»   » ಅತಿಯಾದ ಪ್ರಚಾರ ನಿನಗೆ ಮುಳುವಾಗದಿರಲಿ ಶಿವ

ಅತಿಯಾದ ಪ್ರಚಾರ ನಿನಗೆ ಮುಳುವಾಗದಿರಲಿ ಶಿವ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 101ನೆ ಚಿತ್ರ 'ಶಿವ' ನಾಡಿದ್ದು ಅಂದರೆ ಆಗಸ್ಟ್ 24, 2012 ರಂದು ತೆರೆಗೆ ಬರಲಿರುವುದು ಭಾರಿ ಪ್ರಚಾರದ ಮೂಲಕ ಎಲ್ಲರಿಗೂ ತಿಳಿದ ವಿಷಯ. ಸಾಕ್ಷಾತ್ ಶಿವನೇ ಭೂಮಿಗೆ ಬರುತ್ತಿರುವಂತೆ ಮಾಡುತ್ತಿರುವ ಪ್ರಚಾರವನ್ನು ನೋಡಿ ಕನ್ನಡ ಸಿನಿಪ್ರೇಕ್ಷಕರಲ್ಲಿ ಕೆಲವರು ಕಂಗಾಲಾಗಿದ್ದಾರೆ. ಕಾರಣ, ಅತಿ ಪ್ರಚಾರದಿಂದ ಕೆಲವು ಒಳ್ಳೆಯ ಚಿತ್ರಗಳು ನೆಲಕಚ್ಚಿರುವ ಉದಾಹರಣೆ ನಮ್ಮಲ್ಲಿವೆ.

ಸಿನಿಮಾಕ್ಕೆ ಪ್ರಚಾರದ ಅಗತ್ಯವೇನೋ ಸರಿ. ಆದರೆ, ಈ ಮಟ್ಟಿಗೆ ಕೊಡುತ್ತಿರುವ ಪ್ರಚಾರವನ್ನು ಜನರು 'ಗಿಮಿಕ್' ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ಚಿತ್ರತಂಡದ ಗಮನಕ್ಕಿರಲಿ. 'ಶಿವ' ಚಿತ್ರವನ್ನು ಸಾಕ್ಷಾತ್ ಶಿವನಿಗೆ ಹೋಲಿಕೆ ಮಾಡಲಾಗುತ್ತಿರುವುದು ಹಾಗೂ ಅದಕ್ಕೆ ಬೇಕಾದ ಡೈಲಾಗುಗಳನ್ನು ಚಿತ್ರದಲ್ಲಿ ಬಳಸಿರುವುದು ಚಿತ್ರದ ಟ್ರೈಲರ್ ನೋಡಿದರೆ ಅರ್ಥವಾಗುವಂತಿದೆ. 'ಮಾಸ್' ಡೈಲಾಗ್ ಗಳು ಅತಿಯಾಯ್ತು ಎಂಬ ಕೆಲವರ ವಾದಕ್ಕೆ ಚಿತ್ರ ನೋಡದೆ ನಿರ್ಧರಿಸುವುದು ಸರಿಯಲ್ಲ ಎಂಬ ಇನ್ನೊಂದು ವಾದವೂ ಜೊತೆಯಲ್ಲೇ ಕೇಳಿಬರುತ್ತಿದೆ.

ಪ್ರಚಾರದ ತಂತ್ರಗಳಲ್ಲಿ ಮುಖ್ಯವಾಗಿ ಎದ್ದು ಕಾಣುತ್ತಿರುವುದು 'ಶಿವ' ಚಿತ್ರದ ಚಿತ್ರೀಕರಣದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬಳಕೆಯಾದ ಶಿವನ ಮೂರ್ತಿಯನ್ನು ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದ ಮುಂದೆ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿರುವುದು. ಇದೇನೂ ಹೊಸದಲ್ಲ. ಕಳೆದ ವರ್ಷದ ಸೂಪರ್ ಹಿಟ್ 'ಸಾರಥಿ' ಚಿತ್ರ ಬಿಡುಗಡೆ ವೇಳೆಯಲ್ಲೂ ಆ ಚಿತ್ರದಲ್ಲಿ ಬಳಸಿದ್ದ 'ಭುವನೇಶ್ವರಿ' ಬೃಹತ್ ವಿಗ್ರಹವನ್ನು ಚಿತ್ರ ಬಿಡುಗಡೆಯಾಗಿದ್ದ ನರ್ತಕಿ ಚಿತ್ರಮಂದಿರದ ಬಳಿ ಇಡಲಾಗಿತ್ತು.

ಅಂದಹಾಗೆ. ಜೋಗಿ ಪ್ರೇಮ್ ನಿರ್ದೇಶನದ ಶಿವಣ್ಣರ ಬಹುನಿರೀಕ್ಷೆಯ 100ನೆ ಚಿತ್ರ 'ಜೋಗಯ್ಯ' ಫ್ಲಾಪ್ ಆಗಿದೆ. ಈ 101ನೆ ಚಿತ್ರವನ್ನು ಯಶಸ್ವಿಗೊಳಿಸಲೇ ಬೇಕೆಂದು ಚಿತ್ರತಂಡ ಹಾಗೂ ಶಿವಣ್ಣರ ಅಭಿಮಾನಿಗಳು ಪಣ ತೊಟ್ಟಿದ್ದಾರೆ. ಆದರೆ ಶಿವಣ್ಣರ ಅಭಿಮಾನಿಗಳದೇ ಕೆಲವರ ಪ್ರಕಾರ, ಅತಿಯಾದ ಪ್ರಚಾರದಿಂದಲೇ 'ಜೋಗಯ್ಯ'ನಿಗೆ ಆ ಗತಿಯಾಗಿದ್ದು. ಹೀಗಾಗಿ 'ಶಿವ' ಚಿತ್ರದ ಭಾರಿ ಪ್ರಚಾರ ಕೆಲವರ ನಿದ್ದೆ ಕೆಡಿಸಿದೆ.

ನಿರ್ಮಾಪಕ ಕೆಪಿ ಶ್ರೀಕಾಂತ್ ತಮ್ಮ ಈ 'ಶಿವ' ಚಿತ್ರಕ್ಕೆ ಅತಿಯಾದ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಶ್ರೀಕಾಂತ್ ಇದೀಗ ಬಿಡುಗಡೆಗೆ ಕಾದಿರುವ ತಮ್ಮ'ಶಿವ' ಚಿತ್ರಕ್ಕೆ ತಮಿಳು, ತೆಲುಗು ಸ್ಟಾರ್ ನಟರಾದ ವಿಜಯ್, ನಾಗಾರ್ಜುನ ಹಾಗೂ ಚಿರಂಜೀವಿ ಅವರನ್ನು ಮಾತನಾಡಿಸಿ, ಅದನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶ್ರೀಕಾಂತ್ ಅವರ ಅತಿಯಾದ ಈ ನಡೆಗಳು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜೋಗಯ್ಯ ಸೋಲು ಕಣ್ಣ ಮುಂದಿರುವಾಗ ಕೆಲವರು ಈ ಭಾರಿ ಪ್ರಚಾರಕ್ಕೆ ಅಪಸ್ವರ ಎತ್ತಿದ್ದಾರೆ.

ಅಂದಹಾಗೆ, ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ ನಾಯಕ ನಟ ಶಿವಣ್ಣರಿಗೆ ರಾಗಿಣಿ ದ್ವಿವೇದಿ ನಾಯಕಿ. ಶಿವಣ್ಣರ 'ಮೈಲಾರಿ' ಚಿತ್ರದ ನಂತರ ಗುರುಕಿರಣ್ ಮತ್ತೊಮ್ಮೆ ಶಿವರಾಜ್ ಕುಮಾರ್ ಚಿತ್ರಕ್ಕೆ ಜತೆಯಾಗಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಚಿತ್ರಕ್ಕಿದ್ದು ಚಿತ್ರ ತೀರಾ ಶ್ರೀಮಂತವಾಗಿ ಮೂಡಿಬಂದಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಇನ್ನೇನು 'ಶಿವ' ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ, ಫಲಿತಾಂಶಕ್ಕೆ ಹೆಚ್ಚು ಕಾಲ ಕಾಯಬೇಕಿಲ್ಲ. (ಒನ್ ಇಂಡಿಯಾ ಕನ್ನಡ)

English summary
Hat Trick Hero Shivarajkumar's 101 fame movie 'Shiva' to release on 24th August 2012 as everybody knows from its Grand Promotion. Shiva Producer KP Srikanth is promoting this with Grand and Heavy Publicity. Some are the opinion that this heavy publicity may cause danger to movie Success. 
 
Please Wait while comments are loading...