»   » ಬ್ರಾಹ್ಮಣ ಸಂಪ್ರದಾಯವನ್ನು ಸಮೀರಾಚಾರ್ಯ ಅವಮಾನ ಮಾಡಿಲ್ಲ.!

ಬ್ರಾಹ್ಮಣ ಸಂಪ್ರದಾಯವನ್ನು ಸಮೀರಾಚಾರ್ಯ ಅವಮಾನ ಮಾಡಿಲ್ಲ.!

Posted By: ಯಶಸ್ವಿನಿ.ಎಂ.ಕೆ
Subscribe to Filmibeat Kannada
Bigg Boss Kannada Season 5 :ಬ್ರಾಹ್ಮಣ ಸಂಪ್ರದಾಯವನ್ನ ಅವಮಾನ ಮಾಡಿಲ್ಲ ಎಂದು ಸಮೀರ್ ಪತ್ನಿ ಹೇಳಿಕೆ

ಮೈಸೂರು, ನವೆಂಬರ್ 9 : ಅನ್ನುವವರ ಮಾತಿಗೆ ಕಿವಿಗೊಡುವುದಿಲ್ಲ. ಬ್ರಾಹ್ಮಣ ಸಂಪ್ರದಾಯಗಳನ್ನು ನಮ್ಮವರು ಗಾಳಿಗೆ ತೂರಿಲ್ಲ. ಅವರ ಧರ್ಮ ಪಾಲನೆಯಲ್ಲಿ ಎಲ್ಲಿಯೂ ಅಡಚಣೆಯಾಗಿಲ್ಲ. ಮನಬಂದಂತೆ ಮಾತನಾಡುವವರೇ ಎಚ್ಚರವಿರಿ. ಇದಕ್ಕೆ ಮುಂದೊಂದು ದಿನ ತಕ್ಕ ಉತ್ತರ ಕೊಡಲಿದ್ದೇವೆ.... ಹೀಗೆಂದು ಉತ್ತರಿಸಿದವರು 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ ಸಮೀರಾಚಾರ್ಯ ರವರ ಪತ್ನಿ ಶ್ರಾವಣಿ.

ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಧರ್ಮ ಪಾಲನೆ, ಸಂಸ್ಕಾರದ ಕುರಿತಾಗಿಯೇ ಹೆಸರು ಮಾಡಿರುವ ಸಮೀರಾಚಾರ್ಯ ರವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಮಾತುಗಳು ಕೇಳಿಬರುತ್ತಿದೆ. ''ಅವರು ಗಾಯಿತ್ರಿ ಮಂತ್ರಕ್ಕೆ ಅವಮಾನ ಮಾಡಿದ್ದಾರೆ. ಮೊಟ್ಟೆ ಒಡೆದುಕೊಂಡು ಬ್ರಾಹ್ಮಣತ್ವಕ್ಕೆ ಧಕ್ಕೆ ತಂದಿದ್ದಾರೆ. ಸುಧಾ ಪಂಡಿತರಾಗಿ ಧರ್ಮ ಪಾಲನೆ ಮಾಡುತ್ತಿಲ್ಲ'' ಎಂಬ ಅನೇಕ ಮಾತುಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲದೇ ಈ ಕುರಿತಾಗಿ ವಿರೋಧಗಳು ಕೂಡ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ನಿಮ್ಮ ಒನ್ ಇಂಡಿಯಾ ಕನ್ನಡ/ಫಿಲ್ಮಿಬೀಟ್ ಕನ್ನಡಕ್ಕೆ ಸಮೀರಾಚಾರ್ಯರವರ ಕುಟುಂಬವನ್ನು ಸಂಪರ್ಕಿಸಿದಾಗ ಅವರಿಂದ ಬಂದ ಉತ್ತರ ಹೀಗಿದೆ.....

ಬಿಗ್ ಬಾಸ್' ಸ್ಪರ್ಧಿಯಾಗಿ ಸಮೀರಾಚಾರ್ಯ ಹೋಗಿದ್ದು ಪ್ರಚಾರಕ್ಕಾಗಿಯಾ.?

- 'ಬಿಗ್ ಬಾಸ್' ಸ್ಪರ್ಧಿಯಾಗಿ ಹೋಗಿದ್ದು ಪ್ರಚಾರಕ್ಕಾಗಿ ಅಲ್ಲ. ನಮ್ಮ ಸಂಸ್ಕೃತಿಯ ಅರಿವಿಗಾಗಿ. ಪ್ರಚಾರ ಅಲ್ಲಿಯೇ ಪಡೆಯಬೇಕೆಂಬ ಅನಿವಾರ್ಯತೆ ಇರಲಿಲ್ಲ. ನಮ್ಮದು ಅವಿಭಕ್ತ ಕುಟುಂಬ. ಸಮಾಜಮುಖಿ ಕೆಲಸದಲ್ಲಿಯೇ ತೊಡಗಿರುವ ನಾವು ಒಂದು ಶಾಲೆ ಹಾಗೂ ಟ್ರಸ್ಟ್ ವೊಂದನ್ನು ಸ್ವಂತ ಖರ್ಚಿನಿಂದಲೇ ನಡೆಸುತ್ತಿದ್ದೇವೆ. ಅವುಗಳ ಏಳಿಗೆಗಾಗಿ ಹಣದ ಅವಶ್ಯಕತೆಗಾಗಿ ಅವರು ಸ್ಪರ್ಧಿಸಿದ್ದಾರೆ.

'ಬಿಗ್ ಬಾಸ್' ನಲ್ಲಿ ಸಮೀರಾಚಾರ್ಯರು ಧರ್ಮಪಾಲನೆ ನಡೆಸುತ್ತಿದ್ದಾರೆಂದು ನಿಮಗೆ ಅನ್ನಿಸುತ್ತಿದೆಯಾ.?

- ಹೌದು. ಅದರಲ್ಲಿ ಸಂಶಯವೇ ಇಲ್ಲ. ಧರ್ಮಪಾಲನೆ, ಅನುಷ್ಠಾನಗಳನ್ನು ಎಲ್ಲಿಯೂ ಅವರು ಗಾಳಿಗೆ ತೂರಿಲ್ಲ. ಸಂಧ್ಯಾವಂದನೆ, ನೈವೇದ್ಯ ಇದ್ಯಾವುದನ್ನೂ ನಿರ್ವಹಿಸದೇ ಅವರು ಮುಂದುವರೆದಿಲ್ಲ.

ಸಮೀರಾಚಾರ್ಯ ರವರ ಕೆಲವು ನಡವಳಿಕೆಗಳು ಬ್ರಾಹ್ಮಣ ಸಂಪ್ರದಾಯಕ್ಕೆ ವಿರೋಧವಿದೆ ಅಲ್ಲವೇ.?

- ಇಲ್ಲ. ಇದನ್ನು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಗಮನಿಸಿದ್ದೇವೆ ಹೊರತು ಈ ಕುರಿತಾಗಿ ನಮಗೆ ಎಲ್ಲಿಯೂ ಹೊರಗಡೆ ಸಿಕ್ಕಾಗ ಯಾರೂ ಸಹ ಬೆಟ್ಟು ಮಾಡಿ ತೋರಿಸಿಲ್ಲ. ಅನ್ನುವವರು ಸಾವಿರ ಅನ್ನುತ್ತಾರೆ ಆ ಕುರಿತಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ.

ಹಾಗಾದರೆ ಆಚಾರ್ಯರು ಗಾಯಿತ್ರಿ ಮಂತ್ರಕ್ಕೆ ಅವಮಾನಿಸಿದ್ದನ್ನು, ತಲೆಗೆ ಮೊಟ್ಟೆ ಒಡೆದುಕೊಂಡಿದ್ದನ್ನು ನೀವು ಹೇಗೆ ಸಮರ್ಥಿಸಿಕೊಳ್ಳುತ್ತೀರಿ.?

- ಎಲ್ಲಿಯೂ ಕೂಡ ಅವರು ಅವಮಾನಿಸಿಲ್ಲ. ಅವಮಾನವಾಗಿದೆ ಎಂದು ಗಾಯಿತ್ರಿ ದೇವಿ ಹೇಳಿದಳೆ.? ಅಥವಾ ರಸ್ತೆಯಲ್ಲಿ ಮೊಬೈಲ್ ರಿಂಗ್ ಟೋನ್ ನಲ್ಲಿ ಗಾಯಿತ್ರಿ ಮಂತ್ರವನ್ನು ಹಾಕಿದರೆ... ಅದಕ್ಕೆ ಹಿಪ್ -ಹಾಪ್ ಸೇರಿಸಿದರೆ ಅವಮಾನ ಮಾಡಿದಂತಾಗುತ್ತದೆಯೇ..? ಅದೊಂದು ಭಜನೆಯ ಪರಿಯಷ್ಟೇ.

ಇನ್ನು ಮೊಟ್ಟೆ ಒಡೆದುಕೊಂಡಿದ್ದನ್ನು ಗಮನಿಸಿದಾಗ ಅದೊಂದು ಟಾಸ್ಕ್ ಅಷ್ಟೇ. ಎಲ್ಲಿಯೂ ಅವಮಾನ ನಡೆಸಿಲ್ಲ. ಹಾಗೆಂದು ನೋಡಿದರೆ ನಮ್ಮ ಸುತ್ತಮುತ್ತಲಿನ ಗಾಳಿಯೂ ಕೂಡ ಕಲುಷಿತವೇ. ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿಯೇ ಆದಂತಿದೆ. ಹಾಗಾಗಿ ನೋ ಕಾಮೆಂಟ್ಸ್ ಎಂದು ನಗುತ್ತಲೇ ಉತ್ತರಿಸುತ್ತಾರೆ ಆಚಾರ್ಯರ ಕುಟುಂಬ ವರ್ಗ.

ಯಾವ ಸೆಲಿಬ್ರಿಟಿಗಳಿಗೂ ಕಡಿಮೆ ಇಲ್ಲದ ಸಮೀರ್ ಆಚಾರ್ಯ

ಸಮೀರಾಚಾರ್ಯರ ಹಿನ್ನೆಲೆಯನ್ನು ಕೇಳಿದಾಗ ಅವರ ವಯಸ್ಸು 28. ಏಳನೇ ತರಗತಿವರೆಗೂ ಓದಿ ಮೊಟಕುಗೊಳಿಸಿದ ಅವರು, ನಂತರ 14 ವರುಷ ವಿದ್ಯಾಪೀಠದಲ್ಲಿ ಸಂಸ್ಕೃತ ಶಾಸ್ತ್ರ-ಗ್ರಂಥಗಳನ್ನು ಓದಿದವರು. ಇಂಗ್ಲೀಷ್ ಸೇರಿದಂತೆ ಅನೇಕ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲರು.

ತಮ್ಮದೇ ಹಣದಲ್ಲಿ 500 ಕ್ಕೂ ಹೆಚ್ಚು ಊರುಗಳನ್ನು ತಿರುಗಿ, ಅಲ್ಲಿನ ಮಕ್ಕಳಿಗೆ ಹಾಗೂ ಯುವಕರಿಗೆ ಧರ್ಮ ಸಂಸ್ಕಾರದ ಪಾಠವನ್ನು ಹಗಲು ರಾತ್ರಿಯೆನ್ನದೇ ಮಾಡುತ್ತಲೇ ಬಂದಿದ್ದಾರೆ. ಒಂದು ದಿನವೂ ಮನೆಯಲ್ಲಿ ಕೂಡದೇ ಸಂಸ್ಕಾರದ ಅರಿವನ್ನು ಹಾಗೂ ಸೈನ್ಯಕ್ಕೆ ಯುವಕರು ಸೇರುವಂತೆ ಸಮೀರ್ ಮಕ್ಕಳಲ್ಲಿ ಪ್ರೇರೇಪಿಸುತ್ತಾರೆ. ಅಷ್ಟೇ ಅಲ್ಲದೇ ತಮ್ಮ ದೇವಸ್ಥಾನ ಹಾಗೂ ಸಂಸ್ಕಾರ ಟ್ರಸ್ಟ್, ಮನ್ಯು ಶಾಲೆಯನ್ನು ಹುಬ್ಬಳ್ಳಿಯ ವಿಶ್ವೇಶ್ವರನಗರದಲ್ಲಿ ನಡೆಸುತ್ತಿದ್ದಾರೆ.

ಪ್ರತಿ ದಿನ ಸಂಜೆ ಮಕ್ಕಳಿಗಾಗಿ ಉಚಿತವಾಗಿ ಸಂಗೀತ, ಶ್ಲೋಕ, ಸಂಸ್ಕೃತ, ಧ್ಯಾನ ಸೇರಿದಂತೆ ಹಲವು ವಿಷಯಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಡೆಸುತ್ತಿದ್ದಾರೆ ಸಮೀರ್ ಆಚಾರ್ ದಂಪತಿ. ಇವರ ಕಾರ್ಯವನ್ನು ಮೆಚ್ಚಿ ಆಚಾರ್ಯರಿಗೆ ಸ್ವತಃ ಅಣ್ಣಾ ಹಜಾರೆಯವರೇ ಭೇಷ್ ಎಂದಿದ್ದಾರೆ. ಒಟ್ಟಾರೆ ಇಂತಹ ಯುವ ಪೀಳಿಗೆ ನಮ್ಮಂತಹರಿಗೆ ಆದರ್ಶರಾಗಬೇಕು. ಇಂತಹವರು 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಅರ್ಹ.

English summary
Bigg Boss Kannada 5: Week 4: Sameeracharya did not insult Brahmin Culture says his wife Shravani.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada