twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಪರ-ವಿರೋಧ ಸಂಶಯಕ್ಕೆ ಸುರೇಶ್ ಉತ್ತರ

    By Mahesh
    |

    ಕರ್ನಾಟಕದಲ್ಲಿನ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಜ್ಞಾನ ವಾಹಿನಿಗಳಾದ ಡಿಸ್ಕವರಿ, ನ್ಯಾಟ್-ಜಿಯೊ, ಅನಿಮಲ್ ಪ್ಲಾನೆಟ್ ಗಳಾಗಲೀ, ಮಕ್ಕಳ ಅಚ್ಚುಮೆಚ್ಚಿನ ಡಿಸ್ನಿ, ಕಾರ್ಟೂನ್ ನೆಟ್ವರ್ಕ್, ಪೋಗೊ ಮುಂತಾದ ವಾಹಿನಿಗಳಾಗಲೀ, ಇಲ್ಲವೇ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲೀ ಕನ್ನಡಿಗರು ಕನ್ನಡದಲ್ಲಿ ನೋಡಿ ಸವಿಯಲಾಗದಂತಹ ಪರಿಸ್ಥಿತಿ ಹುಟ್ಟಿದೆ ಎನ್ನುತ್ತಿದ್ದಾರೆ ಡಬ್ಬಿಂಗ್ ಪರವಾದಿಗಳು

    ಕರ್ನಾಟಕದಲ್ಲಿನ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಜ್ಞಾನ ವಾಹಿನಿಗಳು, ಇಲ್ಲವೇ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲೀ ಕನ್ನಡಿಗರು ಕನ್ನಡದಲ್ಲಿ ನೋಡಿ ಸವಿಯಲಾಗದಂತಹ ಪರಿಸ್ಥಿತಿ ಹುಟ್ಟಿದೆ ಎನ್ನುತ್ತಿದ್ದಾರೆ ಡಬ್ಬಿಂಗ್ ಪರವಾದಿಗಳು.

    ಇದೇ ಧಾಟಿಯಲ್ಲಿ ಟೆಕ್ಕಿ ಮನು ಗೊರೂರು ಅವರು ಡಬ್ಬಿಂಗ್ ವಿರೋಧಿಗಳಿಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಕೇಳಿದ ಕೆಲವು ಪ್ರಶ್ನೆಗಳಿಗೆ ಖ್ಯಾತ ಚಿತ್ರಕರ್ಮಿ ಬಿ. ಸುರೇಶ ಅವರು ಉತ್ತರಿಸಿದ್ದಾರೆ. ಇವು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರ. ಈ ಕುರಿತು ಸಾರ್ವತ್ರಿಕ ಪ್ರತಿಕ್ರಿಯೆ ನೀವು ಬಯಸಿದರೆ ನಾನು ಉತ್ತರಿಸುವುದು ಕಷ್ಟವಾದೀತು ಎಂದು ಷರಾ ಕೂಡಾ ಹಾಕಿದ್ದಾರೆ.

    'ನಾನು ಹೇಳಿರುವ ಎಲ್ಲಾ ಮಾತುಗಳೂ ಕೇವಲ ನನ್ನ ವೈಯಕ್ತಿಕ ನೆಲೆಯದು. ಇದನ್ನು ಸಾರ್ವತ್ರಿಕ ನೆಲೆಯಲ್ಲಿ ನೀವು ಗಮನಿಸಬೇಡಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ನಾನು ನಿಮ್ಮ ಎಲ್ಲಾ ಅಭಿಪ್ರಾಯಗಳನ್ನೂ ಗೌರವಿಸುತ್ತೇನೆ. ಆದರೆ ವೈಯಕ್ತಿಕವಾಗಿ ಡಬ್ಬಿಂಗ್ ಅನ್ನು ವಿರೋಧಿಸುತ್ತೇನೆ' ಎಂದಿರುವ ಬಿ.ಸುರೇಶ ಅವರ ಉತ್ತರಗಳು ಮುಂದಿವೆ ತಪ್ಪದೇ ಓದಿ...

    ಡಬ್ಬಿಂಗ್ ಪರ-ವಿರೋಧ ಸಂಶಯಕ್ಕೆ ಸುರೇಶ್ ಉತ್ತರ

    ಡಬ್ಬಿಂಗ್ ಪರ-ವಿರೋಧ ಸಂಶಯಕ್ಕೆ ಸುರೇಶ್ ಉತ್ತರ

    ಪ್ರಶ್ನೆ 1: ಡಬ್ಬಿಂಗ್ ಬಂದರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅನ್ನೋ ನೀವು, ಯಾವ ರೀತಿ ಹಾಳಾಗುತ್ತೆ ಅನ್ನೋ ವಿವರಣೆ ಕೊಡಿ.. ನಮ್ಮ ಭಾಷೆಲಿ ನೋಡಿದ್ರೆ ಸಂಸ್ಕೃತಿ ಹಾಳಾಗುತ್ತೆ ಮೂಲ ಭಾಷೆಲೇ ನೋಡಿದ್ರೆ ಸಂಸ್ಕೃತಿ ಉಳಿಯುತ್ತಾ ?

    ಉತ್ತರ: ಡಬ್ಬಿಂಗ್ ಆದ ಸಿನಿಮಾಗಳು ಬಂದರೆ ಸಂಸ್ಕೃತಿ ಹಾಳಾಗುತ್ತೆ ಅನ್ನೋದು ಖಂಡಿತಾ ಸುಳ್ಳು. ಜಗತ್ತಿನಲ್ಲಿ ಯಾರೂ ಯಾವತ್ತೂ ಕೆಟ್ಟ ಸಿನಿಮಾ ಮಾಡುತ್ತೇವೆ ಎಂದು ಸಿನಿಮಾ ಮಾಡುವುದಿಲ್ಲ. ಆದರೆ ಡಬ್ಬಿಂಗ್ ಸಂಸ್ಕೃತಿಯೇ ಸರಿಯಾದುದಲ್ಲ. ಚಿತ್ರವೊಂದನ್ನು ಅದರ ಮೂಲ ವೃತ್ತಿಯಲ್ಲಿ ನೋಡುವುದೇ ಸರಿಯದ ಕ್ರಮ. ಯಾವುದೋ ಭಾಷೆಯಲ್ಲಿ ತಯಾರಾದುದಕ್ಕೆ ಮತ್ತೊಂದು ಭಾಷೆಯ ಪೋಷಾಕು ತೊಡಿಸುವುದು ಅಕ್ರಮ. ಒಬ್ಬ ಚಿತ್ರ ತಯಾರಾಕ ಕತೆಯನ್ನು ಆಯ್ಕೆ ಮಾಡಿಕೊಂಡ ಹಾಗೆ ತನ್ನ ಸಿನಿಮಾಕ್ಕೆ ಭಾಷೆಯನ್ನೂ ಆಯ್ಕೆ ಮಾಡಿಕೊಂಡಿರುತ್ತೇನೆ. ಹಾಗೆ ಯಾವುದೋ ಭಾಷಾವಲಯದಲ್ಲಿ ತಯಾರಾದ ಕೃತಿಗೆ ಮತ್ತೊಂದು ಭಾಷೆಯನ್ನು ಸೇರಿಸುವುದು ಮೂಲ ತಯಾರಾಕನ ಕೃತಿಗೆ ಮಾಡುವ ಅನ್ಯಾಯ ಅಥವಾ ಅತ್ಯಾಚಾರ ಎಂಬುದು ನನ್ನ ಭಾವನೆ.
    ಬೇರೆ ದೇಶಗಳಲ್ಲೂ ಡಬ್ಬಿಂಗ್ ಇದೆ

    ಬೇರೆ ದೇಶಗಳಲ್ಲೂ ಡಬ್ಬಿಂಗ್ ಇದೆ

    ಪ್ರಶ್ನೆ 2: ಕರ್ನಾಟಕ ಬಿಟ್ಟು ಬೇರೆ ಎಲ್ಲ ರಾಜ್ಯಗಳಲ್ಲೂ ಮತ್ತು ದೇಶಗಳಲ್ಲೂ ಡಬ್ಬಿಂಗ್ ಇದೆ, ಅಲ್ಲೆಲ್ಲ ಸಂಸ್ಕೃತಿ ಹಾಳಗಿಹೋಗಿದ್ಯ ಅಥ್ವಾ ಅಲ್ಲೆಲ್ಲ ಸಂಸ್ಕೃತಿನೇ ಇಲ್ಲವಾ??

    ಉತ್ತರ : ಯಾವುದೇ ಪ್ರಾದೇಶಿಕ ಭಾಷೆಗೆ ಮತ್ತೊಂದು ಭಾಷೆಯಲ್ಲಿ ತಯಾರಾದ ಸಿನಿಮಾ, ಧಾರಾವಾಹಿ ಡಬ್ ಆಗುವುದನ್ನು ನಾನು ವಿರೋಧಿಸುತ್ತೇನೆ. ಯಾವುದೇ ಸಿನಿಮಾ ಅದು ತಯಾರಾದ ಮೂಲ ಸ್ವರೂಪದಲ್ಲೇ ಪ್ರೇಕ್ಷಕರ ಬಳಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ
    ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತರಣೆ

    ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತರಣೆ

    ಪ್ರಶ್ನೆ 3: ನಮ್ಮ ರಾಜ್ಯದಲ್ಲಿ ಪರಭಾಷಾ ಚಿತ್ರಗಳಿಂದ ಕನ್ನಡ ತನ ಮರೆ ಆಗುತ್ತಿದೆ, ಡಬ್ಬಿಂಗ್ ಬಂದ್ರೆ ಬೇರೆ ಚಿತ್ರಗಳನ್ನ ಕನ್ನಡದಲ್ಲೇ ನೋಡಿದ್ರೆ ಕನ್ನಡ ಸಿನಿಮಾ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುವುದಕ್ಕೆ ಸಹಾಯ ಆಗಲ್ವಾ? ಮತ್ತು ಸ್ಪರ್ಧಾತ್ಮಕ ಚಿತ್ರಗಳು ಬರೋದಕ್ಕೆ ಸಹಕಾರಿಯಾಗಲ್ವಾ??

    ಉತ್ತರ : ಪರಭಾಷಾ ಚಿತ್ರಗಳಿಂದ ಕನ್ನಡತನ ಮರೆಯಾಗುತ್ತದೆ ಎಂಬುದು ಸತ್ಯವಾಗಿದ್ದರೆ ನಾನೂ ನೀವು ಈಗ ಕನ್ನಡದಲ್ಲಿ ಸಂವಾದ ಮಾಡುವುದೇ ಸಾಧ್ಯವಾಗುತ್ತಾ ಇರಲಿಲ್ಲ. ಯಾವುದೋ ಭಾಷೆಯ ಸಿನಿಮಾ ಕನ್ನಡಕ್ಕೆ ಡಬ್ ಆಗುವುದರಿಂದ ಕನ್ನಡದ ಮಾರುಕಟ್ಟೆ ವಿಸ್ತರಣೆ ಆಗುವುದು ಮಹಾ ಸುಳ್ಳು. ಕನ್ನಡದ ಮಾರುಕಟ್ಟೆಯ ವಿಸ್ತರಣೆಗೆ ಮಾಡಬೇಕಾದ ಕೆಲಸಗಳೇ ಬೇರೆಯ ಬಗೆಯದು. ನಮ್ಮ ಮಾರುಕಟ್ಟೆಯ ವಿಸ್ತರಣೆಯನ್ನು ಪರಭಾಷೆಯ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡುವುದಕ್ಕೆ ತಳುಕು ಹಾಕುತ್ತಾ ಇರುವುದೇ ತಪ್ಪು. ಡಬ್ ಆಗಿ ಯಾವುದೇ ಬಾಷೆಗೆ ಯಾವುದೇ ಸಿನಿಮಾ ಬಂದರೂ ಅದು ಯಾರಿಗೂ ಯಾವತ್ತಿಗೂ ಸ್ಪರ್ಧೆಯಾಗುವುದಿಲ್ಲ. ಯಾಕೆಂದರೆ. ಡಬ್ಬಿಂಗ್ ಎನ್ನುವುದು ಕೃತ್ರಿಮ, ಕೃತಕ. ಅಂತಹುದನ್ನು ಯಾವುದೇ ರಸಿಕ ನೋಡುಗ ಮೆಚ್ಚಿಕೊಳ್ಳಲಾರ ಎಂಬುದು ಅದಾಗಲೇ ನಾಡಿನಾದ್ಯಂತ ಸಾಕ್ಷಿ ಸಮೇತ ತಿಳುವಳಿಕೆ ಮೂಡಿಸಿದೆ. (ಈ ಮಾತಿಗೆ ಕೆಲವು ಸಿನಿಮಾಗಳು ಅಪವಾದ ಅಷ್ಟೆ.) ಯಾವುದೇ ಮೂಲ ಕೃತಿಯ ಅಭಿನಯವನ್ನು ಆಯಾ ಭಾಷೆಯಲ್ಲಿ ನೋಡಿದಾಗ ಮಾತ್ರ ಅದು ಪರಿಪೂರ್ಣ... ಅದಕ್ಕೆ ಬೇರೆಯ ಭಾಷೆಯನ್ನು ಬೇರೆಯ ದನಿಯನ್ನು ಜೋಡಿಸುವುದು ಮೂಲ ಕೃತಿಯಲ್ಲಿ ಅಭಿನಯ ಮಾಡಿದವನಿಗೆ ಆಗುವ ಅಪಚಾರ.

    ಕನ್ನಡದಲ್ಲಿ ಬಹುತೇಕ ಸಿನೆಮಾಗಳು ರೀಮೇಕ್

    ಕನ್ನಡದಲ್ಲಿ ಬಹುತೇಕ ಸಿನೆಮಾಗಳು ರೀಮೇಕ್

    ಪ್ರಶ್ನೆ 4: ಕನ್ನಡದಲ್ಲಿ ಬರುತ್ತಿರುವ ಬಹುತೇಕ ಸಿನೆಮಾಗಳು ರೀಮೇಕ್, ಇದಕ್ಕೆ ನಿಮ್ಮ ವಿರೋಧವೇಕಿಲ್ಲ?? ಅಥವಾ ರೀಮೇಕ್ ಬೆಳೆಸುವುದಕ್ಕೋಸ್ಕರ ಡಬ್ಬಿಂಗ್ ವಿರೋಧಿಸುತ್ತಿದ್ದೀರ??

    ಉತ್ತರ: ಕನ್ನಡದಲ್ಲಿ ಶೇಕಡಾ 70ರಷ್ಟು ಕಾರ್ಯಕ್ರಮಗಳು ರಿಮೇಕ್ - ಪುನರವತರಣಿಕೆ ಆಗುತ್ತಾ ಇದೆ. ಇದು ಖಂಡಿತಾ ಮೆಚ್ಚತಕ್ಕ ಅಂಶವಲ್ಲ. ಅದನ್ನು ತಪ್ಪಿಸುವ ಹಾದಿಯಲ್ಲಿ ಕನ್ನಡಕ್ಕಾಗಿಯೇ ತಯಾರಾದ ಸ್ವತಂತ್ರ ಕತೆಗಳು ಸ್ವತಂತ್ರ ಸಿನಿಮಾ ಧಾರಾವಾಹಿಗಳು ಯಶಸ್ವಿಯಾಗುವುದೊಂದೇ ಮಾರ್ಗ. ಆ ಹಾದಿಯಲ್ಲಿ ಕಳೆದ ವರ್ಷ ಕನ್ನಡ ಸಿನಿಮಾದಲ್ಲಿ ಲೂಸಿಯಾ, ಬೊಂಬೆಗಳ ಲವ್, ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಮುಂತಾದ ಅನೇಕ ಸಿನಿಮಾಗಳು ಯಶಸ್ವಿಯಾಗಿದೆ.

    ಮುಂಬರುವ ದಿನಗಳಲ್ಲಿ ಉಳಿದವರು ಕಂಡಂತೆ ಮುಂತಾದ ಅದ್ಭುತ ಪ್ರಯೋಗಗಳು ಬರುತ್ತಾ ಇವೆ. ಇಂತಹ ಮೂಲ ಕೃತಿಗಳ ಯಶಸ್ಸು ಪುನರವತರಣಿಕೆ ಮಾಡುವವರಿಗೆ ಪಾಠ ಆಗುತ್ತದೆ ಎಂದು ನಾನು ಭಾವಿಸುತ್ತೇನೆ. ಪುನರವತರಣಿಕೆಯನ್ನು ಬೆಳೆಸುವುದಕ್ಕಾಗಿ ಡಬ್ಬಿಂಗ್ನ ಯಾರೂ ವಿರೋಧಿಸುತ್ತಾ ಇಲ್ಲ ಎಂದು ನನ್ನ ಭಾವನೆಯಾಗಿದೆ. ಆದರೆ ಪುನರವತರಣಿಕೆಯೆಂಬುದು ನಿಜವಾದ ಅರ್ಥದಲ್ಲಿ ಸಾಹಿತ್ಯ ಕೃತಿಯೊಂದರ ಅನುವಾದದ ಹಾಗೆ ಎಂಬ ಕ್ರಮದಲ್ಲಿ ಡಬ್ಬಿಂಗ್ಗಿಂತ ಉತ್ತಮ. ಡಬ್ಬಿಂಗ್ ಖಂಡಿತಾ ಅನುವಾದವಲ್ಲ.

    ಡಿಸ್ಕವರಿ, ನ್ಯಾಶನಲ್ ಜಿಯೊಗ್ರ್ಯಾಫಿಕ್ ಕನ್ನಡಕ್ಕೆ ಡಬ್

    ಡಿಸ್ಕವರಿ, ನ್ಯಾಶನಲ್ ಜಿಯೊಗ್ರ್ಯಾಫಿಕ್ ಕನ್ನಡಕ್ಕೆ ಡಬ್

    ಪ್ರಶ್ನೆ 5: ಡಿಸ್ಕವರಿ, ನ್ಯಾಶನಲ್ ಜಿಯೊಗ್ರ್ಯಾಫಿಕ್ ಅಂತಹ ವಾಹಿನಿಗಳು ಕನ್ನಡಕ್ಕೆ ಡಬ್ ಆದರೆ ಪ್ರತಿಯೊಬ್ಬರಿಗೂ ಪ್ರಪಂಚದ ಎಷ್ಟೋ ವಿಸ್ಮಯಗಳನ್ನ ತಿಳಿಯುವುದಕ್ಕೆ ಸಹಾಯ ಆಗತ್ತೆ ಅದಕ್ಕೆ ಏಕೆ ನೀವ್ ತಡೆ ಹಾಕ್ತಾ ಇದ್ದೀರಾ??

    ಉತ್ತರ: ಯಾವುದೇ ಜ್ಞಾನವಾಹಿನಿಗಳನ್ನು ಕನ್ನಡದಲ್ಲಿ ನೋಡುವುದು ಸರಿಯಾದ ಕ್ರಮ. ನೀವು ಮೇಲೆ ತಿಳಿಸಿದ ಯಾವುದೇ ವಾಹಿನಿಯ ಕಾರ್ಯಕ್ರಮಗಳನ್ನು ಯಾರೂ ತಡೆದಿಲ್ಲ. ಆ ವಾಹಿನಿಯವರು ಕರ್ನಾಟಕದಲ್ಲಿ ಡಬ್ಬಿಂಗ್ಗೆ ಅವಕಾಶವಿಲ್ಲ ಎಂಬ ಪೊಳ್ಖು ಉತ್ತರ ನೀಡುತ್ತಾ ಇದ್ದಾರೆ. ಆದರೆ ದೇಶೀಯ ಮಟ್ಟದಲ್ಲಿಯೇ ಆ ವಾಹಿನಿಗಳು ತಾವು ಹಾಕಿರುವ ಹಣವನ್ನು ಪಡೆಯುವುದು ಸಾಧ್ಯವಾಗಿಲ್ಲ. ಹೀಗಾಗಿ ಪ್ರಾದೇಶಿಕ ಭಾಷೆಗಳ ಅಗತ್ಯವನ್ನು ಪೂರೈಸಲು ಮತ್ತೆ ಹಣ ಹೂಡಲು ಆ ಜನ ಹಿಂಜರಿದಿದ್ದಾರೆ. ಆದರೆ ಕನ್ನಡಿಗರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವಾಗ ಮಾತ್ರ ಮತ್ಯಾವುದೋ ಕಾರಣ ಕೊಟ್ಟು ತಪ್ಪಿಸಿಕೊಳ್ಳುತ್ತಾ ಇದ್ದಾರೆ. ಅಷ್ಟೆ. ಈಗಾಗಲೇ ಯೂಜಿಸಿ ತಯಾರಿಸುವ ಎಲ್ಲಾ ವಿದ್ಯಾಭ್ಯಾಸದ ಸಾಕ್ಷ್ಯಚಿತ್ರಗಳು ಡಬ್ ಆಗಿಯೇ ನಮ್ಮ ವಿದ್ಯಾರ್ಥಿಗಳಿಗೆ ಸಿಗುತ್ತಾ ಇದೆ.

    ಹಾಗೆಯೇ ನೀವು ತಿಳಿಸಿದ ವಾಹಿನಗಳ ಕಾರ್ಯಕ್ರಮಗಳು ಸಹ ಕನ್ನಡಿಗರಿಗೆ ಲಭ್ಯವಾಗುವುದು ಸಾಧ್ಯ. ಆದರೆ ಪೂರ್ಣಾವಧಿ ಕನ್ನಡ ಕಾರ್ಯಕ್ರಮಗಳನ್ನು ಮಾಡುತ್ತಾ ಇರುವ ವಾಹಿನಿಗಳೇ ದಶಕಗಳು ಕಳೆದರೂ ಈ ವರೆಗೆ ತಾವು ತೊಡಗಿಸಿದ ಹಣವನ್ನು ಹಿಂಪಡೆದಿಲ್ಲ. ಹೀಗಿರುವಾಗ ಮತ್ತೊಂದು ವಾಹಿನಿಯವರು ಡಬ್ ಮಾಡಿದ ಕಾರ್ಯಕ್ರಮ ಮಾಡಲು ಹಣ ಹೂಡುವುದು ಕಷ್ಟ ಎಂಬುದು ಕಳೆದ ಮುವ್ವತ್ತು ವರ್ಷಗಳಿಂದ ಈ ಉದ್ಯಮದಲ್ಲಿಯೇ ಇರುವವನಾಗಿ ನನ್ನ ಭಾವನೆ.

    ಕನ್ನಡ ಮಕ್ಕಳ ಮನೋರಂಜನೆಗೆ ಸಹಕಾರಿ

    ಕನ್ನಡ ಮಕ್ಕಳ ಮನೋರಂಜನೆಗೆ ಸಹಕಾರಿ

    ಪ್ರಶ್ನೆ 6: ಕಾರ್ಟೂನ್ ನೆಟ್‌ವರ್ಕ್, ಪೋಗೋ ವಾಹಿನಿಗಳು ಡಬ್ ಅಗೋದ್ರಿಂದ ಕನ್ನಡ ಮಕ್ಕಳ ಮನೋರಂಜನೆಗೆ ಸಹಕಾರಿಯಾಗುತ್ತೆ ಆದ್ರೆ ಏಕೆ ನಿಮ್ಮ ವಿರೋಧ??

    ಉತ್ತರ : ನೀವು ತಿಳಿಸಿದ ಇಂತಹ ಕಾರ್ಯಕ್ರಮಗಳನ್ನೇ 24 ಗಂಟೆಗಳ ಕಾಲ ಪ್ರಸಾರ ಮಾಡುವ ಚಿಂಟು ವಾಹಿನಿಯನ್ನು ಯಾರೂ ವಿರೋಧಿಸಿಲ್ಲ. ಇನ್ನು ನೀವು ಹೇಳಿದ ವಾಹಿನಿಯನ್ನು ಯಾರಾದರೂ ಯಾಕೆ ವಿರೋಧಿಸುತ್ತಾರೆ. ಆ ವಾಹಿನಿಯವರು ವ್ಯಾಪಾರದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಬೇಕಷ್ಟೆ. ಆ ತೀರ್ಮಾನವನ್ನು ನಾವು ಒತ್ತಡ ಹೇರಿ ತರುವುದಕ್ಕೆ ಸಾಧ್ಯವಿದೆ.
    ಸಿನಿಮಾ ನೋಡುವ ಮಂದಿ ಗ್ರಾಹಕರಲ್ಲ?

    ಸಿನಿಮಾ ನೋಡುವ ಮಂದಿ ಗ್ರಾಹಕರಲ್ಲ?

    ಪ್ರಶ್ನೆ 7: ಕರ್ನಾಟಕದಲ್ಲಿ ಸಿನಿಮಾ ನೋಡುವ ಮಂದಿ ಗ್ರಾಹಕರಲ್ಲ, ಹಾಗಾಗಿ ಕನ್ನಡಕ್ಕೆ ಡಬ್ಬಿಂಗ್ ಕೇಳೋದು ಹಕ್ಕಲ್ಲ ಅಂತ ವಾದ ಮಾಡ್ತೀರಾ, ನಾವು ಗ್ರಾಹಕರಲ್ಲದೆ ಮತ್ತೇನು, ನಮಗೆ ಪುಕ್ಸಟ್ಟೆ ನಿಮ್ಮ ಸಿನಿಮಾ ತೋರಿಸ್ತಿರಾ??

    ಉತ್ತರ : ಕರ್ನಾಟಕ ಮಾತ್ರವಲ್ಲ ಜಗತ್ತಿನಾದ್ಯಂತ ಸಿನಿಮಾ ನೋಡುವವ ಪ್ರೇಕ್ಷಕ. ರಸಿಕ connisuer... ಆತನನ್ನು ಗ್ರಾಹಕ ಎಂದು ಕರೆಯುವದು ನಂದಿಕೇಶ್ವರನ ಅಭಿನಯ ದರ್ಪಣದಲ್ಲಿ ಬರುವ ರಸನಿಷ್ಪತ್ತಿ ಮತ್ತು ರಸಿಕಜನ ಎಂಬ ವಿವರಣೆಗೆ ವಿರುದ್ಧ. ಪ್ರೇಕ್ಷಕ, ನೋಡುಗನನ್ನ ಮನರಂಜನೆಯನ್ನು ದುಡ್ಡು ಕೊಟ್ಟು ಪಡೆಯುತ್ತಾ ಇದ್ದಾನೆ ಎಂಬ ಕಾರಣಕ್ಕೆ ಗ್ರಾಹಕನ ಮಟ್ಟಕ್ಕೆ ಇಳಿಸುವುದು ಸರಿಯಲ್ಲ.
    ಆಗ ಕನ್ನಡ ಸಿನಿಮಾ ರಂಗಕ್ಕೆ ಒಂದು ನೆಲೆಬೇಕಿತ್ತು

    ಆಗ ಕನ್ನಡ ಸಿನಿಮಾ ರಂಗಕ್ಕೆ ಒಂದು ನೆಲೆಬೇಕಿತ್ತು

    ಪ್ರಶ್ನೆ 8: 40 ವರ್ಷಗಳ ಹಿಂದೆ ಡಬ್ಬಿಂಗ್ ನಿಲ್ಲಿಸಿದಾಗ ಅದಕ್ಕೆ ಒಂದು ಅರ್ಥ ಇತ್ತು, ಕನ್ನಡ ಸಿನಿಮಾ ರಂಗಕ್ಕೆ ಒಂದು ನೆಲೆಬೇಕಿತ್ತು ಆದ್ರೆ ಈಗ ಸಾಕಷ್ಟು ಬೆಳವಣಿಗೆ ಆಗಿದೆ. ಯಾವ ಕ್ಷೇತ್ರಕ್ಕೆ ನಿಮಗೆ ಕೊಟ್ಟಿರುವಷ್ಟು ಪ್ರೋತ್ಸಾಹ ಕೊಟ್ಟಿದಾರೆ??

    ಉತ್ತರ : ನಲವತ್ತು ವರ್ಷಗಳಲ್ಲ... ಅದೆಷ್ಟೇ ವರ್ಷಗಳಲ್ಲಿ ಯಾವುದೇ ದೃಶ್ಯಮಾಧ್ಯಮದಲ್ಲಿ ತಯಾರಾದ ಕೃತಿಯನ್ನು ಮೂಲ ಭಾಷೆಯಲ್ಲಿ ನೋಡುವುದು ಅದನ್ನು ತಯಾರು ಮಾಡುವವನಿಗೆ ತೋರುವ ಗೌರವ. ಹಾಗಾಲ್ಲದೆ ಆ ಮೂಲ ಕೃತಿಗೆ ಬೇರೆಯ ಭಾಷೆಯ ಪೋಷಾಕು ತೊಡಿಸುವುದು ಕೃತಕ, ಕೃತ್ರಿಮ... ಎಲ್ಲಾ ಕಾಲಕ್ಕೂ ಯಾವುದೇ ಪ್ರಾದೇಶಿಕ ಭಾಷೆಗೆ ಮತ್ತೊಂದು ಭಾಷೆಯಲ್ಲಿ ತಯಾರಾದ ಕೃತಿ ಡಬ್ ಆಗಬಾರದು ಎಂಬುದು ನನ್ನ ನಿಲುವು.
    ನಿಮ್ಮ ವ್ಯವಹಾರ ಕೇವಲ 300-400 ಕೋಟಿ ರೂ

    ನಿಮ್ಮ ವ್ಯವಹಾರ ಕೇವಲ 300-400 ಕೋಟಿ ರೂ

    ಪ್ರಶ್ನೆ 9: ನಮ್ಮ ರಾಜ್ಯದಲ್ಲಿ ನಿಮ್ಮ ವ್ಯವಹಾರ ಕೇವಲ 300-400 ಕೋಟಿ ರೂಪಾಯಿ, ಉಪ್ಪಿನ ಕಾಯಿ ಉದ್ಯಮ ಕೂಡ 1500-2000 ರೂಪಾಯಿ ಕೋಟಿ ವ್ಯವಹಾರ ಮಾಡುತ್ತವೆ.. ಟೊಮ್ಯಾಟೋ ಸಾಸ್, ಫ್ರೂಟ್ ಜಾಮ್ ಬಂದಿರೋದ್ರಿಂದ ನಮಗೆ ತೊಂದ್ರೆ ಆಗಿದೆ ಅವುಗಳನ್ನ ನಿಷೇಧ ಮಾಡಿ ಅಂತ ಯಾವತ್ತಾದರೂ ಧರಣಿ ಕೂತಿದರ??

    ಉತ್ತರ : ಉದ್ಯಮ ಒಂದರ ವಹಿವಾಟು ದಿನೇದಿನೇ ಹೆಚ್ಚುತ್ತಲೇ ಇದೆ. ನನಗೆ ಗೊತ್ತಿರುವಂತೆ 2013ರಲ್ಲಿ ಕನ್ನಡ ಉದ್ಯಮದ ವಹಿವಾಟು ಸರಿಸುಮಾರು 500 ಕೋಟಿ ದಾಟಿದೆ. ಕಾಲಾಂತರದಲ್ಲಿ ಅದು ಇನ್ನೂ ಹೆಚ್ಚುತ್ತಲೇ ಇರುತ್ತದೆ. ಟೊಮ್ಯಾಟೋ ಬೆಳೆಗಾರರು ಕಬ್ಬು ಬೆಳೆಗಾರರು ಬೆಂಬಲ ಬೆಲೆಗಾಗಿ ಧರಣಿ ಕೂತಿದ್ದನ್ನ ನಾನು ಬೆಂಬಲಿಸಿದ್ದೇನೆ. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಾಗ ನಾನೂ ನೊಂದಿದ್ದೇನೆ. ನನ್ನ ಹಲವು ನಾಟಕ ಹಾಗೂ ಸಿನಿಮಾ ಕೃತಿಗಳಲ್ಲಿ ರೈತರ ಸಮಸ್ಯೆಯನ್ನು ಪ್ರಧಾನವಾಗಿ ಇಟ್ಟುಕೊಂಡು ಕೃತಿ ರಚನೆ ಮಾಡಿದ್ದೇನೆ. ಒಂದು ಉದ್ಯಮದ ವಹಿವಾಟಿನ ಸಂಖ್ಯೆಗೂ ಧರಣಿಗೂ ಯಾವುದೇ ಸಂಬಂಧ ಇಲ್ಲ. ನಷ್ಟ ಆದವನು ಕೊರಗ್ತಾನೆ. ಕೊರಗು ಕೇಳಿಸದೆ ಹೋದಾಗ ಕೂಗುತ್ತಾನೆ. ಕೂಗು ಕೇಳಿಸದೆ ಇದ್ದಾಗ ತನ್ನ ವಾದ ಒಪ್ಪುವವರನ್ನ ಕೂಡಿಸಿಕೊಂಡು ದನಿ ಎತ್ತುತ್ತಾನೆ. ಅಷ್ಟೆ
    ಕನ್ನಡದಲ್ಲಿ ನೋಡೋ ಭಾಗ್ಯ ಇಲ್ಲ?

    ಕನ್ನಡದಲ್ಲಿ ನೋಡೋ ಭಾಗ್ಯ ಇಲ್ಲ?

    ಪ್ರಶ್ನೆ 10: ಕನ್ನಡ ಚಿತ್ರ ರಂಗದಮೇರು ನಟ ಸುದೀಪ್ ಅಭಿನಯದ, ತೆಲುಗಿನ "ಈಗ" ಚಿತ್ರ ಕನ್ನಡಬಿಟ್ಟು ಬೇರೆ ಎಲ್ಲ ಭಾಷೆಗಳಿಗೂ ಡಬ್ ಆಗಿ ಸೂಪರ್ ಹಿಟ್ ಆಯ್ತು. ನಮಗ್ಯಾಕೆ ಅಂತಹ ಚಿತ್ರಗಳನ್ನ ಕನ್ನಡದಲ್ಲಿ ನೋಡೋ ಭಾಗ್ಯ ಇಲ್ಲ??

    ಉತ್ತರ : ನಿಮ್ಮ ಪ್ರಶ್ನೆಗೂ ಈ ಹಿಂದೆಯೇ ನಾನು ನೀಡಿದ ಉತ್ತರದಲ್ಲಿ ನನ್ನ ಅಭಿಪ್ರಾಯ ಇದೆ. ಯಾವುದೇ ಪ್ರಾದೇಶಿಕ ಭಾಷೆಗೆ ಮತ್ತೊಂದು ಭಾಷೆಯಲ್ಲಿ ತಯಾರಾದ ಸಿನಿಮಾ ಡಬ್ ಆಗುವುದನ್ನು ನಾನು ತಾತ್ವಿಕವಾಗಿ ವಿರೋಧಿಸುತ್ತೇನೆ. ಇಂತಲ್ಲಿ ಯಾವುದು ಹಿಟ್ ಆಯಿತು ಎಂಬ ಮಾತಿನ ಆಧಾರದಲ್ಲಿ ಮೌಲ್ಯಮಾಪನ ಮಾಡುವುದೇ ತಪ್ಪು. ಕೃತ್ರಿಮ ಕೃತಿ ರಚನೆಯೇ ತಪ್ಪು.
    ಕನ್ನಡಪರ ಕಾಳಜಿ ನೆನಪಾಗುತ್ತಾ

    ಕನ್ನಡಪರ ಕಾಳಜಿ ನೆನಪಾಗುತ್ತಾ

    ಪ್ರಶ್ನೆ 11: ಡಬ್ಬಿಂಗ್ ಪರವಾದ ಮಾತು ಬಂದಾಗ ನಿಮಗೆ ಕನ್ನಡಪರ ಕಾಳಜಿ ನೆನಪಾಗುತ್ತಾ ?? ರಾಜ್ಯದಲ್ಲಿ ಎಷ್ಟೋ ಕನ್ನಡ, ಕರ್ನಾಟಕ ವಿರೋಧಿ ಚಟುವಟಿಕೆಗಳು ನೆಡೆದಿವೆ ಆಗ ಎಲ್ಲಿತ್ತು ನಿಮ್ಮ ಕನ್ನಡ ಪ್ರೇಮ??

    ಉತ್ತರ : ಡಬ್ಬಿಂಗ್ ವಿರೋಧವನ್ನು ಕನ್ನಡ ಪ್ರೇಮಕ್ಕೆ ತಳುಕು ಹಾಕುವುದನ್ನ ನಾನು ಒಪ್ಪುವುದಿಲ್ಲ. ಡಬ್ಬಿಂಗ್ ಕೃತಕ/Fake ಎಂಬ ಕಾರಣಕ್ಕೆ ಮಾತ್ರ ವಿರೋಧ ರಾಜ್ಯದಲ್ಲಿನ ಯಾವುದೇ ಸಮಸ್ಯೆಗಳಿಗೆ ಆಯಾ ಕಾಲಘಟ್ಟದಲ್ಲಿ ನಾನಂತೂ ಪ್ರತಿಕ್ರಿಯೆಯಾಗಿ ಹೋರಾಟ ಮಾಡಿದ್ದೇನೆ. ಈಗಲೂ ನೇಕಾರರ ಸಮಸ್ಯೆಗಳಿಗಾಗಿ ನಡೆಯುತ್ತಾ ಇರುವ ಜಾಥಾದಲ್ಲಿ ನಾನು ಪಾಲ್ಗೊಳ್ಳಲು ಒಪ್ಪಿದ್ದೇನೆ. ಪೌರಕಾರ್ಮಿಕರಿಗೆ ಕನಿಷ್ಟ ವೇತನ ದೊರಕಿಸಿ ಕೊಡಲು ಎಂಟು ವರ್ಷಗಳ ಕಾಲ ದುಡಿದಿದ್ದೇನೆ. ಈಗಲೂ ಬೀಡಿ ಮತ್ತು ಊದುಬತ್ತಿ ಕಾರ್ಮಿಕರಿಗೆ ಹಾಘೂ ಸಿದ್ಧ ಉಡುಪು ಕಾರ್ಮಿಕರ ಸಮಸ್ಯೆಗಳಿಗಾಗಿ ನಾನು ದುಡಿಯುತ್ತಾ ಇದ್ದೇನೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಬರಬೇಕೆಂದು ಕೇಂದ್ರ ಸರ್ಕಾರಕ್ಕೆ ಹೋದ ನಿಯೋಗದಲ್ಲಿ, ಸಮಾನ ಶಿಕ್ಷಣ ಕುರಿತ ಹೋರಾಟದಲ್ಲಿ, ರಾಷ್ಟ್ರೀಯ ಶಿಕ್ಷಣ ನೀತಿ, ರಾಷ್ಟ್ರೀಯ ಜಲ ನೀತಿ ಮತ್ತು ರಾಷ್ಟ್ರೀಯ ಉದ್ಯೋಗ ನೀತಿಯ ಜಾರಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ನಾನು ಖುದ್ದಾಗಿ ಮನವಿ ಪತ್ರವನ್ನು ರಚಿಸಿ ನಿಯೋಗದ ಸದಸ್ಯನಾಗಿ ಹೋಗಿದ್ದೆ.ನಾವು ಮಾಡಿದ ಹೋರಾಟಗಳ ಫಲವಾಗಿ ಕರ್ನಾಟಕಕ್ಕೆ ರಾಷ್ಟ್ರೀಯ ನಾಟಕ ಶಾಲೆಯ ಶಾಖೆಯೊಂದು ಬರುತ್ತಾ ಇದೆ ಎಂಬುದು, ನಾವು ಮಾಡಿದ ಹೋರಾಟದ ಫಲವಾಗಿ ಅಸಂಘಟಿತ ಕಾರ್ಮಿಕರಿಗೆ ಆರೋಗ್ಯವಿಮೆಗೆ ಕೇಂದ್ರ ಸರ್ಕಾರ ಪ್ರತ್ಯೇಕ ಕಾನೂನು ರಚಿಸಿದ್ದನ್ನು ತಾವು ಗಮನಿಸಬಹುದು.ಈಗ ಯೋಜನೆಯ ಫಲವಾಗಿ ಕಟ್ಟಡ ಕಾರ್ಮಿಕರು, ಆಟೋ ರಿಕ್ಷಾ ಚಾಲಕರು, ಬೀಡಿ ಮತ್ತು ಊದುಬತ್ತಿ ಹಾಗೂ ಸಿದ್ಧ ಉಡುಪು ಕಾರ್ಮಿಕರು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾ ಇದ್ದಾರೆ. ಯಾವುದೋ ಸಮಸ್ಯೆಗೆ ಒಬ್ಬ ನಾಡಿಗನು ಹೋರಾಟ ಮಾಡುವುದಕ್ಕೂ ಕನ್ನಡ ಪ್ರೇಮಕ್ಕೂ ತಳುಕು ಹಾಕಬೇಕಿಲ್ಲ. ಸಮಸ್ಯೆಗಳು ಭಾಷೆಯನ್ನು ಮೀರಿದ್ದು. ಕೆಲವೊಮ್ಮೆ ಭಾಷೆಗೂ ಸಂಬಂಧಿಸಿದ್ದು.

    English summary
    Kannada Producer, Director B Suresha has answered many frequently asked questions about removal of ban on Dubbing in Kannada films and serials. B Suresha's personal view on never ending controversy
    Friday, January 17, 2014, 17:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X