»   » ದಶಕಗಳ ಹಿಂದೆ ವಿಜಯನಾರಸಿಂಹ ನಡೆಸಿದ ಡಾ.ವಿಷ್ಣುರ ಅಪರೂಪದ ಸಂದರ್ಶನ ಇಲ್ಲಿದೆ

ದಶಕಗಳ ಹಿಂದೆ ವಿಜಯನಾರಸಿಂಹ ನಡೆಸಿದ ಡಾ.ವಿಷ್ಣುರ ಅಪರೂಪದ ಸಂದರ್ಶನ ಇಲ್ಲಿದೆ

Posted By:
Subscribe to Filmibeat Kannada

'ಈ ದೇಹದಿಂದ ದೂರನಾದೆ...', 'ಪಂಚಮ ವೇದ.. ಪ್ರೇಮದ ನಾದ..', 'ಸಂದೇಶ ಮೇಘ ಸಂದೇಶ..' ಸೇರಿದಂತೆ ಕನ್ನಡ ಚಿತ್ರರಂಗಕ್ಕೆ ಹಲವಾರು ಅರ್ಥಗರ್ಭಿತ ಹಾಗೂ ಜನಪ್ರಿಯ ಹಾಡುಗಳನ್ನು ನೀಡಿದ ಖ್ಯಾತಿ ಚಿತ್ರ ಸಾಹಿತಿ ವಿಜಯನಾರಸಿಂಹ ಅವರಿಗೆ ಸಲ್ಲಬೇಕು. ಇಂತಿಪ್ಪ ವಿಜಯನಾರಸಿಂಹ ದಶಕಗಳ ಹಿಂದೆ ಡಾ.ವಿಷ್ಣುವರ್ಧನ್ ಜೊತೆ ನಡೆಸಿದ ಚಿಕ್ಕ ಸಂದರ್ಶನ ಇಲ್ಲಿದೆ.

ಪ್ರಶ್ನೆ: 'ಬಂಧನ' ಚಿತ್ರದಲ್ಲಿನ ನಿಮ್ಮ ಅಭಿನಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ವಿಷ್ಣು: ಬಂಧನ ಚಿತ್ರದ ಹರೀಶನ ಪಾತ್ರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದು ನನ್ನ ಪರಿಶ್ರಮಕ್ಕೆ ಸಂದ ಪ್ರತಿಫಲ ಎನಿಸುತ್ತದೆ. ಎಲ್ಲವೂ ಜನಮೆಚ್ಚುಗೆಗಾಗಿಯಲ್ಲವೇ?

ಪ್ರಶ್ನೆ: ಉತ್ತಮ ಕಾದಂಬರಿ ಆಧಾರಿತ ಚಿತ್ರ ಯಶಸ್ವಿಯಾಗಬೇಕಾದರೆ ನಾಯಕನ ಪಾತ್ರಧಾರಿ ಕಾರಣವೋ? ಕಾದಂಬರಿ ಕಾರಣವೋ?

ವಿಷ್ಣು: ಮುಖ್ಯವಾಗಿ ಚಿತ್ರ ಯಶಸ್ವಿಯಾಗಬೇಕು. ನಂತರವೇ ಎಲ್ಲರಿಗೂ ಮನ್ನಣೆ ದೊರೆಯುವುದು. ಅದೃಷ್ಟವಿದ್ದಾಗಲೇ ನಮ್ಮ ಸಾಧನೆ ಮತ್ತು ಶ್ರಮಕ್ಕೆ ಬೆಲೆ ದೊರೆಯಲು ಸಾಧ್ಯ.

Dr.Vishnuvardhan's Interview by Vijayanarasimha

'ಹೃದಯವಂತ' ಡಾ.ವಿಷ್ಣುವರ್ಧನ್ ಬಗ್ಗೆ ಸುದೀಪ್ ಮನದ ಮಾತು

ಪ್ರಶ್ನೆ: ತಾಯಿಯ ಬಗ್ಗೆ ನೀವು ಕೊಡುವ ವಿವರಣೆ ಏನು?

ವಿಷ್ಣು: ದೇವರೇ ಎಲ್ಲಾ ಜಾಗದಲ್ಲೂ ಇರಲು ಸಾಧ್ಯವಿಲ್ಲ. ಅದಕ್ಕೆಂದೇ ಹೆಣ್ಣು ತಾಯಿಯಾಗಿ ಮಕ್ಕಳನ್ನು ಪೋಷಿಸುವುದು. ದೇವರು ಮೆಚ್ಚುವಂಥ ವ್ಯಕ್ತಿ ತಾಯಿ. ದೇವರಲ್ಲೂ ಕಾಣದಂಥ ಗುಣಗಳನ್ನು ತಾಯಿಯಲ್ಲಿ ಕಾಣಬಹುದು.

ಪ್ರಶ್ನೆ: ಜೀವನದಲ್ಲಿ ಯಾವುದೇ ಬೇಸರವಿದ್ದರೂ, ನಿಮ್ಮ ಚಿತ್ರಗಳನ್ನು ನೋಡಿದರೆ ಬೇಸರ ಮಾಯವಾಗಿ ಉತ್ಸಾಹ ಮೂಡುತ್ತದೆ. ಪವಾಡ ಮಾಡುವಂಥ ಶಕ್ತಿ ನಿಮ್ಮಲ್ಲಿದೆ. ನಿಮ್ಮನ್ನು ಪೂಜಿಸಿದರೆ ತಪ್ಪೇನು?

ವಿಷ್ಣು: ವ್ಯಕ್ತಿಪೂಜೆ ಇಂದಿಗೂ ಒಳ್ಳೆಯದಲ್ಲ. ಮನುಷ್ಯ, ಮನುಷ್ಯನಾಗಿದ್ದರೇ ಒಳ್ಳೆಯದು. ಅಭಿಮಾನಿಗಳ ಹೃದಯದಲ್ಲಿ ಸ್ಥಾನ ದೊರೆತರೆ ಅಷ್ಟೇ ಸಾಕು.

'ಅಭಿಮಾನ'ದಿಂದ ಬರುತ್ತಿದ್ದ ಪತ್ರಗಳಿಗೆ ವಿಷ್ಣುದಾದಾ ಕೊಡುತ್ತಿದ್ದ ಗೌರವ ನೋಡಿ

ಪ್ರಶ್ನೆ: ಚಿತ್ರರಂಗದ ಹೊರಗೆ ಏನು ಮಾಡಬೇಕೆಂದುಕೊಂಡಿದ್ದೀರಿ?

ವಿಷ್ಣು: 500 ಜನ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂದಿದ್ದೇನೆ. ಬಡ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು. ಜಾತಿಗೆ ಆಸ್ಪದವಿಲ್ಲ. ಅರ್ಹತೆ ಎಲ್ಲಿಂದ ಬಂದರೂ ಮಾನ್ಯತೆ ಸಿಗಬೇಕು. ಅಲ್ಲದೇ ವೃದ್ಧಾಶ್ರಮ ಮಾಡಬೇಕೆಂಬುದು ಸಹ ಒಂದು ಆಸೆ. ಜೀವನದ ಕೊನೆಯ ಘಟ್ಟದಲ್ಲಿ ಇರುವವರಿಗೆ, ಜೀವನದಲ್ಲಿ ಜಿಗುಪ್ಸೆ ಹೊಂದಿದವರಿಗೆ ಆಶ್ರಯ ನೀಡಬೇಕೆಂಬುದು ಸಹಾ ಒಂದು ಆಸೆ.

ಪ್ರಶ್ನೆ: ಕಹಿಯಾದ ಸತ್ಯ, ಸಿಹಿಯಾದ ಸುಳ್ಳು - ನಿಮ್ಮ ಆಯ್ಕೆ ಯಾವುದು?

ವಿಷ್ಣು: ಕಹಿಯಾದ ಸತ್ಯ. ಸತ್ಯವೇ ಮನಸ್ಸಾಕ್ಷಿಗೆ ಸ್ಪೂರ್ಥಿ.

ಪ್ರಶ್ನೆ: ಪುಟ್ಟಣ್ಣನವರ ಎಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೀರಿ?

ವಿಷ್ಣು: ಪುಟ್ಟಣ್ಣನವರ ಒಂದು ಚಿತ್ರ ನೂರು ವರ್ಷಗಳಷ್ಟು ನನಗೆ ಪಾಠ ಕಲಿಸಿದೆ. ಅವರೇ ನನ್ನ ತಳಹದಿ. ಇದು ತುಂಬಾ ಬಲಿಷ್ಠವಾಗಿದೆ.

ಎಕ್ಸ್ ಕ್ಲೂಸಿವ್ ಸಂದರ್ಶನ: ಡಾ.ವಿಷ್ಣು ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಕಿರುತೆರೆ ನಟ

ಪ್ರಶ್ನೆ: ಪರಭಾಷಾ ನಾಯಕಿಯರ ಬಗ್ಗೆ ನಿಮ್ಮ ಅನಿಸಿಕೆ?

ವಿಷ್ಣು: ಪರಭಾಷಾ ಚಿತ್ರಗಳು ಬೆಂಗಳೂರಿನಲ್ಲಿ ಪ್ರದರ್ಶಿತವಾಗುತ್ತಿರುವಾಗ, ಪರಭಾಷಾ ನಾಯಕಿಯರನ್ನು ಕನ್ನಡ ಚಿತ್ರಗಳಲ್ಲಿ ನಟಿಸಲು ಅವಕಾಶ ಕೊಡುವುದು, ಕನ್ನಡದಲ್ಲಿ ಮಾತನಾಡಿಸುವುದು, ಕನ್ನಡದ ಸೇವೆಯಲ್ಲದೆ ಮತ್ತೇನು? ಇಲ್ಲಿ ಪ್ರತಿಭೆಗೆ ಮಾತ್ರ ಮಾನ್ಯತೆ. ಕನ್ನಡದ ಕೀರ್ತಿ ಬೆಳಗುವುದೊಂದೇ ಗುರಿ.

ಪ್ರಶ್ನೆ: ಪ್ರಬುದ್ಧ ಕಲಾವಿದರಾದ ತಮ್ಮಿಂದ ಮತ್ತಷ್ಟು ಪ್ರಬುದ್ಧ ಚಿತ್ರಗಳನ್ನು ಆಶಿಸಬಹುದೇ?

ವಿಷ್ಣು: ಅಭಿನಯಿಸುವ ಪ್ರತಿಯೊಂದು ಚಿತ್ರ ಶ್ರೇಷ್ಠವಾಗಿರಬೇಕು ಎಂಬುದು ತಪ್ಪು. ಶ್ರೇಷ್ಠತೆಯ ಹುಡುಕಾಟವೇ ಜೀವನ. ಶ್ರೇಷ್ಠತೆಗಾಗಿ ನಮ್ಮ ಪರಿಶ್ರಮ ಸದಾ ನ್ಯಾಯಯುತವಾಗಿರಬೇಕು. ಎಂದಾದರೊಮ್ಮೆ ಅಭಿಮಾನಿಗಳು ಮೆಚ್ಚಿಕೊಳ್ಳುವ ಶ್ರೇಷ್ಠ ಚಿತ್ರಕ್ಕೆ ಜನಮನ್ನಣೆ ದೊರೆತರೆ ಆಗುವ ಆನಂದವೇ ಬೇರೆ. ಜೀವನದಲ್ಲಿ ಸಿಹಿ ಕಹಿ ಎರಡನ್ನೂ ಬಯಸುವ ಭಾವ ಬೆಳೆಸಿಕೊಳ್ಳಬೇಕು.

English summary
Here is the Interview of Dr.Vishnuvardhan by Lyricist Vijayanarasimha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X