ಅವರು ನಿರ್ದೇಶಿಸಲಿರುವ ಚಿತ್ರದಲ್ಲಿ ನಟರಾದ ದಿಗಂತ್, ಪ್ರಜ್ವಲ್ ದೇವರಾಜ್ ಹಾಗೂ ಲೂಸ್ ಮಾದ ಯೋಗೇಶ್ ನಾಯಕರಾಗಿ ನಟಿಸಲಿದ್ದಾರೆ. ಈ ಮೊದಲು ಸೂಪರ್ ಸ್ಟಾರ್ ಉಪೇಂದ್ರರನ್ನು ಇಮ್ರಾನ್ ಸರ್ದಾರಿಯಾ ನಿರ್ದೇಶಿಸಲಿದ್ದಾರೆಂದು ಸುದ್ದಿಯಾಗಿತ್ತು. ಆದರೆ ಆ ಪ್ರಾಜೆಕ್ಟ್ ಈಗ ಮುಂದಕ್ಕೆ ಹೋಗಿರುವ ಸುದ್ದಿ ಬಂದಿದೆ.

ಕಾರಣ, ನಟ ಉಪೇಂದ್ರ ಅವರೀಗ ಕಲ್ಪನಾ ಹಾರರ್ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ನಂತರ ಟೋಪಿವಾಲಾ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಅದು ಮುಗಿಯುವತನಕ ಉಪೇಂದ್ರರನ್ನು ಮಾತನಾಡಿಸುವಂತಿಲ್ಲ. ಹೀಗಾಗಿ ಇಮ್ರಾನ್ ಈ ಪ್ರಾಜೆಕ್ಟ್ ಮೊದಲು ಶುರುಮಾಡಲಿದ್ದಾರೆ. ನಂತರ ಉಪೇಂದ್ರ ಚಿತ್ರ ಬರಲಿದೆಯಂತೆ.

ಈ ಮಧ್ಯೆ, ಕ್ರೇಜಿಸ್ಟಾರ್ ಚಿತ್ರದಲ್ಲಿ ನಟಿಸಿದ್ದ ಯುವನಟ ಸೂರ್ಯ ಅವರನ್ನು ನಾಯಕರನ್ನಾಗಿಸಿ ಇಮ್ರಾನ್ ಚಿತ್ರ ನಿರ್ದೇಶನಕ್ಕೆ ಅಡಿಯಿಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆ ಸುದ್ದಿ ಈಗ ತಣ್ಣಗಾಗಿದೆ. ಸೂರ್ಯ ಬಾಲಿವುಡ್ ಕಡೆ ಮುಖ ಮಾಡಿದ್ದರಿಂದಲೋ ಏನೋ, ಅವರ ಹೆಸರು ಈಗ ಇಲ್ಲಿ ಕೇಳಿಬರುತ್ತಿಲ್ಲ.

ಮಲ್ಟಿ ಸ್ಟಾರ್ ಚಿತ್ರ ನಿರ್ದೇಶನಕ್ಕೆ ಕೈ ಹಾಕಿರುವ ಇಮ್ರಾನ್, ಈ ಚಿತ್ರದ ನಿರ್ಮಾಣಕ್ಕೆ ಕೆ. ಮಂಜು ಅವರನ್ನು ಆರಿಸಿಕೊಂಡಿದ್ದಾರೆ. ಇಮ್ರಾನ್ ಕಥೆ ಕೇಳಿರುವ ಮಂಜು ಖುಷಿಯಾಗಿ ಈ ಚಿತ್ರದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ದಿಗಂತ್, ಪ್ರಜ್ವಲ್, ಯೋಗೇಶ್‌ ಅವರನ್ನು ಸಂಪರ್ಕಿಸಲಾಗಿದೆ. ಅವರು ಒಪ್ಪಿಕೊಂಡಿದ್ದಾರೆ ಎಂಬುದು ಸಿಕ್ಕ ಮಾಹಿತಿ. 

ಈ ಚಿತ್ರದ ಮೂವರು ನಾಯಕರಿಗೆ ನಾಯಕಿಯರು ಯಾರು, ಉಳಿದ ಪಾತ್ರವರ್ಗದಲ್ಲಿ ಯಾರಿದ್ದಾರೆ ಎಂಬೆಲ್ಲ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಈ ಚಿತ್ರಕ್ಕೆ ಸಂಗೀತ ವಿ. ಹರಿಕೃಷ್ಣ ನೀಡಲಿದ್ದಾರೆ ಎನ್ನೋದು ಪಕ್ಕಾ ಆಗಿದೆ. ಉಳಿದ ತಾಂತ್ರಿಕ ವರ್ಗದ ಆಯ್ಕೆಗಳು ಇನ್ನಷ್ಟೇ ನಡೆಯಬೇಕಾಗಿದೆ. ಚಿತ್ರಕ್ಕೆ ಮುಹೂರ್ತವಿನ್ನೂ ಫಿಕ್ಸ್ ಆಗಿಲ್ಲ.

ಬಂದ ಮಾಹಿತಿ ಪ್ರಕಾರ, ಬರಲಿರುವ ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಇದು ಸ್ವಮೇಕ್. ಈ ಚಿತ್ರ ರೀಮೇಕ್ ಅಲ್ಲ ಎಂದು ಸ್ಪಷ್ಟಪಡಿಸಿರುವ ಇಮ್ರಾನ್, ಶೂಟಿಂಗಿಗೆಂದು ವಿದೇಶಗಳಿಗೆ ಹೋಗುವಾಗ ವಿಮಾನದಲ್ಲಿ ಬಂದ ಯೋಚನೆಗಳಿಗೆ ಕಥೆ, ಚಿತ್ರಕಥೆ ರೂಪ ಕೊಟ್ಟಿದ್ದಾರಂತೆ. ಸಂಭಾಷಣೆಯನ್ನೂ ಸ್ವತಃ ಅವರೇ ಬರೆಯುತ್ತಿದ್ದಾರೆ ಎಂಬುದು ವಿಶೇಷ.

ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಇಮೇಜ್ ಹೊಂದಿರುವ ದಿಗಂತ್, ಮಾಸ್ ಇಮೇಜ್ ಯೋಗೇಶ್ ಹಾಗೂ ಎರಡೂ ಕಡೆ ಸಲ್ಲುವ ಪ್ರಜ್ವಲ್ ನಟಿಸಲಿದ್ದಾರೆ. ಈ ಮೂವರೂ ನನ್ನ ಗೆಳೆಯರು. ಹೀಗಾಗಿ, ಅವರನ್ನಿಟ್ಟುಕೊಂಡು ಸಿನಿಮಾ ನಿರ್ದೇಶಿಸಲಿದ್ದೇನೆ. ಈ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದೇನೆ" ಎಂದಿದ್ದಾರೆ ಸರ್ದಾರಿಯಾ.

ಒಟ್ಟಿನಲ್ಲಿ, ಈ ಚಿತ್ರ ನಿರ್ದೇಶನ ಮಾಡುವ ಮೂಲಕ ನಿರ್ದೇಶನಕ್ಕೆ ಇಮ್ರಾನ್ ಸರ್ದಾರಿಯಾ ಅಡಿಯಟ್ಟರೆ, ಅವರೂ ಕೂಡ ನೃತ್ಯ ನಿರ್ದೇಶಕರಾದ ಹರ್ಷ, ಪ್ರಭುದೇವ, ಫರ್ಹಾ ಖಾನ್, ಅಹ್ಮದ್ ಖಾನ್, ಗಣೇಶ್ ಆಚಾರ್ಯ ಸಾಲಿಗೆ ಸೇರಿದಂತಾಗುತ್ತದೆ. ಆ ದಿನ ಯಾವಾಗ ಎಂಬುದಷ್ಟೇ ಸದ್ಯಕ್ಕಿರುವ ಸಸ್ಪೆನ್ಸ್. (ಒನ್ ಇಂಡಿಯಾ ಕನ್ನಡ)

English summary
Choreographer Imran Sardaria to directs a Multi Starer movie in Kannada with Diganth, Prajwal and Yogesh. Heroines are not selected and Launch date also not yet fixed. Before this, there was a news buzz that he directs Super Star Upendra. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada